ಅಮ್ಮನ ನೆನಪು-8 : ‘ನಾನವನಲ್ಲ, ಅವಳು’

-ಸುನೀತಾ

ಹದಿನಾಲ್ಕು ವರ್ಷಗಳಲ್ಲಿ ನಾನು ಅದೆಷ್ಟು ಬದಲಾಗಿದ್ದೆ ! ಪ್ರೀತಿಯಿಂದ ಕೈತುತ್ತು ನೀಡಿ ಸಲಹಿದ ತಾಯಿಯನ್ನ ನಾನು ಕಲ್ಲು ಮನಸ್ಸಿನಿಂದ ತೊರೆಯುವಾಗ ನನ್ನೊಳಗೆ ಹೆಣ್ಣೊಬ್ಬಳು ಹುಟ್ಟಿಕೊಂಡಿದ್ದಳು. ನನ್ನೊಳಗಿದ್ದ ಹೆಣ್ಣು ನನ್ನ ತಾಯಿಯನ್ನ ನೋಡಿ ತಾನು ಹೆಣ್ಣಾಗಬೇಕೆಂದುಕೊಂಡು ಹೊಸ್ತಿಲು ದಾಟಿದಾಗ ನನಗೆ ಹದಿನಾಲ್ಕು ವರ್ಷ. ಆ ಹದಿನಾಲ್ಕು ವರ್ಷಗಳಲ್ಲಿ ನನ್ನಮ್ಮನ ನೆನಪುಗಳನ್ನ ಮರೆಯಲಾಗದು. ಆ ನೆನಪಿನ ಬುತ್ತಿಯೊಂದಿಗೆ ನನ್ನ ಬದುಕಿನ ಪ್ರಯಾಣ ಈಗಲೂ ಮುಂದುವರೆಯುತ್ತಿದೆ !

ನಾನು ಹುಟ್ಟುವಾಗ ಗಂಡಾಗಿ ಹುಟ್ಟಿದೆ. ಬೆಳೆಯುತ್ತಾ ಬಂದಂತೆ ನನ್ನ ದೇಹದ ಪ್ರಕೃತಿ ಹೆಣ್ಣಿನ ಪ್ರಕೃತಿಗೆ ಮಾರು ಹೋಗಿತ್ತು. ಗಂಡುಮಗನೆಂದುಕೊಂಡು ಎದೆ ತಟ್ಟಿಕೊಳ್ಳುತ್ತಾ ನನ್ನ ಮಗ ಎಂದು ಅಮ್ಮ ಬೀಗುತ್ತಾ ನನ್ನನ್ನು ಮೊದಲ ದಿನ ಸರಕಾರಿ ಶಾಲೆಗೆ ಕರೆದುಕೊಂಡು ಹೋದಾಗ, ನನ್ನ ಹೆಸರು ಶಂಕರ ಎಂದು ದಾಖಲಾತಿ ಪುಸ್ತಕದಲ್ಲಿ ಬರೆಸಿದ್ದಳು. ಆ ಹೆಸರು ಬರೆಸುವಾಗ ನನ್ನ ತಂದೆಯ ಹೆಸರು ಸಮೇತ ಶಂಕರ ನಿಂಗಪ್ಪ ಎಂದು ಬರೆಸಿದ್ದಳು. ಶಾಲೆಯಲ್ಲಿ ಸೇರಿದಾಗಿನಿಂದ ಎಲ್ಲರೂ ಶಂಕರ ನಿಂಗಪ್ಪ ಎಂದೆ ಕರೆಯುತ್ತಿದ್ದರು. ಆ ಶಂಕರನನ್ನ ಅಕ್ಕರೆಯಿಂದ ಸಾಕಿ ಸಲಹಿದವಳು ನನ್ನಮ್ಮ. ಮೂರು ವರ್ಷಗಳು ತುಂಬಿದ ನನ್ನ ತಂಗಿಯನ್ನ ನೋಡುತ್ತಾ ಅವಳು ನನ್ನ ತಂಗಿ ಎಂದು ಸಂತಸ ಪಡುತ್ತಿದ್ದೆ. ಹಸಿವಾದಾಗ ನನಗೆ ಅಮ್ಮ ಕೈತುತ್ತು ನೀಡಿದ್ದಳು. ಶಾಲೆಗೆ ಸೇರಿಸಿ, “ನೀನು ಚೆನ್ನಾಗಿ ಓದಬೇಕು ಕಣೋ, ನಿನ್ನ ತಂಗಿಗೆ ಒಳ್ಳೆ ಹುಡುಗನ್ನ ನೋಡಿ ಮದುವೆ ಮಾಡಬೇಕು ನೀನು” ಎಂದಿದ್ದಳು.

avanalla-avaluಅವಳ ಮಾತನ್ನು ಕೇಳಿ ತಲೆಯನ್ನಲ್ಲಾಡಿಸಿದ್ದೆ. ನನ್ನ ತಂಗಿಯ ಮದುವೆಯನ್ನು ನಾನು ಮಾಡ್ತೀನಿ ಎಂದು ಸಹಪಾಠಿಗಳೊಂದಿಗೆ ಹೇಳಿಕೊಳ್ಳುತ್ತಿದ್ದೆ. ನಾನಾಗ ಏಳನೇ ತರಗತಿಯಲ್ಲಿ ಓದುತ್ತಿದ್ದೆ. ಅಮ್ಮ ಸೀರೆ ಉಟ್ಟ್ಟುಕೊಳ್ಳುತ್ತಿದ್ದನ್ನ ಹತ್ತಿರದಿಂದ ನೋಡುತ್ತಿದ್ದ ನಾನು, ‘ಅಮ್ಮ ನನಗೂ ಸೀರೆ ಉಡಿಸು’ ಎಂದು ಕೇಳಿ ಸೀರೆ ಉಟ್ಟುಕೊಂಡು ಫೋಟೊ ಕ್ಲಿಕ್ಕಿಸಿಕೊಂಡಿದ್ದೆ. ಆ ಫೋಟೋ ನನ್ನ ಜೀವನದ ದೊಡ್ಡ ನೆನಪು. ನನ್ನೊಳಗಿದ್ದ ಹೆಣ್ಣು ಜಾಗೃತಳಾಗಿದ್ದು ಆಗಲೇ. ತಂಗಿ ಮಾಡುತ್ತಿದ್ದ ಕೆಲಸಗಳನ್ನೆಲ್ಲಾ ಮಾಡುತ್ತಾ ಹೋಗುತ್ತಿದ್ದೆ. ಅಮ್ಮನ ಬಳಿ ಇದ್ದ ಎಲ್ಲಾ ಬಣ್ಣದ ಸೀರೆಗಳು ನನ್ನ ಮೈ ಮೇಲೆ ಒಂದು ಸಲ ಹರಿದಾಡಿದ್ದವು. ಅಪ್ಪನ ವಾಚ್‍ವiನ್ ಕೆಲಸದಲ್ಲಿ ಅಷ್ಟಾಗಿ ದುಡಿಮೆ ಇರುತ್ತಿರಲಿಲ್ಲ. ಗಂಧದ ಕಡ್ಡಿ ಹೊಸೆದು ಅಮ್ಮ ದಿನಕ್ಕೆ ಐವತ್ತು ರೂಪಾಯಿ ಗಳಿಸುತ್ತಿದ್ದಳು. ಅವಳ ಶ್ರಮ ನನ್ನನ್ನು ಚೆನ್ನಾಗಿ ಓದುವಂತೆ ಪ್ರೇರೇಪಿಸಿತ್ತು.

ತರಗತಿಯಲ್ಲಿ ನೋಡಲು ಗಂಡು ಹುಡುಗನಂತೆ ಇದ್ದರೂ ಅದೇಕೋ ನನ್ನ ಮನಸ್ಸನ್ನು ಹೆಣ್ಣುತನ ಆಳುತಿತ್ತು. ಹುಡುಗರ ಜೊತೆ ಇರಲಾಗದೇ ಹುಡುಗಿಯರ ಜೊತೆ ಕುಂಟೆಬಿಲ್ಲೆ, ಕೊಕೋ ಆಟವಾಡುತ್ತಿದ್ದೆ. ನಿಧಾನವಾಗಿ ನಾನೇಕೋ ಹೆಣ್ಣಿನಂತೆ ವರ್ತಿಸುತ್ತಿದ್ದೇನೆ ಅನಿಸಿತ್ತು. ನಾನು ಗಂಡಲ್ಲ, ಹೆಣ್ಣು ಎಂಬ ಭಾವನೆ ಮೂಡಿತ್ತು. ಹೆಂಗಸರ ನಡೆ ವರ್ತನೆಗಳಿಂದ ಆಕರ್ಷಣೆಗೊಳಪಟ್ಟಿದ್ದ ನಾನು ಹೆಣ್ಣಿನಂತೆ ವರ್ತಿಸುತ್ತಿದ್ದನ್ನ ನೋಡಿದ ಅಮ್ಮ ನನ್ನನ್ನು ಕಾಳಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಳು. ನನಗೆ ದೆವ್ವ ಹಿಡಿದಿದೆ. ಯಾವುದೋ ಹೆಣ್ಣು ದೆವ್ವವಾಗಿ ನನ್ನನ್ನು ಹಿಡಿದುಕೊಂಡಿದೆ. ಅದಕ್ಕೆ ನಾನು ಹೀಗೆ ಆಡುತ್ತಿದ್ದೇನೆಂದು ಭಾವಿಸಿ ಯಂತ್ರ, ಮಂತ್ರಗಳನ್ನು ಮಾಡಿಸಿದ್ದಳು. ಅವಳ ದೈವಿಕ ಪ್ರೀತಿ, ಅವಳ ಕಣ್ಣೀರನ್ನು ನನ್ನ ಕಣ್ಣಿನಿಂದ ನಾನು ನೋಡಿದ್ದೆ. ಅವಳು ಬಿಡುತ್ತಿದ್ದ ನಿಟ್ಟುಸಿರ ದನಿ, ತಂಗಿಯ ಬೆಳವಣಿಗೆ, ನನ್ನಲ್ಲಿ ಆಗುತ್ತಿದ್ದ ದೈಹಿಕ ಬದಲಾವಣೆಗಳು ಅದೇಕೋ ನನ್ನನ್ನು ಮನೆ ಬಿಟ್ಟು ಹೋಗುವಂತೆ ಪ್ರೇರೇಪಿಸಿದ್ದವು. ಅಂದು ನಿರ್ಧಾರ ಮಾಡಿದೆ. ರಾತ್ರೋ ರಾತ್ರಿ ಮನೆ ಬಿಟ್ಟು ಆ ಮೆಜೆಸ್ಟಿಕ್ ಫ್ಲೈ ಓವರ್ ಕೆಳಗೆ ಮ¯ಗಿದ್ದೆ. ಅಲ್ಲಿ ಮಲಗಿದ್ದಾಗ ನನ್ನ ಕಣ್ಣ ಮುಂದೆ ಬರುತ್ತಿದ್ದದ್ದು ನನ್ನಮ್ಮ; ಅವಳ ಮುಖ, ಅವಳ ಕಷ್ಟಗಳು, ಅವಳು ಪಡುತ್ತಿದ್ದ ಯಾತನೆಗಳು. ಆದರೂ ಮನಸ್ಸು ಅಮ್ಮನ ಕಡೆ ವಾಲುತ್ತಿದ್ದರೆ ದೇಹದ ಹಸಿವು ಮತ್ತೆಲ್ಲೋ ಸೆಳೆಯುತ್ತಿತ್ತು. ಆ ಪ್ರಕೃತಿಯ ಅಸ್ತಿತ್ವ ಮತ್ತೊಂದು ಪ್ರಕೃತಿಗೆ ಮಾರುಹೋಗಿತ್ತು. ದೇಹ ಮನಸ್ಸಿನ ಹೋರಾಟದಲ್ಲಿ ನನ್ನ ತಾಯಿ ನನ್ನೊಳಗೆ ಅಂದೇ ಕರಗಿಹೋಗಿದ್ದಳು.

ಆಗ ನನ್ನಂತೆ ಅಲ್ಲಿದ್ದ ಮತ್ತೊಬ್ಬ ಸಿಕ್ಕ. ಅವನು ತಿನ್ನುತ್ತಿದ್ದ ಅನ್ನದಲ್ಲಿ ನನಗೂ ಒಂದು ಚೂರು ಕೊಟ್ಟ. ಅವನಲ್ಲದ ಅವಳ ಕೈತುತ್ತು ನನ್ನ ಹೊಟ್ಟೆಯ ಹಸಿವು ಹಿಂಗಿಸುವಷ್ಟರಲ್ಲಿ ನನ್ನ ಮನಸ್ಸಿನ ಭಾವನೆಗಳನ್ನು ಅವನ/ಳ ಬಳಿ ಹೇಳಿಕೊಂಡೆ. ಅದನ್ನು ಕೇಳಿ ಅವಳು ನನ್ನನ್ನು ಆಲಂಗಿಸಿದಾಗ ನಾನು ಮತ್ತು ಅವಳು ಒಂದೇ ; ‘ನಾನವನಲ್ಲ, ಅವಳು’ ಎಂದು ಅರಿವಾಯಿತು. ಮನಸ್ಸೇನೋ ಹೆಣ್ಣಿನದು ದೇಹ ಮಾತ್ರ ಗಂಡಿನದು. ಮನಸ್ಸಿನಂತೆ ದೇಹವೂ ಬದಲಾಗಬೇಕೆನಿಸಿತು. ಆಗ ಅವಳು ಹೇಳಿದಂತೆ ಕೇಳಿದೆ. ಆಂಧ್ರ ಪ್ರದೇಶದ ಲಿಂಗ ಪರಿವರ್ತನೆಯ ಆಸ್ಪತ್ರೆಯಲ್ಲಿ ಒಂದು ಲಕ್ಷ ಹಣ ನೀಡಿದರೆ ಗಂಡು ಹೆಣ್ಣಾಗಬಹುದು, ಹೆಣ್ಣು ಗಂಡಾಗಬಹುದೆಂದು ತಿಳಿಯಿತು. ಖಾಲಿ ಕೈಯಾಗಿದ್ದ ನನಗೆ ಹಣದ ಅಗತ್ಯವಿತ್ತು. ಆ ಹಣಕ್ಕಾಗಿ ನಾನು ಅವಳ ಸಲಹೆಯಂತೆ ಗಿರಾಕಿಗಳನ್ನು ಹುಡುಕಿದೆ. ಹೆಣ್ಣು ವೇಷ ಧರಿಸಿ, ಆ ರಾತ್ರಿಗೆ ಅರೆ ಬೆತ್ತಲಾದೆ.

ಮೂರು ವರ್ಷಗಳ ಆ ರಾತ್ರಿಯ ದುಡಿಮೆಯೆಲ್ಲಾ ಸೇರಿಸಿ ಒಂದು ಲಕ್ಷ ಸಂಪಾದಿಸಿದೆ. ಆಂಧ್ರದಲ್ಲಿನ ಆ ಆಸ್ಪತ್ರೆಗೆ ಹೋಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡೆ. ಎರಡು ವರ್ಷ ಕಳೆಯುವಷ್ಟರಲ್ಲಿ ಸಂಪೂರ್ಣ ಹೆಣ್ಣಿನಂತಿದ್ದ ನನಗೆ ಅದೇಕೋ ಅಮ್ಮನ ಬಳಿ ಹೋಗಬೇಕೆಂದು ಸಾಕಷ್ಟು ಬಾರಿ ಅನಿಸಿತ್ತು. ಮನೆ ಬಿಟ್ಟು ಐದು ವರ್ಷಗಳಾಗಿವೆ. ತಂಗಿ ಈಗಾಗಲೇ ವಯಸ್ಸಿಗೆ ಬಂದಿರುತ್ತಾಳೆ. ನಾನು ರಾತ್ರಿಯ ಅಡ್ಡರಸ್ತೆಯಲ್ಲಿರುವವಳು. ನನ್ನದು ರಾತ್ರಿ ಯಾನ. ಅವರೆಲ್ಲ ಮುಖ್ಯರಸ್ತೆಯಲ್ಲಿರುವವರು. ನನಗೂ ಅವರಿಗೂ ಸಂಬಂಧವಿಲ್ಲ ಎಂದುಕೊಂಡು ಅಮ್ಮನ ತೆಕ್ಕೆಯಲ್ಲಿನ ಆ ನೆನಪಿನಲ್ಲೇ ಮತ್ತೆರೆಡು ವರ್ಷಗಳ ಕಾಲ ದುಡಿದೆ. ಆ ಒಂದೊಂದು ದಿನವೂ ನನ್ನ ತಾಯಿಯ ನೆನಪಿನಲ್ಲೇ ಕಾಲ ಕಳೆದಿದ್ದೆ. ಬೀದಿಯಲ್ಲಿನ ಬದುಕಿಗೆ ತಾಯಿಯ ನೆನಪೇ ಚಾದರವಾಗಿತ್ತು. ಅದನ್ನು ಹೊದ್ದುಕೊಂಡು ಮಲಗಿದ್ದು ಈಗಲೂ ನೆನಪಿದೆ.

ಕತ್ತಲೆ ರಾತ್ರಿಯ ಬದುಕು ಇದ್ದಷ್ಟು ದಿನ ವೈರಾಗ್ಯವನ್ನುಂಟು ಮಾಡಿತ್ತೇ ಹೊರತು ಸಮಾಧಾನವಾಗಲಿ, ಶಾಂತಿಯಾಗಲಿ ಇರಲಿಲ್ಲ. ಆದರೂ ನನ್ನ ತಾಯಿಯನ್ನು ತೊರೆದು ಬಂದಾಗ ಅಮ್ಮ ನನಗಾಗಿ ಎಷ್ಟೆಲ್ಲ ಯೋಚಿಸುತ್ತಿರುತ್ತಾರೋ ಎಂದು ಊಹಿಸಿಕೊಳ್ಳುತ್ತಿದ್ದೆ. ಮನೆಯ ಮಗನಾಗಿ ತಾಯಿಯ ಜೊತೆಯಲ್ಲಿ ಕಷ್ಟ ಸುಖಗಳಿಗೆ ಆಗಬೇಕಾದವನು ಹೀಗೆ ನಡುರಾತ್ರಿಯಲ್ಲಿ ಅರೆ ಬೆತ್ತಲಾಗಿ ಅಲೆಯುತ್ತಿರುವುದನ್ನು ನನಗೆ ನಾನೇ ನೋಡಿಕೊಂಡು ಅಸಹ್ಯ ಪಟ್ಟುಕೊಂಡಿದ್ದೆ. ಆದರೂ ಇದು ನಾನೇ ಕಂಡುಕೊಂಡ ದಾರಿ; ಆಕಸ್ಮಿಕವಾಗಿ ಯಾರೋ ಈ ಮಾರ್ಗಕ್ಕೆ ತಳ್ಳಿದ್ದಲ್ಲ….. ನನಗೆ ನಾನೇ ಮಾಡಿಕೊಂಡಿದ್ದು ಎಂದುಕೊಂಡೆ, ಎಂಟು ವರ್ಷಗಳ ಕಾಲ ಕಳೆದೆ.

ಅಮ್ಮನ ಅಳುವಿನ ಕೂಗು ನನಗೆ ಸೂಕ್ಷ್ಮವಾಗಿ ಕೇಳುತ್ತಿತ್ತು. ಸ್ವಾರ್ಥವಿಲ್ಲದ ಪ್ರೀತಿ ಅವಳದು. ಅವಳ ಮನಸ್ಸು ನನಗಾಗಿ ಅದೆಷ್ಟು ಹಂಬಲಿಸಿತ್ತೋ. ನನ್ನ ಮಾವ ನನ್ನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂದಿತು. ಅವರನ್ನು ಎದುರು ಬದಿರು ನೋಡಿಯೂ ಅವರಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದೆ. ನನ್ನ ರೂಪ ನೋಡಿ ಮಾವ ಹೆದರಿದರೆ ಎಂಬ ಭಯವೂ ಕೂಡ ಇತ್ತು. ಆದರೆ ಕರುಳ ಸಂಬಂಧ ಯಾರನ್ನು ಬಿಟ್ಟುಕೊಡುವುದಿಲ್ಲ ಎಂಬುದಕ್ಕೆ ಸಾಕ್ಷಿ ಎನ್ನಿಸುವ ಘಟನೆ ನಡೆದೇಹೋಯಿತು. ನನ್ನ ಮಾವ ನನ್ನ ಗುರುತು ಹಿಡಿದು ಅಮ್ಮ ನನಗಾಗಿ ಕಾಯುತ್ತಿರುವುದರ ಬಗ್ಗೆ ಹೇಳಿದ. ಮಾವನ ಮಾತುಗಳನ್ನು ನಿರ್ಲಕ್ಷಿಸಿ ಮತ್ತೆರೆಡು ತಿಂಗಳುಗಳ ಕಾಲ ಅದೇ ವೃತ್ತಿಯಲ್ಲಿ ಮುಂದುವರೆದೆ.

ಮನೆಯವರು ನೆನಪಿಗೆ ಬರಬಾರದೆಂದು ಕುಡಿತಕ್ಕೆ ಶರಣಾದೆ. ಗಾಂಜಾ ಹೊಡೆದೆ. ಸಿಗರೇಟ್ ನನ್ನ ಸಂಗಾತಿಯಾಯಿತು. ಎಲ್ಲಿದ್ದರೂ ಬಿಡದೀ ಮಾಯೇ ಎಂಬಂತೆ ಅಮ್ಮನಿಗೆ ಸದಾ ಶರಣಾಗುತ್ತಿದ್ದೆ. ಕಾರಣ ಅವಳು ನನ್ನ ತಾಯಿ, ನನ್ನನ್ನು ಹಡೆದವಳು, ನವಮಾಸ ಗರ್ಭದಲ್ಲಿ ಬೆಳೆಸಿ, ಜನ್ಮ ನೀಡಿ, ಏಳೆಂಟು ವರ್ಷ ಆ ಪ್ರೀತಿಯನ್ನು ನೀಡಿದವಳು. ಆ ಪ್ರೀತಿಯ ಮಾಯೆಯಲ್ಲಿ ಬಂದಿಯಾದ ನನಗೆ ಅಮ್ಮನನ್ನು ನೋಡಿ ಬರುವ ಮನಸ್ಸಾಯಿತು. ಬೆದರುತ್ತಲೇ ಮನೆಯತ್ತ ನಡೆದೆ. ಅದೇ ಮನೆ, ಮುರುಕಲು ಗೋಡೆ, ಸವಕಲು ದೀಪ, ದೀಪದ ಮುಂದೆ ಅಕ್ಕಿ ಕೇರುತ್ತಾ ಕುಳಿತಿದ್ದ ಅಮ್ಮ. ಅವಳ ಮುಖ ನೋಡಿ ‘ಅಮ್ಮಾ’ ಎಂದೆ. ಬದಲಾದ ರೂಪ ನೋಡಿ, ‘ಯಾರಿವರು ?’ ಎಂದು ಸೋಜಿಗವನ್ನು ವ್ಯಕ್ತಪಡಿಸುತ್ತಿದ್ದ ಅವಳ ಕಣ್ಣುಗಳಿಗೆ ನಿಜ ಹೇಳಲು ಸಾಧ್ಯವಾಗದೆ, ‘ಅಮ್ಮಾ’ ಎಂದು ನಿಂತೆ. ಕಣ್ಣಲ್ಲಿ ನೀರು ತುಂಬಿ ದನಿಯೊಡೆದುಹೋಗಿತ್ತು. ಮೂಕವಾಗಿ ನಿಂತೆ. ಅಕ್ಕ ಪಕ್ಕದವರೆಲ್ಲ ನನ್ನನ್ನು ನೋಡಿದ ರೀತಿ ನಾನು ಎಂದಿಗೂ ಮರೆಯಲಾರೆ. ಅವರು ನನ್ನನ್ನು ಪರಕೀಯವಾಗಿ ನೋಡುತ್ತಾ ಒಳಗೊಳಗೇ ಮಾತನಾಡಿಕೊಳ್ಳುತ್ತಿದ್ದ ರೀತಿ ನನಗೆ ಅಲ್ಲಿಂದ ಹೋಗುವಂತೆ ಪ್ರೇರೇಪಿಸಿತು.

ಇಷ್ಟು ದೂರ ಬಂದು, ಅಮ್ಮನ ಎದೆಯಾಳದಲ್ಲಿ ಮಲಗದೆ, ಅವಳ ಕೈತುತ್ತು ತಿನ್ನದೆ ಹೋಗುವುದಾದರೂ ಹೇಗೆ ಎಂದುಕೊಂಡು ಅಲ್ಲೇ ತಲೆ ತಗ್ಗಿಸಿ ನಿಂತೆ. ‘ಯಾರು ಮರೆತರೇನು ತಾಯ, ತಾಯಿ ಮರೆಯಳು ಕಂದನ’ ಎಂಬುದು ಸತ್ಯ ! ಅದಕ್ಕೇ ನೋಡಿ ತಾಯಿ ಪ್ರೀತಿ ಎನ್ನುವುದು ! ಅವಳು ನನ್ನನ್ನು ನೋಡುತ್ತಲೇ, ‘ಬಾರೋ ಶಂಕರ’ ಎಂದು ಮೈಮುಟ್ಟಿ ಒಳಗೆ ಕರೆದಳು. ಅಂದಿನ ಅಮ್ಮನ ನುಡಿ ಇಂದಿಗೂ ಮರೆಯಾಲಾರೆ. ಅಮ್ಮನಿಗೆ ನಾನು ಶಂಕರನೇ ಆಗಿದ್ದೆ. ಅಮ್ಮ ನನ್ನ ಅವತಾರ ನೋಡಿ, ‘ಏನೋ ಇದು, ಯಾಕೆ ಹೀಗಿದ್ದೀಯಾ?’ ಎಂದು ಕಣ್ಣೀರಿಡುತ್ತಾ ಕೇಳಿದಳು. ಅವಳ ನಗು ಅಳಿಸಿದ ಮಗ ನಾನು !

ಅವಳು ನನಗಾಗಿ ಚಿಂತಿಸಿ ಕರಗಿ ಹೋಗಿದ್ದಳು. ಸಪೂರವಾಗಿದ್ದ ಅಮ್ಮನನ್ನು ನೋಡುತ್ತಾ ಅಂದು ಮನಸಾರೆ ಅತ್ತುಬಿಟ್ಟೆ. ನಾನು ಅಳುತ್ತಿರುವುದನ್ನು ನೋಡಿದ ಅಮ್ಮ ಮತ್ತಷ್ಟು ಅಳಲಾರಂಭಿಸಿದಳು. ಅವಳ ನೋವಿಗೆ ನಾನು ಕಾರಣ. ನನ್ನ ದೌರ್ಬಲ್ಯವೇ ಕಾರಣ. ಆದರೂ ಮನಸ್ಸಿನ ಬಯಕೆಯಂತೆ ದೇಹಕ್ಕೆ ಭಾರ ನೀಡಿ ಶಾಶ್ವತವಾಗಿ ತಂದಿಟ್ಟುಕೊಟ್ಟ ಅಪಾಯ. ಇದಕ್ಕೆ ನಾನೇ ಕಾರಣ. ‘ಅಮ್ಮ್ಮಾ ನನ್ನನ್ನು ಕ್ಷಮಿಸು, ನಾನು ನಿಮಗೆ ಒಳ್ಳೆಯ ಮಗನಾಗಲಿಲ್ಲ’ ಎಂದಾಗ ಅಮ್ಮ ನನ್ನ ಅಪ್ಪಿಕೊಂಡು, ‘ಅಳಬೇಡ ಕಣೋ ಇದೆಲ್ಲ ಬಿಟ್ಟು ಮನೆ ಮಗನ ಹಾಗೆ ಇದ್ದುಬಿಡೋ. ಹೀಗೆಲ್ಲ ಮಾಡಬೇಡ.. ಎಲ್ಲೂ ಹೋಗಬೇಡ. ನಿನಗೆ ಏನು ಬೇಕು ಹೇಳು ನಾನೇ ನಿನಗೆ ತಂದು ಕೊಡ್ತೀನಿ.. ಈ ಮನೆ ಬಿಟ್ಟು ಎಲ್ಲೂ ಹೋಗಬೇಡ. ನಿನ್ನನ್ನು ಸಾಯೋ ತನಕ ಚೆನ್ನಾಗಿ ನೋಡ್ಕೋತೀನಿ.. ಮನೆ ಬಿಟ್ಟು ಹೋಗ್ಬೆಡ. ನಿನಗೆ ಹೇಗೆ ಬೇಕೋ ಹಾಗಿರು. ನಿನ್ನ ಹೆಣ್ಣು ಮಗಳಾಗೇ ಸಾಕ್ತಿನಿ.. ನೀ ಏನು ಯೋಚಿಸಬೇಡ. ಇಲ್ಲೇ ಇದ್ದು ಬಿಡು’ ಎಂದಳು.

ಅಂದಿನಿಂದ ಅಕ್ಕಪಕ್ಕದ ಜನರಿಗೆ ತನ್ನ ಮಗಳೆಂದೇ ನನ್ನನ್ನು ಅಮ್ಮ ಪರಿಚಯಿಸಿದಳು. ಅಮ್ಮನ ಆ ಮಾತುಗಳನ್ನು ಕೇಳಿ ಧನ್ಯಳಾಗಿದ್ದೆ. ನನ್ನ ವಿಕಾರಗಳನ್ನ ಒಪ್ಪಿಕೊಂಡು ಸಮಾಜದಲ್ಲಿ ನÀನಗೆ ಮಗಳ ಸ್ಥಾನ ನೀಡಿದ ಅವಳ ವಿಶಾಲ ಮನಸ್ಸಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಅಂದಿನಿಂದ ಅಮ್ಮನ ಪಾಲಿಗೆ ಶಂಕರನಾಗಿದ್ದ ನಾನು ಸುನೀತಾ ಆದೆ ! ವೋಟರ್ ಐಡಿಯಲ್ಲಿ, ರೇಷನ್ ಕಾರ್ಡಿನಲ್ಲಿ ನನ್ನ ಹೆಸರು ತಿದ್ದಿಸಿದ ಅಮ್ಮ ನನಗೆ ಈ ಸಮಾಜದಲ್ಲಿ ಹೊಸ ಬದುಕನ್ನ ನೀಡಿದಳು.

ನೋಡಿದವರು ಏನೇ ಅಂದುಕೊಳ್ಳಲಿ. ಹೇಗೇ ಹೀಯಾಳಿಸಲಿ. ಆದರೆ ನನ್ನ ತಾಯಿ ನನ್ನನ್ನು ಒಂದಿಷ್ಟೂ ಹೀಗಳಿಯಲಿಲ್ಲ. ಮನಸ್ಸಿನಲ್ಲಿ ಮರುಕವಿದ್ದರೂ ನನ್ನ ಮುಂದೆ ತೋರಿಸಲಿಲ್ಲ. ಆ ಶಂಕರನಿಗೆ ಹೇಗೆ ಶಾಲೆಗೆ ಹೋಗಲು ದಾರಿ ತೋರಿದಳೋ ಈಗಲೂ ಅಡ್ಡದಾರಿ ಹಿಡಿದಿದ್ದ ನನ್ನ ಬದುಕಿಗೆ ದಾರಿ ತೋರಿದಳು. ಅವಳಿಂದಲೇ ಇಂದು ನಾನು ಸುನೀತಾ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಚುನಾವಣೆಗೆ ನಿಂತ ನಾಯಕರನ್ನು ಅವಲೋಕಿಸಿ ಮತದಾನ ಮಾಡಿ ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ.

ಬಡತನದಲ್ಲಿಯೂ ಅಮ್ಮನ ಸಾಂತ್ವನ, ತಂಗಿಗೊಂದು ಬದುಕು ಕಟ್ಟಿಕೊಡುವ ಆಸೆಯಿಂದ ಉದ್ಯೋಗಕ್ಕೆ ಸೇರಿಕೊಂಡೆ. ಬರುವ ಎಂಟು ಸಾವಿರ ಸಂಬಳ ಸಾಕಾಗುತ್ತಿರಲಿಲ್ಲ. ಆದರೂ ಅಮ್ಮನಂತೆ ಸ್ವಾಭಿಮಾನಿಯಾಗಿರಬೇಕೆಂಬ ಮಹದಾಸೆ. ಆದರೆ ಇದ್ದಕ್ಕಿದ್ದ ಹಾಗೆ ಅಮ್ಮನ ಆರೋಗ್ಯ ಹದಗೆಟ್ಟಿತ್ತು. ಅಮ್ಮನ ಕಿಡ್ನಿ ವೈಫಲ್ಯ ಅವರ ಜೀವಕ್ಕೆ ಹಾನಿಯುಂಟು ಮಾಡಿತ್ತು. ಅಮ್ಮನನ್ನು ಉಳಿಸಿಕೊಳ್ಳಬೇಕಾದರೆ ಪ್ರತಿದಿನವೂ ಹತ್ತು ಸಾವಿರ ಹಣ ಬೇಕಾಗಿತ್ತು..

ಆಸ್ಪತ್ರೆಯಲ್ಲಿ ಹಣ ದೋಚುತ್ತಿದ್ದ ಡಾಕ್ಟರುಗಳಿಗೆ ಹಣ ಬೇಕಿತ್ತೇ ಹೊರತು ತಾಯಿಯ ಆರೋಗ್ಯವಲ್ಲ. ಅಮ್ಮ ಮನೆಯಲ್ಲಿದ್ದಾಗಲೇ ಎಷ್ಟೋ ಚೆನ್ನಾಗಿದ್ದರು. ಆಸ್ಪತ್ರೆಗೆ ಸೇರಿಸಿದ ಮೇಲಂತೂ ಅವರ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಯಿತು. ನೂರು ರೂಪಾಯಿಗಳಿಗೂ ನಾನು ಎಲ್ಲರ ಬಳಿ ಕೈಚಾಚುವಂತಾಯಿತು. ಆಗ ಮತ್ತೆ ನೆನಪಾದದ್ದು ನನ್ನ ಹಳೆಯ ದಂಧೆ. ಏಕೆ ಮತ್ತೆ ಇದೇ ವೃತ್ತಿಯನ್ನು ಮುಂದುವರೆಸಬಾರದು ಎಂದುಕೊಂಡು ಹಳೆಯ ಮೊಬೈಲ್‍ನಲ್ಲಿದ್ದ ಗಿರಾಕಿಗಳ ನಂಬರ್ ಹುಡುಕಿದೆ. ನನ್ನ ತಾಯಿಗೆ ಹೀಗೆ ಆಗಿದೆ. ಯಾರಾದರೂ ಸಹಾಯ ಮಾಡಿ ಎಂದು ಕೇಳಿದೆ. ಅಲ್ಲೊಬ್ಬರೂ ಇಲ್ಲೊಬ್ಬರೂ ಸಹಾಯ ಮಾಡಿದರೂ, ಮತ್ತೆ ಅದೇ ವೃತ್ತಿಯನ್ನು ಮುಂದುವರಿಸುವುದೋ ಬೇಡವೋ ಎಂಬ ಅನುಮಾನಗಳಿದ್ದವು. ಅಮ್ಮನ ಪರಿಸ್ಥಿತಿ ಮತ್ತಷ್ಟು ಗಂಭೀರವಾಗತೊಡಗಿದಾಗ ಕೈ ಚಾಚುವುದು ಅನಿವಾರ್ಯವಾಗಿತ್ತು. ಆಗ ನನ್ನನ್ನು ಕಾಪಾಡಿದ್ದು ಅಮ್ಮ ಬೋಧಿಸಿದ ಸ್ವಾಭಿಮಾನವೆಂಬ ಮಂತ್ರ. ಅದನ್ನು ನಂಬಿದ್ದೆನಷ್ಟೇ. ಅದೇ ನಮ್ಮನ್ನು ಇಷ್ಟು ದಿನ ಕಾಯುತ್ತಿದೆ ಎಂದು ಭಾವಿಸಿದೆ. ಅಮ್ಮನ ಕಿಡ್ನಿ ವೈಫಲ್ಯದ ಆ ಸಾವು ಇಂದಿಗೂ ನನಗೆ ಕರಾಳವಾಗಿ ಕಾಣಿಸುತ್ತಿದೆ.

ಅಮ್ಮನ ಜೊತೆ ನಾನು ಸುನೀತ ಆಗಿ ಕಾಲ ಕಳೆದದ್ದು ನಾಲ್ಕು ವರ್ಷ ಮಾತ್ರ. ಅಷ್ಟರಲ್ಲಿ ಅಮ್ಮನನ್ನೇ ಕಳೆದುಕೊಂಡೆ. ಸಮಾಜ ನನ್ನನ್ನು ಲೈಂಗಿಕ ಅಲ್ಪ ಸಂಖ್ಯಾತರಂತೆ ಪ್ರತ್ಯೇಕ ವರ್ಗವಾಗಿ ನೋಡುವಾಗ, ಅಮ್ಮ ಮಾತ್ರ ಮಗುವಾಗಿ ನೋಡಿದರು. ಮಕ್ಕಳೆಂದಿಗೂ ತಾಯಿಗೆ ಮಕ್ಕಳೇ ಎಂಬುದನ್ನು ನನ್ನ ತಾಯಿ ನಿರೂಪಿಸಿದರು. ಅವರ ಸ್ವಾಭಿಮಾನ, ಧೈರ್ಯ, ಗಂಡು ಮಗನನ್ನು ಒಂದು ಹೆಣ್ಣುಮಗಳಾಗಿ ಸ್ವೀಕರಿಸಿದ ಆಕೆಯ ಮನೋಧರ್ಮ ಎಲ್ಲಾ ಧರ್ಮಗಳನ್ನು ಮೀರಿದ್ದು ! ಎಲ್ಲಾ ಜಾತಿ, ತಾರತಮ್ಯಗಳನ್ನು ಮೀರಿದ್ದು.

AMMANAಒಮ್ಮೆ ಹೀಗೇ ಮಾರ್ಕೆಟ್ಟಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಮ್ಮನ ಕಡೆಯ ಸಂಬಂಧಿಯೊಬ್ಬರೂ ಸಿಕ್ಕರು. ಅಮ್ಮನ ಕ್ಷೇಮ ವಿಚಾರಗಳನ್ನು ವಿಚಾರಿಸಿದ ಆಕೆ ನಿಧಾನವಾಗಿ, ‘ನಿಮ್ಮ ಮಗ ಹೇಗಿದ್ದಾನೆ ?’ ಎಂದು ಕೆದಕಿದರು. ಹಳೆಯ ಸಂಬಂಧವಾದ್ದರಿಂದ ಎಲ್ಲ ವಿಷಯ ಸರೋಜಮ್ಮನಿಗೆ ತಿಳಿದಿತ್ತು. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಆಗಾಗ್ಗೆ ನಮ್ಮ ಮನೆಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದಳು. ನಾನಾಗ ಅವಳನ್ನು ನೋಡಿದ್ದೆ. ಬಿಡುವಿನ ವೇಳೆ ಕಳೆಯಲು ಬರುತ್ತಿದ್ದ ಆಕೆ ಇಡೀ ಊರಿನವರ ಸುದ್ದಿಯೆಲ್ಲಾ ತನ್ನ ಬಾಯೊಳಗೆ ಮೆಲುಕುತ್ತಿದ್ದಳು. ಬೇರೆಯವರ ಕುರಿತು ಮಾತಾನಾಡೋದು ಅಂದ್ರೆ ಇಷ್ಟ ಪಡುತ್ತಿದ್ದ ಅವಳಂತಹ ಅದೆಷ್ಟೋ ಹೆಂಗಸರ ಬಾಯಿಗೆ ನಮ್ಮ ಅಮ್ಮನಂತವರು ಆಹಾರವಾಗಿದ್ದರು.

ಸಂಸ್ಕಾರವಿಲ್ಲದ ಅವರ ಬದುಕಿನ ಕುರಿತು ಇಲ್ಲಿ ಹೇಳುವುದಂಕ್ಕಿಂತ ಈ ತರಹದ ಹೆಂಗಸರಿಂದಲೂ ಅಮ್ಮನಂತಹ ವ್ಯಕ್ತಿತ್ವಗಳು ಅದೆಷ್ಟು ನೊಂದುಕೊಂಡಿರುತ್ತಾರೆ ಎಂಬ ಅರಿವಾಯಿತು. ಆಕೆಯ ಕೊಂಕಿನ ಪ್ರಶ್ನೆಗಳನ್ನರಿತ ಅಮ್ಮ ಮುಖಕ್ಕೆ ಹೊಡೆಯುವಂತೆ ನನ್ನತ್ತ ನೋಡಿ, “ಇವಳೇ ನನ್ನ ದೊಡ್ಡ ಮಗಳು, ಮಗ ಎಲ್ಲಾ. ನನಗೆ ಹುಟ್ಟಿದ್ದು ಮಗ ಅಲ್ಲ ಮಗಳು. ಇವಳನ್ನ ಗಂಡು ಮಗುವಿನ ತರಹನೇ ಬೆಳೆಸಿದ್ದೇನೆ. ಈಗಲೂ ನನ್ನ ಮಗ, ನನ್ನ ಮಗಳು ಇವಳೇ” ಎಂದು ನನ್ನನ್ನು ಅಪ್ಪಿಕೊಂಡು ಹೇಳಿದರು. ಅವರ ಮಾತಿಗೆ ತಲೆ ತಗ್ಗಿಸಿದ ಸರೋಜಮ್ಮ ಮರು ಮಾತಾಡದೇ ಮುಂದೆ ಹೋದರು. ಅಮ್ಮನ ಕಣ್ಣುಗಳಲ್ಲಿದ್ದ ಆ ಗಟ್ಟಿತನ ಇಂದಿಗೂ ನನಗೆ ಬಂದಿಲ್ಲ. ಅಮ್ಮ ನಿಜಕ್ಕೂ ಗಟ್ಟಿಗಳು. ಅವಳ ಹಾಗೆ ಸತ್ಯವನ್ನು ಎದೆಗಪ್ಪಿ ಹೇಳುವ ಧೈರ್ಯ ನನಗಿರಲಿಲ್ಲ. ಅಂದು ಅವಳಾಡಿದ ಮಾತುಗಳು ನನಗೆ ಸ್ಫೂರ್ತಿ ನೀಡಿದ್ದವು. ಸಮಾಜವನ್ನು ಒಂದು ಕುಟುಂಬದಲ್ಲಿದ್ದುಕೊಂಡೇ ನಿಭಾಯಿಸುವ ಶಕ್ತಿಯನ್ನು ಅಮ್ಮ ತುಂಬಿದ್ದಳು. ಅಂಗವಿಕಲ ಮಗು ಹುಟ್ಟಿದಾಗ ಅಯ್ಯೋ ಎಂದು ಉದ್ಗರಿಸುವ ಜನರೆದಿರು ತಾಯಿ ಆ ಮಗುವನ್ನು ಸಮಾಜದ ಮುಂದೆ ತಲೆ ಎತ್ತಿ ನಿಲ್ಲುವಂತೆ ಮಾಡುತ್ತಾಳೆ. ಒಡಲು ಸುಡುವ ಬಡತನಕ್ಕೆ ಸವಾಲೊಡ್ಡಿ ಮಕ್ಕಳಿಗೆ ಶಕ್ತಿ ತುಂಬುತ್ತಾಳೆ. ಅದೇ ತಾಯಿಯ ಚೈತನ್ಯ ! ಅವಳಿಗಿಂತ ದೊಡ್ಡ ಚೈತನ್ಯ ಮತ್ತೊಂದಿಲ್ಲ.

ಇಡೀ ಸಮಾಜ ನನ್ನನ್ನು ನೋಡುತ್ತಾ ಇವಳು ಹೆಣ್ಣೊ, ಗಂಡೋ ಎಂದು ಪ್ರಶ್ನಿಸಿದ್ದರು. ಆದರೆ ಅಮ್ಮ ನನ್ನನ್ನು ಮಗುವಾಗಿಯೇ ನೋಡಿಕೊಂಡರು. ಮೊದಲ ದಿನ ಶಾಲೆಗೆ ಸೇರಿಸುವಾಗ ಹೇಗಿದ್ದರೋ, ಸಾಯುವಾಗಲೂ ಹಾಗೇ ಇದ್ದರು. ನಾನು ಮಾತ್ರ ಸಾಕಷ್ಟು ಬದಲಾಗಿದ್ದೆ. ಈಗಲೂ ತಂಗಿಯ ಭವಿಷ್ಯ ರೂಪಿಸಲು ದುಡಿಯುತ್ತಿದ್ದೇನೆ. ಅಮ್ಮನ ಮಾತುಗಳು ಎದೆಯೊಳಗೆ ಅಚ್ಚೊತ್ತಿವೆ.  “ಅಳಬೇಡ ಕಣೋ ಇದೆಲ್ಲ ಬಿಟ್ಟು ಮನೆ ಮಗನ ಹಾಗೆ ಇದ್ದು ಬಿಡೋ. ಹೀಗೆಲ್ಲ ಮಾಡಬೇಡ. ಎಲ್ಲೂ ಹೋಗಬೇಡ. ನಿನಗೆ ಏನು ಬೇಕು ಹೇಳು ನಾನೇ ತಂದು ಕೊಡ್ತೀನಿ. ಈ ಮನೆ ಬಿಟ್ಟು ಎಲ್ಲೂ ಹೋಗಬೇಡ. ನಿನ್ನನ್ನು ಸಾಯೋ ತನಕ ಚೆನ್ನಾಗಿ ನೋಡ್ಕೋತೀನಿ. ಮನೆ ಬಿಟ್ಟು ಹೋಗ್ಬೇಡ. ನಿನಗೆ ಹೇಗೆ ಬೇಕೋ ಹಾಗಿರು. ನಿನ್ನ ಹೆಣ್ಣು ಮಗಳಾಗೆ ಸಾಕ್ತಿನಿ. ನೀ ಏನೂ ಯೋಚಿಸಬೇಡ. ಇಲ್ಲೇ ಇದ್ದುಬಿಡು” -ಈ ಮಾತುಗಳನ್ನ ತಾಯಿ ಹೊರತು ಮತ್ಯಾರು ಹೇಳಲು ಸಾಧ್ಯ ? ಈ ಜಗತ್ತಿನಲ್ಲಿ ಎಲ್ಲಾ ಅಪಸವ್ಯಗಳೊಂದಿಗೆ ನಮ್ಮನ್ನು ಒಪ್ಪಿಕೊಳ್ಳುವ ಏಕೈಕ ವ್ಯಕ್ತಿ ಅಮ್ಮ.
ನಿರೂಪಣೆ : ರಮ್ಯವರ್ಷಿಣಿ ಎ ಎಸ್

Leave a Reply

Your email address will not be published.