ಅಮ್ಮನ ನೆನಪು-7 : ಅಮ್ಮನ ಮಾರ್ಗದಲ್ಲಿ ಅಚ್ಚುಮೆಚ್ಚಿನ ಸೊಸೆ

-ಗಾಯಿತ್ರಿ ಶಂಕರರಾವ್

AMMANAಹೆಸರಾಂತ ಕವಿ ತೀ.ನಂ.ಶ್ರೀ. ಅವರ ಅಣ್ಣ ತೀ.ನಂಜುಂಡಯ್ಯನವರ ಏಕೈಕ ಪುತ್ರಿ ತೀ.ನಂ.ನಂಜಮ್ಮ. ಇವರೇ ನನ್ನ ಮಾತೃಶ್ರೀ. ಒಂಬತ್ತು ಮಕ್ಕಳನ್ನು ಹಡೆದು ಸಾಕಿ ಸಲುಹಿದರು ನನ್ನ ಅಮ್ಮ. ನಾವು ಚಿಕ್ಕವರಿದ್ದಾಗ ನನ್ನ ತಂದೆಯವರು ಮಂಡ್ಯದಲ್ಲಿ ಹೈಸ್ಕೂಲ್ ಹೆಡ್‍ಮಾಸ್ಟರ್ ಆಗಿದ್ದರು. ನಾನು ಶಿಶುವಿಹಾರಕ್ಕೆ ಹೋಗಲು ಬಹಳ ಹಠ ಮಾಡುತ್ತಿದ್ದೆ. ಆಗ ಅಮ್ಮ ನನ್ನನ್ನು ಸಮಾಧಾನಿಸಿ, ಬಿಸ್ಕೆಟ್, ಚಾಕಲೇಟ್ ಕೊಟ್ಟು ಸ್ಕೂಲಿಗೆ ಹೋಗಲು ಹುರಿದುಂಬಿಸುತ್ತಿದ್ದರು. ನನಗೆ ಆ ವಯಸ್ಸಿನಲ್ಲಿ ಬಹಳ ಕೋಪ, ಹಠವಿತ್ತು. ಆದರೂ ಅಮ್ಮ ಅದನ್ನು ಸಹಿಸಿಕೊಂಡು, ಒಂದು ಏಟು ಕೊಡದೇ ಬೈಯದೇ ಸಮಾಧಾನದಿಂದ ಸಂತೈಸುತ್ತಿದ್ದರು. ತುಂಬಿದ ಕುಟುಂಬದಲ್ಲಿದ್ದ ನಾವು ಒಂದು ಚಿಕ್ಕ ಗೂಡಿನಲ್ಲಿ ಬೆಳೆದೆವು. ಆಗ ನಮಗೆ ಮಲಗಲು ಮಂಚವಾಗಲಿ, ನಡೆಯಲು ಚಪ್ಪಲಿಯಾಗಲಿ ಅಥವಾ ದಿನ ಬಳಕೆಯ ಒಳ್ಳೆಯ ಬಟ್ಟೆಗಳಾಗಲೀ ಇರಲಿಲ್ಲ. ಆದರೆ ನಾವು ಅಮ್ಮನ ಪ್ರೀತಿ ವಾತ್ಸಲ್ಯ ಅನುಭವಿಸುತ್ತಾ ಅಷ್ಟರಲ್ಲೇ ತೃಪ್ತರಾಗಿದ್ದೆವು.

ನಂತರ ನನ್ನ ಅಪ್ಪನ ವರ್ಗಾವಣೆ ಪ್ರಯುಕ್ತ ಬೆಂಗಳೂರಿಗೆ ಬಂದೆವು. ಹಳ್ಳಿಯವರಾದರೂ ಪಟ್ಟಣಕ್ಕೆ ತಕ್ಕಂತೆ ಹೊಂದಿಕೊಂಡೆವು. “ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠಕಲಿತ ಜನರು ಧನ್ಯರು” ಎಂಬಂತೆ ಚಿಕ್ಕಂದಿನಿಂದಲೂ ನನ್ನ ಅಮ್ಮ ನಮಗೆ ನೀತಿಬೋಧೆಗಳನ್ನು ಕಲಿಸುತ್ತಾ ನಮ್ಮ ಬೇಕುಬೇಡಗಳನ್ನು ತಿಳಿದು, ಹೊತ್ತುಹೊತ್ತಿಗೆ ತಿಂಡಿ, ಊಟ ಎಲ್ಲವನ್ನು ನಿರಾಯಾಸವಾಗಿ ಒದಗಿಸುತ್ತಿದ್ದಳು. ಅಮ್ಮನಿಗೆ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ದರೂ, ನನ್ನ ತಂದೆಯ ಸಹಾಯದಿಂದ ಎಲ್ಲಾ ಮಕ್ಕಳಿಗೂ ಒಳ್ಳೆಯ ಉನ್ನತ ಶಿಕ್ಷಣ ಕೊಟ್ಟರು.

ಮಕ್ಕಳ ವಿದ್ಯಾಭ್ಯಾಸವೆಂದರೆ ಅಮ್ಮನಿಗೆ ಬಲು ಹೆಮ್ಮೆ. ಒಂದನೇ ತರಗತಿಯಿಂದಲೂ ಮಕ್ಕಳ ಪರೀಕ್ಷೆಯ ಫಲಿತಾಂಶ ಬಂದಾಗ ಮೈಸೂರುಪಾಕ್ ಮಾಡಿ ನೆರೆಹೊರೆಯವರಿಗೆ, ನೆಂಟರಿಗೆ ಹಂಚುತ್ತಿದ್ದರು. ನಾನು ಎಸ್.ಎಸ್.ಎಲ್.ಸಿ. ಯಲ್ಲಿ ಸ್ಕೂಲಿಗೆ ಮೊದಲನೆಯವಳಾದಾಗ ಹಾಗೂ ಬಿ.ಎಸ್ಸಿ. (ನ್ಯಾಷನಲ್ ಕಾಲೇಜ್) ನಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಎರಡನೇ ರ್ಯಾಂಕ್ ಗಳಿಸಿದಾಗ ನನ್ನ ಅಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಗಲೂ ಮೈಸೂರುಪಾಕ್ ಮಾಡಿ ನನ್ನ ಸ್ಕೂಲು, ಕಾಲೇಜಿನಲ್ಲಿ ಎಲ್ಲರಿಗೂ ಹಂಚಲು ಕೊಟ್ಟರು. ಮಕ್ಕಳೆಂದರೆ ಅಮ್ಮನಿಗೆ ಅಷ್ಟೊಂದು ಪ್ರೀತಿ ವಾತ್ಸಲ್ಯ ಹಾಗೂ ಹೆಮ್ಮೆ ಇತ್ತು. ಮಕ್ಕಳು ದೊಡ್ಡ ಹುದ್ದೆಗಳನ್ನು ಸೇರಿ ಅಪ್ಪ ಅಮ್ಮನಿಗೆ ಗೌರವ ಮತ್ತು ತೃಪ್ತಿಗಳನ್ನು ತಂದಿದ್ದರು.

ನನ್ನ ತಂದೆ ಸಹಾಯಕ ಶಿಕ್ಷಣಾಧಿಕಾರಿಯಾಗಿದ್ದು, ಅವರು ಬೇರೆ ಹಳ್ಳಿಗಳ ಪ್ರವಾಸದಲ್ಲಿ ಇರಬೇಕಾದ ಸಂದರ್ಭದಲ್ಲಿ, ಸಂಸಾರದ ಜವಾಬ್ದಾರಿಯನ್ನು ಅಮ್ಮ ಒಬ್ಬರೇ ಹೊತ್ತು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ನನ್ನ ಅಮ್ಮ ಕಸೂತಿ ಹಾಗೂ ಕರಕುಶಲ ಕಲೆಗಳಲ್ಲಿ ಬಹಳ ನಿಪುಣರಾಗಿದ್ದರು. ಮಣಿಯಲ್ಲಿ ಗಿಡಗಳ ಹಾಗೆ ಪೆÇೀಣಿಸಿ, ಅದಕ್ಕೆ ಹಸಿರು ಬಟ್ಟೆಯ ಗಿಳಿಗಳನ್ನು ಜೋಡಿಸಿ ಬಾಟಲ್‍ಗಳಲ್ಲಿ ಹಾಕಿ ಅಂದವಾದ ಹೂಕುಂಡಗಳನ್ನು ತಯಾರಿಸುತ್ತಿದ್ದರು. ವೆಲ್‍ವೆಟ್ ಬಟ್ಟೆಗಳಿಂದ ಕಸೂತಿ ಕೆಲಸ, ನಿಟ್ಟಿಂಗ್, ಕ್ರೋಶ ಕೆಲಸಗಳನ್ನು ಮಾಡುತ್ತಿದ್ದರು. ಅಲ್ಲದೆ, ಶಾಸ್ತ್ರ, ಸಂಪ್ರದಾಯದ ಹಾಡುಗಳನ್ನು ಬಹಳ ಸುಶ್ರಾವ್ಯವಾಗಿ ಹಾಡುತ್ತಿದ್ದರು ಮತ್ತು ನಮಗೂ ಕಲಿಸಿದ್ದರು.

ಪ್ರತಿ ದಿನವೂ ಬೆಳಿಗ್ಗೆ ಪೂಜೆ ಪುನಸ್ಕಾರ ಸಾಂಗವಾಗಿ ಮಾಡಿ, ನೈವೇದ್ಯವನ್ನು ಮಾಡಿ, ನಂತರವೇ ಎಲ್ಲರಿಗೂ ಹಂಚುತ್ತಿದ್ದರು. ಪ್ರತಿ ಶುಕ್ರವಾರ ಲಕ್ಷ್ಮೀ ಪೂಜೆ, ಕುಂಕುಮಾರ್ಚನೆ ತಪ್ಪದೇ ಮಾಡುತ್ತಿದ್ದರು. ಜೊತೆಗೆ ಅಮ್ಮ ಬಲು ಶಿಸ್ತು ಮತ್ತು ಅಲಂಕಾರ ಪ್ರಿಯರು. ಹಬ್ಬ ಬಂತೆಂದರೆ ಎಲ್ಲಿಲ್ಲದ ಸಂಭ್ರಮ. ಅಪ್ಪನಿಂದ ಪೂಜೆಗೆ ಬೇಕಾದ ಸಾಮಾನುಗಳನ್ನು ತರಿಸಿ, ನನ್ನ ಚಿಕ್ಕಮ್ಮನವರೊಡನೆ ಸೇರಿ ಶಾಸ್ತ್ರೋಕ್ತವಾದ ಭಕ್ಷಗಳನ್ನು ಮಾಡಿ, ಅಂದವಾಗಿ ದೇವರ ಅಲಂಕಾರ ಮಾಡಿ ಎಲ್ಲರನ್ನೂ ಕರೆದು ಆಚರಿಸುತ್ತಿದ್ದರು. ಇಂತಹ ಶಾಸ್ತ್ರ, ಸಂಪ್ರದಾಯ ಹಾಗೂ ಒಳ್ಳೆಯ ಸಂಸ್ಕಾರಗಳನ್ನು ಕಲಿಸಿಕೊಟ್ಟ ನನ್ನ ಅಮ್ಮನ ಮಾರ್ಗದರ್ಶನದಿಂದ ನಾನೊಬ್ಬ ಅಚ್ಚುಮೆಚ್ಚಿನ ಸೊಸೆಯಾಗಿ ನನ್ನ ಸಂಸಾರವನ್ನು ನಿರ್ವಹಿಸಲು ಸಾಧ್ಯವಾಯಿತು.
ನನ್ನ ಅಮ್ಮನ ಊರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರ. ಅಲ್ಲಿ ಅವರ ಚಿಕ್ಕಪ್ಪನ ಮಕ್ಕಳು ಮತ್ತು ನಾವು ಇಪ್ಪತ್ತೈದು ಜನ ಒಟ್ಟಿಗೆ ಅಮ್ಮನ ತವರಿನ ಪ್ರೀತಿಯ ಸೆಳೆತದಿಂದ, ಬೇಸಿಗೆ ರಜೆಗಳಲ್ಲಿ ಎರಡು ತಿಂಗಳ ಕಾಲ ಆನಂದವಾಗಿ ಕಾಲ ಕಳೆಯುತ್ತಿದ್ದೆವು. ಅಲ್ಲಿ ಬೆಳಿಗ್ಗೆ ಎದ್ದು ನೀರೊಲೆಯಲ್ಲಿ ಕಾಸಿದ ಕಾಫಿ ಕುಡಿದು, ನೀರು ಸೇದಿ ಸೇದಿ ಹಂಡೆಗೆ ತುಂಬಿ, ತೆಂಗಿನ ಗರಿ, ಕರಟಗಳಲ್ಲಿ ಕಾದ ತಾಮ್ರದ ಹಂಡೆಯ ನೀರಿನಿಂದ ಸ್ನಾನ ಮಾಡಿ, ಎಲ್ಲರೂ ಒಟ್ಟಿಗೆ ದೇವರ ಶ್ಲೋಕಗಳನ್ನು ಹೇಳಿಕೊಂಡು ಎಲೆ ಹಾಕಿಕೊಂಡು ತಿಂಡಿಗೆ ಕೂರುತ್ತಿದ್ದೆವು. ಇದು ನಮ್ಮೆಲ್ಲರ ದಿನಚರಿಯಾಗಿತ್ತು.

ಮೊಸರು, ಬೆಣ್ಣೆಯನ್ನು ತಿಂಡಿಯ ಜೊತೆ ಸವಿಯುತ್ತಿದ್ದ ಪರಿ ಬಲು ರುಚಿ ಎನಿಸುತ್ತಿತ್ತು. ನಂತರ ಎಲ್ಲರೂ ಒಗೆಯುವ ಬಟ್ಟೆಗಳನ್ನು ಮೂಟೆ ಕಟ್ಟಿಕೊಂಡು ಹಸಿರು ಹೊಲಗಳ ನಡುವೆ ನಡೆದು, ಅಥವಾ ಕಾಲುದಾರಿಯಲ್ಲಿ, ಎತ್ತಿನ ಗಾಡಿಯಲ್ಲಿ ತೋಟವನ್ನು ಸೇರುತ್ತಿದ್ದೆವು. ಅಲ್ಲಿ ಜುಮ್ಮೆಂದು ಹರಿಯುತ್ತಿದ್ದ ಕಾಲುವೆಯಲ್ಲಿ ಬಟ್ಟೆಗಳನ್ನು ಒಗೆದು, ಅಲ್ಲಿ ಬೆಳೆದಿದ್ದ ಮಾವು ಹಲಸು ಕಿತ್ತಳೆ, ಚಕ್ಕೋತ, ಪನ್ನೇರಳೆ ಹಣ್ಣುಗಳನ್ನು ಸವಿದು, ಎಳೆನೀರನ್ನು ಕುಡಿದು ಮನೆಗೆ ಹಿಂತಿರುಗುತ್ತಿದ್ದೆವು.

kdl04ನಂತರ ಒಟ್ಟಿಗೆ ಕುಳಿತು ಶ್ಲೋಕಗಳು, ಪದ್ಯಗಳನ್ನು ಹೇಳಿಕೊಳ್ಳುತ್ತಾ, ಉಯ್ಯಾಲೆ, ಅಳುಗುಳಿಮನೆ, ಪಗಡೆ, ಚೌಕಾಭಾರ ಆಟಗಳನ್ನು ಆಡಿ, ಅಂಗಳದಲ್ಲಿ ಕುಳಿತು ಕಥೆಗಳನ್ನು ಕೇಳುತ್ತಾ, ಚಿಕ್ಕಜ್ಜಿಯ ಕೈಯಲ್ಲಿ ಕೈತುತ್ತು ತಿನ್ನುತ್ತಿದ್ದ ಬಗೆ ನೆನೆಪಿನಿಂದ ಮಾಸದ ವಿಷಯ. ಅಮ್ಮ ಚಿಕ್ಕಮ್ಮಂದಿರು ಎಲ್ಲರೂ ಸೇರಿ, ಬೆಳಿಗ್ಗೆ ಮಡಿಯಲ್ಲಿ ಸಿಹಿನೀರು ಬಾವಿಯಿಂದ ಸೇದಿ ಅಡುಗೆ ಮನೆಗೆ ತುಂಬುತ್ತಿದ್ದರು. ಎಲ್ಲರೂ ಸೇರಿ ತಿಂಡಿ ಊಟದ ವ್ಯವಸ್ಥೆ ಮಾಡುತ್ತಿದ್ದರು. ಆಳುಗಳಿಗೂ ಸಹ ಹಿಟ್ಟು ಸಾರು ಒದಗಿಸುತ್ತಿದ್ದರು. ದಿನವಿಡೀ ಅಡುಗೆ ಮನೆಯಲ್ಲಿ ನಗುನಗುತ್ತಾ ಕೆಲಸ ಮಾಡಿಕೊಂಡು ಕಾಲ ಕಳೆಯುತ್ತಿದ್ದರು. ಚಕ್ಕುಲಿ, ಕೋಡುಬಳೆ, ನಿಪ್ಪಟ್ಟುಗಳ ಸುರಿಮಳೆಯೇ ಆಗುತ್ತಿತ್ತು. ಹೀಗೆ ಎಲ್ಲರೊಡನೆ ಹೊಂದಿಕೊಂಡು ಹೋಗುವ ನಮ್ಮ ತಾಯಿಯ ಸ್ವಭಾವ ನನಗೂ ಬೆಳೆಯಿತು.
ನನ್ನ ಅಣ್ಣಂದಿರು ಉನ್ನತ ವಿದ್ಯಾಭ್ಯಾಸಕ್ಕೆಂದು ಮುಂಬೈ, ಖರಗ್‍ಪುರಕ್ಕೆ ತೆರೆಳಿದ್ದರು. ಮನೆಗೆ ಯಾರು ಯಾವಾಗ ಯಾವ ಹೊತ್ತಿನಲ್ಲಿ ಬಂದರೂ ತಿಂಡಿ ತೀರ್ಥ ಇಲ್ಲದೆ ಕಳುಹಿಸುತ್ತಿರಲಿಲ್ಲ. ನಮ್ಮ ತಾಯಿಯು ಬೇಸರವಿಲ್ಲದೇ ಎಲ್ಲರಿಗೂ ಮಸಾಲ ದೋಸೆ, ಮೈಸೂರುಪಾಕು, ಚಕ್ಕುಲಿ, ಕೋಡುಬಳೆ ಇವುಗಳನ್ನು ಮಾಡಿ ತಿನ್ನಿಸುತ್ತಿದ್ದರು. ನಾನು ನನ್ನ ಸ್ನೇಹಿತರೊಡನೆ ಆಗಾಗ್ಯೆ ಪಿಕ್‍ನಿಕ್ ಹೋಗುತ್ತಿದ್ದೆ. ಆಗ ಎಲ್ಲರಿಗೂ ಬಿಸಿಬೇಳೆ, ಮೊಸರನ್ನ ಮಾಡಿಕೊಡುತ್ತಿದ್ದರು. ಅವರಿಗೆ ಸ್ನೇಹಿತೆಯರು ಮನೆಗೆ ಬಂದರೆ ಬಲು ಖುಷಿ. ಮಗಳಂತೆ ಅವರನ್ನು ನೋಡಿಕೊಳ್ಳುತ್ತಿದ್ದರು. ಎಷ್ಟೋ ಸಲ ನಮ್ಮ ಮನೆಯಲ್ಲೇ ಅವರು ತಂಗಿದ್ದುಂಟು. ಅವರೆಲ್ಲರೂ ಅಮ್ಮನ ಸ್ವಭಾವವನ್ನು ತುಂಬಾ ಕೊಂಡಾಡುತ್ತಿದ್ದರು.

ತಮ್ಮ ಮಧ್ಯ ವಯಸ್ಸಿನಲ್ಲಿ ನನ್ನ ಹಿರಿಯ ಅಣ್ಣನನ್ನು ಕಳೆದುಕೊಂಡಾಗ ನನ್ನ ಅಮ್ಮನ ದುಃಖಕ್ಕೆ ಪಾರವೇ ಇರಲಿಲ್ಲ. ಇದರ ನಂತರ ಸ್ವಲ್ಪ ಅಸ್ವಸ್ಥರಾದರು. ಆಗ ನಾವೆಲ್ಲರೂ ಸೇರಿ ಅವರ ಶುಶ್ರೂಷೆ ಮಾಡಿ, ಅವರು ಮಾಡುತ್ತಿದ್ದ ಕೆಲಸಗಳನ್ನು ನಿರ್ವಹಿಸಿದ ತೃಪ್ತಿ ಇದೆ. ನಂತರ ನನ್ನ ಅಣ್ಣಂದಿರು ಒಳ್ಳೆಯ ಹುದ್ದೆಗಳನ್ನು ಪಡೆದು ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಯಿತು. ಈ ಸಂದರ್ಭದಲ್ಲಿ ನನ್ನ ತಾತನವರ ಸಹಾಯದಿಂದ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಲು ಅನುಕೂಲವಾಯಿತು.
ನಂತರ ಎಲ್ಲಾ ಮಕ್ಕಳಿಗೂ ಮದುವೆ ಮಾಡಿ, ಎಲ್ಲರೂ ಸುಖವಾಗಿರುವುದನ್ನು ಕಂಡು ಆನಂದಿಸಿದರು. ಮೂರು ಜನ ಹೆಣ್ಣುಮಕ್ಕಳಿಗೂ, ಒಬ್ಬರೇ ಅಚ್ಚುಕಟ್ಟಾಗಿ ಬಾಣಂತನ ಮಾಡಿ, ಮೊಮ್ಮಕ್ಕಳನ್ನು ಬೆಳೆಸಿ, ಅವರವರ ಮನೆಗಳಿಗೆ ಕಳುಹಿಸಿದರು. ಚಿಕ್ಕನಾಯಕನಹಳ್ಳಿಯ ನಮ್ಮ ತಾಯಿಯ ತೋಟದ ತೆಂಗಿನಕಾಯಿ ಮತ್ತು ಕೊಬ್ಬರಿ ರುಚಿ ಇಂದಿಗೂ ನಮಗೆ ಆಪ್ಯಾಯವಾಗಿದೆ.

75ನೇ ವಯಸ್ಸಿನಲ್ಲಿ ಹೃದಯರೋಗದಿಂದ ಬಳಲಿ ದೈವಾಧೀನರಾದರು. ಆಗ ಇಂತಹಾ ಅಮ್ಮನನ್ನು ಕಳೆದುಕೊಂಡ ನಮ್ಮ ದುಃಖಕ್ಕೆ ಪಾರವೇ ಇರಲಿಲ್ಲ.
ಮನುಶಾಸ್ತ್ರದ ಪ್ರಕಾರ ಹೆಣ್ಣಿಗೆ ಬಾಲ್ಯದಲ್ಲಿ ತಂದೆಯ ಸಹಕಾರ, ಯೌವ್ವನದಲ್ಲಿ ಗಂಡನ ಒಡನಾಟ ಹಾಗೂ ಮುಪ್ಪಿನಲ್ಲಿ ಮಗನ ಆಶ್ರಯ ಬೇಕು ಎಂದು ತಿಳಿಸಿದ್ದಾರೆ. ಆದರೆ ನನ್ನ ತಾಯಿಯು ಇದಕ್ಕೆ ತದ್ವಿರುದ್ಧವಾಗಿ, ಯೌವನದಲ್ಲಿ ತಮ್ಮ ತಂದೆಯನ್ನು ಒಬ್ಬಳೇ ಮಗಳಾದ ಕಾರಣ ಕೊನೆಯವರೆವಿಗೂ ಶುಶ್ರೂಷೆ ಮಾಡಿದರು. ಗಂಡನಿಗೆ ಸಹಧರ್ಮಿಣಿಯಾಗಿ ಸೂಕ್ತ ಸಲಹೆಗಳನ್ನಿತ್ತು ನೆರವಾದರು. ಮುಪ್ಪಿನಲ್ಲಿ ಮೊಮ್ಮಕ್ಕಳ ಒಡನಾಟದಲ್ಲಿ ಕಾಲ ಕಳೆದು, ತಮ್ಮ ಪ್ರೀತಿ ವಾತ್ಸಲ್ಯಗಳನ್ನು ಧಾರೆ ಎರೆದರು.

ನನ್ನ ಸಂಸಾರದ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಮಾರ್ಗದರ್ಶನ ನೀಡಲು ಮತ್ತೆ ನನ್ನ ತಾಯಿಯನ್ನು “ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು” ಎಂದು ಕೂಗಿ ಕರೆಯೋಣವೆನ್ನಿಸುತ್ತದೆ.

Leave a Reply

Your email address will not be published.