ಅರಣ್ಯ ಹರಣಗಳು ದೇಶದ ಹಣೆ ಬರಹಗಳು

ಡಾ. ರಾಜೇಗೌಡ ಹೊಸಹಳ್ಳಿ

ಅಮೆರಿಕೆಯು ಉದ್ಯಮಿ ಪ್ರಭುವನ್ನು ಆರಿಸಿಕೊಂಡ ಮೇಲೆ 196 ದೇಶಗಳ ಪ್ಯಾರಿಸ್ ಕೂಟ ವಿಘಟನೆಯಲ್ಲಿದೆ. ಇದು ಅವರವರ ಮನೆಯನ್ನು ಅವರೇ ಸರಿಪಡಿಸಿಕೊಳ್ಳುವುದನ್ನು ಹೇಳುತ್ತಿದೆ. ಅಂದು ಇಲ್ಲಿ ವ್ಯಾಪಾರದ ಆಂಗ್ಲರು 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪಿಸಿದಾಗ ಕಡಿಯುವುದು ನೆಡುವುದು ಒಂದು ಅರಣ್ಯ ಕೃಷಿಯಾಗಿತ್ತು. ಗಣಿಗಾರಿಕೆ ಇದರೊಡನೆ ಸೇರಿ ಭಾರತವಿಂದು ತಳವಿಲ್ಲದ ನೀರಗಿಂಡಿಯಾಗಿದೆ. ಮೂರು ದಿನದಿಂದಲೂ ನಾಗರಹೊಳೆ ಅಡವಿ ಹೊತ್ತಿ ಉರಿಯುತ್ತಿದೆ. ಗಾರ್ಡ್ ಒಬ್ಬನು ದಹನಕ್ಕೆ ಸಿಕ್ಕಿ ಪ್ರಾಣ ಬಿಡುವ ಸ್ಥಿತಿ ಅಂದು ಖಾಂಡವ ದಹನವನ್ನು ಆಳುವ ಪ್ರತಿನಿಧಿ ಅರ್ಜುನ ನಿಂತು ಮಾಡಿದ ರೂಪಕವಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿಟ್ಟಿನಿಂದ ಕುದಿಯುತ್ತಿದ್ದಾರೆ., ನೀವ್ಯಾರೂ ಅರಣ್ಯಕ್ಕೆ ಹೋಗುವುದಿಲ್ಲ ಬೆಂಗಳೂರಿನಲ್ಲೆ ಇರುತ್ತೀರಿ ಎಂದು ಮೇಲಾಧಿಕಾರಿಗಳನ್ನು ಕೇಳಿದರೆ ಅವರದು ನಿರುತ್ತರ. ಹೌದು ಅರಣ್ಯಭವನ ಕಾಂಕ್ರೀಟ್ ಕಾಡಾಗಿದೆ.

ಕಾಂಕ್ರೀಟ್ ಕಾಡಿನಲ್ಲಿದೆ. 160 ರಷ್ಟು ಐ.ಎಫ್.ಎಸ್. ಅಧಿಕಾರಿಗಳು ಜೋಗದ ಅಡವಿ ನೀಡಿದ ವಿದ್ಯುತ್ ತಂಪಿನ ಕೊಠಡಿಯಲ್ಲಿದ್ದಾರೆ. ಅಡವಿಯಲ್ಲಿ ವನಪಾಲಕರು ದಿನಗೂಲಿಗಳು ಬೆಂಕಿಕಡ್ಡಿ ಗೀರುವ ಪುಂಡರ ತಂಡಗಳಿಗೆ ದನಿ ಏರಿಸಲಾರದಷ್ಟು ಕಡಿಮೆ ಸಂಖ್ಯೆಯಲ್ಲಿದ್ದಾರೆ, ಅನಾಥರಂತಿದ್ದಾರೆ. ಇದು ‘ಹೇಳೋರು ಆರು ಜನ ಮಾಡೋರು ಮೂರು ಜನ’ ಎಂಬ ಗಾದೆಯಂತಿದೆ. ಅರಣ್ಯ ಇಲಾಖೆ ಸರ್ಕಾರದ ಪ್ರಮುಖ ಜೈವಿಕ ನಿಧಿ ಎಂಬ ಅರಿವು ಇಲ್ಲದಿದ್ದರೆ ಅದರೊಳಗೆ ಪ್ರಜೆಗಳ ಉಸಿರಿನ ಭದ್ರತೆಯಿದೆ ಎಂಬ ಸೂಕ್ಷ್ಮತೆ ಇಲ್ಲದಿದ್ದರೆ ಅಲ್ಲಿಗೆ ಬರುವ ಅಧಿಕಾರಿಗಳಿಗೆ ಇದು ತಮ್ಮ ಸಮಾಜದ ಒಂದು-ಭಾಗ ಎಂಬುದರ ಎದೆಯಾಳದ ದನಿ ಕೇಳದಿದ್ದರೆ ಭವಿಷ್ಯದ ದಿನಗಳು ಅರೇಬಿಯಾ ದಿನಗಳಾಗಲಿದೆ. ಗಾರ್ಡ್‍ನೊಬ್ಬನ ಸಜೀವ ದಹನಕ್ಕೆ ಯಾರು ಹೊಣೆ? ಎಂಬ ಹುಡುಕಾಟ ಇದರೊಳಗೆ 20 ಕಿ.ಮೀ. ವ್ಯಾಪ್ತಿಯ ಅರಣ್ಯ ಭಸ್ಮ, ಹಿಂದಿನ ವರ್ಷಗಳಲ್ಲಾಗಿರುವ ಭಸ್ಮಾಸುರನ ನೃತ್ಯಗಳೆಲ್ಲವೂ ಮಾನವ ಕುಲದ ಅಂತಿಮ ಕುಣಿಕೆಯ ಭವಿಷ್ಯ ಸೂಚಿಸುತ್ತಿವೆ. ರಾಜ್ಯದ ಮುಖ್ಯಮಂತ್ರಿಗಳಿಗೇ ಗಾಬರಿಯಾಗುತ್ತಿರುವ ಅರಣ್ಯ ಹರಣಗಳು ಇಡೀ ದೇಶದ ಹಣೆಬರಹಗಳನ್ನು ಓದಿ ಹೇಳುತ್ತಿವೆ.

source

ಅಂದು 1780ರಲ್ಲಿ ಬ್ರಿಟಿಷ್ ಆಧಿಪತ್ಯವನ್ನು ಎದುರಿಸಿ ನಿಂತ ಬಾಬಾ ತಿಲ್ಕಾಮಂಜಿ ಎಂಬ ಆದಿವಾಸಿಯನ್ನು ಗಲ್ಲುಶಿಕ್ಷೆಗೆ ವಿಧಿಸಿದ ರೀತಿ ಸ್ವತಂತ್ರ ಭಾರತದಲ್ಲಿ ಇನ್ನೂ ನಿಂತಿಲ್ಲ. ಲಕ್ಷಾಂತರ ಮಂದಿ ಆದಿವಾಸಿಗಳು ‘ಆಧುನಿಕ ಭಾರತದ ದೇವಸ್ಥಾನ’ಗಳೆಂಬ ನೀರಾವರಿಗಳಿಗೆ ಅಡವಿ ಬಿಟ್ಟು ಅಡವಿ ಅಂಚಿನಲ್ಲಿ ಸರ್ಕಾರದ ಭಿಕ್ಷೆಗಾಗಿ ಕೈಯೊಡ್ಡಿದ್ದಾರೆ. ಉರಿಯುವ ತಮ್ಮ ಅಡವಿ ತಡವಿಗಳನ್ನು ರಕ್ತಗಣ್ಣಿಟ್ಟು ನೋಡುತ್ತಾರೆ. ಇಂದು ಜಗತ್ತಿನಲ್ಲಿ ಮಿಥೇನ್ ಅನಿಲದ ವಿಷ ಉಸಿರು ಅತಿ ಹೆಚ್ಚು ಭಾಗ ಅಣೆಕಟ್ಟುಗಳಿಂದ ಬರುತ್ತಿದೆಯಂತೆ. ಆರೋಗ್ಯ ಪ್ರಪಂಚಕ್ಕೆ ಶೇಕಡಾ 30ರಷ್ಟು ಅರಣ್ಯ ಬೇಕಂತೆ. ಅಮೆರಿಕೆಯಲ್ಲಿ ಸಾವಿರ ಅನುಪಯುಕ್ತ ಅಣೆಕಟ್ಟುಗಳನ್ನು ಒಡೆಯಲಾಗಿದೆಯಂತೆ. ಭಾರತದಲ್ಲೂ ಅಂತಾ ಕಾಲ ಬರುತ್ತಿದೆ. ನೆಹರು ಕಾಲದ ಭಾಗ್ಯದ ಬಾಗಿಲುಗಳಾದ ಅಣೆಗಳಲ್ಲಿ ನೀರಿಲ್ಲ. ಆ ಕಾಲದ ಯಂತ್ರಗಳನ್ನು ಬಿಚ್ಚಿಯಾಗಿದೆ. ಪುನಃ ಆದಿವಾಸಿ ತತ್ವಗಳು ಭೂಮಂಡಲಕ್ಕೆ ಬೇಕಾಗುತ್ತಿವೆ. ಮರಗಿಡಗಳ ಬುಡಕಡಿಯುವುದು ಮಕ್ಕಳ ತಲೆ ಕಡಿಯುವುದು ಒಂದೇ ರೀತಿಯ ಹರಣವೆಂಬುದು ಅಕ್ಷರವಿಲ್ಲದವರ ತಿಳಿವಳಿಕೆಯಾಗಿತ್ತು. ಮರಕಸಿ ಮಾಡುವ ಸೌದೆ, ತಂಟೆಗೆ ಬಂದ ಪ್ರಾಣಿವಧೆ ಹೊಟ್ಟೆ ತುಂಬಿಸುತ್ತಿತ್ತು. ಅರಣ್ಯ ಬದುಕಿಗೊಂದು ತತ್ವಪರಂಪರೆಯ ಜ್ಞನವಿತ್ತು.

ಆಧುನಿಕ ವಿಜ್ಞಾನ ಅಡವಿ ವಿಜ್ಞಾನವನ್ನು ಅರಿತುಕೊಳ್ಳಲಿಲ್ಲ. ಇಂದು ನಮ್ಮ ದೇಶ ಕೂಡ 103 ರಾಕೆಟುಗಳ ಮೂಲಕ ಅಳೆದು ಸುರಿದು ಜಗತ್ತಿಗೆ ತಾನೇನು ಕಡಿಮೆಯಲ್ಲವೆಂದು ಹೇಳುತ್ತಿದೆ. ಇದರೊಂದಿಗೆ ದೇಶದ ಜೀವದುಸಿರಿನ ಶ್ವಾಸಕೋಶದ ಸಂಪತ್ತನ್ನು ಪುನಃ ವೃದ್ಧಿಸಿಕೊಳ್ಳಬೇಕಿದೆ. ಅದೇ ಅಭಿವೃದ್ಧಿ. ಈಗ ಬೆಂಗಳೂರಿನಲ್ಲಿ ಕೃಷಿ ವಿಜ್ಞಾನ ಸಮ್ಮೇಳನ ಪ್ರಾರಂಭವಾಗಿದೆ. ಕಪ್ಪತಗುಡ್ಡದ ಹಣೆಬರಹಕ್ಕೆ ಸಹಾ ಮರುವ್ಯಾಖ್ಯಾನ ಬರೆಯಲಾಗುತ್ತಿದೆ. ಅಲ್ಲಿ ಚಿನ್ನ ಸಿಗುತ್ತದಂತೆ. ‘ಮನುಷ್ಯರೆ/ಚಿನ್ನ ಹಣ ಇತ್ಯಾದಿಗಳನ್ನು/ಜೇಬಿನಲ್ಲಿಡಿ/ಮೆದುಳಿನಲ್ಲಿಡಬೇಡಿ/ಅವು ಅಲ್ಲಿ ಆಟಂಬಾಬುಗಳಾಗಿ/ಸಿಡಿಯತೊಡಗಿವೆ’ ಎಂದು ಕೃಷ್ಣಮೂರ್ತಿ ಬಿಳಿಗೆರೆ ಕವನ ಹೇಳುತ್ತಿದೆ. ಅದು ಸೂರ್ಯದೇವನೇ ಬಾಂಬಾಗುತ್ತಿರುವ ಅಡವಿ ಹರಣದ ಕಥನ ಕೂಡ ಹೌದು. ಇದೆಲ್ಲದರ ಅರ್ಥ ಸರಳ ಜೀವನ. ಅದೇ ಗಾಂಧಿ ಕಲ್ಪನೆಯ ‘ಸ್ವರಾಜ್ಯ ಮುಗಿಲಿನಿಂದ ಕಳಚಿ ಬೀಳುವುದಲ್ಲ. ಸಮಸ್ತರೂ ಸೇರಿ ಒಂದಂದಾಗಿ ಇಟ್ಟಿಗೆ ಇಟ್ಟು ಕಟ್ಟಬೇಕು’ ಎಂಬ ಮಾತಿನದು.
ಕಪ್ಪತಗುಡ್ಡ-ಪಶ್ಚಿಮಘಟ್ಟ ಇವರು ಅಕ್ಕತಂಗಿಯರು. ಅವರೇ ಗಂಗೆಗೌರಿಯರು. ಅವರೇ ಆಕಾಶರಾಯನ ಕಾಯುವವರು. ಕೈಲಾಸದ ಶಿವನನ್ನು ಬಡವರ ದನಿಬ್ಯಾನೆಯ ಬಳಿ ಕರೆತರುವವರು. ಅಡವಿ ಆಶ್ರಯದಲ್ಲಿದ್ದ ನರಮನುಷ್ಯ ಸಿರಿವಂತನಾಗಿದ್ದ. ಆತನಿಗೀಗ ಆಸರೆ ತಪ್ಪಿ ಬಡತನದ ರೋಗ ತಗುಲಿದೆ.

ಕಪ್ಪತಗುಡ್ಡದ ಅಡವಿಯಲ್ಲಿ ಸಂಜೀವಿನಿ ಸಸ್ಯಗಳಿವೆ. ಸಹ್ಯಾದ್ರಿಯಲ್ಲಿ ಹನುಮನ ಅಂಗೈಮೇಲಿದ್ದ ಪರ್ವತ ಪ್ರಪಂಚದ ಸಕಲೊಂಭತ್ತರಲ್ಲಿ ಲೋಕದ ಜೀವಸೆಲೆಗಳಿವೆ. ಅರಣ್ಯ ಮಂತ್ರಿಗಳು ಸಹ್ಯಾದ್ರಿ ಜಲನೆಲ ಉಂಡವರು. ರಾಜ್ಯದ ಮುಖ್ಯಮಂತ್ರಿಗಳು ಆಗಿಹೋಗುತ್ತಿರುವ ಹರಣಕ್ಕೆ ದನಿ ನೀಡಬಲ್ಲವರು. ಅರಣ್ಯ ಇಲಾಖೆಯ ಪುನಶ್ಚೇತನವು ದೇಶದ ಒಂದು ಮಾದರಿಯಾದರೆ ಅದು ಜಗತ್ತಿನ ದಾರಿಯಾಗಬಲ್ಲದು. ಇಂದು ಬೆಂಗಳೂರು ಮಹಾನಗರಿ ಅರ್ಕಾವತಿ, ವೃಷಭಾವತಿರನ್ನು, ದಿಲ್ಲಿ ಗಂಗಾ, ಯಮುನೆಯರನ್ನು ಶುದ್ಧೀಕರಿಸಿಕೊಳ್ಳಲು ಹೊರಟಿವೆ. ಇದೆಲ್ಲವೂ ಮನುಷ್ಯ ತನ್ನ ಮಿದುಳನ್ನೆ ಆಧುನಿಕತೆಗೆ ಅಡಹಾಕಿಕೊಂಡು ಬಿಡಿಸಿಕೊಳ್ಳಲು ಹೊರಟಿರುವ ವಿಧಾನ. ಸಾಗರಗಳ ಮೇಲೆ ಮನುಷ್ಯನ ಕೊಳಕು ಚಿಂದಿ ಕೋಟಿ ಕೋಟಿ ಟನ್ ತೇಲುತ್ತಿದೆ. ಆಕಾಶದಲ್ಲಿ ಗಾಳಿಯೊಡನೆ ಎಂದೂ ಕರಗದ ಬುಟ್ಟಿಗಳು ತೇಲುತ್ತಿವೆ. ನೆಲದ ಮೇಲೆ ಮಣ್ಣು ಮುಟ್ಟಲು ಹುಟ್ಟಿದ ಮಕ್ಕಳು ಅಂಜುವಂತಾಗಿದೆ. ಇನ್ನೇನೂ ಉಳಿದಿಲ್ಲ! ಎಲ್ಲವೂ ಅಂತ್ಯ. ಅದೇ ಆರಂಭ. ಈ ಆರಂಭದಲ್ಲಿ ರಾಜ್ಯವಿಂದು ಅರಣ್ಯ ಇಲಾಖೆಗೆ 406 ಕೋಟಿಗಳನ್ನು ಆಯವ್ಯಯ ಮೀಸಲಾಗಿಟ್ಟಿರುವ ಸುದ್ಧಿಯಿದೆ. ಅದರಲ್ಲಿ ನಗರ ಪಟ್ಟಣಗಳ ಅರಣ್ಯ ತಾಣಗಳ ಪುನಶ್ಚೇತನಗಳ ಕಲ್ಪನೆಗಳಿವೆ. ಇದು ಹಿಗ್ಗುತ್ತಾ ಹೋಗುವುದೇ ಅಭಿವೃದ್ಧಿ.

ಈ ಕೋಟಿಗಳನ್ನು ಮೂಲಧನವಾಗಿಸಿ ಅರಣ್ಯದ ಜೀವಕೋಟಿಗಳನ್ನಾಗಿಸುವುದೇ ಅರಣ್ಯ ಇಲಾಖೆಯ ಕೆಲಸ. ಅದೊಂದು ಯುದ್ಧ. ಅದು ಮನುಷ್ಯ ಮನುಷ್ಯನನ್ನು ಕೊಲ್ಲುವ ಯುದ್ಧವಲ್ಲ. ಉಣ್ಣಲು ತಿನ್ನಲು ಬಾರದ ಕರೆನ್ಸಿ ಹಾಗೂ ಬಂಗಾರಕ್ಕಾಗುವ ಯುದ್ಧವಲ್ಲ. ಮಾತು ಬಾರದ ಗಿಡಮರ ಪ್ರಾಣಿಪಕ್ಷಿಗಳನ್ನು ಕಾಪಾಡುವ ಯುದ್ಧ. ಭವಿಷ್ಯದಲ್ಲಿ ಇವೆಲ್ಲವೂ ಮಾತು ಬರುವ ಮನುಷ್ಯನನ್ನು ಸಾಕಿ ಸಲಹುತ್ತವೆ. ಕಾಂಕ್ರೀಟಿಗೆ ಕಬ್ಬಿಣಕ್ಕೆ ಸಿಮೆಂಟಿಗೆ ಬೇರು ಬಿಡುವ ಜೀವಗಳಿಲ್ಲ. ಆತ್ಮಹತ್ಯೆ ತಡೆಯುವ ಶಕ್ತಿಯಿಲ್ಲ. ಮಣ್ಣು ಮರ ಪ್ರಾಣಿ ಪಕ್ಷಿಗಳಿಗೆ ಮಾತ್ರ ಮನುಷ್ಯನ ಪೊರೆಯುವ ಧಾತುಗಳಿರುತ್ತವೆ. ಹಾಗಾದರೆ ಅರಣ್ಯವನ್ನು ಹೇಗೆ ರಾಷ್ಟ್ರೀಯ ಸಂಪತ್ತನ್ನಾಗಿ ಅಭಿವೃದ್ಧಿಗೊಳಿಸಬೇಕು? ಅದೊಂದು ಪಂಚವಾರ್ಷಿಕ ಮಾದರಿಯ ಯೋಜನೆಗಳಾಗಿ ಸರ್ಕಾರಗಳು ಸ್ವೀಕರಿಸಬೇಕು. ಅತ್ತ ಕಾಜಿರಂಗ ಇತ್ತ ಸುಂದರಬನ್ ಮಗದತ್ತ 1500 ಕಿ.ಮೀ. ಸಹ್ಯಾದ್ರಿ ಹಾಗೂ ಹಿಮಾಲಯ ತಪ್ಪಲುಗಳೆಲ್ಲವೂ ಕೋಟಿ ಕೋಟಿ ಚರಸ್ಥಿರ ಜೀವಜಾಲಗಳು ಮನುಷ್ಯನ ಉಸಿರಿಗೆ ಬೆಸೆಯುವ ದೇವ ಕಿರಣಗಳು. ಈ ರಾಜ್ಯಕ್ಕೆ ಶೇ.60ರಷ್ಟು ಸಹ್ಯಾದ್ರಿ ಒಡೆತನದೆ. ಅದರ ರಕ್ಷಣೆಯನ್ನು ಅಗ್ನಿಯಿಂದ ಅಗ್ನಿಗಿಂತಲೂ ಪ್ರಬಲಾಗ್ನಿ ಮನುಷ್ಯನಿಂದ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಧಾಟಿಸುವುದೇ ಸಮಾಜದ ರಾಜಕೀಯದ ಕರ್ತವ್ಯ. ಇಲ್ಲದಿದ್ದರೆ ಅದೊಂದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅನಾಹುತ ಇಲ್ಲವೆ ಅಣಕ.

ಡಾ|| ರಾಜೇಗೌಡ ಹೊಸಹಳ್ಳಿ
413, ಟೀಚರ್ಸ್ ಕಾಲನಿ, ನಾಗರಭಾವಿ, ಬೆಂಗಳೂರು – 72
ಮೊಬೈಲ್ : 9980066070

Leave a Reply

Your email address will not be published.