ಅಮ್ಮನ ನೆನಪು-8 : ‘ಅವ್ವ’ ಅನ್ನೋ ರಾಕ್ಷಸಿ !

ವಿಲಾಸಬಾಯಿ ರಾಯಣ್ಣವರ

AMMANAಒಂದಾನೊಂದು ಸಮಯದಲ್ಲಿ ದೇವದಾಸಿಯಾಗಿದ್ದ, ಈಗ ಪಾರಿಜಾತ ಕಲಾವಿದೆಯಾಗಿ ಬದುಕು ನಿರ್ವಹಿಸುತ್ತಿರುವ ವಿಲಾಸಬಾಯಿ ರಾಯಣ್ಣವರ ಅವರು ತೇರದಾಳ ಮತ ಕ್ಷೇತ್ರದವರು. ಅದೇನು ಮೂಢನಂಬಿಕೆಯೊ ಅಥವಾ ಆ ಸಂದರ್ಭದಲ್ಲಿ ಆಕೆಯ ಕುಟುಂಬಕ್ಕೆ ಬಂದೊದಗಿದ ಕಿತ್ತು ತಿನ್ನುವ ಬಡತನದ ಕಾರಣವೊ ಏನೋ ಎಂಬಂತೆ ವಿಲಾಸಬಾಯಿಯವರ ಇಚ್ಛೆಗೆ ವಿರುದ್ಧವಾಗಿ, ತಮ್ಮ ತಾಯಿಯ ಒತ್ತಾಸೆಯಿಂದಾಗಿ ಮುತ್ತು ಕಟ್ಟಿಸಿಕೊಂಡು ‘ದೇವದಾಸಿ ಪದ್ಧತಿ’ ಎಂಬ ಕೂಪದಲ್ಲಿ ಬಿದ್ದವರು. ಹೀಗೆ, ಆಕೆಯನ್ನು ಇಂಥ ಕರಾಳ ದಂಧೆಗೆ ತಳ್ಳಿ ಆ ದಂಧೆಯಿಂದ ಬರುತ್ತಿದ್ದ ಹಣದಲ್ಲಿ ಇಡೀ ಕುಟುಂಬವೇ ಹೊಟ್ಟೆ ಹೊರೆದುಕೊಂಡಿದ್ದೂ ಇದೆ. ಸಧ್ಯ, ವಿಲಾಸಬಾಯಿಯವರ ಮನಸ್ಸಿನಲ್ಲಿ ತಮ್ಮ ತಾಯಿಯ ಕುರಿತಾದ ಒಳ್ಳೆಯ ಭಾವನೆಗಳೇ ಬತ್ತಿಹೋಗಿ, ಅಲ್ಲಿ ಬರೀ ನಿರ್ಲಿಪ್ತತೆಯೇ ತುಂಬಿಕೊಂಡಿದೆ. ಅದಕ್ಕೇ, ವಿಲಾಸಬಾಯಿಯವರು, ತಮ್ಮ ತಾಯಿಯ ಬಗ್ಗೆ ಹೀಗೆ ಹೇಳುತ್ತಾರೆ…

ನಾ, ಸಣ್ಣಾಕಿದ್ದಾಗಿಂದ ನೋಡ್ಕೊಂತ ಬಂದೀನಿ… ನಮ್ಮವ್ವ, ಎಂದೂ ನನ್ನ… ಮಗಳಂಗ ಕಂಡಿಲ್ಲ; ಶತ್ರುವಿನಂಗ ಕಂಡಾಳು! ಅಕಿದೇನಿದ್ರೂ ನನ್ಗಿಂತ ಸಣ್ಣಾಕಿದ್ಳಲ್ಲ… ನನ್ನ ತಂಗಿ, ಅಕಿ ಮ್ಯಾಲನ„ ಹೆಚ್ಚು ಪ್ರೀತಿ ಇತ್ತು. ನನ್ಗ ಇಬ್ರು ಅಣ್ಣ-ತಮ್ಮಂದಿರೂ ಇದ್ರು! ಇಗ್ಲೂ ಇದ್ದಾರ, ಖರೇ… ಏನ್ಮಾಡುದು!? ಆಗ, ಅವ್ರೂ ನನ್ನ ಕಂಡ್ರ ಸೇರ್ತಿರ್ಲಿಲ್ಲ. ಇಡೀ ಮನೆವ್ರೆಲ್ಲ ಒಂದು ನಾಯಿಯಂಗ ಕಾಣ್ತಿದ್ರು, ನನ್ನ! ಇದು ಸುಳ್ಳಲ್ಲ.

ನಿಮಗೊಂದು ಮಾತು ಹೇಳ್ತೀನಿ, ಕೇಳ್ರಿ… ನಮ್ಮವ್ವಗೊಬ್ಬ ತಮ್ಮ ಇದ್ದ. ಅವುನು, ತನ್ನ ಹೆಣ್ತಿ-ಮಕ್ಕಳನ್ನು ಕರ್ಕೊಂಡು ದೂರದ ದಾಂಡೇಲಿಯೊಳ್ಗ ಇದ್ದ. ಅದೇನೊ ಅಲ್ಲಿ ನೌಕ್ರಿ ಮಾಡ್ತಿದ್ದಂತ. ಆಗ, ನಾನಿನ್ನೂ ಏಳೆಂಟು ವರ್ಸದಾಕಿದ್ದೆ. ಆಗಿನ್ನೂ ನನ್ಗ ಲೌಕಿಕ ಪ್ರಪಂಚದ ಅರಿವು ಆಗಿರ್ಲಿಲ್ಲ. ಅಂಥಾ ಸಣ್ಣ ವಯಸ್ಸಿನ್ಯಾಗ ನಮ್ಮವ್ವ ಇದ್ದಾಕಿ, ತನ್ನ ತಮ್ಮನ… ಅಂದ್ರ ನನ್ನ ಸೋದರ ಮಾವನ ಸಣ್ಣ… ಸಣ್ಣ… ಮಕ್ಕಳನ್ನ ಎತ್ತಿಕೊಳ್ಳಾಕಂತ ದಾಂಡೇಲಿಗಿ ಕಳ್ಸಿ ಕೊಟ್ಳು! ಆಗ, ನನ್ಗ ಹೋಗೋ ಮನ್ಸಿರ್ಲಿಲ್ಲ; ಸಾಲಿ ಕಲಿಯೊ ಮನ್ಸಿತ್ತು! ಅದಕ್ಕ„, ನಾ, ದಾಂಡೇಲಿಗಿ ಹೋಗಂಗಿಲ್ಲ! ಇಲ್ಲೇ, ತೇರದಾಳದಾಗಿದ್ಕೊಂಡು ಸಾಲಿ ಕಲೀತಿನೆಂತ ಹಟ ಹಿಡ್ದು ಅಳ್ಕೊಂತ ಕುಂತಿದ್ದೆ. ಆದ್ರ, ನಮ್ಮವ್ವ ಕೇಳ್ಬೇಕಲ್ಲ…!? ನನ್ನ ರಾತ್ರಿಯಿಡೀ ದನಕ್ಕೆ ಬಡದಂಗ ಬಡ್ದು… ಮಾರನೆ ದಿನ, ಹೊತ್ತು ಹೊಂಟುತ್ಲೆ ದಾಂಡೇಲಿಗೆ ಕಳ್ಸಿಕೊಟ್ಟಿದ್ಳು. ಅಲ್ಲಿ, ನಾಕೈದು ವರ್ಸು ನನ್ನ ಸೋದರ ಮಾವನ ಮನ್ಯಾಗ… ಅವ್ರು ಹೇಳಿದ ಕೆಲ್ಸ ಮಾಡ್ಕೊಂಡಿದ್ದೆ.

ಹಿಂಗ„ ದಿನಗಳು ಕಳೀಲಿಕ್ಕತ್ತಿದ್ವು. ಅಟ್ರಾಗ, ಐದಾರು ವರ್ಸನ„ ಆಗಿತ್ತು! ಇದರ ನಡುಕ, ಒಮ್ಮಿಂದೊಮ್ಮೆಗೇನೆ ಅದೇನಾಯ್ತೋ ಏನೋ… ಅದೊಂದು ದಿನ, ನನ್ನ ಸೋದರ ಮಾವ… ನನ್ನ ಅಲ್ಲೇ ಬಿಟ್ಟು; ತನ್ನ ಹೆಣ್ತಿ-ಮಕ್ಕಳನ್ನು ಕರ್ಕೊಂಡು ಹೇಳ್ದ„… ಕೇಳ್ದ„… ದಾಂಡೇಲಿ ಬಿಟ್ಟು ಬಂದ್ಬಿಟ್ಟ! ಆಗ, ನಾ, ಒಬ್ಬಾಕಿ; ಹತ್ತು-ಹನ್ನೆರ್ಡು ವರ್ಸದ ಹುಡುಗಿ! ಅರೀದ ಊರಾಗ ಏನ್ಮಾಡ್ಬೇಕು ಅನ್ನೂದನ„ ತಿಳೀದಂಗಾಗಿ ಅಳ್ಕೊಂತ ಕುಂತೆ. ನನ್ನ ಸಂಕ್ಟ ನೋಡಲಾಗದ ಕೇರ್ಯಾಗಿನ ಮಂದಿ ಸೇರ್ಕೊಂಡು ಕೈಯಾಗೊಂದಿಷ್ಟು ರೊಕ್ಕ ಕೊಟ್ಟು… ನಮ್ಮೂರು ಬಸ್ಸು ಹತ್ತಿಸಿ ಕಳಿಸಿದ್ರು. ಅಂದು, ಆ ಪುಣ್ಯಾತ್ಮರಿಂದಾಗಿ ಮತ್ತ„ ತೇರದಾಳಕ್ಕ ಬಂದೆ! ಆದ್ರ, ನಾ, ತಿರುಗಿ ಮನಿಗಿ ಬಂದದ್ದು ನಮ್ಮವ್ವನ ಕಣ್ಣಿಗಿ ಒತ್ಲಿಕತ್ತು. ಅದಕ್ಕ„, ಅಕಿ, ನನ್ನ ಕಂಡ್ರ ಸಾಕು… ಹೇಲು ಕಂಡು ಹೇಸಗಂಡವ್ರಂಗ ಮಾಡ್ಲಿಕ್ಕತ್ತಿದ್ಳು. ಆ ರೀತಿ, ನನ್ಮ್ಯಾಲೆ ಒಂದ„ ಸವುನೆ ದ್ವೇಷ ಸಾಧಿಸಿದ್ಳು. ಹಿಂಗ್, ನನ್ನ ಕೂಡ ದ್ವೇಷ ಸಾಧಿಸ್ತನ„ ನನ್ನ ತಂಗಿನ ಮಾತ್ರ ಕಣ್ಣಾಗ ಹಾಕ್ಕೊಂಡಂಗ ಮಾಡ್ತಿದ್ಳು.

ಇದನ್ನೆಲ್ಲ ಕಂಡು, ‘ಅದೇನು ಪಾಪ ಮಾಡ್ಬಂದು… ಇವುಳ ಹೊಟ್ಟ್ಯಾಗ ಹುಟ್ಟಿದೆನೊ, ಶಿವುನೆ…’ ಅಂತಂದ್ಕೊಂಡು ಒಬ್ಳ„ ಕುಂತು ಅಳ್ತಿದ್ದೆ. ಅಂಥ ಕ್ವಾಣದ ಕಳ್ಳಿತ್ತು, ನಮ್ಮವ್ವುಂದು!…
….ನೀವು, ಖರೇ ಹೇಳಿದ್ರೂ ಕೇಳ್ತೀರಿ; ಸುಳ್ಳು ಹೇಳಿದ್ರೂ ಕೇಳ್ತೀರಿ… ನಾ, ಮೈ ನೆರದು ನಿಂತ ಹೊತ್ತಿನ್ಯಾಗ, ನಮ್ಮವ್ವ… ನನ್ನ ತಲಿ ಮ್ಯಾಲೆ ಒಂದು ಚರಿಗಿ ನೀರು ಹಾಕ್ಲಿಲ್ಲ! ಅದಿರ್ಲಿ ಬಿಡು, ಶಾಸ್ತ್ರಕ್ಕಂತ ಐದು ದಿನ ಮಂಚದ್ಮ್ಯಾಲೆ ಕುಂಡ್ರಿಸಿ, ನೆರೆಹೊರೆ ಹೆಣ್ಮಕ್ಳಿಂದ ಹಾಡು ಹೇಳ್ಸಲಿಲ್ಲ; ಸೀ ತಿಂಡಿ ತಿನ್ನಿಸ್ಲಿಲ್ಲ! ಆಗ, ನಾನ„ ಹಳ್ಳದಾಗ ಹೋಗಿ ಜಳಕ ಮಾಡಿ… ಹಳೇ ಸೀರಿ ಮೈಗೆ ಸುತ್ತಕೊಂಡು ಮನೆ ಕಡಿಗಿ ಬಂದಿದ್ದೆ! ಆದ್ರ, ಎಂಥದ್ದು ನೋಡು… ನಾ, ಮೈನೆರೆದು ನಿಂತದ್ದು ಮಾತ್ರ ನಮ್ಮವ್ವುನಿಗಿ ಹಂಡೆ ಹಾಲು ಕುಡ್ದಂಗಾಗಿತ್ತು! ಯಾಕಂದ್ರ, ಅಕಿ ವಿಚಾರನ„ ಬ್ಯಾರೆ ಇತ್ತು. ಆ ವಿಚಾರ್ದಾಗ ಮುಂಬೈದಾಗಿರೊ ನಮ್ಮ ಕಾಕಾ ಮತ್ತು ಚಿಗವ್ವ… ಇಬ್ರೂ ಸೇರ್ಕೊಂಡು ನಮ್ಮವ್ವುನ ತಲಿ ತುಂಬಿದ್ರು. ಹಿಂಗಾಗಿ, ಅವುರ ಜತಿಗಿ ನಮ್ಮಪ್ಪನೂ ಕೈ ಜೋಡಿಸ್ಬಿಟ್ಟ! ಆ ವಿಚಾರ ಏನಂದ್ರ, ನನ್ಗ ಮುತ್ತು ಕಟ್ಟಿಸಿ… ದೇವದಾಸಿನ ಮಾಡ್ಬೇಕು ಅನ್ನೂದು! ಯಾಕಂದ್ರ, ನನ್ನವ್ವುಗ ರೊಕ್ಕ ಬೇಕಾಗಿದ್ವು. ಅದಕ್ಕ„, ಈ ಮಸಲತ್ತು ಮಾಡಿದ್ರು.

ಹಂಗ್ ನೋಡಿದ್ರ, ನನ್ಗ ದೇವದಾಸಿ ಆಗೂದು ಮನ್ಸಿರ್ಲಿಲ್ಲ! ಆದ್ರ, ಬಾಯ್ಬಿಟ್ಟು ಹೇಳ್ಲಿಕ್ಕೆನೂ ನನ್ನ ಹತ್ರ ಧೈರ್ಯೆ ಇರ್ಲಿಲ್ಲ! ಅದಕ್ಕ„, ನಾ, ಮನೆ ಬಿಟ್ಟು ಎಲ್ಲೆರೆ ಓಡಿ ಹೋಗಲೆನು…!?- ಅಂತಂದ್ಕಂಡು ಕಣ್ಣೀರಕೋಡಿ ಹರಿಸ್ತ… ರಾತ್ರಿ ನಿದ್ದೆಗೆಟ್ಟು ಚಿಂತೆ ಮಾಡ್ಲಿಕತ್ತಿದೆ. ಆ ಚಿಂತೆಯೊಳ್ಗ ನನ್ನ ಕಣ್ಣೀರ್ನಿಂದ ತಲೆದಿಂಬು ತೊಯ್ತು ಹೊರತಾಗಿ ದಾರಿ ಅಂತೂ ಕಾಣ್ಲಿಲ್ಲ. ಯಾವಾಗ ದಾರಿ ಕಾಣ್ಲಿಲ್ಲೊ… ನಾ, ಇನ್ನು ಬ್ಯಾಡಂತ್ಹೇಳಿ ಕೈ ಚೆಲ್ದೆ! ಯಾಕಂದ್ರ, ನಾ ಆ ಹೊತ್ತಿನ್ಯಾಗ ಕಟುಕರ ಕೈಯಾಗ ಸಿಕ್ಕ ಕುರಿಯಂಗಾಗಿದ್ದೆ. ಮತ್ತ„, ಅವ್ವ ಹೇಳ್ದಂಗ ದೇವದಾಸಿ ಆಗ್ಬೇಕಂದ್ಕೊಂಡೆ!
ನಾ, ದೇವದಾಸಿ ಆಗ್ಲಿಕ್ಕೆ ತಯಾರಿದ್ದೀನಿ ಅನ್ನೋ ಸುದ್ದಿ ಕೇಳಿನ„ ನಮ್ಮವ್ವಗ ಮಣಭಾರದಷ್ಟು ಖುಷಿ ಆತು! ಆ ಖುಷಿಯೊಳಗನ„ ಇನ್ನು ತಡ ಮಾಡೂದು ಬ್ಯಾಡಂತ್ಹೇಳಿ… ಒಂದಿನ, ನನ್ನ ಎಲ್ಲಮ್ಮನ ಗುಡ್ಡಕ್ಕ ಕರ್ಕೊಂಡ್ಹೋದ್ರು. ಅಲ್ಲಿ, ಜೋಗುಳ ಬಾವಿ ಮ್ಯಾಲೆ, ವಯಸ್ಸಾದ ಒಬ್ಳು ಹಿರೇ ದೇವದಾಸಿ (ಅಕಿನ್ನ ಪೂಜೇರಿ ಅಂತ ಕರೀತಾರು!) ಸಮ್ಮುಖದಾಗ… ಕರಿಗಂಬಳಿ ಹಾಸಿ, ಅದರ್ಮ್ಯಾಲೆ ಚೌರಸಕಾರ್ದಾಗ ಶಾಸಕ್ಕಿ ಹಾಕಿ… ಅದರ್ಮ್ಯಾಲೆ, ನನ್ಗ ಹೊಸ ಸೀರೆ ಉಡಿಸಿ ಕುಂಡ್ರಿಸಿದ್ರು. ಆಗ, ನನ್ಮುಂದ, ಒಂದು ನೀರು ತುಂಬಿದ ಚರಿಗೆ ಮ್ಯಾಲೆ ತೆಂಗಿನಕಾಯಿ ಇಟ್ಟು, ಅದಕ್ಕ ಭಂಡಾರ ಹಚ್ಚಿ ಇಟ್ರು. ಈ ನಡುಕ, ಆ ಹಿರೇ ದೇವದಾಸಿ, ನಾವೇನು ಪೂಜೇರಿ ಅಂತೀವಲ್ಲ… ಅಕಿ, ಏನೇನೊ ತುಟಿಯೊಳ್ಗ ಮಂತ್ರ ಅಂದ್ಳು. ಆಮ್ಯಾಲೆ, ನನ್ನ ಕೊಳ್ಳಾಗ ಮುತ್ತು ಕಟ್ಟಿ, ಉಡಿ ತುಂಬಿದ್ಳು. ಆಗ್ಲೇ, ‘ಎಲ್ಲವ್ವ, ನಿನ್ನ ಆಲಕ ಉಧೋ… ಉಧೋ…’ ಅಂತ ಒಂದೆರ್ಡು ಸಲ ಅಂದ್ಳು. ಹಂಗ„, ನನ್ನತ್ತ ತಿರುಗಿ, ‘ಲೇ, ಹುಡುಗಿ… ಇಂದಿನಿಂದ ನೀ ದೇವದಾಸಿ ಆಗ್ಬಿಟ್ಟೆ! ಈಗ, ನೀನು ಗುಡ್ಡದ ಎಲ್ಲವ್ವನ ಸೇವಾ ಮಾಡೋ ಭಕ್ತೆ. ಇನ್ಮ್ಯಾಲೆ, ನೀ ಮದಿವಿ ಆಗಂಗಿಲ್ಲ! ದೇವಿ ಸೇವಾ ಮಾಡ್ಕೊಂತನ„ ಯಾವುದೇ ಗಂಡ್ಸಿಗಾದ್ರೂ ಸೆರಗು ಹಾಸಿ ಹೊಟ್ಟೆ ತುಂಬ್ಕೋ ಬೇಕು! ತಿಳಿತೆನು…!?’ ಅಂತಂದ್ಳು.

ಆ ಹೊತ್ತಿನ್ಯಾಗ, ಆ ಮಾತು ಕೇಳಿ… ನನ್ಗಂತೂ ಕುಂತ ನೆಲನ„ ಕುಸಿದಂಗಾತು. ಆದ್ರ, ಏನೂ ಮಾಡ್ಲಿಕ್ಕೆ ಬರದಂಗಿತ್ತು. ದೇವದಾಸಿ ಅನ್ನೋ ಪಟ್ಟ… ನನ್ನ ಕೈಕಟ್ಟಿ ಹಾಕ್ಬಿಟ್ಟಿತ್ತು! ಇನ್ನು, ನಾ, ದೇವದಾಸಿ ಆದ ಬಳಿಕ, ನಮ್ಮವ್ವ… ನನ್ಮ್ಯಾಲೆ ಎಂದಿಲ್ಲದ ಪ್ರೀತಿ ತೋರಿಸ್ಲಿಕತ್ತಿದ್ಳು! ಅದ ಕಂಡು, ನನ್ಗ ವಿಚಿತ್ರ ಆತು. ಆದ್ರ, ಮುಂದ್ಮುಂದ ಎಲ್ಲನೂ ಗೊತ್ತಾತು. ಈ ನಡಕ ನಾ, ಕಂಡ ಕಂಡ ಗಂಡಸ್ರಿಗೆ ಸೆರಗು ಹಾಸ್ತಿದ್ದೆ. ಅದ್ರಿಂದ ಕೈತುಂಬ ರೊಕ್ಕ ಬರ್ತಿತ್ತು. ಆ ರೊಕ್ಕದ್ಮ್ಯಾಲೆ ನಮ್ಮವ್ವ ಕಣ್ಣು ಹಾಕಿದ್ಳು. ನಾ, ಮೈ ಮಾರಿ ಗಳಿಸ್ತಿದ್ದೆ… ನಮ್ಮವ್ವ, ಅದನ್ನೆಲ್ಲ ತಗೊಂಡ್ಹೋಗಿ ಬಂಧು-ಬಳಗ ಅಂತ್ಹೇಳಿ ಕಂಡವರ್ಗೆಲ್ಲ ಬೀರ್ಲಿಕ್ಕತ್ತಿದ್ಳು! ಆಗೆಲ್ಲ, ನಮ್ಮವ್ವ, ಈ ರೀತಿ ಮಾಡೂದ ನೋಡಿ… ನನ್ನ ಹೊಟ್ಟ್ಯಾಗ ಬೆಂಕಿ ಬೀಳ್ತಿತ್ತು, ಖರೇ… ಏನು ಮಾಡ್ಲಿ!? ಹಂಗ„ ತಡ್ಕೊಂಡೆ! ಮುಂದ…

ಮುಂದ… ನಮ್ಮವ್ವುನ ಹಯಾತ್ ನಿಂತ್ಮ್ಯಾಲೆ, ನಾ, ಸೆರಗು ಹಾಸಿ ಗಳಿಸಿದ ರೊಕ್ಕದಾಗನ„ ಅಣ್ಣನ ಮದವಿ ಮಾಡ್ದೆ! ತಂಗಿ ಮದಿವಿನೂ ಮಾಡ್ದೆ, ಬಿಡು… ಆ ಮಾತು ಬ್ಯಾರೆ!….
….ಇದರ ನಡುಕ, ಅದೊಮ್ಮೆ ನನ್ಗ ಅಲ್ಲಯ್ಯಸ್ವಾಮಿ ಭಂಡಾರಿ ಅನ್ನೋ ಕಲಾವಿದರ ಪರಿಚಯ ಆಯ್ತು. ಆಗ್ಲೇ, ನನ್ಗ ಒಂಚೂರು ಹಾಡ್ಲಿಕೆ…; ಕುಣೀಲಿಕ್ಕೆ… ಬರ್ತಿತ್ತು. ಇದನ್ನೆಲ್ಲ ಕಂಡು, ಆ ಮಹಾನುಭಾವ… ಅಲ್ಲಯ್ಯಸ್ವಾಮಿ, ನನ್ಗ ‘ಮದು ಮಗಳು’ ಅನ್ನೋ ನಾಟಕದಾಗ ಒಂದು ಪಾತ್ರ ಕೊಟ್ಟ. ಆ ಪಾತ್ರನ ಜೀವ ತುಂಬಿ ನಟಿಸ್ದೆ. ಆಗ, ನನ್ನ ಪಾತ್ರ ನೋಡಿದವ್ರು ಚಪ್ಪಾಳೆ ತಟ್ಟಿ… ನನ್ಗ ಆಯೇರಿ ಹಾಕಿ ಖುಷಿ ಪಟ್ರು! ಈ ಭಾಗದಾಗೆಲ್ಲ ಛಲೋ ಪಾತ್ರ ಮಾಡ್ತೀನಂತ್ಹೇಳಿ ನನ್ನ ಹೆಸರಾತು. ಹಂಗ„ ಸನ್ಮಾನ-ಪ್ರಶಸ್ತಿ ಅಂತೆಲ್ಲ ಆದ್ವು. ಇದೇ ಸಾಕಿತ್ತು… ಹಂಗ„ ಅವಕಾಶಗಳು ಒಂದರ್ಮ್ಯಾಲೊಂದರಂಗ ಹುಡಿಕ್ಕೊಂಡು ಬರ್ಲಿಕತ್ತಿದ್ವು. ಆಗ, ಅವಕಾಶಗಳು ಬಂದಂಗ ಪಾತ್ರ ಮಾಡ್ತ ಹೋದೆ.

ಮುಂದ… ಮುಂದ… ಪಾರಿಜಾತದಾಗ ಪಾತ್ರ ಮಾಡ್ಲಿಕ್ಕತ್ತಿದೆ. ಅದೇ ನನ್ಗ ಖಾಯಂ ಆತು! ಹೆಚ್ಚೂ ಕಮ್ಮೀ ನಲವತ್ತೈದು ವರ್ಸ ತಂಕ ಪಾರಿಜಾತದಾಗ ಪಾತ್ರ ಮಾಡ್ಕೊಂತ ಬಂದೆ. ಈ ರೀತಿ ಕಲಾ ಸೇವೆ ಮಾಡ್ಕೋತನ„ ನಾ, ದೇವದಾಸಿ ಅನ್ನೋದನ„ ಮರ್ತೆ! ಪಾರಿಜಾತದ ಗುಂಗಿನ್ಯಾಗನ„ ಮೈಮಾರ್ಕೊ ದಂಧೆನೂ ಬಿಟ್ಬಿಟ್ಟೆ! ಇತ್ತ, ಪಾರಿಜಾತದಿಂದ ನನ್ಗ ಹೆಸ್ರು… ಹಣ… ಎಲ್ಲನೂ ಬಂತು. ಆದ್ರ, ಈಗ ಹೆಸ್ರು ಅಟ್ಟ„ ಉಳಿದೈತಿ. ಹಣದ ವಿಚಾರ ಮಾತ್ರ ಗಾಳಿಗಿ ತೂರಿದ ಪತ್ರಾವಳಿಯಂಗಾಗೆದ….

....ಈಗ, ನನ್ಗ ಅರವತ್ತೈದು ವರ್ಸು ವಯಸ್ಸು. ಈಗ್ಲೂ ಪಾರಿಜಾತದಾಗ ನಟಿಸ್ತೀನಿ. ಆದ್ರ, ದೇವದಾಸಿ ಅನ್ನೋ ಹಣೆಪಟ್ಟಿ ಮಾತ್ರ ಹಂಗ„ ಉಳಿದೈತಿ! ಆ ನೋವು ನನ್ನ ಎದಿಯೊಳ್ಗ ಆರದ ಗಾಯದಂಗ ಉಳ್ಕೊಂಡೈತಿ. ಆ ಗಾಯ ಮರೀಲಿಕ್ಕೆಂತನ„ ಇನ್ನೂ ಪಾರಿಜಾತದಾಗ ಪಾತ್ರ ಮಾಡ್ತೀನಿ. ಅದ್ರಾಗ ಸುಖ ಕಾಣ್ಲಿಕತ್ತೀನಿ. ಈಗ, ನನ್ನ ಕೂಡ ನಮ್ಮವ್ವುನ ಒಬ್ಬಾಕಿನ ಬಿಟ್ರ… ಯಾರಂದ್ರೂ ಯಾರು ಇಲ್ಲ! ನನ್ನಪ್ಪ ಎಂದೋ ಸತ್ತೋದ. ಇನ್ನು ಉಳಿದವ್ರು, ತಮ್ಮಷ್ಟಕ್ಕ ತಾವ„ ದೂರ ಆಗ್ಯಾರು.  ಈಗ, ನಮ್ಮವ್ವುನಿಗಿ ತೊಂಭತ್ತು ವರ್ಸ ವಯಸ್ಸು. ಅಕಿನ್ನ ಜೋಪಾನ ಮಾಡೋ ಜವಾಬ್ದಾರಿ ನನ್ನ ಕೊಳ್ಳಿಗೆನ„ ಬಿದ್ದೈತಿ. ಏನು ಮಾಡ್ಲಿ! ಕಳ್ಳು ಕೇಳಂಗಿಲ್ಲ… ನೋಡ್ಲಿಕ್ಕೆನ„ ಬೇಕಾಗೆದ. ನೆಲ ಹಿಡ್ದಿರೊ ನಮ್ಮವ್ವುನ ಮಾರಿ ನೋಡಿದಾಗಲೆಲ್ಲ ನನ್ಗ ಭಾಳ ಕೆಟ್ಟ ಅನ್ನಿಸ್ತೈತಿ. ಆಗೆಲ್ಲ, ಇತ್ತ ನನ್ನ ಬಾಳೇವುನೂ ಹಾಳು ಮಾಡಿದ್ಳು; ಅತ್ತ, ಎಲ್ರನೂ ನಂಬಿ ತಾನೂ ಹಾಳಾದ್ಳು… ಅಂತನ್ನಿಸಿದ್ದೇ ತಡ… ಒಬ್ಬಾಕಿನ ಕುಂತು, ಮನ್ಸು ಹಗೂರ ಆಗೂತಂಕ ಅಳ್ತೀನಿ.

ಈಗೀಗ, ಅಕಿ ದವಾಖಾನಿ ಖರ್ಚು ಹೆಚ್ಚಾಗೆದ. ನನ್ಗ, ಕಲಾವಿದೆ ಅಂತ್ಹೇಳಿ ಸರಕಾರದಿಂದ ಒಂದಿಷ್ಟು ಮಾಶಾಸನ ಬರ್ತೈತಿ. ಆ ಮಾಶಾಸನ ರೊಕ್ಕದಾಗ ನಮ್ಮವ್ವುನ ದವಾಖಾನಿಗಿ ತೋರಿಸ್ತೀನಿ! ಇನ್ನು, ನನ್ನ ಪರಿಸ್ಥಿತಿನೊ… ಆ ಭಗವಂತನಿಗೇನೆ ಗೊತ್ತು. ಅದೇನೋ… ರಾಜ್ಯ ಪ್ರಶಸ್ತಿ ಕೊಡ್ತಾರಂತಲ್ಲ… ಅದರ ಕೂಡ ಒಂದು ಲಕ್ಷ ರೂಪಾಯಿನೂ ಕೊಡ್ತಾರಂತ! ಆ ಪ್ರಶಸ್ತಿ ಬಂದ್ರ… ನಾ, ಹೆಂಗೋ ಬದುಕೋಬೋದು! ಹಂಗ„, ನಮ್ಮವ್ವ ಅನ್ನೋ ನನ್ನ ಪಾಲಿನ ರಾಕ್ಷಸಿನೂ ಸಾಕಬೋದು!

ನಿರೂಪಣೆ: ಕಲ್ಲೇಶ್ ಕುಂಬಾರ್, ಹಾರೂಗೇರಿ

Leave a Reply

Your email address will not be published.