ಅಲ್ಲಿ ಎಲ್ಲರೂ ‘Cut Throat’ ಗುಣವುಳ್ಳವರೇ.

-- ಶ್ರೀಪಾದ ಭಟ್

 1966 ರಲ್ಲಿ ಬಿಡುಗಡೆಯಾದ “ಗುಡ್ ಬ್ಯಾಡ್ ಅಗ್ಲಿ” ಹಾಲಿವುಡ್ ಸಿನಿಮಾಗೆ ಈಗ ೫೦ ವರ್ಷ. ಇದರ ವಿಶೇಷವೆಂದರೆ ಕೌಬಾಯ್ ಮಾದರಿಯ ಸಿನಿಮಾಗಳಿಗೆ ನಾಂದಿ ಹಾಡಿದ್ದು. ಸಿನಿಮಾವನ್ನು ಸ್ಟೈಲಿಷ್ ಆಗಿ ಹೇಗೆ ರೂಪಿಸಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ “ಗುಡ್ ಬ್ಯಾಡ್ ಅಗ್ಲಿ” ಸಿನಿಮಾ. ಕ್ಲಿಂಟ್ ಈಸ್ಟ್ ವುಡ್ ಇದರ ನಿರ್ದೇಶಕ. ಈ ಸುದ್ದಿಯನ್ನು ಓದಿಗಾಗ ಕೂಡಲೆ ನೆನಪಾದದ್ದು ಅರವತ್ತರ ದಶಕದಲ್ಲಿ ತೆರೆಕಂಡ ಮೂರು ಕೌಬಾಯ್ ಚಿತ್ರಗಳು. A Fistful of Dollars,  For a Few Dollars More, The Good, The Bad and The Ugly ಎನ್ನುವ ಈ ಮೂರು ಚಿತ್ರಗಳು Dollars Trilogy ಎಂದೇ ಖ್ಯಾತಿ ಹೊಂದಿದ್ದವು. ಈ ಮೂರರಲ್ಲಿಯೂ ಕ್ಲಿಂಟ್ ಈಸ್ಟ್‌ವುಡ್ ಅಭಿನಯಿಸಿದ್ದರೆ, ಕಡೆಯ ಎರಡು ಚಿತ್ರಗಳಲ್ಲಿ ಲೀ ವಾನ್ ಕ್ಲೀಫ್, ಮತ್ತು The Good The Bad and The Ugly ಸಿನಿಮಾದಲ್ಲಿ ವಲಾಚ್ Ugly ಟುಕೋ’ ಪಾತ್ರದಲ್ಲಿ ಅಭಿನಯಿಸಿದ್ದ. ಈ ಮೂರು ಸಿನಿಮಾಗಳನ್ನು ಸೆರಿಗೋ ಲಿಯಾನ್ ನಿರ್ದೇಶಿಸಿದ್ದ. ಎನ್ನಿಯೋ ಹಿನ್ನೆಲೆ ಸಂಗೀತ ನೀಡಿದ್ದ.

the-uglyಹೌದು ಮೊದಲೇ ಹೇಳಿಬಿಡಬೇಕು. ಈ ಮೂರು ಸಿನಿಮಾಗಳ ಕ್ರೇಜ್ ಇದ್ದದ್ದು ಅವುಗಳ ಥೀಮ್ ಮ್ಯೂಸಿಕ್‌ನಲ್ಲಿ. ಈ ಥೀಮ್ ಮ್ಯೂಸಿಕ್ ಈ ಸಿನಿಮಾಗಳ ಟ್ರಂಪ್ ಕಾರ್ಡ್. ಇಂದಿಗೂ ಆ ಸಿನಿಮಾಗಳನ್ನು ನೋಡಿದವರು ಗುನುಗುವುದು ಆ ಥೀಮ್ ಮ್ಯೂಸಿಕ್ ಅನ್ನು. ಸಣ್ಣ ತೋಳವೊಂದರ ಊಳಿಡುವ ಸದ್ದನ್ನು ಹೋಲುತ್ತಿದ್ದ ಈ ಥೀಮ್ ಮ್ಯೂಸಿಕ್ The Good, The Bad and The Ugly ಸಿನಿಮಾದಲ್ಲಿ The Good ಬ್ಲಾಂಡೀ ಪಾತ್ರಧಾರಿ ಈಸ್ಟ್‌ವುಡ್‌ಗೆ ಹಿನ್ನೆಲೆಯಲ್ಲಿ ಕೊಳಲನ್ನು ಬಳಸಿದ್ದರೆ,, The Bad ಪಾತ್ರಧಾರಿ ಕ್ಲೀಫ್‌ಗೆ ವಿಚಿತ್ರ ಬಗೆಯ ವಾದ್ಯವನ್ನು (ಹೆಸರು ಗೊತ್ತಿಲ್ಲ) ಬಳಸಿದ್ದರೆ, The Ugly ಟುಕೋ ಪಾತ್ರಧಾರಿ ವಲಾಚ್‌ಗೆ ಊಳಿಡುವ ಮನುಷ್ಯರ ಧ್ವನಿಗಳನ್ನು ಬಳಸಿದ್ದು ವಿಶಿಷ್ಟವಾಗಿತ್ತು. ಈ “ಥೀಮ್ ಮ್ಯೂಸಿಕ್” ಚಿತ್ರದುದ್ದಕ್ಕೂ ಆವರಿಸಿಕೊಳ್ಳುತ್ತದೆ. ಥೀಮ್ ಮ್ಯೂಸಿಕ್ ಅನ್ನು ಚಿತ್ರದೊಂದಿಗೆ ಬೇರ್ಪಡಿಸಿ ನೋಡಿದರೆ ಇಡೀ ಸಿನಿಮವೇ ನಿರ್ಜೀವವಾಗುತ್ತದೆ. ಇದು ಇಡೀ ಸಿನಿಮಾಗೆ ಒಂದು ವಿಶಿಷ್ಟ ಐಡೆಂಟಿಟಿಯನ್ನು ತಂದುಕೊಟ್ಟಿದ್ದದನ್ನು ಮರೆಯುವ ಹಾಗೆಯೇ ಇಲ್ಲ. For a Few Dollar More ಸಿನಿಮಾಗಾಗಿ ಬಳಸಿದ ಸೌಂಡ್ ಟ್ರಾಕ್ ಸಹ ಅಷ್ಟೇ ಜನಪ್ರಿಯವಾಗಿತ್ತು. ಕನ್ನಡದ ಬಂಧನ ಸಿನಿಮಾದ ಹಾಡು “ಬಣ್ಣ, ಬಣ್ಣ, ನನ್ನ ಒಲವಿನ ಬಣ್ಣ, ನೀನಕ್ಕರೆ ಹಸಿರು, ಉಲ್ಲಾಸದ ಉಸಿರು” ಸಾಲುಗಳಲ್ಲಿ ಬರುವ ರಾಗ,ಧಾಟಿ,ಏರಿಳಿತ ಮತ್ತು ಬಂದಿಶ್ ಅನ್ನು ಸಂಪೂರ್ಣವಾಗಿ For a Few Dollars More ಸಿನಿಮಾದಿಂದ ನಕಲು ಮಾಡಿದ್ದು.

The Good, The Bad and The Ugly ಸಿನಿಮಾದಲ್ಲಿ ನಿದೇಶಕ ಲಿಯಾನ್ ಶಬ್ದಕ್ಕಿಂತಲೂ ದೃಶ್ಯಗಳನ್ನು ಹೆಚ್ಚಿಗೆ ಬಳಸಿದ್ದ. ಅದನ್ನೇ ನಂಬಿದ್ದ ಮತ್ತು ಯಶಸ್ವಿಯಾಗಿದ್ದ. ಆರಂಭದ ದೃಶ್ಯವಾದ ವಿಶಾಲವಾದ ಪಶ್ಚಿಮದ ಕುರುಚಲು ಬಯಲನ್ನು ತೋರಿಸುತ್ತಾ ಕ್ಯಾಮೆರ ಎಲ್ಲಿಯೂ ಕಟ್ ಆಗದೆ ನಿಧಾನವಾಗಿ ದೈನ್ಯತೆಯ ಮುಖದ ಅಸಹಾಯಕ ವ್ಯಕ್ತಿಯ ಮೇಲೆ ಕೇಂದ್ರೀಕೃತಗೊಳ್ಳುತ್ತದೆ. ಅಷ್ಟೇ ನಿರ್ದೇಶಕ ಮಾಡಿದ್ದು.ಮಿಕ್ಕಿದ್ದೆಲ್ಲಾ ಚಿತ್ರಕತೆ ನಿಭಾಯಿಬಿಟ್ಟಿತು. ಯಾವುದೇ ದೊಡ್ಡ ದೊಡ್ಡ ಆಶಯಗಳನ್ನು ಇಟ್ಟುಕೊಳ್ಳದೆ ಕೇವಲ ಕಾಗಕ್ಕ ಗುಬ್ಬಕ್ಕ ಕತೆಯನ್ನು ಹೇಳುತ್ತಾ ಲಿಯಾನ್ ಇಡೀ ಸಿನಿಮಾದುದ್ದಕ್ಕೂ ಅನೇಕ ಸಂಕೇತಗಳನ್ನು ಪರಿಣಾಮಕಾರಿಯಾಗಿ ಕಟ್ಟುತ್ತಾನೆ. The Ugly ಟುಕೋ ಪಾತ್ರ ಒಂದು ಬಗೆಯ ಬಫೂನ್‌ಗಿರಿ ಕ್ರೌರ್ಯದ ಅಭಿನಯವನ್ನು ಬೇಡುತ್ತಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದು ವಲಾಚ್. ಆತ ಬಫೂನ್‌ಗಿರಿಕ್ರೌರ್ಯದ ಪಾತ್ರವೇ ತಾನಾಗಿದ್ದ. ಇಡೀ ಸಿನಿಮಾದ ಅರ್ಧಕ್ಕಿಂತಲೂ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡಿದ್ದ ವೆಲಾಚ್ ಪ್ರತಿ ಫ್ರೇಮಿನಲ್ಲೂ ಮುಂದೆ ಈತ ಏನೋ ಮಾಡುತ್ತಾನೆ ಎಂದು ಕಾಯುವಂತೆ ಅಭಿನಯಿಸಿದ್ದ. ಒಂದು ದೃಶ್ಯದಲ್ಲಿ ಈತನ ಮೇಲೆ ಸೇಡು ತೀರಿಸಿಕೊಳ್ಳಲು ಎಂಟು ತಿಂಗಳು ಕಾಯುತ್ತಿದ್ದ ಬಾಡಿಗೆ ಕೊಲೆಗಾರನ ಕೈಯಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ವಲಾಚ್ ಸಿಕ್ಕಿಕೊಳ್ಳುತ್ತಾನೆ. ಆ ಬಾಡಿಗೆ ಕೊಲೆಗಾರ ತಾನು ಹೇಗೆ ವಲಾಚ್‌ನನ್ನು ಕೊಲೆ ಮಾಡಲು ಎಂಟು ತಿಂಗಳುಗಳ ಕಾಲ ಹುಡುಕುತ್ತಿದ್ದೆ ಎಂದು ವಿವರಿಸುತ್ತಿರುವಾಗಲೇ ವಲಾಚ್ ತನ್ನ ಪಿಸ್ತೂಲಿನಿಂದ ಬಾಡಿಗೆ ಕೊಲೆಗಾರನನ್ನೇ ಮುಗಿಸಿಬಿಡುತ್ತಾನೆ. ನಂತರ ಬಾತ್ ಟಬ್‌ನಿಂದ ಮೇಲಕ್ಕೇಳುತ್ತಾ ವಲಾಚ್ “If you want to shoot, shoot. Dont talkಎಂದು ಬಫೂನ್‌ಗಿರಿ ಕ್ರೌರ್ಯದ ಶೈಲಿಯಲ್ಲಿ ಹೇಳುವ ಡೈಲಾಗ್ ಇಡೀ ಚಿತ್ರದ ಭಾಷ್ಯೆಯನ್ನು ಸಂಕೇತಿಸುತ್ತದೆ. ಇದೇ ಭಾಷ್ಯೆಯನ್ನೇ The Good ಬ್ಲಾಂಡೀ ಪಾತ್ರಧಾರಿ ಈಸ್ಟ್‌ವುಡ್ ಇಡೀ ಚಿತ್ರದುದ್ದಕ್ಕೂ ತನ್ನ ನಡುವಳಿಕೆಗಳಿಂದಲೇ ನಿರ್ವಹಿಸುತ್ತಾ ಹೋಗುತ್ತಾನೆ. ಈಸ್ಟ್‌ವುಡ್ ಎಲ್ಲಿಯೂ ಹೆಚ್ಚು ಮಾತನಾಡುವುದಿಲ್ಲ. ತೊಡೆಗೆ, ಕೈತೋಳಿಗೆ ಬೆಂಕಿ ಕಡ್ಡಿಯನ್ನು ಗೀರಿ ಚುಟ್ಟಾವನ್ನು ಹತ್ತಿಸುವ ಈಸ್ಟ್‌ವುಡ್‌ನ ಆ ಸ್ಟಂಟ್ ಆ ಕಾಲಕ್ಕೆ ತುಂಬಾ ಜನಪ್ರಿಯವಾಗಿತ್ತು. ಈಸ್ಟ್‌ವುಡ್ “Cut Throatಗುಣವುಳ್ಳ ತಣ್ಣಗಿನ ಕ್ರೌರ್ಯ ಸಹ ಇಡೀ ಚಿತ್ರದ ಗುಣವೂ ಹೌದು. ಅಲ್ಲಿ ಎಲ್ಲರೂ ‘Cut Throatಗುಣವುಳ್ಳವರೇ.

ಈ ಸಿನಿಮಾದಲ್ಲಿ ಮಮತೆಗೆ ಸ್ಥಾನವೇ ಇಲ್ಲ. ಮಮತೆಯ ಸಂಕೇತವಾಗಿ ಬರುವ ವಲೇಚ್‌ನ ಅಣ್ಣನ ಪಾತ್ರವೂ ಸಹ ಕೇವಲ ಕೆಲವು ಸೆಕೆಂಡುಗಳಷ್ಟು. ಅದು ಸಿನಿಮಾದ ಕತೆಯಲ್ಲಿ ಬೆರೆಯುವುದೇ ಇಲ್ಲ. ಆದರೂ ತಣ್ಣಗಿನ ಕ್ರೌರ್ಯದ ಬ್ಲಾಂಡೀ ಈಸ್ಟ್‌ವುಡ್ ಸಿನಿಮಾದ ಕೊನೆಯ ಭಾಗದಲ್ಲಿ ಯುದ್ಧದಲ್ಲಿ ಹೋರಾಡುತ್ತ ಮಡಿದ ಸೈನಿಕರನ್ನು ಕಂಡು ಬೇಸರದಿಂದ “ಛೇ ಎಷ್ಟೊಂದು ದೇಹಗಳು ಅನಗತ್ಯವಾಗಿ ಹಾಳಾಗುತ್ತಿವೆ” ಎಂದು ಉದ್ಗರಿಸುತ್ತಾನೆ. ಸಾಯುತ್ತಿರುವ ಸೈನಿಕನೊಬ್ಬನಿಗೆ ಉಪಚರಿಸುವ ದೃಶ್ಯ ಸಹ ಹೃದಯಂಗಮವಾದದ್ದು. ತಣ್ಣಗಿನ ಕ್ರೌರ್ಯದ ಬ್ಲಾಂಡೀ ಹೀಗೆ ಇರಬಾರದೆ ಎಂದೂ ಅನಿಸುತ್ತದೆ. ಆದರೆ ಮತ್ತೆ ತನ್ನ ಕೊಲೆಗಾರನ ವ್ಯಕ್ತಿತ್ವಕ್ಕೆ ಮರಳುವ ಬ್ಲಾಂಡೀ ಸಿನಿಮಾದ ಧೀರ್ಘವಾದ ಕ್ಲೈಮಾಕ್ಸ್ ದೃಶ್ಯಕ್ಕೆ ಮರಳುತ್ತಾನೆ. ಆ ಕ್ಲೈಮಾಕ್ಸ್‌ನಲ್ಲಿ ಸ್ಮಶಾನದಲ್ಲಿ ಅಡಗಿಸಿಟ್ಟ ಬಂಗಾರಕ್ಕಾಗಿ ಅಚಾನಕ್ಕಾಗಿ ಕೂಡಿಕೊಳ್ಳುವ ಮೂವರು ಕೊಲೆಗಾರರ ಕೈ ಪಿಸ್ತೂಲಿನ ಮೇಲಿರುತ್ತದೆ. ಒಬ್ಬನು ಗುಂಡು ಹಾರಿಸಿದರೆ ಮಿಕ್ಕವರೆಲ್ಲರೂ ಗುಂಡು ಹಾರಿಸಿ ಎಲ್ಲರೂ ಸಾಯುತ್ತಾರೆ. ಈ ಕುತೂಹಲವನ್ನು ಎಷ್ಟು ಸೆಕೆಂಡುಗಳ ಕಾಲ ಅಥವಾ ಎಷ್ಟು ನಿಮಿಷಗಳ ಕಾಲ ಹಿಡಿದಿಡಬಹುದು?

ಆದರೆ ಇದನ್ನು ನಿರ್ದೇಶಕ ಲಿಯೋನ್ ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಾನೆ. ಇದೇ ಹಾದಿಯಲ್ಲಿ ಬಂದ ನೂರಾರು ಸಿನಿಮಾಗಳ ನಂತರ ಇಂದು ಈ ದೃಶ್ಯ ಸಾಮಾನ್ಯವಾಗಿರಬಹುದು. ಆದರೆ ಅದು Trend Setter ಆಗಿದ್ದನ್ನು ಮರೆಯಲು ಸಾಧ್ಯವೇ? ಈ ಸಿನಿಮಾದ ಕ್ಲೈಮಾಕ್ಸ್‌ನಲ್ಲಿ ಬಂಗಾರಕ್ಕಾಗಿ ಹತಾಶೆಯಿಂದ ಸ್ಮಶಾನದಲ್ಲಿ ಅಗೆಯುತ್ತಿರುವ ವಲೇಚ್‌ಗೆ ಈಸ್ಟ್‌ವುಡ್ “ಗೆಳೆಯ, ಈ ಜಗತ್ತಿನಲ್ಲಿ ಎರಡು ಬಗೆಯ ವ್ಯಕ್ತಿತ್ವದ ಜನರಿರುತ್ತಾರೆ. ತುಂಬಿದ ಪಿಸ್ತೂಲನ್ನು ಹೊಂದಿದ ಜನ, ಮತ್ತೊಂದು ಸದಾ ಅಗೆಯುತ್ತಿರುವವರು. ನೀನು ಅಗೆಯುತ್ತಿರು” ಎಂದು ಹೇಳುತ್ತಾನೆ. ನಂತರ ವಲೇಚ್‌ನ ತಲೆಯ ಮೇಲೆ ನೇಣು ಕುಣಿಕೆ ನೇತಾಡುತ್ತಿರುತ್ತದೆ. ಇಡೀ ಚಿತ್ರದುದ್ದಕ್ಕೂ ಬರುವ ಈ ನೇಣು ಕುಣಿಕೆಯ ದೃಶ್ಯಗಳು ವ್ಯಕ್ತಿಯೊಬ್ಬನ ಅತ್ಮಹತ್ಯಾತ್ಮಕ ನಡುವಳಿಕೆಗಳನ್ನು ಸಾಂಕೇತಿಕವಾಗಿ ಹೇಳುತ್ತಾ ಹೋಗುತ್ತವೆ.

ಈ ಸಿನಿಮಾದ ನಂತರ ಈಸ್ಟ್‌ವುಡ್ ಖ್ಯಾತ ನಟ ಮತ್ತು ನಿರ್ದೇಶಕನಾಗಿದ್ದು, ವಲೇಚ್ ಖ್ಯಾತ ನಟನಾಗಿದ್ದು ಇಂದು ಇತಿಹಾಸ. ಆರಂಭದ ನಲವತ್ತು ಮತ್ತು ಐವತ್ತರ ದಶಕಗಳಲ್ಲಿ ಖ್ಯಾತ ರಂಗ ನಟರಾಗಿದ್ದ, ಖ್ಯಾತ ನಟಿ ಮರ್‍ಲಿನ್ ಮನ್ರೋಳ ಮೊದಲ ಗೆಳೆಯರಾಗಿದ್ದ (ಗೆಳೆಯ ಮಾತ್ರ ಎಂದು ವಲೇಚ್ ಒತ್ತಿ ಹೇಳುತ್ತಿದ್ದ!) ವಲೇಚ್‌ರನ್ನು ಇಂದು method acting ದಿಗ್ಗಜರಾದ ಮರ್‍ಲಿನ್ ಬಾಂಡ್ರೋ, ಅಲ್ ಪೆಸಿನೋ, ರಾಬರ್ಟ ಡಿ ನೈರೋ ರಂತಹವರ ಸಾಲಿನಲ್ಲಿ ನೆನಯಲಾಗುತ್ತದೆ.

ಅಂದ ಹಾಗೆ, The Good, The Bad and The Ugly (1966) ಚಿತ್ರಕ್ಕಿಂತ ಮೊದಲೇ ಅಕಿರೋ ಕುರುಸಾವಾನ “ಸೆವೆನ್ ಸಮುರಾಯ್ಸ್” ಚಿತ್ರದ ಹಾಲಿವುಡ್ ರಿಮೇಕ್ “The Magnificent Seven(1960) ಚಿತ್ರದಲ್ಲಿ ಖಳನಾಯಕನಾಗಿ ವಿಜೃಂಭಿಸಿದ್ದು ಸಹ ಇದೇ ಎಲಿ ವಲೇಚ್.

 

Leave a Reply

Your email address will not be published.