ಅಮ್ಮನ ನೆನಪು-8 : ಸೂಫೀ ಫಕೀರನ ದಯೆ

-ಪ್ರಕಾಶ ಪರ್ವತೀಕರ

ನನ್ನ ತಾಯಿಯ ನೆನಪು ಬಂದಾಗ ನನ್ನ ಕಣ್ಣಿನ ಎದುರು ಆಕೆಯ ಹಲವು ಆಯಾಮಗಳು ಬಂದು ನಿಲ್ಲುತ್ತವೆ. ಆಕೆ ಮೂಲತಃ ತಾಯಿ. ನಂತರ ಗೃಹಿಣಿ, ಮನೆ ಯಜಮಾನಿ, ನನಗೆ ಸನ್ಮಾರ್ಗ ತೋರಿದ ಗುರು. ಮೇಲಾಗಿ ನನ್ನಲ್ಲಿ ಜೀವನದ ಸಂಘರ್ಷಗಳನ್ನು ಎದುರಿಸುವ ಧೈರ್ಯಸ್ಥೈರ್ಯ ತುಂಬಿದ ಶಕ್ತಿ ದೇವತೆ.
ಪ್ರೀತಿ, ಮಮಕಾರ, ಕಾರುಣ್ಯಗಳ ಸಾಕಾರ ಮೂರ್ತಿಯಾಗಿದ್ದ ಆಕೆ ಜೀವನದ ಕೊನೆಯ ಕ್ಷಣದವರೆಗೂ ನನಗೆ ಒಗಟಾಗಿದ್ದಳು. ಆಕೆಯದು ನಿಗೂಢ ವ್ಯಕ್ತ್ವಿತ್ವ. ಆಕೆಯ ಮನಸ್ಸಿನ ಆಳವನ್ನು ಕಂಡು ಹಿಡಿಯಲು ನನಗೆ ಆಗಲೇ ಇಲ್ಲ. “ನಿನ್ನ ನೆಲಿನ ಸಿಗವಲ್ತು” ಎಂದು ನಾನು ಅಂದಾಗ ಆಕೆ ಮುಗುಳ್ನಗೆ ಸೂಸುತ್ತಿದ್ದಳು. ಬಾಲ್ಯಾವಸ್ಥೆಯಲ್ಲಿ ಆಕೆಯ ಕೂಡ ಕಳೆದ ಒಡನಾಟದ ನೆನಪು ನನಗೆ ಮಸಕು ಮಸಕು. ಸ್ನಾನ ಮಾಡುವಾಗ ನನ್ನ ಉಡದಾರ ಮೇಲಿಂದ ಮೇಲೆ ಕಳಚಿ ಬೀಳುವುದು ಸಾಮಾನ್ಯವಾಗಿತ್ತು. ಆ ಉಡದಾರವನ್ನು ಹುಡುಕಿ ತಂದು ಮತ್ತೆ ನನಗೆ ಹಾಕಿ, “ಉಡದಾರ ಇಲ್ಲದ ಮುಡಿದಾರ ತಾಳಿಕೋಟಿ ಸರದಾರ” ಎಂದು ಎಂಥದೋ ಪ್ರಾಸಬದ್ಧ ಪದ್ಯವನ್ನು ಗುಣಗುಣಿಸುತ್ತಿದ್ದಳು.

ಆಕೆಯ ಕೈ ತುತ್ತು ನನಗೆ ಮಾತ್ರ; ನನ್ನ ಅಕ್ಕತಂಗಿಯರಿಗೂ ಬಲು ಪ್ರೀತಿ. ಬಿಸಿಬಿಸಿ ಅನ್ನದಲ್ಲಿ ನಿಂಬೆ ಹಣ್ಣಿನ ರಸ ಹಿಂಡಿ, ಅದಕ್ಕೆ ಸಾಕಷ್ಟು ತುಪ್ಪ ಹಾಗೂ ಮೆಂತೇಹಿಟ್ಟು ಕೂಡಿಸುತ್ತಿದ್ದಳು. ನಂಜಿಕೊಳ್ಳಲು ತೊಕ್ಕೋ, ಮಾವಿನಕಾಯಿ ಉಪ್ಪಿನಕಾಯಿಯೋ ಇರುತ್ತಿತ್ತು. ಇವುಗಳನ್ನು ಮಿಶ್ರಣ ಮಾಡಿ ನಮಗೆ ಕೈತುತ್ತು ಹಾಕುತ್ತಿದ್ದಳು. ಅದು ನಮಗೆ ರಸಗವಳ. ಹೀಗೆ ಕೈತುತ್ತು ಹಾಕುವಾಗ ಆಕೆಯ ಗಪದ್ಯಗಳು ಹೊರಬರುತ್ತಿದ್ದವು. “ಆಡಾಡಿ ಬಂತು, ಓಡಾಡಿ ಬಂತು, ಅಡ್ಡ ಗೋಡ್ಯಾಗಿನ ದೆವ್ವ ಬಂದು ತಿಂದುಬಿಡ್ತು.” ಎಲ್ಲಿ ನಮ್ಮ ಪಾಲಿನ ತುತ್ತು ದೆವ್ವದ ಪಾಲಾಗುತ್ತದೆ ಎಂಬ ಭಯದಿಂದ ನಾವು ಹೊಟ್ಟೆ ತುಂಬ ಊಟ ಮಾಡುತ್ತಿದ್ದೆವು. ಆಕೆಯ ಇನ್ನೊಂದು ಹಾಡು ಹೀಗಿತ್ತು, “ಅಟ್ಟಣಿಗೆ ಮ್ಯಾಲಿನ ಲಟ್ಟಣಿಗೆ ತಗೊಂಡು ನಾಯಿಗೆ ಹೊಡೀರಿ, ಕಟ್ಟಿ ಮ್ಯಾಲೆ ಕೂತು ಕಾರಭಾರ ಮಾಡುವರ ಚಟ್ಟಾ ಬೆಳಗಿರಿ.” ಯಾರು ಹೊಂದಿಸಿದ ಪ್ರಾಸಗಳೋ ಇವು !

ಈಗ ವಿಜಯಪುರ ಎಂದು ನಾಮಕರಣವಾಗಿರುವ ವಿಜಾಪುರ ಪಟ್ಟಣದ ಅಡಿಕೆ ಓಣಿಯಲ್ಲಿ ನಮ್ಮದು ದೊಡ್ಡ ಮನೆ ಇತ್ತು. ನಮ್ಮ ತಂದೆ ಸರಕಾರಿ ನೌಕರಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಅದಕ್ಕೂ ಮೊದಲು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಆರು ತಿಂಗಳು ಜೈಲಿನ ರುಚಿ ಕಂಡಿದ್ದರು. ಗಾಂಧಿ, ಖಾದಿಯ ಮೇಲೆ ಅವರಿಗೆ ಅಪಾರ ಪ್ರೀತಿ; ದಲಿತರ ಬಗ್ಗೆ ಸಹಾನುಭೂತಿ. ಹೃದಯದಲ್ಲಿ ಕರುಣೆ ಮಿಡಿಯುತ್ತಿತ್ತು. ಅವರದು ವಿಶಾಲ ಹೃದಯ. ಅವರ ಗುಣಗಳನ್ನು ನನ್ನ ತಾಯಿಯೂ ಮೈಗೂಡಿಸಿಕೊಂಡಿದ್ದಳು. ನನ್ನ ತಂದೆಯದು ಧಾರಾಳ ಹಸ್ತ; ದೊಡ್ಡ ಘರಾಣೆಯ ನವಾಬೀ ಶೈಲಿಯ ಜೀವನ ಪದ್ಧತಿ. ಮೇಲಾಗಿ ಆವಾಗ ಸುಭಿಕ್ಷ ಕಾಲ. ಮನೆಗೆ ಬಂದು ಹೋಗುವ ಜನ ಬಹಳ. ಮನೆ ಕೆಲಸಕ್ಕೆ ಆಳುಗಳಿದ್ದರು. ಆಡಿಗೆ ಮಾಡಲು ಹೆಣ್ಣು ಮಗಳೊಬ್ಬಳಿದ್ದಳು. ದಿನಾಲು ಪೂಜೆಗೆ ಬ್ರಾಹ್ಮಣನೊಬ್ಬ ಬರುತ್ತಿದ್ದ.

AMMANAಶ್ರಾವಣ ಮಾಸದಿಂದ ತುಳಸೀ ಲಗ್ನದ ವರೆಗೆ ನಮ್ಮ ಮನೆಯಲ್ಲಿ ನಿತ್ಯ ಹಬ್ಬದ ಸಡಗರ. ದಿನಾಲು ಸುಮಾರು ಐವತ್ತು ಜನರ ಊಟವಿರುತ್ತಿತ್ತು. ಮೊದಲಿನ ಪಂಕ್ತಿಯಲ್ಲಿ ವೈದಿಕ ಬ್ರಾಹ್ಮಣರಿಗೆ ಮಡಿಯಿಂದ ಅನ್ನ ಸಂತರ್ಪಣೆ ಹಾಗೂ ಭರ್ಜರಿ ದಕ್ಷಿಣೆ. ನಂತರದ ಪಂಕ್ತಿಯಲ್ಲಿ ಉಳಿದ ಜನಕ್ಕೆ ಊಟ. ಈ ಪಂಕ್ತಿಯಲ್ಲಿ ಎಲ್ಲ ಜಾತಿಯ ಜನರಿಗೆ ಅವಕಾಶವಿರುತ್ತಿತ್ತು. ನನ್ನ ತಾಯಿ ಎಲ್ಲ ಕಡೆಗೆ ಮೇಲ್ವಿಚಾರಣೆ ಮಾಡುತ್ತ ಕೊನೆಗೆ ತಾನು ಊಟ ಮಾಡುತ್ತಿದ್ದಳು. ಮುಂಜಾನೆ ಮಂತ್ರಗಳ ಘೋಷಣೆಯಿಂದ ಮನೆ ಧುಮುಧುಮಿಸುತ್ತಿತ್ತು. ಸಂಜೆಗೆ ಮುತ್ತೈದಿಯರು ದಾಸರ ಪದ, ಕೇಶವ ನಾಮಾವಳಿ, ರಾಮರಕ್ಷಾ, ಗಣಪತಿ ಸ್ತೋತ್ರ ಪಠಣಮಾಡುತ್ತಿದ್ದರು. ಚಿಕ್ಕವರಾದ ನಾವೂ ಅವರಿಗೆ ಧ್ವನಿ ಕೂಡಿಸುತ್ತಿದ್ದೆವು. ಮನೆಯಲ್ಲಿ ಸಂಪುರ್ಣ ದ್ವೈತ ಸಂಪ್ರದಾಯವಿದ್ದರೂ ನನ್ನ ತಾಯಿಗೆ ಉಳಿದ ದೇವರು ಅಪಥ್ಯವಾಗಿರಲಿಲ್ಲ. ಗುರುವಾರ ರಾಘವೇಂದ್ರಸ್ವಾಮಿ ಮಠಕ್ಕೆ ಹೋಗುತ್ತಿದ್ದಂತೆ ಬುಧವಾರ ಊರ ಹೊರಗೆ ಇದ್ದ ರುಕ್ಮಾಂಗದ ಪಂಡಿತರ ಸಮಾಧಿಗೆ ನಮಸ್ಕರಿಸುತ್ತಿದ್ದಳು. ಜಾತಿ ಭೇದ ಭಾವನೆ ಆಕೆಯ ಹತ್ತಿರ ಸುಳಿಯುತ್ತಿದ್ದಿಲ್ಲ. ಇದಕ್ಕೆ ಕಾರಣ ನಮ್ಮ ತಂದೆ ಕೊಟ್ಟ ತರಬೇತಿ. ಅದು ನನ್ನ ರಕ್ತದಲ್ಲಿಯೂ ಇಳಿದು ಬಂದಿದೆ.

ನಾನು ಹತ್ತು ವರ್ಷದವನಿದ್ದಾಗ ಟೈಫೈಡ್ ಆಯಿತು. ಆವಾಗ ಅದು ಬಹು ದೊಡ್ಡ ರೋಗ. ವಶೋದ್ಧಾರಕ ಗಂಡು ಮಗ ನಾನೊಬ್ಬನೇ ಇದ್ದುದರಿಂದ ಅವ್ವ ಕಳವಳಗೊಂಡಳು. ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊತ್ತಳು. ಅಂದು ಶುಕ್ರವಾರ. ಸೂಫೀ ಫಕೀರನೊಬ್ಬ ನಮ್ಮ ಮನೆಗೆ ಬಂದ. ಪ್ರತಿ ವಾರವೂ ಬಂದು ಭಿಕ್ಷೆ ಹಾಕಿಸಿಕೊಂಡು ಹೋಗುವುದು ಅವನ ರೂಢಿ. ಆತನ ಬಗ್ಗೆ ಅವ್ವನಿಗೆ ಬಹಳ ಶ್ರದ್ಧೆ. ಫಕೀರನನ್ನು ನೋಡಿ ನನ್ನ ತಾಯಿ ಅವನ ಕಾಲಿಗೆ ಬಿದ್ದು ತನ್ನ ಮಗನಿಗಾಗಿ ದೇವರಲ್ಲಿ ಪ್ರಾರ್ಥಿಸಬೇಕೆಂದು ಬೇಡಿಕೊಂಡಳು. ಆತ ಮನೆಯೊಳಗೆ ಬಂದು ನವಿಲುಗರಿ ಗೊಂಚಲನ್ನು ನವಿರಾಗಿ ನನ್ನ ಶರೀರದ ಮೇಲೆ ಆಡಿಸಿದ. ಭಯ ಪಡಬಾರದೆಂದೂ, “ಆಲ್ಲಾಹಕೆ ಘರ ಮೆ ದೇರ ಹೈ ಅಂಧೇರ ನಹಿ” ಎಂದು ನುಡಿದು ಅರಬ್ಬೀ ಭಾಷೆಯಲ್ಲಿ ಮಣ ಮಣ ಮಂತ್ರ ಪಠಿಸಿದ. ನಮ್ಮ ಮನೆಯ ಹಿಂದೆ ಮಸೀದಿ ಇತ್ತು. ಅಲ್ಲಿ ಹೋಗಿ ಐದು ದಿನ ಪ್ರಾರ್ಥನೆ ಮಾಡಬೇಕೆಂದು ಹೇಳಿದ.

ಒಂಬತ್ತು ಗಜ ಸೀರೆ ಉಟ್ಟುಕೊಂಡು, ರೂಪಾಯಿ ಅಗಲದ ಕುಂಕುಮ ಹಚ್ಚಿಕೊಂಡು ಮಸೀದಿಗೆ ಬಂದ ಈ ಬ್ರಾಹ್ಮಣ ಹೆಣ್ಣುಮಗಳನ್ನು ಕಂಡು ಆಶ್ಚರ್ಯಚಕಿತರಾದ ಮುಸ್ಲೀಮ್ ಬಾಂಧವರು, ಆಕೆಯನ್ನು ಆದರದಿಂದ ಬರ ಮಾಡಿಕೊಂಡರು. ಹೊರಗಿನ ಕಟ್ಟೆಯ ಮೇಲೆ ಕೂಡಲು ಹೇಳಿ ಪ್ರಸಾದವನ್ನು ತಂದು ಕೊಟ್ಟರು. ನಮ್ಮ ಮನೆಗೆ ಮೌಲ್ವೀ ಬಂದು ನನ್ನ ಬಲಗೈಗೆ ಕೆಂಪು ದಾರವನ್ನು ಕಟ್ಟಿದರು. ದೇವರ ದಯದಿಂದ ನಾನು ಅ ಕುತ್ತಿನಿಂದ ಪಾರಾದೆ. ಇಂದಿಗೂ ನಾನು ಅತ್ತ ಹೋದರೆ ಅ ಮಸೀದಿಗೆ ನಮಸ್ಕರಿಸಿ ಮುಂದೆ ಸಾಗುತ್ತೇನೆ. ನನ್ನ ತಾಯಿ ನನ್ನ ಒಳಿತಿಗಾಗಿ ಏನು ಮಾಡಲೂ ಸಿದ್ಧಳಿದ್ದಳು ಎಂಬುದನ್ನು ಎತ್ತಿ ತೋರಿಸಲು ಈ ಉದಾಹರಣೆ ಕೊಟ್ಟೆ ಅಷ್ಟೇ.

ಕಾಲ ಸರಿಯುತ್ತಿತ್ತು. ಮನೆಯ ಹಣಕಾಸಿನ ಸ್ಥಿತಿ ಮೊದಲಿನಂತಿರಲಿಲ್ಲ. ಮೂರು ಜನ ಸಹೋದರಿಯರ ಲಗ್ನವಾಗಿತ್ತು. ಇನ್ನೂ ಮೂವರು ಸೋದರಿಯರು ಚಿಕ್ಕವರಿದ್ದರು. ನಾನು ಬೆಳೆಯುತ್ತಿದ್ದಂತೆ ತಾಯಿಗೆ ಇನ್ನಷ್ಟು ಹತ್ತಿರವಾಗುತ್ತ ಹೋದೆ. ನನ್ನ ಬೇಕು ಬೇಡಿಕೆಗಳನ್ನು ತಾಯಿಯ ಎದುರು ಇಡುತ್ತಿದ್ದೆ. ಅದು ಆಕೆಯ ಮುಖಾಂತರ ತಂದೆಗೆ ಮುಟ್ಟುತ್ತಿತ್ತು. ಶಾಲೆ ಹಾಗೂ ಕಾಲೇಜಿನಲ್ಲಿ ನನ್ನ ಪ್ರಗತಿ ಅಷ್ಟೊಂದು ಸಮಾಧಾನಕರವಾಗಿರಲಿಲ್ಲ. ಇದೇ ವೇಳೆಗೆ ನಾಟಕ, ಸಂಗೀತ, ಹಾಗೂ ಸಿನೇಮದ ಹುಚ್ಚು ಹಿಡಿಯಿತು. ತರುಣಿಯೊಬ್ಬಳ ಆಕರ್ಷಣೆಗೆ ಒಳಗಾದೆ. ಈ ಸಮಾಚಾರ ತಿಳಿದ ತಂದೆ ಕೆಂಡಾಮಂಡಲವಾದರು. “ಈ ವಯಸ್ಸು ಹಂಗ ಇರ್ತದ. ಜಗ ಹೊರತು ನನ್ನ ಮಗ ಬ್ಯಾರೇ ಏನು ಮಾಡಿಲ್ಲ” ಎಂದು ಅವ್ವ ನನ್ನನ್ನು ಸಮರ್ಥಿಸಿಕೊಂಡಳು. ಆಗ ಅಪ್ಪ, “ಒಬ್ಬನೇ ಮಗ ಅಂತ ನೀ ಭಾಳ ಅಛ್ಛಾ ಮಾಡಿ. ಅದಕ್ಕೆ ಅವಾ ಹಾಳಾಗೇನ, ನನ್ನ ಮನೆತನದ ಮಾನ ಕಳೀತಾನ” ಎಂದು ತಾಯಿಗೆ ಸಿಕ್ಕಾಪಟ್ಟೆ ಒದರಾಡಿದರು. ನನಗೂ ಸಿಟ್ಟು ಬಂದಿತ್ತು. ಆದರೆ ಅವ್ವ ಕಣ್ಸನ್ನೆ ಮಾಡಿದ್ದರಿಂದ ಸುಮ್ಮನಾದೆ. ನಂತರ ತಾಯಿ, “ಈ ಹರೇದ ಮನಸ್ಸು ಹುಚ್ಚುಖೋಡಿ ಇರತದ. ಅದರ ಮ್ಯಾಲೆ ಮೂಗದಾಣ ಇರಲಿ” ಎಂದು ನನಗೆ ಬುದ್ಧಿವಾದ ಹೇಳಿದಳು.

ನಾನು ಯಾವಾಗಲೂ ಸಾಹಸ ಪೃವೃತ್ತಿಯವನು. ಹೊಸದನ್ನು ಮಾಡಬೇಕೆಂಬುದು ನನ್ನ ಹಂಬಲ. ಪದವೀಧರನಾದ ಮೇಲೆ ಗುತ್ತಿಗೆದಾರನಾಗಬೇಕೆಂಬುದು ನನ್ನ ಇಚ್ಚೆ ಆಗಿತ್ತು. ಗುಲಾಮಗಿರಿ ನೌಕರಿ ನನಗೆ ಬೇಡಾಗಿತ್ತು. ಆದರೆ ತಂದೆ ಅದಕ್ಕೆ ವಿರೋಧಿಯಾಗಿದ್ದರು. ‘ಬ್ರಾಹ್ಮಣ ನೌಕರೀ ಮಾಡಬೇಕು, ಇಲ್ಲಾ ತೀರು ಸವಟು ಥಾಲಿ ಹಿಡಕೊಂಡು ವೈದಿಕ ವೃತ್ತಿ ಮಾಡಬೇಕು’ ಎಂಬುದು ಅವರ ದೃಢ ನಂಬಿಕೆ ಆಗಿತ್ತು.

ಗುತ್ತಿಗೆ ಮಾಡಲು ಹಣ ಬೇಕು. ನಾನು ತಾಯಿಯ ಬೆನ್ನ ಹಿಂದೆ ಬಿದ್ದೆ. ಆಕೆಯ ಹತ್ತಿರ ಸಾಕಷ್ಟು ಹಣ ಇದೆ ಎಂಬುದು ನನ್ನ ಕಲ್ಪನೆಯಾಗಿತ್ತು. ಒಂದು ವರ್ಷದಲ್ಲಿ ಹಣವನ್ನು ಮರಳಿ ಕೊಡುವೆ, ಕಾರಿನಲ್ಲಿ ಊರ ತುಂಬ ಸುತ್ತಾಡಿಸುವೆ ಎಂದು ಆಕೆಯನ್ನು ಮನಗಾಣಿಸಲು ಯತ್ನಿಸಿದೆ. ಸಾಕಷ್ಟು ಸಮಯ ನನ್ನ ಮಾತು ಕೇಳುತ್ತ ಮೌನವಾಗಿ ಕುಳಿತಿದ್ದ ಅವ್ವ ಕೊನೆಗೆ ಬಾಯಿ ಬಿಟ್ಟಳು. ಆಕೆ ಹೇಳಿದ ಸಮಾಚಾರದಿಂದ ನನ್ನ ಎದೆಯಲ್ಲಿ ಯಾರೋ ಭರ್ಚಿಯಿಂದ ಇರಿದ ಅನುಭವವಾಯಿತು. ಆಳವಾದ ಪ್ರಪಾತಕ್ಕೆ ನನ್ನನ್ನು ತಳ್ಳಿದ ಅನುಭವವಾಯಿತು. “ನಿನಗ ಈ ಸಮಾಚಾರ ಕೇಳಿ ದಕ್ಕಿಸೋ ತಾಕತ್ ಇಲ್ಲಾ ಅಂತ ಈವರೆಗೆ ನಾವು ಈ ವಿಷಯ ನಿನಗ ಹೇಳಲಿಲ್ಲ.” ಎಂದು ನುಡಿದು ಕಣ್ಣಂಚಿನಲ್ಲಿದ್ದ ಅಶ್ರುಗಳನ್ನು ಸೀರೆಯಿಂದ ಒರೆಸುತ್ತ ಹೇಳಹತ್ತಿದಳು:

ಈ ದುರ್ದೈವೀ ಘಟನೆ ಸಂಭವಿಸಿದ್ದು ಸುಮಾರು ಮೂರು ವರ್ಷಗಳ ಹಿಂದೆ. ಅಂದು ನಾನು ಹಾಗೂ ತಂದೆ ಊರಲ್ಲಿರಲಿಲ್ಲ. ತಾಯಿ ಒಬ್ಬಳೇ ಮನೆಯಲ್ಲಿದ್ದಳು. ಮಧ್ಯರಾತ್ರಿಯಲ್ಲಿ ಕೆಲ ಜನ ನಮ್ಮ ಮನೆಯ ಬಾಗಿಲು ತಟ್ಟಿದ್ದಾರೆ. ಆತಂಕದಿಂದ ಬಾಗಿಲು ತೆರೆದ ನನ್ನ ತಾಯಿಗೆ ನೆರೆದ ಕಾರ್ಮಿಕರ ಗುಂಪನ್ನು ಕಂಡು ಗಾಬರಿ ಆಗಿದೆ. ಆ ಜನ ನನ್ನ ತಂದೆಯನ್ನು ವಿಚಾರಿಸಿದ್ದಾರೆ. ಅವರಿಲ್ಲವೆಂದಾಗ, ಬಲವಂತದಿಂದ ಮನೆಯಲ್ಲಿ ಹೊಕ್ಕು ಶೋಧ ಮಾಡಿದ್ದಾರೆ. ನನ್ನ ತಂದೆ ಕಾಣದಿದ್ದಾಗ ಕೂಗಾಟ ಒದರಾಟ ಮಾಡಿದ್ದಾರೆ. ಆಗ ತಾಯಿ ಅವರನ್ನು ವಿಚಾರಿಸಿದಾಗ ವಿಷಯ ತಿಳಿದಿದೆ. ಕಾರ್ಮಿಕರಿಗೆ ಮೂರು ವಾರದಿಂದ ವೇತನದ ಬಟವಾಡೆ ಆಗಿರಲಿಲ್ಲ. ಆ ಕೆಲಸದ ಮೇಲ್ವಿಚಾರಕನಾಗಿದ್ದ ನದಾಫ ಮೇಸ್ತ್ರೀ ಕೂಡ ಕೆಲಸಕ್ಕೆ ಬಾರದೆ ಮೂರು ವಾರಗಳಾಗಿದ್ದವು. ನನ್ನ ತಾಯಿಗೆ ಪರಿಸ್ಥಿತಿಯ ಅರಿವಾಗಹತ್ತಿತು. ಆಕೆ ಎದೆಗುಂದಲಿಲ್ಲ. ಕೆಲ ನಿಮಿಷಗಳಲ್ಲಿ ಸಾವರಿಸಿಕೊಂಡು, ಆ ಜನರಿಗೆ, “ಎರಡು ದಿನ ಬಿಟ್ಟು ಬನ್ನಿ, ನಿಮ್ಮ ವೇತನವನ್ನು ಕೊಡಲಾಗುವುದು, ನನ್ನ ಮೇಲೆ ವಿಶ್ವಾಸವಿಡಿ” ಎಂದು ಸಮಾಧಾನ ಮಾಡಿ ಕಳಿಸಿದಳಂತೆ.

ಮರುದಿನ ಊರಿಂದ ಬಂದ ತಂದೆಗೆ ಈ ಸಮಾಚಾರ ತಿಳಿದಾಗ ಅವರು ತಲೆಗೆ ಕೈ ಹಚ್ಚಿ ಕುಳಿತರಂತೆ. ನಂಬಿಕೆಯ ನದಾಫ ಮೇಸ್ತ್ರೀ ವಿಶ್ವಾಸ ದ್ರೋಹ ಮಾಡಿದ್ದ. ತಂದೆಯ ಹಣವನ್ನು ಲಪಟಾಯಿಸಿ ಮುಂಬೈಗೆ ಪಲಾಯನಗೈದಿದ್ದ. ಈ ಆಘಾತದಿಂದ ನೊಂದ ತಂದೆಯ ಕಣ್ಣು ನೀರಿನಿಂದ ತುಂಬಿದಾಗ ನನ್ನ ತಾಯಿ ಅವರಿಗೆ ಧೈರ್ಯ ನೀಡಿ, ತನ್ನ ಚಿನ್ನದ ಆಭರಣಗಳನ್ನೆಲ್ಲ ತಂದೆಯ ಕೈಯಲ್ಲಿ ಕೊಟ್ಟಳು. “ಬಂದ ವಿಪತ್ತು ಮೊದಲು ದೂರವಾಗಲಿ”, ನಿರ್ವಿಕಾರಭಾವದಿಂದ ನಿರ್ಲಿಪ್ತತೆಯಿಂದ ತಾಯಿ ನುಡಿದಾಗ ತಂದೆ ಮುಖ ಕೆಳಗೆ ಹಾಕಿದರಂತೆ. ಅಪಮಾನದಿಂದ ಜರ್ಝರಿತರಾದ ಅವರು ಈ ಆಘಾತವನ್ನು ಸಹಿಸಲಾರದೇ ಆತ್ಮಹತ್ಯೆಯ ವಿಚಾರ ಮಾಡಿದಾಗ, “ಸಂಕಟಗಳೆಲ್ಲ ಮನುಷ್ಯರಿಗೆ ಬರುತ್ತವೆ, ಮರಗಳಿಗೆ ಅಲ್ಲ. ಇದ್ದು ಹೋರಾಡೂಣು ಬನ್ನಿ” ಎಂದು ಅವರನ್ನು ಉತ್ತೇಜಿಸಿದಳಂತೆ. ಈ ಎಲ್ಲ ಸಮಾಚಾರ ತಾಯಿಯಿಂದ ಕೇಳಿದಾಗ ನನ್ನ ಮನೆಯ ಹಣಕಾಸಿನ ಪರಿಸ್ಥಿತಿಯ ವಾಸ್ತವ ಅರಿವಾಗಿ ನಾನು ಅಪ್ಪನ ಕಾಲು ಬಿದ್ದು ಕ್ಷಮೆ ಯಾಚಿಸಿದೆ. ಬೇಜಾರಾಗಿ ಮುಂದೆ ಯಾವುದೋ ನೌಕರಿ ಸೇರಿಕೊಂಡೆ. ಕೆಲವೇ ದಿನಗಳಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟೆ. ಮಗುವಿನ ತಂದೆಯೂ ಆದೆ.

ಒಂದು ದಿನ ಅಕಸ್ಮಾತ್ತಾಗಿ ಹೃದಯಾಘಾತದಿಂದ ತಂದೆಯ ನಿಧನವಾಯಿತು. ಅಂದು ನಾನು ಮನೆಯಲ್ಲಿದ್ದೆ. ನನ್ನ ತಾಯಿಯ ಆಕ್ರಂದನ, ಎದೆ ಬಡೆದುಕೊಂಡು ಅಳುವುದನ್ನು ನೋಡಿ ನನಗೆ ಅವ್ಯಕ್ತ ಭಯ ಆವರಿಸಿತು. ನಾನು ಹೋಗಿ ಆಕೆಯ ಮಗ್ಗುಲಲ್ಲಿ ಕುಳಿತು ಸಾಂತ್ವನ ಹೇಳುವ ಪ್ರಯತ್ನ ಮಾಡಿದೆ. ಆಗ ಆಕೆಯ ಕಣ್ಣಲ್ಲಿ ಕಂಡ ದೈನ್ಯ ಹಾಗೂ ಅನಾಥÀ ಪ್ರಜ್ಞೆ ನನ್ನ ಹೃದಯವನ್ನು ಘಾಸಿಗೊಳಿಸಿತು. ಮದುವೆ ವಯಸ್ಸಿಗೆ ಬಂದ ತನ್ನ ಹೆಣ್ಣುಮಕ್ಕಳ ಮದುವೆಯ ಚಿಂತೆ ನನ್ನ ತಾಯಿಯನ್ನು ಕಾಡುತ್ತಿದೆ ಎಂದು ಖಾತ್ರಿಯಾಯಿತು. ಅಂದೇ ಮನದಲ್ಲಿ ನಿರ್ಧಾರ ಮಾಡಿದೆ. ಸಹೋದರಿಯರ ಮದುವೆ ಆಗುವ ತನಕ ವಿಶ್ರಮಿಸಬಾರದು ಎಂದು ದೃಢ ಸಂಕಲ್ಪ ಮಾಡಿದೆ. ಹೊರಗಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಮನೆಯ ಕಡೆಗೆ ಲಕ್ಷ್ಯ ಹಾಕತೊಡಗಿದೆ.

ತಂದೆ ಕಣ್ಮರೆ ಆದ ನಂತರ ತಾಯಿಯ ಮುಖದ ಮೇಲಿನ ನಗು ಮಾಯವಾಗಿತ್ತು. ಮುಖದ ಮೇಲೆ ಉದಾಸೀನತೆ ಎದ್ದು ಕಾಣುತ್ತಿತ್ತು. ಪಡಸಾಲೆಯಲ್ಲಿಯ ಖುರ್ಚಿಯ ಮೇಲೆ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕುಳಿತುಕೊಂಡು ತಂದೆಯ ಭಾವಚಿತ್ರವನ್ನು ವೀಕ್ಷಿಸುವುದು ಆಕೆಯ ದಿನನಿತ್ಯದ ರೂಢಿಯಾಯ್ತು. ಗಂಡ ತನ್ನಿಂದ ಅಗಲಿ ಹೋಗಿದ್ದಾನೆ ಎಂಬ ಸತ್ಯವನ್ನು ನಂಬಲು ಆಕೆ ಸಿದ್ಧಳಿರಲಿಲ್ಲ. ಒಂದು ದಿನ ನಮ್ಮ ಮನೆಗೆ ಆಪ್ತರೊಬ್ಬರು ಬಂದಿದ್ದರು. ಕೆಲ ನಿಮಿಷ ಮಾತುಕತೆ ಆದ ಮೇಲೆ ಅವರು ಹೊರಟು ನಿಂತಾಗ ನನ್ನ ತಾಯಿ, “ಕೂಡ್ರಿ, ಚಹಾ ಮಾಡ್ತೀನಿ, ಅವರದೂ (ನನ್ನ ತಂದೆಯವರದು) ಚಹಾದ ಟೈಮ ಅಗೇದ” ಎಂದು ನುಡಿದು ಎದ್ದು ಹೊರಟಳು. ತಕ್ಷಣ ತನ್ನ ನುಡಿಯಲ್ಲಿಯ ಅಚಾತುರ್ಯ ಅರಿವಾಗಿ ಅಳಲು ಸುರು ಮಾಡಿದಳು. ಮನೆಗೆ ಬಂದ ಆಪ್ತರ ಕೂಡ ನಾನೂ ಅತ್ತೆ.
ಮುಂದೆ ಎರಡು ವರ್ಷಗಳಲ್ಲಿ ತುಂಬ ಕಷ್ಟದಿಂದ ಇಬ್ಬರು ಸಹೋದರಿಯರ ಮದುವೆ ಮಾಡಿದೆ.

ಎರಡನೇ ಸಹೋದರಿಯ ಮದುವೆಯ ದಿನವಂತೂ ನನ್ನ ತಾಯಿ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಆಕೆಯ ಸ್ಥಿತಿ ನೋಡಿದರೆ ಅದೇ ದಿನ ಮರಣ ಹೊಂದಬಹುದು ಎಂದು ನನಗೆ ಅನಿಸುತ್ತಿತ್ತು. ಮದುವೆಗೆ ಬಂದ ಜನ ತಮ್ಮ ಊರಿಗೆ ತೆರಳಿದ್ದರಿಂದ ಮನೆ ಖಾಲಿಖಾಲಿ ಆಗಿತ್ತು. ಮಧ್ಯರಾತ್ರಿಯಾಗಿತ್ತು. ಹಾಸಿಗೆಯ ಮೇಲೆ ನರಳುತ್ತ ಮಲಗಿಕೊಂಡಿದ್ದ ತಾಯಿಯ ಎದೆಯನ್ನು ಬಿಸಿ ನೀರಿನ ರಬ್ಬರ ಬ್ಯಾಗಿನಿಂದ ಕಾಯಿಸುತ್ತಿದ್ದೆ. ತಾಯಿ ನನ್ನ ತಲೆಯ ಮೇಲೆ ನವಿರಾಗಿ ಕೈ ಆಡಿಸುತ್ತ, “ಎಷ್ಟು ತ್ರಾಸು ತಗೊಂಡು ತಂಗೆಂದಿರ ಮದುವೀ ಮಾಡಿದಿ. ಮಾಡಿದ್ದು ಎಲ್ಲಿಯೂ ಹೋಗೋದಿಲ್ಲ. ಅದು ಕಟ್ಟಿಟ್ಟ ಬುತ್ತಿ. ದೇವರು ನಿನಗ ಕಲ್ಯಾಣ ಮಾಡ್ತಾನ” ಎಂದಾಗ, ಇನ್ನು ನನಗೆ ಯಾರ ಪ್ರಮಾಣ ಪತ್ರದ ಅವಶ್ಯಕತೆಯಿಲ್ಲ, ನಾನು ಧನ್ಯನಾದೆ ಎಂದೆನಿಸಿತು.

ತಾಯಿ ತನ್ನ ಕೊನೆಯ ದಿನಗಳಲ್ಲಿ ನನಗೆ ಬಹಳ ಹತ್ತಿರವಾಗುತ್ತ ಹೋದಳು. ಯಾವುದೇ ವಿಷಯದ ಬಗ್ಗೆ ಮುಕ್ತ ಮನಸ್ಸಿನಿಂದ ನನ್ನ ಕೂಡ ಮಾತನಾಡುತ್ತಿದ್ದಳು. ಬಾಳಿನಲ್ಲಿ ವಿಷ ಹಾಗೂ ಅಮೃತಗಳನ್ನು ಸಮನಾಗಿ ಕುಡಿದ ಆಕೆಯ ಹತ್ತಿರ ಇದ್ದ ಅನುಭವದ ಖಜಾನೆ ಬಹಳ ದೊಡ್ಡದು. ಸಮಯ ಸಿಕ್ಕಾಗ ಏಕಾಂತದಲ್ಲಿದ್ದಾಗ ಅವುಗಳನ್ನು ನನ್ನ ಕೂಡ ಹಂಚಿಕೊಳ್ಳುತ್ತಿದ್ದಳು. ಅವುಗಳನ್ನು ಕೇಳುತ್ತಿದ್ದರೆ ನಾನು ವಿಸ್ಮಯಲೋಕಕ್ಕೆ ಜಾರುತ್ತಿದ್ದೆ.

ಒಮ್ಮೆ ಆಕೆ ಗೌಪ್ಯಸ್ಫೋಟ ಮಾಡಿದಳು: ನಮ್ಮ ಬಳಗದ ಹುಡುಗಿಯೊಬ್ಬಳು ವಿವಾಹ ಪೂರ್ವ ಅನೈತಿಕ ಸಂಬಂಧದಿಂದ ಗರ್ಭ ಧರಿಸಿದ್ದಳಂತೆ. ಅದನ್ನು ಕೇಳಿ ಆಕೆಯ ತಂದೆ ಆತ್ಮಹತ್ಯೆ ಮಾಡಿಕೊಂಡರಂತೆ. ಆತ ಹಾಗೆ ಮಾಡಬಾರದಿತ್ತು ಎಂಬುದು ನನ್ನ ತಾಯಿಯ ಅಭಿಪ್ರಾಯ. ಮಗಳಿಗೆ ಗರ್ಭಪಾತ ಮಾಡಿಸಿ ಆಕೆಗೆ ಮತ್ತೊಂದು ಕಡೆಗೆ ಮದುವೆ ಮಾಡಬೇಕಿತ್ತು ಎಂಬುದು ನನ್ನ ತಾಯಿಯ ಖಚಿತ ನುಡಿ. ಅದು ತಪ್ಪು ಎಂಬ ನನ್ನ ಮಾತಿಗೆ ಆಕೆ ಪರಾಶರ ಮುನಿ, ಸತ್ಯವ್ರತೆಯ ಪ್ರಕರಣ ಹಾಗೂ ವೇದವ್ಯಾಸ ಮುನಿಗಳ ಜನನದ ಬಗ್ಗೆ ಹೇಳಿದಳು. ‘ದೇವರಿಗೆ, ಋಷಿ ಮುನಿಗಳಿಗೆ ಒಂದು ನ್ಯಾಯ, ಮನುಷ್ಯರಿಗೆ ಒಂದು ನ್ಯಾಯ ಇರುತ್ತದೆಯೋ ? ಮೈ ಮನಗಳ ಸುಳಿಯಲ್ಲಿ ಸಿಲುಕದವರಾರು ?’ ಎಂದು ನನ್ನನ್ನು ಪ್ರಶ್ನಿಸಿದಳು. ಜೀವನದಲ್ಲಿ ಕಾಮದ ಪಾತ್ರ ದೊಡ್ಡದು, ಯಾವಾಗಲೂ ಕಾಮ ಪ್ರೀತಿಯ ಮೇಲೆ ತನ್ನ ಪ್ರಭುತ್ವ ಸಾಧಿಸುತ್ತದೆ, ಎಂಬುದು ಅಕೆಯ ಸ್ಪಷ್ಟ ಅಭಿಪ್ರಾಯ. ಅದಕ್ಕೆ ಉದಾಹರಣೆ ಕೊಡುತ್ತಿದ್ದಳು.

ನಮ್ಮ ಚಿಕ್ಕಪ್ಪನ ಮಗ ಮದುವೆಗೆ ಮುಂಚೆ ಅನನ್ಯ ಭಾವದಿಂದ ತನ್ನ ತಾಯಿಯ ಸೇವೆ ಮಾಡುತ್ತಿದ್ದ, ಆಕೆಯ ಕಾಳಜಿ ತೆಗೆದುಕೊಳ್ಳುತ್ತಿದ್ದ. ಆದರೆ ಮದುವೆ ಆದ ತಕ್ಷಣ ಹೆಂಡತಿಯ ಮಾತು ಕೇಳಿ ತಾಯಿಯನ್ನು ಹೊರಗೆ ಹಾಕಿದ. ಅದಕ್ಕೆ ನನ್ನ ತಾಯಿ, ‘ಕಾಮದ ಹುಚ್ಚೇ ಇದಕ್ಕೆಲ್ಲ ಕಾರಣ’ ಎಂದು ಹೇಳಿ, ‘ಕಾಮ ಪೂಜನೀಯವೂ ಅಲ್ಲ ತ್ಯಾಜನೀಯವೂ ಅಲ್ಲ’ ಎಂದು ಮುಗಿಸುತ್ತಿದ್ದಳು. ಜನನಿಯ ಘನತೆಯ ಬಗ್ಗೆ ಆಕೆ ಒತ್ತಿ ಒತ್ತಿ ಹೇಳುತ್ತಿದ್ದಳು. ಆಕೆಯ ಅಪಮಾನ ಸಲ್ಲದು, ಯಾವಾಗಲೂ ಆಕೆಯನ್ನು ಮರ್ಯಾದೆಯಿಂದ ನೋಡಿಕೊಳ್ಳಬೇಕು. ಯಾಕೆಂದರೆ ಕೆಟ್ಟ ತಾಯಿಯನ್ನು ನೀವು ಎಂದಿಗೂ ಕಾಣಲಾರರಿ ಎಂದು ಹೇಳುತ್ತಿದ್ದಳು. ತನ್ನ ಮಾತಿನ ಪುಷ್ಟೀಕರಣಕ್ಕಾಗಿ ಪುರಾಣಗಳಿಂದ ಉದಾಹರಣೆಗಳನ್ನು ಕೊಡುತ್ತಿದ್ದಳು. ಆಕೆಯ ಮಾತುಗಳನ್ನು ಬಾಯಿ ಬಿಟ್ಟು ಕೇಳುತ್ತಿದ್ದೆ.
ಬಾಲಕನಿದ್ದಾಗ ಆಕೆಯ ಬೆರಳು ಹಿಡಿದು ನಡೆಯುತ್ತಿದ್ದ ನಾನು ಹರೆಯಕ್ಕೆ ಬಂದಾಗ ಒಮ್ಮೊಮ್ಮೆ ಆಕೆಗೆ, “ಇದರಾಗ ನಿನಗ ಏನೂ ತಿಳಿಯುವದಿಲ್ಲ ಸುಮ್ಮ ಕೂಡು” ಎನ್ನುತ್ತಿದ್ದೆ. ಈಗ ಆಕೆಯ ಜ್ಞಾನದ ಸಿಂಧುವಿನಲ್ಲಿ ನನಗೆ ತಿಳಿದಿದ್ದು ಬಿಂದು ಮಾತ್ರ ಎಂಬುದರ ಅರಿವಾಗಿ ಕೊರಗುತ್ತೇನೆ.

ತಾಯಿ ನಿಧನಳಾದಾಗ ನಾನು ಆಕೆಯ ಪಕ್ಕದಲ್ಲಿದ್ದೆ. ಆಕೆಯ ಮುಖದಲ್ಲಿ ಸಂತೃಪ್ತಿ ಎದ್ದು ಕಾಣುತ್ತಿತ್ತು. ಆಕೆಯ ಎಲ್ಲ ಆಸೆಗಳನ್ನು ಈಡೇರಿಸಿದ್ದೆ. ಹೀಗಾಗಿ ಯಾವ ಪಾಪ ಪ್ರಜ್ಞೆಯೂ ನನ್ನನ್ನು ಕಾಡಲಿಲ್ಲ. ಅವ್ವ ಹೋದ ದಿನದಿಂದ ನನ್ನ ಬಾಳಿನಲ್ಲಿ ನಿರ್ವಾತ ಉಂಟಾಗಿದೆ. ಆಕೆಯ ಸ್ಮರಣೆ ನಿರಂತರವಾಗಿರಲಿ ಎಂದು ನನ್ನ ಮೊಮ್ಮಗಳಿಗೆ ಆಕೆಯ ಹೆಸರು ಇಟ್ಟಿದ್ದೇನೆ. ಮೊಮ್ಮಗಳನ್ನು ಕೂಗಿ ಕರೆದಾಗ ನನಗೆ ಅನಿರ್ವಚನೀಯ ಆನಂದವಾಗುತ್ತದೆ. ಆಕೆಯಲ್ಲಿ ನಾನು ನನ್ನ ತಾಯಿಯನ್ನು ಕಾಣುತ್ತೇನೆ.

ಈಗ ಮೊಮ್ಮಗಳು ನನ್ನ ತಾಯಿಯ ಪಾತ್ರ ನಿರ್ವಹಿಸುತ್ತಾಳೆ. ನನ್ನ ಬೆರಳನ್ನು ಹಿಡಿದು ನನ್ನನ್ನು ಕರೆದುಕೊಂಡು ಉದ್ಯಾನಕ್ಕೆ ಹೋಗುತ್ತಾಳೆ. ‘ನಡೀ, ಅವ್ವಾ’ ಎಂದು ನಾನು ಆಕೆಯ ಹಿಂದೆ ಹೋಗುತ್ತೇನೆ.

Leave a Reply

Your email address will not be published.