ಅವ್ವ ಮತ್ತು ರಾಗಿರೊಟ್ಟಿ

-ಜಿ ವಿ ಆನಂದಮೂರ್ತಿ

raagirotiನಮ್ಮೂರಿನ ಪ್ರಾತಃಸ್ಮರಣೀಯರು ವತ್ತಿನಂಟೆ ಎದ್ದಕೂಡಲೆ ಕೆರೆಕಡೆಯೋ ಅಥವಾ ತಲಾರಿ ಎಲ್ಲಯ್ಯನವರ ಕಟ್ಟೆಯ ಬಳಿ ಆಳೆತ್ತರಕ್ಕೆ ಬೆಳದಿದ್ದ ಕಳ್ಳಿಮರೆಗೋ ಹೋಗುವಾಗ; ಎದುರಿಗೆ ಸಿಕ್ಕವರನ್ನು ಕಂಡಕೂಡಲೆ, ‘ಎದ್ದೇನ್ರಯ್ಯಾ!’, ‘ಎದ್ರಾ!’ ‘ಚಿಕ್ಕಿ ಎದ್ದಾ!’ ಎಂದು ಎದುರಿಗೆ ಸಿಕ್ಕವರ ವಯೋಮಾನಕ್ಕೆ ಅನುಗುಣವಾಗಿ ಕೇಳುತ್ತಾ ತಮ್ಮ ಪ್ರಾತಃವಿಧಿಗಳನ್ನು ಮುಗಿಸಲು ತೆರಳುತ್ತಿದ್ದರು. ಈಗಿನಂತೆ ಯಾರ ಬಾಯಲ್ಲೂ ಕೂಡ ಅಪ್ಪಿತಪ್ಪಿಯೂ, ‘ಕಾಫಿ ಆಯ್ತೇನಣ್ಣ, ನಾಸ್ಟಾ ಆಯ್ತೇನಪ್ಪ’ ಎಂದು ಕೇಳುತ್ತಿರಲಿಲ್ಲ!. ಹಾಗೆ ಹೇಳುವುದಾದರೆ ನಮ್ಮೂರಿನ ಶಬ್ಧಕೋಶದಲ್ಲೇ ಈ ಪದಗುಚ್ಚಗಳಿರಲಿಲ್ಲ.

ನನ್ನ ಬಾಲ್ಯದ ದಿನಗಳಲ್ಲಿ ಅರಿವಿಗೆ ತಾಕಿದ ಲೌಕಿಕದ ಎಲ್ಲ ಅನುಭವಗಳ ಕೈಸೆರೆಯಾಗಿದ್ದೇನೆ. ಅವುಗಳಿಂದ ಬಿಡುಗಡೆ ಹೊಂದುವುದೆಂದರೆ, ಮತ್ತೊಮ್ಮೆ ತಾಯಿಕರುಳಿನ ಸಂಬಂಧವನ್ನು ಹರಿದುಕೊಂಡು ಬಂದಂತೆ. ಇಂದಿನ ಯಾವ ಅನುಭವಗಳೂ ನನ್ನ ಎಳವೆಯ ದಿನಗಳ ಮುಗ್ಧ ಸೌಂದರ್ಯವನ್ನು, ಅದು ಕಲಿಸಿದ ಜೀವನದ ಪಾಠಗಳನ್ನು ಕಸಿದುಕೊಳ್ಳಲಾರವು. ಅಷ್ಟರಮಟ್ಟಿಗೆ ನಾನು ಇಂದಿನ ಅನುಭವಗಳ ಮೇಲೆ ಜಯ ಸಾಧಿಸಿದ್ದೇನೆ.

ನಮ್ಮ ಬಾಲ್ಯದ ದಿನಗಳಲ್ಲಿ ‘ಕಾಫಿ, ತಿಂಡಿ’ ಈ ಶಬ್ದಗಳನ್ನೆಲ್ಲ ನಾವು ಎಂದೂ ಕೇಳಿದವರಲ್ಲ. ನಾವು ಸ್ಕೂಲಿಗೆ ಹೊರಟಾಗಲೂ ಕೂಡ ಹಾಗೆಯೇ ಹೋಗುವುದು ನಮಗೆ ವಾಡಿಕೆಯಾಗಿತ್ತು. ವಾರದಲ್ಲಿ ಎಂದಾದರೊಂದು ದಿನ, ಸೂರ್ಯ ಸರಿಯಾದ ದಿಕ್ಕಿನಲ್ಲಿ ಹುಟ್ಟಿ, ಮನೆಯಲ್ಲಿ ಐದೂ ಬೆರಳು ಸಮನಾಗಿದ್ದಾಗ ಮಾತ್ರ ನಮ್ಮ ದೊಡ್ಡಮ್ಮನೋ ಅಥವಾ ತಾಯವ್ವನೋ ನಮಗೆ ರಾಗಿ ರೊಟ್ಟಿ ಸುಟ್ಟು ಕೊಡುತ್ತಿದ್ದಳು. ರೊಟ್ಟಿಗೆ ನೆಂಚಿಕೆಯಾಗಿ ಏನೂ ಇರುತ್ತಿರಲಿಲ್ಲ. ಆಗ ನಾವು ಕೆಂಪಕ್ಕನವರ ಹಿತ್ತಲು ತೋಟಕ್ಕೆ ಹೋಗಿ ಒಂದೋ-ಎರಡೋ ಕಸ್ರುಗಾಯನ್ನು(ಹಸುರು ಮೆಣಸಿನಕಾಯಿ) ಕಿತ್ತು ತಂದು ರೊಟ್ಟಿ ಜೊತೆ ತಿಂದು ಹೋಗುತ್ತಿದ್ದೆವು. ಅಪರೂಪಕ್ಕೆ ಮನೆಯಲ್ಲಿ ಎಲ್ರೂ ಇದ್ದಾಗ ಮಾತ್ರ ಅಜ್ಜವ್ವ ತನ್ನ ಸೊಸೆಯಂದಿರಿಗೆ ಹೇಳಿ ರೊಟ್ಟಿ ಜೊತೆ ಹುಚ್ಚೆಳ್ಳುಕಾರ ಅರ್ಸಿ ಕೊಡ್ಸೋದು. ಇದಿಷ್ಟೆ ನಮಗೆ ತಿಂಡಿ ಅಂದರೆ ಗೊತ್ತಿದ್ದು.

ನಾವು ಸ್ಕೂಲಿಗೆ ಅಥವಾ ನಮ್ಮ ಸೊಪ್ಪಿನ ತೋಟಕ್ಕೆ ಹೊರಟಾಗ ಎಂದಿನಂತೆ, ಹಿಟ್ಟಿನ ಮಡಕೆಯ ತಳದಲ್ಲಿದ್ದ ಸೀಕನ್ನೇ ಎಬ್ಬಿಗೊಂಡು, ಅದರ ತಳದಲ್ಲಿರುತ್ತಿದ್ದ ಮಸಿ ಹೋಗುವವರೆಗೂ ಉಜ್ಜಿ, ಉಳ್ಳಾಗಡ್ಡೆಯೊಂದಿಗೆ ತಿಂದು ಹೋಗುತ್ತಿದ್ದೆವು ಅಥವಾ ರಾತ್ರಿಯ ತಂಗಳ್ಹಿಟ್ಟು ಉಳಿದಿದ್ದರೆ ಅದನ್ನೇ ಉಪ್ಪು-ಮೆಣಸಿನಕಾಯಿ, ಬೆಳ್ಳುಳ್ಳಿ ಜೊತೆ ಮಿದ್ದಿಗೊಂಡು ತಿಂದು ಹೋಗುತ್ತಿದ್ದೆವು. ಸ್ಕೂಲಿಗೆ ಬರುವ ನಮ್ಮೂರಿನ ಹುಡುಗರ ಎಲ್ಲರ ಮನೆಯಲ್ಲೂ ಇದೇ ಪದ್ಧತಿ ಅನುಸರಣೆಯಾಗುತ್ತಿತ್ತು.

ಇವೆಲ್ಲವನ್ನೂ ಅರಿಯಲಾಗದ ದಿನಗಳಲ್ಲಿ ನಮಗೆ ಇದೆಲ್ಲಾ ಅಸಹಜ ಎಂದು ಯಾವತ್ತೂ ಅನಿಸಿರಲಿಲ್ಲ! ಆ ದಿನಗಳಲ್ಲಿ ಹಸಿವನ್ನು ತಡೆದುಕೊಳ್ಳುವ ಸಾಮಥ್ರ್ಯವನ್ನು ನಮ್ಮ ಮನೆಯ ಲೌಕಿಕ ವಾತಾವರಣವೇ ನಮಗೆ ಕಲಿಸಿತ್ತು. ದೇಹದ ಆರೋಗ್ಯಕ್ಕೆ ಅನ್ನಕ್ಕಿಂತ ಹೆಚ್ಚಾಗಿ, ಮಾನಸಿಕ ನೆಮ್ಮದಿ, ಯಾವುದಾದರೊಂದು ಕೆಲಸ, ಬೇರೆಯವರಿಗೆ ಕೇಡು ಬಗೆಯದ ಮನಸ್ಸು ಹಾಗೂ ಸರಳ ಜೀವನ ಎನ್ನುವ ಪಾಠವನ್ನು ಅಜ್ಜವ್ವ ನಮಗೆ ಕಲಿಸಿದಳು. ಹಾಗೆಂದು ಅವಳು ಯಾರಿಗೂ ಬೋಧನೆ ಮಾಡಿದವಳಲ್ಲ! ಸ್ವತಃ ತಾನೆ ಅಂತಹ ಬಾಳನ್ನು ಬಾಳಿ ನಮ್ಮೆಲ್ಲರ ಬದುಕಿಗೊಂದು ಮಾದರಿಯಾಗಿದ್ದಳು. ಬೆನ್ನು ಬಾಗಿ ಕೋಲೂರಿಕೊಂಡು ನಡೆಯುವಾಗಲೂ ಅವಳಲ್ಲಿದ್ದ ಚೈತನ್ಯ ತುಸುವೂ ಬಾಡಿರಲಿಲ್ಲ. ಜೀವನಪ್ರೀತಿ ಹಿಂಗಿರಲಿಲ್ಲ. ತುಂಬುಜೀವನ ನಡೆಸಿ ತನ್ನ ಕೂಡು ಕುಟುಂಬದವರನ್ನೆಲ್ಲಾ ಸ್ವಾವಲಂಬಿಗಳನ್ನಾಗಿ ಮಾಡಿದಳು.

ಇನ್ನು ನಮಗೆ ಉಪ್ಪಿಟ್ಟು ಮತ್ತು ಚಿತ್ರಾನ್ನಗಳೆಂದರೆ ಬಹಳ ಅಪರೂಪದ ತಿಂಡಿಗಳೇ! ಅವರೆಕಾಯಿ ಕಾಲದಲ್ಲಿ ಮಾತ್ರ ಮನೆಯಲ್ಲಿ ಅಪರೂಪಕ್ಕೆ ಹುರಿದಕ್ಕಿ ರೆವೆಯಲ್ಲಿ ಅವರೆಕಾಯಿ ಉಪ್ಪಿಟ್ಟು ಮಾಡೋರು. ಅದು ರಾತ್ರಿ ಹೊತ್ನಲ್ಲಿ ಮಾತ್ರ. ಅದನ್ನು ಊಟದ ರೂಪದಲ್ಲಿ ತಣಿಗೆಗೆ ಇಡೋರು! ಇದನ್ನು ಬಿಟ್ಟರೆ ಈ ಉಪ್ಪಿಟ್ಟು, ಚಿತ್ರಾನಗಳನ್ನು ನಾವು ತಿಂಡಿ ಎಂದು ತಿನ್ನುತ್ತಿದ್ದುದು, ನಮ್ಮೂರಿನಲ್ಲಿ ನಡೆಯುವ ಯಾವುದಾದರೂ ಮದುವೆ ಮನೆಗಳಲ್ಲಿ ಮಾತ್ರ. ತಾಯವ್ವ ಈ ಮನೆಗೆ ಬಂದಮೇಲೆ, ಶ್ರಾವಣದಲ್ಲಿ ರಾಗಿಯ ಒತ್ತುಸ್ಯಾವಿಗೆ ಮಾಡಿ ಕಾಯ್ಹಾಲು ಮಾಡೋಳು. ಸಂಕ್ರಾಂತಿಯ ನಂತರದ ದಿನಗಳಲ್ಲಿ ಹೊಸರಾಗಿ ಬೀಸಿ ಇಡ್ಲಿ, ದೋಸೆ ಮಾಡೋಳು. ಅದಕ್ಕೆ ಹುಳ್ಳಿಕಾಳು ಕಾರಾನೂ ಅರೆಯೋಳು. ಅವಳು ರಾಗಿ ಬೀಸೋ ದಿನ ನಾನೂ ಕೂಡ ಬೀಸೋ ಕಲ್ಲಿನ ಪಕ್ಕದಲ್ಲಿ ಕುಳಿತು ಅವಳೊಂದಿಗೆ ಬೀಸುತ್ತಿದ್ದೆ. ನಾಸ್ಟಕ್ಕೆ ರಾಗಿಇಡ್ಲಿ ಅಥವಾ ದೋಸೆಯನ್ನು ತಿನ್ನೋದೆ ನಮಗೆ ಅಂದು ದೊಡ್ಡ ವಿಷಯವಾಗಿತ್ತು. ಇದೊಂದು ನೆನಪು ಮಾತ್ರ ನನಗೆ ಇಂದಿಗೂ ಇದೆ.

ಊರಿನಲ್ಲಿ ಅರಳೀಕಟ್ಟೆ ಮುಂದೆ ಇದ್ದ ಪ್ರೈಮರಿ ಸ್ಕೂಲು ನಮ್ಮನ್ನು ಎಂದೂ ಆಕರ್ಷಿಸುವ ಕೇಂದ್ರವಾಗಿರಲಿಲ್ಲ. ಸ್ಕೂಲಿಗೆ ಹೋಗುವುದಕ್ಕಿಂತ ಸೊಪ್ಪಿನ ತೋಟಕ್ಕೊ ಅಥವಾ ಅಜ್ಜವ್ವನ ಜೊತೆ ಸಂತೆಗೆ ಹೋಗುವುದೇ ಹೆಚ್ಚು ಪ್ರಯೋಜನಕಾರಿ ಎಂದು ಭಾವಿಸಿದ್ದ ದಿನಗಳವು. ಓದಿನ ಬಗ್ಗೆ ನನಗಿರುವ ‘ಶ್ರದ್ಧೆ’ ಮತ್ತು ‘ಬುದ್ಧಿವಂತಿಕೆ’ಯನ್ನು ನೋಡಿಯೇ ಮೇಸ್ಟ್ರು ನನ್ನನ್ನು ಕೊನೆಯ ಸಾಲಿನಲ್ಲಿ ಕುಳ್ಳಿರಿಸಿದ್ದರು. ಇವೆಲ್ಲ ನನಗೆ ಯಾವತ್ತೂ ಮುಜುಗರದ ಸಂಗತಿಯಾಗಿರಲಿಲ್ಲ. ಒಂದು ಸಲ ಮೇಸ್ಟ್ರು ತರಗತಿಯಲ್ಲಿ, ‘ನಿಮಗೆಲ್ಲಾ ಯಾವ್ಯಾವ ತಿಂಡಿಗಳೆಂದರೆ ಇಷ್ಟ.. ಹೇಳಿ’ ಎಂದು ಎಲ್ಲರನ್ನೂ ಕೇಳಿದರು. ತರಗತಿಯಲ್ಲಿದ್ದ ಎಲ್ಲರೂ ‘ಇಡ್ಲಿ’ ‘ಮಸಾಲೆದೋಸೆ’ ‘ಕೇಸರಿಬಾತ್’ ‘ಉಪ್ಪಿಟ್ಟು’ ‘ಚಿತ್ರಾನ್ನ’ ಎಂದು ತಾವು ತಿನ್ನದೇ ಇದ್ದರೂ ಆ ಹೆಸರುಗಳನ್ನೆಲ್ಲಾ ಹೇಳಿದರು. ಆದರೆ ನಾನು ಮಾತ್ರ ಎದ್ದುನಿಂತು, ‘ರಾಗಿ ರೊಟ್ಟಿ’ ಎಂದು ಹೇಳಿ ಕುಳಿತುಕೊಂಡೆ. ಎಲ್ಲರೂ ನಕ್ಕರು. ಅದರಿಂದ ನನಗೇನೂ ಅನಿಸಲಿಲ್ಲ.

ನನ್ನ ಪಾಲಿಗೆ ರಾಗಿರೊಟ್ಟಿ ಮಾತ್ರ ಶ್ರೇಷ್ಠ ಎನಿಸಿತು. ಏಕೆಂದರೆ ರಾಗಿರೊಟ್ಟಿ ತಾಯಂದಿರ ಮೃದು ಸ್ಪರ್ಶದಿಂದ ಮಾತ್ರ ತಯಾರಾಗುವಂಥದ್ದು. ಅದರಲ್ಲೂ ತನ್ನ ಮಕ್ಕಳಿಗಾಗಿ ಅವಳು ಸುಡುವ ರೊಟ್ಟಿಗೆ ತನ್ನೆಲ್ಲಾ ಪ್ರೀತಿಯನ್ನು ಬಸಿದು ಮಾಡುತ್ತಾಳೆ. ಹಿಟ್ಟನ್ನು ಹದವಾಗಿ ಕಲಸುವುದರಿಂದÀ ಮೊದಲುಗೊಂಡು, ಹಂಚಿನ ಮೇಲೆ ನಿಗಾ ಇಟ್ಟು ಹಂಚಿನ ಅಗಲಕ್ಕೆ ತೊಟ್ಟಿ ಬೇಯಿಸುವವರೆಗೆ ಮನಸ್ಸು ಮತ್ತು ಬೆರಳು ಅಲ್ಲೇ ಇರಬೇಕು. ಇದರಲ್ಲಿ ಯಾವುದಾದರೂ ಒಂದು ಹದ ತಪ್ಪಿದರೂ ರೊಟ್ಟಿ ಇನ್ನೇನೋ ಆಗುತ್ತದೆ. ನಮ್ಮ ಕೇರಿಯ ಕದಿರಮ್ಮದೊಡ್ಡಿ ಆಗಾಗ ಮನೆಗೆ ಬರುತ್ತಿದ್ದಳು. ಆಗ ಅವ್ವ ಅಳ್ಳೆಲೆಯೊಳಗೆ ಅವಳಿಗೆ ರೊಟ್ಟಿ ಕೊಟ್ಟು, ‘ರೊಟ್ಟಿ ಎಂಗೈತೋ ಕಣೆ!’ ಅಂತ ಅವ್ವ ಕೇಳಿದರೆ, ‘ನಿನ್ನ ಮನಸು ಎಂಗೈತೋ ಅಂಗೆನೆ ರೊಟ್ಟಿನೂ ಸೆಂದಾಗೈತೆ ಕಣವ್ವ’ ಎಂದು ಕದಿರÀಮ್ಮದೊಡ್ಡಿ ರೊಟ್ಟಿ ತಿನ್ನುತ್ತಾ ಮುಗ್ಧತೆಯಿಂದ ಹೇಳುತ್ತಿದ್ದ ಮಾತುಗಳು ಈಗತಾನೆ ಕೇಳಿದಂತೆ ನನ್ನ ಕಿವಿಯಲ್ಲಿವೆ. ಮಾಡಿದ ಅಡುಗೆಗೆ ರುಚಿ ಬರುವುದು ಅದನ್ನು ಮಾಡಿದವರ ಮನಸ್ಸಿನಿಂದ ಎನ್ನುವ ಪಾಠವನ್ನು ನಾನು ಅಂದು ಕದಿರಮ್ಮದೊಡ್ಡಿಯಿಂದ ಕಲಿತೆ.

ರೊಟ್ಟಿಯ ಮೇಲೆ ಅದನ್ನು ಮಾಡಿದ ತಾಯಿಯ ಬೆರಳಿನ ಗುರುತೂ ಹಾಗೆಯೇ ಉಳಿದಿರುತ್ತದೆ. ಇದರಿಂದಾಗಿಯೇ ಹಸಿವು ಎಷ್ಟೇ ದೊಡ್ಡದಿದ್ದರೂ ತಾಯಿ ಪ್ರೇಮದ ಹಸ್ತವಿರುವ ರೊಟ್ಟಿಯ ಚೂರು ನಮ್ಮೆಲ್ಲ ದಾಹಗಳನ್ನೂ ತಣಿಸುತ್ತದೆ. ಇದು ಕೇವಲ ಹಸಿವನ್ನು ಹಿಂಗಿಸುವ ಕಾರಣಕ್ಕಾಗಿ ಅಲ್ಲ! ಭಾವನಾತ್ಮಕವಾಗಿಯೂ ಕೂಡ. ಇದರಿಂದಾಗಿಯೆ ನನಗೆ ಈಗಲೂ ರೊಟ್ಟಿಯ ಮೇಲೆ ಇಷ್ಟೊಂದು ಮಮಕಾರ. ಈ ಎಲ್ಲಾ ಕಾರಣಗಳೂ ನನಗೆ ಅಂದು ತಿಳಿದಿರಲಿಲ್ಲ ಅಥವಾ ತಿಳಿಯುವ ವಯಸ್ಸೂ ಆಗಿರಲಿಲ್ಲ. ಆದರೂ ನನ್ನ ಮನಸ್ಸು ಮಾತ್ರ ಅಂದು ತರ್ಕದ ಹಂಗಿಲ್ಲದೆ ಸಹಜವಾಗಿಯೇ ರೊಟ್ಟಿಯ ಪರವಾಗಿತ್ತು.

ಇಂತಹ ಪ್ರೀತಿ ಕೇವಲ ನನ್ನೊಬ್ಬನಿಗೇ ಮೀಸಲು. ಯಾರಿಗೂ ಇಂತಹ ತಾಯಿ ಪ್ರೀತಿ ದಕ್ಕಿಲ್ಲ ಎಂದು ನಾನು ಭಾವಿಸಿಲ್ಲ. ಎಲ್ಲರಿಗೂ ತಾಯಿ ಪ್ರೀತಿ ಎನ್ನುವುದು, ಯಾವುದರಿಂದಲೂ ಅಳೆಯಲಾಗದ, ಬೆಲೆಕಟ್ಟಲಾಗದ ಎದೆಯಾಳದಲ್ಲಿರುವ ನಿಧಾನದಂತೆ. ಮೊಗÉದಷ್ಟೂ ಪ್ರೀತಿ, ನೆನೆದಷ್ಟೂ ಧನ್ಯತೆ. ನಾನು ಅವ್ವನನ್ನು ನೆನೆಯುವಾಗಲೆಲ್ಲಾ, ನನ್ನ ಅಲ್ಪ ಮಟ್ಟಿಗಿನ ಸಾಹಿತ್ಯದ ಓದಿನಲ್ಲಿ ನೆನಪಾಗುವ ಮೂರು ತಾಯಂದಿರಿದ್ದಾರೆ. ಲಂಕೇಶರ ‘ಅವ್ವ’ ದೇವನೂರ ಮಹದೇವರ ‘ಸಾಕವ್ವ’ ಮತ್ತು ಮ್ಯಾಕ್ಸಿಂ ಗಾರ್ಕಿಯ ‘ತಾಯಿ’. ಈ ಮೂರೂ ತಾಯಂದಿರ ಚಿತ್ರಗಳು ನನ್ನ ಮನಸ್ಸಿನಾಳದಲ್ಲಿ ಇಂದಿಗೂ ತಂಗಿವೆ. ಇವರುಗಳಲ್ಲೇ ನಾನು ನನ್ನ ತಾಯಿಯನ್ನು ಕಂಡುಕಂಡಿದ್ದೇನೆ. ಹಾಗೆಯೇ ನನ್ನ ತಾಯಿಯಲ್ಲೇ ಈ ಮೂರೂ ತಾಯಂದಿರ ಗುಣವನ್ನು ಕಂಡಿದ್ದೇನೆ.

ಒಂದು ದಿನ ನಾನು ಬೇರೆ ಊರಿಗೆ ಹೋಗಿದ್ದವನು ಮನೆಗೆ ಮರಳಿದಾಗ ಸರಿರಾತ್ರಿಯಗಿತ್ತು. ಬಂದು ಬಾಗಿಲು ಬಡಿದೆ. ಮನೆಯಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಯಾರೂ ಎಚ್ಚರಗೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಯಾವಾಗಲೂ ಬೀಸೋಕಲ್ಲಿನ ಮಗ್ಗುಲಿನಲ್ಲೇ ಮಲಗುತ್ತಿದ್ದ ಅವ್ವ ಮಾತ್ರ ನನ್ನ ಧ್ವನಿ ಕೇಳಿ ಬಂದು ಬಾಗಿಲು ತೆರೆದಳು. ಕತ್ತಲ ನಡುವೆಯೇ ತಡಕಾಡಿ ದೀಪದ ಗೂಡಿನಲ್ಲಿದ್ದ ಸೀಮೆಯಣ್ಣೆ ಬುಡ್ಡಿ ಹಚ್ಚಿದಳು.

ನಮ್ಮದು ದೊಡ್ಡ ಮಾಳಿಗೆಯ ಮನೆ. ನಡುವೆ ಒಂದು ಅಡ್ಡಗೋಡೆ. ಆ ಬದಿಯದೇ ಅಡುಗೆ ಮನೆ.್ದ ನಮ್ಮಲ್ಲಿ ಅಡುಗೆಮನೆಯೆಂದರೆ ಅದೊಂದು ಕಗ್ಗತ್ತಲ ಗುಹೆ. ಗವಾಕ್ಷಿಯಿಂದ ಮಾತ್ರವೇ ಅಲ್ಲಿಗೆ ಗಾಳಿ ಬೆಳಕಿನ ಪ್ರವೇಶ. ಈ ಬದಿಯದೇ ಪಡಸಾಲೆ. ಗಬ್ಬವಾದ ಮೇಕೆ, ಮಂಕರಿಯಲ್ಲಿ ಕೌಚ್ಹಾಕಿದ ಕೋಳಿಪಿಳ್ಳೆಗಳೊಂದಿಗೆ ಎಲ್ಲರೂ ಮಲುಗುತ್ತಿದ್ದುದು ಪಡಸಾಲೆಯಲ್ಲೇ. ಈಸಲು ಚಾಪೆಯ ಸುತ್ತ ತಿಗಣೆ ಸೊಪ್ಪನ್ನು ಹರಡಿಕೊಂಡು ಎಲ್ಲರೂ ಮಲಗುತ್ತಿದ್ದೆವು.

ಪಡಸಾಲೆಗೆ ಬಂದು ಗಳದ ಮೇಲೆ ಬಟ್ಟೆ ಹಾಕಿದೆ. ಅವ್ವ ನನ್ನನ್ನು ನೋಡಿಯೇ ‘ವತಾರೆ ಹೋದೋನು ಗ್ರಾಸ್ತ, ಈಟೊತ್ತಿಗೆ ಬಂದೆಯಲ್ಲ! ಹಸ್ಕೊಂಡಿದ್ದ!’ ಅಂದಳು. ‘ಇರು ಒಂದು ರೊಟ್ಟಿ ತೊಟ್ಟುತ್ತೀನಿ. ಹೋಗಿ ಕಾಲಿಗೆರಡು ನೀರು ಹಾಕ್ಕೊಂಡು ಬಾ, ತಿಂದು ಮಲಗಿವಂತೆ’ ಅಂದಳು. ನನಗೆ ಆ ಗಳಿಗೆಯಲ್ಲಿ ರೊಟ್ಟಿ ತಿನ್ನಬೇಕೆನ್ನಿಸಿದರೂ, ಅವ್ವನಿಗೆ ಸರ್ಹೊತ್ತಿನಲ್ಲಿ ಕಷ್ಟ ಕೊಡಬಾರದು ಅಂತ ‘ಬೇಡಕಣವ್ವ ಉಂಡಿದ್ದಿನಿ’ ಅಂದೆ. ನನ್ನ ಮಾತನ್ನು ಕಿವಿಮೇಲೆ ಹಾಕಿಕೊಳ್ಳದ ಅವ್ವ, ಮಲಗಿದ್ದವರನ್ನು ಎಬ್ಬಿಸದೆ ತಾನೆ ರೊಟ್ಟಿ ಸುಡಲು ಹೋದಳು. ಕಣ್ಣುಮುಚ್ಚಿ ತೆರೆಯೋದರೊಳಗಾಗಿ ರೊಟ್ಟಿ ತಂದಳು. ಮಬ್ಬುಗತ್ತಲಿನಲ್ಲೇ ರೊಟ್ಟಿ ತಿನ್ನತೊಡಗಿದೆ. ಮನೆ-ಮಕ್ಕಳ ಬಗ್ಗೆ ಅವಳಿಗಿದ್ದ ಅಕ್ಕರ, ನೂರಾರು ಬಂಗವಿದ್ದರೂ ನೆರೆಹೊರೆಯವರೆದುರು ತಲೆಯೆತ್ತಿ ಬಾಳುವ ಅವಳ ಛಲ, ನಮ್ಮ ಕುಟುಂಬದಲ್ಲಿ ಸ್ವಾಭಿಮಾನದ ಕಿಡಿ ಎಂದೂ ನಂದದಂತೆ ಜತನದಿಂದ ಕಾಪಾಡಿಕೊಂಡು ಬಂದಿದ್ದ ಅವಳ ನಿವ್ರ್ಯಾಮೋಹಿಯಾದ ಮನಸ್ಸು. ಇಂತಹ ನೂರಾರು ಜೀವಂತ ಚಿತ್ರಗಳೆಲ್ಲ ಹೂವಿನೆಳೆಯಂತೆ ಪೋಣಿಸಿಕೊಂಡು ಮನಸ್ಸಿನಲ್ಲಿಯೇ ಮೂಡಿದವು.

ಅವ್ವ ಸವೆಸಿದ ಹಾದಿಯನ್ನು ನೆನೆಯುತ್ತಿದ್ದ ಹಾಗೆಯೇ ನನ್ನ ಅರಿವಿಗೆ ಬಾರದೆ ಕಂಬನಿ ಒಸರಿ ಕಣ್ಣು ಮಂಜಾಗತೊಡಗಿತು. ಆ ಕತ್ತಲಿನಲ್ಲಿ ಒಸರುತ್ತಿದ್ದ ಕಣ್ಣೀರು ಅವ್ವನಿಗೆ ಕಾಣಿಸುತ್ತಿರಲಿಲ್ಲ. ಬೀಸೋಕಲ್ಲಿನ ಕಡೆ ಕುಳಿತ್ತಿದ್ದ ಅವ್ವನಕಡೆ ನೋಡಿದೆ. ತೇವಗೊಂಡ ನನ್ನ ಕಣ್ಣಿಗೆ ಮಬ್ಬಾಗಿ ಗೋಚರಿಸಿದಳು. ಒಂದು ಸಲ ರೊಟ್ಟಿಯ ಮೇಲೆ ಕೈಯಾಡಿಸಿದೆ. ಅವಳ ಬೆರಳ ಗುರುತುಗಳು ಅಲ್ಲಿ ಮೂಡಿದ್ದವು. ಅದನ್ನೇ ಮೃದುವಾಗಿ ತಡವಿದೆ. ಅವ್ವನನ್ನು ಮುಟ್ಟಿದ ಅನುಭವವೆ ಆಯಿತು. ಇಡೀ ದಿನದ ಅಸ್ತವ್ಯಸ್ತತೆಯಿಂದ ಘಾಸಿಗೊಂಡು ದಣಿದಿದ್ದ ನನ್ನ ಮನಸ್ಸು ಈ ಮಾಂತ್ರಿಕ ಸ್ಪರ್ಶದಿಂದ ಶಮನವಾಯಿತು. ನಾನು ರೊಟ್ಟಿಯ ಮೇಲೆ ಬೆರಳಾಡುಸುತ್ತಿದ್ದನ್ನು ಕತ್ತಲಿನಲ್ಲೇ ನೋಡಿದ ಅವ್ವ ‘ಯಾಕೋ, ರೊಟ್ಟಿ ಸೆಂದಾಗಿಲ್ವೆ! ಅಂಗೆ ಕುಂತಿಯಲ್ಲಾ! ಕತ್ತಲಾಗೆ ಬೆಂದಿದೆಯೋ ಹೆಂಗೋ’ ಅಂದಳು. ‘ಹೋಗಿ ಮಲಿಕಳವ್ವ’ ಅಂದೆ.

ಆಧುನಿಕತೆಗೆ ಒಪ್ಪಿಸಿಕೊಂಡ ಮನಸ್ಸುಗಳಿಗೆ ಈ ವಿವರಗಳು ನಗೆ ತರಿಸಬಹುದು! ‘ಪ್ರತ್ಯೇಕತೆ’ ಎನ್ನುವದನ್ನೇ ಬದುಕಿನ ಮೂಲ ಮಂತ್ರವನ್ನಾಗಿ ಮಾಡಿಕೊಂಡಿರುವ ಇಂದಿನವರಿಗೆ ಸಂಬಂಧಗಳ ಬಗ್ಗೆ ನಿರ್ಲಕ್ಷ್ಯ, ಹಗುರವಾದ ಭಾವನೆಗಳು ಮೂಡಬಹುದು! ವಿಘಟನೆಗೊಳ್ಳುತ್ತಿರುವ ಕೌಟುಂಬಿಕ ವ್ಯವಸ್ಥೆಯಿಂದ ಮನುಷ್ಯ ಸಂಬಂಧಗಳು ತಮ್ಮ ಆದ್ರತೆಯನ್ನು ಕಳೆದುಕೊಳ್ಳುತ್ತಿವೆ ಎಂಬ ಭಾವನೆ ಎಲ್ಲೆಡೆ ದಟ್ಟವಾಗಿದೆ. ಎಲ್ಲ ಮನಸ್ಸುಗಳನ್ನೂ ಗಾಢವಾಗಿ ಬೆಸೆಯುವ ಕೂಡುಕುಟುಂಬಗಳಲ್ಲಿ ಇದ್ದಂತಹ ಪ್ರೀತಿ, ಸಹಬಾಳ್ವೆ, ಎಲ್ಲರಿಗೂ ಹಂಚಿ ಉಣ್ಣುವಲ್ಲಿ ಕಾಣುತ್ತಿದ್ದ ಅವರ್ಣನೀಯ ಸಂತೋಷದ ಅನುಭವಗಳಿಂದ ಅವರು ವಂಚಿತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ನನ್ನನ್ನು ರೂಪಿಸಿದ ಬಾಲ್ಯದ ಇಂತಹ ಅನುಭವಗಳಿಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ಎಳೆತನದ ಲೌಕಿಕ ಸೌಂದರ್ಯ, ಜಡತ್ವದ ಸೋಂಕೇ ಇರದ ಚೈತನ್ಯದ ದಿನಗಳಿಗೆ ನನ್ನ ಮನವು ಇಂದಿಗೂ ಮಣಿಯುತ್ತದೆ. ನನ್ನ ಪಾಲಿಗೆ ಇದೇ ಸರ್ವಸ್ವವಾಗಿತ್ತು.

Leave a Reply

Your email address will not be published.