ಅಲೆಯ ಲೀಲೆ ತೋರಿದವರು…

-ಡಾ. ವೈ.ಸಿ.ಕಮಲಾ

gpb_circling_earthವಿಶ್ವದ ರಹಸ್ಯವನ್ನು ಭೇದಿಸಲು ಹೊರಟ ವಿಜ್ಞಾನಿಗಳಿಗೆ ದೊಡ್ಡದೊಂದು ಬ್ರೇಕ್ ಸಿಕ್ಕಿದೆ. ವಿಶ್ವ ರಚನೆಗೆ ಸಂಬಂಧಿಸಿದಂತೆ ‘ಮಿಸ್ಸಿಂಗ್ ಲಿಂಕ್’ಗಳನ್ನು ಜೋಡಿಸುವಲ್ಲಿ ಒಂದು ಪ್ರಮುಖ ಕೊಂಡಿ. ಅದುವೇ ಗುರುತ್ವದ ಅಲೆಗಳ ಅಸ್ತಿತ್ವವನ್ನು ವಿಜ್ಞಾನಿಗಳು ಸಾಕ್ಷ್ಯ ಸಮೇತ ಖಚಿತಪಡಿಸಿರುವುದು. ಭೂಮಿಯಲ್ಲಿ ಜೀವಿಗಳ ಉಗಮಕ್ಕೆ ಮುನ್ನ ಹೊರಟ ಗುರುತ್ವ ಅಲೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶ-ಕಾಲದ ಹರವಿನಲ್ಲಿ (Space-Time),  ಗುರುತ್ವದ ಅಲೆಗಳ (Gravitational Waves) ಇರುವಿಕೆಯನ್ನು ಪತ್ತೆ ಮಾಡಿದ ಕೀರ್ತಿ ಅಮೆರಿಕ, ಭಾರತದ ವಿಜ್ಞಾನಿಗಳೂ ಸೇರಿದಂತೆ ಇಡೀ ವಿಶ್ವದ ವಿಜ್ಞಾನಿಗಳಿಗೆ ಸಲ್ಲುತ್ತದೆ. ಈ ಮೂಲಕ ವಿಶ್ವ ರಚನೆ ಕುರಿತಾದ ಪುರಾವೆಗಳ ಕ್ರೋಡೀಕರಣಕ್ಕೆ ಗಟ್ಟಿ ಪುರಾವೆಯೇ ಸಿಕ್ಕಿದೆ. ಇದರಿಂದ ಭವಿಷ್ಯದಲ್ಲಿ ಖಗೋಳಶಾಸ್ತ್ರದ ಅಧ್ಯಯನಕ್ಕೆ ಅದರಲ್ಲೂ ವಿಶ್ವದ ರಚನೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯವಿದೆ.

1990ರ ದಶಕದಲ್ಲಿ The LIGO Scientific Collaboration (LSC) ಗೆ ಚಾಲನೆ ಸಿಕ್ಕಿತು. 15 ದೇಶಗಳ ಬಹಳಷ್ಟು ವಿಶ್ವವಿದ್ಯಾಲಯಗಳು, ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು, ವಿದ್ಯಾರ್ಥಿ ಸಮೂಹ ಈ ಸಾಹಸದಲ್ಲಿ ತೊಡಗಿಸಿಕೊಂಡಿತ್ತು. ಗುರುತ್ವದ ಅಲೆಗಳನ್ನು ಪತ್ತೆ ಮಾಡುವ ಭೌತವಿಜ್ಞಾನದ ಅತ್ಯಂತ ಮಹತ್ವದ ಪ್ರಯೋಗವನ್ನು Laser Interferometer Gravitational – Wave Observatory (LIGO)  ಮೂಲಕ ನಡೆಸಿಕೊಂಡು ಬರಲಾಗುತ್ತಿದೆ. 1.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಒಂದರಸುತ್ತ ಮತ್ತೊಂದು ಸುತ್ತುವ ಎರಡು ಕಪ್ಪುರಂದ್ರಗಳು ಪರಸ್ಪರ ಸಮಾಗಮಗೊಂಡಾಗ ಅವುಗಳಿಂದ ಸೃಷ್ಟಿಯಾದ ಗುರುತ್ವದ ಅಲೆಗಳೇ ಈಗ ಸಿಕ್ಕಿರುವುದು. 2015ರ ಸೆಪ್ಟೆಂಬರ್ 14 ರಂದು ಅಮೆರಿಕದ ಲಿವಿಂಗ್​ಸ್ಟನ್ ಮತ್ತು ಹ್ಯಾನ್​ಫೋರ್ಡ್ ನಲ್ಲಿರುವ ಪ್ರಯೋಗಶಾಲೆಗಳಲ್ಲಿ ಗುರುತ್ವದ ಅಲೆಗಳನ್ನು ದಾಖಲಿಸಲಾಯಿತು.

ಲಿಗೊ ವೀಕ್ಷಣಾಲಯ ಪಾತ್ರವೇನು: ಲಿಗೊ ಕೇಂದ್ರಗಳು ವಿಶ್ವದ ಹಲವೆಡೆ ಇವೆ. ಭಾರತದ ಪುಣೆಯಲ್ಲೂ ಲಿಗೊ ಸ್ಥಾಪನೆಗೊಳ್ಳಲಿದೆ. ಅಮೆರಿಕದಲ್ಲಿ ಎರಡು ವೀಕ್ಷಣಾಲಯಗಳು ಇವೆ. ಅವುಗಳೆಂದರೆ, ಲಿವಿಂಗ್ಟನ್​ನಲ್ಲಿರುವ ವೀಕ್ಷಣಾಲಯ ಮತ್ತು ವಾಷಿಂಗ್ಟನ್​ನ ಸಮೀಪದ ರಿಚ್​ಲೆಂಡ್​ನಲ್ಲಿರುವ ಹ್ಯಾನ್​ಫೋರ್ಡ್ ವೀಕ್ಷಣಾಲಯ. ಇವೆರಡೂ ವೀಕ್ಷಣಾಲಯಗಳ ಮಧ್ಯೆ ಇರುವ ಅಂತರ 3,002 ಕಿ.ಮೀ.ಗಳು. ಗುರುತ್ವದ ಅಲೆಗಳನ್ನು ಖಚಿತಪಡಿಸಲು ಇವರೆಡೂ ವೀಕ್ಷಣಾಲಯಗಳ ಪಾತ್ರ ಮಹತ್ವದ್ದು.

ಗುರುತ್ವ ಅಲೆಗಳು ಇವೆರಡೂ ವೀಕ್ಷಣಾಲಯಗಳನ್ನು ಪ್ರವೇಶಿಸಿದ ಅಂತರವು ಕೇವಲ 7 ಮಿಲಿ ಸೆಕೆಂಡ್​ಗಳಷ್ಟು. ಮುಮ್ಮೂಲೆಯ (triangulation)  ಬಳಕೆಯಿಂದಾಗಿ, ಅಲೆಗಳ ಆಗಮನ ಮತ್ತು ವೀಕ್ಷಣಾಲಯವನ್ನು ತಲುಪಿದ ಸಮಯದ ಅಂತರವನ್ನು ಮತ್ತು ಅಲೆಯ ಮೂಲವನ್ನು ನಿಖರವಾಗಿ ಕಂಡುಕೊಳ್ಳಲು ಸಾಧ್ಯವಾಗಿದೆ. ವಿಶ್ವದಲ್ಲೇ ಅತ್ಯಂತ ಕಿರುಮಾಪನ ಮಾಡಲು ಸಾಧ್ಯವಾಗಿರುವುದೂ ಇದೇ ಪ್ರಥಮ, ಅಂದರೆ, ಒಂದು ಪರಮಾಣು ಬೀಜಕೇಂದ್ರಕ್ಕಿಂತಲೂ 10,000 ಪಟ್ಟು ಚಿಕ್ಕದಾದ ಚಲನೆಯನ್ನು ಮಾಪನ ಮಾಡಲಾಗಿದೆ. ಈ ಪ್ರಯೋಗದ ಸೂಕ್ಷ್ಮತೆಗೆ ಒಂದು ಉದಾಹರಣೆ. ಸಹಸ್ರ ಕೋಟಿ ರಾಗಿ ಕಾಳುಗಳ ಮಧ್ಯೆ ಒಂದು ಸಾಸಿವೆ ಕಾಳು ಹುಡುಕಿದಷ್ಟು ಸೂಕ್ಷ್ಮ.

ಭಾರತೀಯ ವಿಜ್ಞಾನಿಗಳ ಪಾತ್ರ: ಈ ಐತಿಹಾಸಿಕ ಯೋಜನೆಯಲ್ಲಿ ಭಾರತೀಯ ವಿಜ್ಞಾನಿಗಳೂ ಮಹತ್ವದ ಪಾತ್ರವಹಿಸಿದ್ದಾರೆ. ಇದು ವಿವಿಧ ದೇಶಗಳ ಸಾಮೂಹಿಕ ಪ್ರಯತ್ನವಾಗಿದ್ದರೂ, ಗಾಂಧಿನಗರದ ಇನ್ಸ್​ಟಿಟ್ಯೂಟ್ ಆಫ್ ಪ್ಲಾಸ್ಮಾ ರೀಸರ್ಚ್, ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೊನಮಿ ಮತ್ತು ಆಸ್ಟ್ರೋ ಫಿಸಿಕ್ಸ್ (ಐಯುಸಿಎಎ), ಇಂದೋರಿನ ರಾಜಾರಾಮಣ್ಣ ಸೆಂಟರ್ ಫಾರ್ ಅಡ್ವಾನ್ಸ್ಡ್ ಟೆಕ್ನಾಲಜಿ, ಬೆಂಗಳೂರಿನ ಟಾಟಾ ಇನ್ಸ್​ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ಮುಂತಾದ ಸಂಸ್ಥೆಗಳು ಬಹುಕಾಲದಿಂದ ಗುರುತ್ವ ಅಲೆಯ ಪತ್ತೆಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಭಾರತಕ್ಕೇನು ಪ್ರಯೋಜನ

ಭಾರತದಲ್ಲಿ ಲಿಗೊ ಸ್ಥಾಪನೆಯಿಂದ ಮೂರು ಬಗೆಯ ಪ್ರಯೋಜನಗಳಿವೆ.

1 ಭವಿಷ್ಯದಲ್ಲಿ ಭಾರತೀಯ ಖಗೋಳಶಾಸ್ತ್ರದಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ಗುರುತ್ವದ ಅಲೆಯನ್ನು ಆಧರಿಸಿದ ವಿನೂತನ ಸಂಶೋಧನೆಗಳಿಗೆ ಅನುಕೂಲವಾಗಲಿದೆ. ಇದಕ್ಕೆ ಪೂರಕವಾಗಿ ಹಲವು ಹೊಸ ಯೋಜನೆಗಳನ್ನು ಆರಂಭಿಸಲು ಅವಕಾಶವಿದೆ. ಖಗೋಳ ವಿಜ್ಞಾನಿಗಳಲ್ಲದೆ, ಆಪ್ಟಿಕ್ಸ್, ಲೇಸರ್ಸ್, ಗುರುತ್ವ ಭೌತಶಾಸ್ತ್ರ, ಜ್ಯೋತಿರ್ವಿಜ್ಞಾನ, ಖಭೌತಶಾಸ್ತ್ರ, ಕಾಸ್ಮಾಲಜಿ, ಗಣಕ ವಿಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್​ನ ವಿವಿಧ ಶಾಖೆಗಳ ತಜ್ಞರು ಒಟ್ಟಾಗಿ ಕೆಲಸ ಮಾಡುವ ಅವಕಾಶ ಒದಗಿ ಬರಲಿದೆ.

2 ಉದ್ಯಮಕ್ಕೆ ಬಲ: ಉನ್ನತ ಮಟ್ಟದ ಇಂಜಿನಿಯರಿಂಗ್ ಬೆಳವಣಿಗೆಗೆ ಸಹಾಯಕವಾಗಲಿದೆ. ವಿಶ್ವದ ಅತ್ಯಂತ ದೊಡ್ಡ ನಿರ್ವಾತ ಕೊಳವೆಯನ್ನು ನಿರ್ವಿುಸಲು ಇದರ ಅವಶ್ಯಕತೆ ಇದೆ. ವಿವಿಧ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಜತೆಗಿನ ಸಹಯೋಗಕ್ಕೆ ಉದ್ಯಮಗಳಿಗೆ ಅವಕಾಶವಿದೆ.

3 ಶಿಕ್ಷಣಕ್ಕೆ ಉಪಯೋಗ: ಮೂಲ ವಿಜ್ಞಾನದತ್ತ ಯುವ ಮನಸ್ಸುಗಳನ್ನು ಸೆಳೆಯಲು ಇಂತಹ ಯೋಜನೆಗಳು ಉಪಯುಕ್ತ. ವಿದ್ಯಾರ್ಥಿಗಳು ಮತ್ತು ಯುವ ವಿಜ್ಞಾನಿಗಳಿಗೆ ಉತ್ತೇಜನ ನೀಡಲು ಸಾಧ್ಯವಾಗುತ್ತದೆ. ಇದಕ್ಕೆ ಮುಖ್ಯಕಾರಣವೆಂದರೆ, ಈ ವೀಕ್ಷಣಾಲಯದಲ್ಲಿ ಬಳಸಲ್ಪಡುವ ತಂತ್ರಜ್ಞಾನ, ಉಪಕರಣಗಳು ಅತ್ಯುನ್ನತ್ತ ಮಟ್ಟದ್ದಾಗಿದ್ದು, ಇವು ಯುವಜನರಲ್ಲಿ ಸಹಜವಾಗಿ ಭೌತಶಾಸ್ತ್ರ ಮತ್ತು ಇಂಜಿನಿಯರಿಂಗ್ ಫಿಸಿಕ್ಸ್​ನಲ್ಲಿ ಆಸಕ್ತಿ ಮತ್ತು ಕುತೂಹಲ ಮೂಡಿಸುತ್ತವೆ. ಪರಿಣಾಮ ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಾರೆ. ಬೇರೆ ದೇಶಗಳಲ್ಲೂ ಇಂತಹ ಯೋಜನೆಗಳಿಂದ ಭೌತಶಾಸ್ತ್ರದತ್ತ ಆಕರ್ಷಿತರಾಗಿದ್ದಾರೆ. ಈ ವೀಕ್ಷಣಾಲಯವು ಪೂರ್ಣಗೊಂಡಾಗ ಭಾರತದಲ್ಲಿ ಕೆಲವೇ ಕೆಲವು ಅಂತಾರಾಷ್ಟ್ರೀಯ ಮಹತ್ವದ ಅತ್ಯುನ್ನತ ವೈಜ್ಞಾನಿಕ ಸೌಲಭ್ಯಗಳ ಪೈಕಿ ಇದೂ ಒಂದಾಗಲಿದೆ. ದೇಶದಲ್ಲಿ ವೈಜ್ಞಾನಿಕ ಬೆಳವಣಿಗೆಗೆ ಇದೂ ನೆರವಾಗಲಿದೆ.

ಹೊಸ ಯುಗದ ಆರಂಭ

ಗುರುತ್ವದ ಅಲೆಯ ಪತ್ತೆಯು ಭೌತಶಾಸ್ತ್ರ ಮತ್ತು ಖಗೋಳವಿಜ್ಞಾನ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ವಿಶ್ವದ ರಚನೆ, ಅಸ್ತಿತ್ವದ ಬಗೆಗಿನ ಚಿತ್ರಣಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಅಂದರೆ, ಈ ಗುರುತ್ವದ ಅಲೆಗಳ ಮೂಲಕ ವಿಶ್ವವು ನಮ್ಮೊಂದಿಗೆ ಮತ್ತೊಮ್ಮೆ ಸಂಭಾಷಿಸಿದೆ. ವಿಶ್ವದ ಅಸ್ತಿತ್ವದ ಬಗ್ಗೆ ತಿಳಿಸುವ ಮೂಲಭೂತ ಸಂಶೋಧನೆ ಇದಾಗಿದ್ದು, ಕಾಲ-ದೇಶದ ಹರವಿನ ಬಗ್ಗೆ ಮತ್ತೊಂದಷ್ಟು ಮೂರ್ತರೂಪವನ್ನು ನಮಗೆ ನೀಡಿರುವುದಲ್ಲದೆ, ಹೊಸ ಸಂಶೋಧನೆಗಳಿಗೆ ನಾಂದಿ ಹಾಡಿದೆ. ಗುರುತ್ವದ ಅಲೆಯ ಪತ್ತೆ ಕಪ್ಪುರಂದ್ರ ಇರುವಿಕೆಯನ್ನು ಸಾಬೀತು ಮಾಡಿದೆ.

Leave a Reply

Your email address will not be published.