ಅಮ್ಮನ ನೆನಪು-6 : ಮಕ್ಕಳ ನಿಮಿತ್ತ ಅವ್ವನ ಬಹುಕೃತ ವೇಷ !

-ದುರುಗಪ್ಪ ಪೂಜಾರ

ನಾನಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಸ್ಪಷ್ಟ ನೆನಪು. ಹೊಲದಲ್ಲಿ ಕೂಲಿ ಕೆಲಸ ಮಾಡಿ ಆಗ ತಾನೇ ಬಂದು ಚಪ್ಪರದ (ಗುಡಿಸಲು) ಮುಂದೆ ಸಗಣಿ ಸಾರಿಸಿದ ಅಂಗಳಲ್ಲಿ ಕೂತು ನನ್ನಕ್ಕನ ತಲೆಯಲ್ಲಿ ಏನೋ (ಹೇನು?) ನೋಡುತ್ತಿದ್ದಳು ನನ್ನವ್ವ. ಅಂದು ನನ್ನ ಶಾಲೆಯಲ್ಲಿ ಜನ್ಮದಿನದ (ಜಯಂತಿ) ಕುರಿತು ಚರ್ಚೆ ನಡೆದಿತ್ತು. ನನ್ನ ಜನ್ಮ ದಿನಾಂಕವನ್ನು ತಿಳಿದುಕೊಳ್ಳಬೇಕೆಂಬ ಕೂತೂಹಲದಿಂದ ಹೆಗಲಿನಲ್ಲಿದ್ದ ಶಾಲೆಯ ಚೀಲ ಮೂಲೆಗೆ ಎಸೆದವನೇ ನನ್ನವ್ವನ ಬೆನ್ನಿಗೆ ಆತುಕೊಂಡು, ‘ಯವ್ಯಾ ನನ್ನ ಹುಟ್ಟಿದ ದಿನಾಂಕ ಯಾವುದಬೇ?’ ಅಂತ ಕೇಳಿದೆ. ಅದಕ್ಕೆ ಅವ್ವ, ಅಕ್ಕನ ತಲೆಯಲ್ಲಿದ್ದ ತನ್ನ ಕೈಗಳನ್ನು ತೆಗೆಯುತ್ತಾ, ‘ನನಗೆ ನೆಪ್ಪು (ನೆನಪು) ಇಲ್ಲಪಾ, ನಾನೇನು ಓದಿದೋಳೇ? ಈ ಬಡತನದ ಬದುಕಿನ್ಯಾಗ ನಿಮ್ಮೆಲ್ಲರ ಹೊಟ್ಟೆ ಬಟ್ಟೆ ಅಂತ ನೋಡೋದೇ ಕಷ್ಟವಾಗ್ಯೆತಿ. ನಿಮ್ಮೆಲ್ಲರನ್ನು ಆ ದೇವರು ಜಲ್ದಿ (ಬೇಗ) ದೊಡ್ಡೋರನ್ನಾಗಿ ಮಾಡ್ಲಿ ಅಂತ ಬೇಡ್ತನಿ, ನಮ್ಮ ಕಷ್ಟ ಯಾವಾಗ ಬಗೆಹರಿತ್ಯೆತೋ ಏನೋ?’ ಎಂದಳು ನಿಟ್ಟುಸಿರಿಟ್ಟು.

bara1‘ಮತ್ತಾ… 06.07.1968 ಅಂತ ಶಾಲ್ಯಾಗ ದಿನಾಂಕ ಯಾರಬೇ ಬರೆಸಿದ್ದು’ ಅಂತ ಕೇಳಿದೆ. ಅವ್ವ ನನ್ನ ಜನ್ಮ ದಿನಾಂಕದ ರಹಸ್ಯ ಬಿಚ್ಚಿಟ್ಟಳು, ‘ನಿನ್ನ ಶಾಲೆಗೆ ಸೇರ್‍ಸಾಕ ಹೋಗಿದ್ದೆ, ಅವಾಗ ಐದು ವರ್ಷ ತುಂಬಿದರ ಮಾತ್ರ ಶಾಲೆಗೆ ಸೇರ್ಸಿಕೊಳ್ತಿದ್ರು. ಅದಕ್ಕ ನಾಕು ವರ್ಷ ತುಂಬಿ ಐದು ವರ್ಷದಾಗ ಬಿದ್ದೈತ್ರೀ ಮೇಷ್ಟ್ರೇ ಅಂದೆ. ಅದಕ್ಕೆ ಮೇಷ್ಟ್ರು ಹೋಗಲಿ ಯಾವ ವಾರ, ತಿಂಗಳು ಅಂತಾದ್ರು ಗೊತ್ತೈತೇನಾ ಅಂದ್ರು. ಅಗ ಶ್ರಾವಣ ಮಾಸದ ಎರಡನೇ ಬುಧವಾರ ಹುಟ್ಯಾನರೀ ಅಂದೆ, ಅಷ್ಟೆ. ಆ ಮೇಷ್ಟ್ರೇ ತೇದಿ ಗೀದಿ ಎಲ್ಲಾ ಬರಕೊಂಡ್ರು’. ಅಂದು ಆ ಮೇಷ್ಟ್ರು ಬರೆದ ಅಂಕಿಗಳೇ ನನ್ನ ಜನ್ಮ ದಿನಾಂಕವಾಗಿ ದಾಖಲೆಯಾಗಿದೆ.

ಜನ್ಮ ದಿನಾಂಕ ಬರೆದಿಡಲಾಗದ ಅನಕ್ಷರಸ್ಥ ಕುಟುಂಬದ ಮೂಲ ನಮ್ಮವ್ವಂದು. ಪ್ರತಿದಿನ ಬದುಕು ಸಾಗಿಸಲು ಹೆಣಗಾಡುತ್ತಿದ್ದ ನನ್ನ ತಾಯಿಗೆ ದಿನಾಂಕ, ತಿಥಿ, ಮತಿಗಳ ಕಡೆಗೆ ತಿರುಗಿ ನೋಡುವಷ್ಟು ಪುರುಸೊತ್ತು ಎಲ್ಲಿತ್ತು ? ಕಡುಬಡತನ ನಮ್ಮ ಇಡೀ ಕುಟುಂಬನ್ನು ಆವರಿಸಿತ್ತು. ವ್ಯವಸ್ಥೆಯ ಶೋಷಣೆಗೆ ಬಲಿಯಾಗಿ, ದೇವದಾಸಿ ಪಟ್ಟ ಪಡೆದಿದ್ದ ನಮ್ಮವ್ವನಿಗೆ ನಾಲ್ಕು ಮಕ್ಕಳು; ನಾನು ಮೂರನೆಯವನು. ಇಬ್ಬರು ಅಕ್ಕಂದಿರು, ಒಬ್ಬ ತಂಗಿ. ನಮ್ಮ ನಾಲ್ಕು ಹೊಟ್ಟೆ ತುಂಬಿಸಲು ನಮ್ಮವ್ವ ಮಾಡದ ಚಾಕರಿಗಳಿಲ್ಲ. ಗಾಣದ ಎತ್ತಿನಂತೆ ದುಡಿಯುತ್ತಿದ್ದ ನಮ್ಮವ್ವ ನಮ್ಮ ಬದುಕಿಗೆ ನಿರಂತರ ಸ್ಫೂರ್ತಿ.

ಮಕ್ಕಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು, ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ದಿನವೂ ಹಲುಬುತ್ತಿದ್ದಳು. ಮಕ್ಕಳು ಬೇರೆಯವರ ಹತ್ತಿರ ಕೈ ಚಾಚಬಾರದು ಎನ್ನುವ ಕಾರಣಕ್ಕೆ ಬಂಧುಗಳ ಮನೆಗೂ ಕÀಳಿಸುತ್ತಿರಲಿಲ್ಲ. ಹಾಗಂತ, ನನ್ನವ್ವಗೆ ಯಾವುದೇ ಆದಾಯದ ಕನಿಷ್ಠ ಮೂಲವೂ ಇರಲಿಲ್ಲ. ಹೀನ ವ್ಯವಸ್ಥೆಗೆ ಬಲಿಯಾಗಿದ್ದ ನನ್ನವ್ವನ ಅಸಹಾಯಕತೆಯನ್ನು ಹರಿದು ತಿನ್ನಲು ಹವಣಿಸಿದ್ದರು ಸಂಬಂಧಿಕರು. ಇಂತಹ ಬಂಧನವನ್ನು ತುಂಡರಿಸಿ ಬರಿಗೈಯಿಂದ ಒಂಟಿಯಾಗಿ ಬದುಕು ಕಟ್ಟಿಕೊಳ್ಳಲು ಹೊರಬಂದಿದ್ದಳಂತೆ ನನ್ನವ್ವ. ಆಗ ಆಕೆಯ ಜೊತೆಗಿದ್ದದ್ದು ಅದಮ್ಯ ಆತ್ಮವಿಶ್ವಾಸ, ನಿಷ್ಠುರತೆ ಮತ್ತು ಸ್ವಾಭಿಮಾನ.

ನಮಗೆ ಸಮಯಾನುಸಾರ ಸ್ವಾಭಿಮಾನದ ಬದುಕಿನ ಪಾಠ ಹೇಳುತ್ತಿದ್ದಳು ಅವ್ವ. ‘ಮಾನವೇ ಪ್ರಾಣಕ್ಕಿಂತ ಹೆಚ್ಚಿನದು, ಏನೇ ಕಷ್ಟ ಬಂದ್ರು ಇನ್ನೊಬ್ರ ಹತ್ತಿರ ಬೇಡಬಾರದು, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ದುಡಿದೇ ನಾವು ಮುಂದಕ್ಕೆ ಬರಬೇಕು, ಇನ್ನೊಬ್ರ ಸ್ವತ್ತಿಗೆ ಆಸೆ ಪಡಬಾರದು….’ ಇದು ಅನಕ್ಷರಸ್ಥ ಅವ್ವ ನಂಬಿದ್ದ, ನಮ್ಮೊಳಗೆ ಬಿತ್ತಿದ ಜೀವನ ದರ್ಶನ !  ಪ್ರತಿದಿನ ಸಂದರ್ಭ, ಸನ್ನಿವೇಶಗಳಿಗೆ ಅನುಗುಣವಾಗಿ ಅವ್ವ ಇಂತಹ ಆದರ್ಶದ ಮಾರ್ಗದರ್ಶನವನ್ನು ಮಾಡುತ್ತಲೇ ಇರುತ್ತಿದ್ದಳು.

ಹಾಗೆಂದು ಕೇವಲ ಉಪದೇಶ ಮಾಡುತ್ತಾ ಸುಮ್ಮನೆ ಕೂತವಳಲ್ಲ ನನ್ನವ್ವ. ನಮಗೋಸ್ಕರ, ನಮ್ಮ ಹೊಟ್ಟೆ-ಬಟ್ಟೆಗಾಗಿ ಮಾಡಿದ ಕೆಲಸ ಒಂದೆರೆಡಲ್ಲ. ಸೂರ್ಯೋದಯಕ್ಕೆ ಮೊದಲೇ ಎದ್ದು, ಜೋಳದ ಹಿಟ್ಟಿನಿಂದ ಮುದ್ದೆ ಮಾಡಿಟ್ಟು ಕೆಲಸಕ್ಕೆ ಹೋದಾಕೆ ತಿರುಗಿ ಬರುತ್ತಿದ್ದುದು ಸಾಯಂಕಾಲವೇ. ನಾವು ಬೆಳಿಗ್ಗೆ ಶಾಲೆಗೆ ಹೋದವರು ತಿರುಗಿ ಮನೆಗೆ ಬರುವುದು ಸಂಜೆ 5.30 ಗಂಟೆಗೆ. ಮನೆಗೆ ಬಂದಾಗ ಹಸಿವು ನಮ್ಮ ಹೊಟ್ಟೆಯನ್ನು ಬಸಿಯುತ್ತಿದ್ದರೂ ನಾವು ಹುಡುಕುತ್ತಿದ್ದುದು ಊಟವನ್ನಲ್ಲ; ನಮ್ಮವ್ವನನ್ನು. ಏಕೆಂದರೆ ನಮ್ಮ ಮನೆಯ ಪಾತ್ರೆಗಳು ಖಾಲಿ ಎಂಬುದು ತಿಳಿದ ವಿಷಯವೇ ! ಹಾಗಾಗಿ ಅವ್ವ ಬರುವುದನ್ನೇ ಕಾಯಬೇಕಿತ್ತು.

ನಮ್ಮವ್ವ ಬಿಸಿಲಲ್ಲಿ ದಿನವಿಡೀ ಕೆಲಸಮಾಡಿ ಸಂಜೆ ಬರುತ್ತಿದ್ದ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅವಳು ಮಾಸಿದ ಸೀರೆಯಲ್ಲಿ ತಲೆಯ ಮೇಲೆ ಉರುವಲು ಕಟ್ಟಿಗೆ ಹೊತ್ತು ಬರುತ್ತಿದ್ದರೆ, ಕರುಗಳನ್ನು ಬಿಟ್ಟು ಕಾಡಿಗೆ ಹೋದ ಗೋವು ಹಿಂದಿರುಗಿದಂತೆ ಗೋಚರಿಸುತ್ತಿದ್ದಳು. ಬಂದವಳೇ ತಲೆ ಮೇಲಿನ ಸೌದೆಯನ್ನು ಗುಡಿಸಲು ಮುಂದೆ ಹಾಕಿ ನಮ್ಮನ್ನು ತಬ್ಬಿಕೊಳ್ಳುತ್ತಾ, ‘ನನ್ನ ಮಕ್ಕಳು ಹಸಗಂಬಿಟ್ಟಾವ ! ಮುಖ ಸಣ್ಣದಾಗ್ಯಾವ’ ಎಂದು ಗೊಣಗುತ್ತಾ ನಮ್ಮ ತಲೆ ಮೇಲೆ ಕೈಯಾಡಿಸುತ್ತಾ ನುಚ್ಚಿನ ಅನ್ನವನ್ನು ಮಾಡಿ, ಮನೆಯಲ್ಲಿ ಅಳಿದುಳಿದ ಒಂದು ಟಮೋಟೋ ಅಥವಾ ಒಂದು ಬದನೇಕಾಯಿಯನ್ನ ಒಲೆಯಲ್ಲಿ ಸುಟ್ಟು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಉಪ್ಪು ಸೇರಿಸಿ ಗೊಜ್ಜು ಮಾಡಿ, ನುಚ್ಚಿನ ಅನ್ನಕ್ಕೆ ಕಲೆಸಿ ಕೈ ತುತ್ತು ಮಾಡಿ ತಿನ್ನಿಸುತ್ತಿದ್ದ ಆ ರುಚಿ…  ಆ ಪ್ರೀತಿಯ ಸವಿ… ನನಗೆ ಈವರೆಗೂ ಸಿಕ್ಕಿಲ್ಲ. ಸಿಕ್ಕಿದ್ದರೂ ಅವ್ವನ ತುತ್ತಿಗೆ ಸವiನಾಗಿಲ್ಲ.

ಹೊಟ್ಟೆ ತುಂಬಿದ ತಕ್ಷಣ ನಾವು ಆಟವಾಡುವುದರಲ್ಲಿ ಮಗ್ನರಾಗುತ್ತಿದ್ದೆವು. ದಣಿದು ಬಂದ ನಮ್ಮವ್ವನ ಹಸಿವಿನ ಬಗ್ಗೆ ನಮಗಾಗ ಯೋಚನೆ ಬರುತ್ತಿರಲಿಲ್ಲ. ಈಗ ಆ ಘಳಿಗೆಯನ್ನು ನೆನೆದರೆ ಹೃದಯ ಕಿವುಚಿದಂತಾಗುತ್ತದೆ, ಕರಳು ಚುರ್ ಎನ್ನುತ್ತದೆ. ದುಃಖ ಉಮ್ಮಳಿಸಿ ನನಗರಿವಿಲ್ಲದಂತೆ ಕಣ್ಣುಗಳು ತುಂಬಿ ಬರುತ್ತವೆ. ಕಾರಣ ಆ ದಿನಗಳಲ್ಲಿ ನಮ್ಮವ್ವ ನಮಗಾಗಿ ಎಷ್ಟು ಉಪವಾಸ ಆಚರಿಸಿದ್ದಳೋ ಏನೋ !

ಅಂದು ನಮ್ಮ ಕೇರಿಗಳಲ್ಲಿ ಹಬ್ಬಗಳೆಂದರೆ ಎರಡೇ. ಒಂದು ಯುಗಾದಿ ಮತ್ತೊಂದು ದಸರಾ. ಈ ಎರಡು ಹಬ್ಬಗಳಲ್ಲಿ ನಮ್ಮ ಕೇರಿಯ ಸ್ಥಿತಿವಂತ ರೈತರ ಮಕ್ಕಳು ಹೊಸ ಹೊಸ ಬಟ್ಟೆ ತೊಟ್ಟು, ಕರಿಗಡುಬು ತಿನ್ನುತ್ತಾ ಓಡಾಡುತ್ತಿದ್ದರು. ನಾವು ಮಾತ್ರ ಬಾಯಲ್ಲಿ ಜೊಲ್ಲು ಸುರಿಸುತ್ತಾ, ಅವರ ಹೊಸಬಟ್ಟೆ ನೋಡುತ್ತಾ, ಆಸೆಯಿಂದ ಅವ್ವನ ಹತ್ತಿರಹೋಗಿ ಹೊಸಬಟ್ಟೆಗಾಗಿ, ಸಿಹಿ ಕಡುಬಿಗಾಗಿ ಹಠ ಮಾಡುತ್ತಿದ್ದೆವು. ಅವ್ವ ಅದನ್ನು ಮರೆಸಲು, ಮರೆಮಾಚಲು ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಳು. ನಮ್ಮ ಆಸೆಗೆ ಅಡ್ಡಿಯಾದ ಬಡತನ ಹಲ್ಲು ಕಿರಿದು ಅಣಕಿಸುತ್ತಿತ್ತು. ಅಂದಿನ ಸಂದಿಗ್ಧ ಸನ್ನಿವೇಶ ನಿಭಾಯಿಸುವಾಗಿನ ಅವ್ವನ ಪರದಾಟ, ಸಂಕಟ ಈಗ ನೆನಪಾಗಿ ಮನ ಕಲಕುತ್ತದೆ.

kdl01ಹೀಗೇ ಒಂದು ಹಬ್ಬದಲ್ಲಿ ನಮ್ಮಾಸೆಯನ್ನು ತಣಿಸಲು ನನ್ನವ್ವ ತನ್ನ ತಾಯಿಯ (ನಮ್ಮಜ್ಜಿ) ನೆನಪಿನ ಗುರುತಾಗಿದ್ದ ಒಂದು ದೊಡ್ಡ ತಾಮ್ರದ ಚೆಂಬು (ತಂಬಿಗೆ) ಅಡ ಇಟ್ಟು ನಮಗೆ ಸಿಹಿ ಮಾಡಿ ಉಣಿಸಿದ ನೆನಪು ಹಬ್ಬಗಳಲ್ಲಿ ಕಾಡದೇ ಇರದು. ಮಕ್ಕಳ ಉದರ ನಿಮಿತ್ತ ನಮ್ಮವ್ವನದು ಬಹುಕೃತ ವೇಷ. ಹೊಲದಲ್ಲಿ ಕೂಲಿ ಕೆಲಸ, ರಸ್ತೆಯಲ್ಲಿ ತರಕಾರಿ ಹಣ್ಣು ಮಾರಾಟ, ಶನಿವಾರದ ಎತ್ತಿನ ಸಂತೆಯಲ್ಲಿ ರೊಟ್ಟಿಪಲ್ಯ ಮಾರಾಟ…. ಅಷ್ಟೇ ಅಲ್ಲ, ಚಿಕ್ಕ ಜೋಪಡಿಯಲ್ಲಿ ಹೋಟಲ್ ಕೂಡಾ ನಡೆಸಿದ್ದಿದೆ. ಮಕ್ಕಳಿಗಾಗಿ ದಣಿವರಿಯದೇ ಪ್ರತಿದಿನವೂ ಗಾಣದ ಎತ್ತಿನಂತೆ ದುಡಿದ ನಮ್ಮವ್ವನ ನೆನಪು ಕಾಡದ ದಿನವೇ ಇಲ್ಲ.
ಸುಮಾರು ಎಪ್ಪತ್ತರ ದಶಕದಲ್ಲಿ ಸ್ಕೈಲಾಬ್ ಎನ್ನುವ ಉಪಗ್ರಹ ಭೂಮಿಗೆ ಅಪ್ಪಳಿಸಲಿದೆ ಎಂದು ಪುಕಾರು ಹಬ್ಬಿತ್ತು. ಆ ಉಪಗ್ರಹ ಭೂಮಿಗೆ ಅಪ್ಪಳಿಸಿದರೆ ಯಾರೂ ಬದುಕುಳಿಯುವುದಿಲ್ಲ ಎನ್ನುವ ವದಂತಿಗೆ ನಮ್ಮ ಕೇರಿಯ ಜನರ ಪ್ರತಿಕ್ರಿಯೆ ವೈವಿಧ್ಯಮಯವಾಗಿತ್ತು. ಸಾವಿನ ಲೆಕ್ಕಾಚಾರ ಮಾಡುತ್ತಾ ಭಯಭೀತರಾಗಿ ದಿಕ್ಕೇ ತೋಚದಂತಾಗಿದ್ದ ಸಂದರ್ಭವದು.

ಒಂದು ದಿನ ನಮ್ಮವ್ವನದು ಬೆಳ್ಳಂಬೆಳಿಗ್ಗೆಯೇ ಎಂದಿಲ್ಲದ ಸಡಗರ. ನಮಗೆಲ್ಲಾ ಹೊಸ ಬಟ್ಟೆ ತಂದು, ಉಡಿಸಿ ಆನಂದದಿಂದ ನಮ್ಮನ್ನೆಲ್ಲಾ ತಬ್ಬಿಕೊಂಡು ಸಂತೋಷಪಟ್ಟಳು. ಆ ದಿನ ಸಿಹಿ ಕರಿಗಡುಬು ಮಾಡಿ ತುಪ್ಪ ಹಾಕಿ, ತುತ್ತು ಮಾಡಿ ಎಲ್ಲರಿಗೂ ಉಣಿಸುತ್ತಿದ್ದಾಗ ನಾನು, ‘ಏನವ್ವಾ ಇವತ್ತು ಯಾವ ಹಬ್ಬ ?’ ಎಂದೆ ಅಚ್ಚರಿಯಿಂದ. ಅದಕ್ಕೆ ನಮ್ಮವ್ವ, ‘ಇವತ್ತು ದೊಡ್ಡ ಹಬ್ಬ ಬಂದೈತಿ, ಇನ್ನು ಮ್ಯಾಲೆ ನಮ್ಮ ಕಷ್ಟ ಮುಗೀತು, ನಮ್ಮ ಬಡತನ ಪರಿಹಾರಾತು. ಆನಂದದಿಂದ ಹೊಟ್ಟೆ ತುಂಬಾ ತಿನ್ರಿ. ಉಂಡಮ್ಯಾಲೆ ನಾವೆಲ್ಲರೂ ಹಂಪಿಗೆ ಹೋಗೋಣ, ಇವತ್ತು ನಾವು ಅಲ್ಲೇ ಮಲಗೋಣ’ ಎಂದು ಹೇಳಿದಾಗ ನಮಗೆಲ್ಲಾ ಖುಷಿಯೋ ಖುಷಿ. ನಮ್ಮ ಮನೆಯಲ್ಲೂ ಎಲ್ಲಾ ಇದೆ, ನಾವು ಯಾರಿಗೂ ಕಡಿಮೆಯಿಲ್ಲಾ ಎನ್ನುವ ಅಹಂನೊಂದಿಗೆ ಹೊಟ್ಟೆ ತುಂಬಾ ಕಡುಬು ತಿಂದು ಆಮೇಲೆ ಅದನ್ನು ಹಿಡಿದು ಹೊರಗಡೆ ಪ್ರದರ್ಶನ ಮಾಡಿದ್ದೂ ಆಯಿತು.

ಸಂಜೆಯಾಗುತ್ತಿದ್ದಂತೆ ಮನೆಯಲ್ಲಿದ್ದ ಹಬ್ಬದ ಅಡಿಗೆಯನ್ನು ಮತ್ತು ಹಾಸಿಗೆಗಳನ್ನು ಕಟ್ಟಿಕೊಂಡು ನಮ್ಮನ್ನು ಹಂಪಿಗೆ ಕರೆದುಕೊಂಡು ಬಂದ್ಲು ನಮ್ಮವ್ವ. ನೇರವಾಗಿ ಹಂಪಿಯ ಮುಖ್ಯ ದೇಗುಲವಾದ ವಿರೂಪಾಕ್ಷ ದೇವಸ್ಥಾನದ ಮುಂದಿನ ಪ್ರಾಂಗಣದಲ್ಲೇ ಠಿಕಾಣಿ ಹೂಡಿದೆವು. ಈಗಿನಂತೆ ಯಾವುದೇ ಭದ್ರತೆ, ಬಂದೋಬಸ್ತು ಆಗ ಇರಲಿಲ್ಲ. ರಾತ್ರಿ ಅಲ್ಲೇ ಊಟ ಮಾಡಿಸಿ ನಮ್ಮನ್ನೆಲ್ಲ ತಬ್ಬಿಕೊಂಡು ಮಲಗಿದಳು ನಮ್ಮವ್ವ. ಹೊಟ್ಟೆತುಂಬಿದ ಖುಷಿಯಲ್ಲಿ ನಮಗೆ ನಿದ್ದೆಗೆ ಜಾರಿದ್ದೇ ಗೊತ್ತಾಗಲಿಲ್ಲ.

ಬೆಳಿಗ್ಗೆ ನಮ್ಮವ್ವ, ‘ಎದ್ದೇಳ್ರಿ ಹೊತ್ತಾಯಿತು ಮನೆಗೆ ಹೋಗೋಣ’ ಎಂದಾಗಲೇ ಎಚ್ಚರವಾಗಿದ್ದು. ಎಬ್ಬಿಸಿದವಳೇ, ‘ಮನೆಗೋಗಾಣ’ ಎಂದಳು. ‘ಯವ್ವಾ ನಾವು ಇಲ್ಲೇ ಇರೋಣ, ನಾಳೆ ಹೋಗಾಣ’ ನಮ್ಮ ಆಸೆ ಮುಂದಿಟ್ಟೆವು. ಆಗ ನಮ್ಮವ್ವ ಹೇಳಿದ್ದು ಕೇಳಿ ಬೆಚ್ಚಿಬಿದ್ದೆವು. ‘ಕೈಲಾಬ್’ ಎನ್ನುವ ಯಾವುದೋ ಗ್ರಹ ಭೂಮಿಗೆ ಬಡಿದು ಭೂಮಿ ಉರಿದುಹೋಗಿ ಪ್ರಾಣಿ ಪಕ್ಷಿಯಾದಿಯಾಗಿ ಯಾರೂ ಬದುಕುಳಿಯುವುದಿಲ್ಲ ಎನ್ನುವ ಕಾರಣಕ್ಕಾಗಿ ನಾವೆಲ್ಲರೂ ಒಟ್ಟಿಗೆ ಸಾಯುವ ಯೋಜನೆಯೊಂದಿಗೆ ಕೂಡಿಟ್ಟ ಹಣದಲ್ಲಿ ಹೊಸ ಬಟ್ಟೆ ತೊಡಿಸಿ ಹೊಟ್ಟೆತುಂಬ ಉಣಿಸಿ, ಇತಿಹಾಸ ಪ್ರಸಿದ್ಧ ಪುಣ್ಯಭೂಮಿ ಹಂಪಿಯಲ್ಲಿ ನಮ್ಮನ್ನೆಲ್ಲಾ ತಬ್ಬಿಕೊಂಡು ಮಲಗಿದ್ದಳಂತೆ ಅವ್ವ ! ನೆನೆಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಸಾವನ್ನೂ ಮಕ್ಕಳೊಂದಿಗೆ ಎದುರುಗೊಳ್ಳುವ ದಿಟ್ಟತನವನ್ನು, ಸಾವಿನಲ್ಲೂ ಮಕ್ಕಳೊಂದಿಗೆ ಇರಬಯಸುವ ತಾಯಿಮನವನ್ನು ವರ್ಣಿಸುವ ಸಾಮಥ್ರ್ಯ ಯಾವ ಭಾಷೆಯ ವರ್ಣಮಾಲೆಗೆ ಇರಲು ಸಾಧ್ಯ ! ಅವ್ವನ ಈ ವಿಫಲ ಯತ್ನದ ಹಿಂದೆ ಸಾವಿನ ನಂತರವೂ ಜೊತೆಗಿದ್ದು ಮಕ್ಕಳನ್ನು ನೋಡಿಕೊಳ್ಳುವ ಕನಸು, ಕಲ್ಪನೆ ಇತ್ತೇ ?

ನಾನು ಹತ್ತನೇ ತರಗತಿಯಲ್ಲಿ ಫೇಲಾದ ಸಮಯ. ಆಗ ಅವ್ವನಿಗಾದ ಸಂಕಟ ನಿರಾಸೆಯನ್ನು ಊಹಿಸಲೂ ಸಾಧ್ಯವಿಲ್ಲ. ಕಡು ದೈವಭಕ್ತೆಯಾದ ನನ್ನವ್ವ ನಮ್ಮೂರಿನಿಂದ ಆರು ಕಿಲೋಮೀಟರ್ ದೂರದ ಬೆಟ್ಟದಲ್ಲಿರುವ ಜಂಬುನಾಥ ದೇವಸ್ಥಾನಕ್ಕೆ ನನ್ನನ್ನು ನಡೆಸಿಕೊಂಡು ಹೋಗಿ, ಮೈಕೊರೆಯುವ ಚಳಿಯಲ್ಲಿ ಮಂಜಿನಂತಹ ನೀರನ್ನು ತಲೆಯ ಮೇಲೆ ಎರೆದು ಐದು ಪ್ರದಕ್ಷಿಣೆ ಹಾಕಿಸಿ, ಪೂಜೆ ಮಾಡಿಸಿ ಸಮಾಧಾನಗೊಂಡವಳು. ಮಕ್ಕಳಿಗೋಸ್ಕರ ಎಂತಹ ತ್ಯಾಗಕ್ಕೂ ಸಿದ್ಧಳಾಗಿದ್ದಳು. ಅವಳಿಗೆ ತನ್ನ ಮಕ್ಕಳ ಮೇಲಿದ್ದ ಪ್ರೀತಿ, ಕಾಳಜಿ, ತ್ಯಾಗ, ಬೇಸರವಿಲ್ಲದ ಸತತ ಪರಿಶ್ರಮ ಅವಿಸ್ಮರಣೀಯ. ಮಕ್ಕಳ ಆರೈಕೆಯಲ್ಲಿ ದಣಿವರಿಯದ ನನ್ನವ್ವನ ಶ್ರದ್ಧೆಯನ್ನು, ಆದರ್ಶವನ್ನು ತಬ್ಬಿಕೊಳ್ಳಬೇಕೆನಿಸುತ್ತದೆ. ಈಗ ನಾನು ಅಪ್ಪನಾಗಿದ್ದರೂ ನನ್ನ ಮಕ್ಕಳಿಗೆ ಒಮ್ಮೊಮ್ಮೆ ತಾಯಿಯಾಗುತ್ತೇನೆ.

AMMANAತಾಯಿಯ ಮಹತ್ವ, ಪೂರ್ಣತ್ವ ಅರಿವಿಗೆ ಬರುವುದೇ ಆಕೆ ಕಾಲವಾದ ನಂತರ. ತಾಯಿ ಇದ್ದಾಗ ಕೆಲ ಮಕ್ಕಳು ಅವಳನ್ನು ಕೀಳಾಗಿ ಕಂಡು, ‘ಮುದಿ ಜೀವ’, ‘ಹಳೆ ಬಟ್ಟೆಗೆ ದಾರ ದಂಡ, ಮುದೇರಿಗೆ ಕೂಳು ದಂಡ’ ಮುಂತಾಗಿ ನಿಂದಿಸುವುದನ್ನು ಕಣ್ಣಾರೆ ನೋಡಿದ್ದೇನೆ. ಅದೇ ಮಕ್ಕಳು ತಾಯಿ ತೀರಿದ ನಂತರ ಹಾಡಿಕೊಂಡು ಅಳುವುದನ್ನು ಕಂಡಿದ್ದೇನೆ; ಆಕೆಯ ಸಮಾಧಿಗೆ ಗ್ರೆನೈಟ್ ಕಲ್ಲುಗಳಿಂದ ಮಂಟಪ ಕಟ್ಟಿ, ಹಬ್ಬ ಹರಿದಿನಗಳಲ್ಲಿ ಆ ಸಮಾಧಿಗೆ ತೋರಣಕಟ್ಟಿ ದೊಡ್ಡ ಹೂವಿನ ಹಾರ ಹಾಕಿ ಕೈಮುಗಿಯುವವರೂ ಇದ್ದಾರೆ. ತಾಯಿ ಬದುಕಿದ್ದಾಗ ಕಡೆಗಣಿಸಿ, ಸತ್ತ ನಂತರ ಸಮಾಧಿಗೆ ಸಿಂಗರಿಸಿ ಪೂಜಿಸುವುದು ವಿಪರ್ಯಾಸವೇ ಸರಿ.

ಮಕ್ಕಳು ತನ್ನಂತೆ ಕಷ್ಟಕೂಪದಲ್ಲಿ ಬಡತನದ ಬೇಗೆಯಲ್ಲಿ ಬೀಳಬಾರದು, ಮಕ್ಕಳಿಗೆ ಸ್ವಾಭಿಮಾನದ ಉತ್ತಮ ಭವಿಷ್ಯ ರೂಪಿಸಬೇಕು, ಸಮಾಜದಲ್ಲಿ ನಾಲ್ಕು ಜನರಂತೆ ಗೌರವದಿಂದ ಬದುಕಬೇಕೆಂದು ಹಗಲಿರಳೂ ಎತ್ತಿನಂತೆ ದುಡಿದ ನನ್ನವ್ವ ಈಗಿಲ್ಲ. ತೀರಿದ ತಾಯಿ ಕನಸಿನಲ್ಲಿ ಬಂದರೆ ಒಳ್ಳೆಯ ಶಕುನವಲ್ಲ ಎನ್ನುವವರಿದ್ದಾರೆ. ಆದರೆ ನಾನು ಶಕುನವನ್ನು ಕನಸಿನಲ್ಲೂ ನಂಬುವವನಲ್ಲ. ನನ್ನವ್ವ ಕನಸಲ್ಲಾದರು ಬಂದು ಮಾತಾಡಿಸಲಿ, ನನ್ನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಳ್ಳಲಿ ಎಂಬ ಆಸೆ ಈಗಲೂ ಇದೆ. ಆದರೆ ಶಕುನವನ್ನು ಬಲವಾಗಿ ನಂಬುತ್ತಿದ್ದ ಅವ್ವ ನನ್ನ ಕನಸಿನಲ್ಲಿ ಈವರೆಗೂ ಬಂದಿಲ್ಲ; ಬದಲಾಗಿ ನನ್ನ ನಿಜ ಬದುಕನ್ನು ಇಡೀಯಾಗಿ ಆವರಿಸಿಕೊಂಡಿದ್ದಾಳೆ. ನನ್ನವ್ವನ ಪ್ರೀತಿ, ಧೈರ್ಯ, ಕಾಯಕ, ಜೀವನೋತ್ಸಾಹ ನನಗೆ ದಾರಿದೀಪವಾಗಿ ಒದಗಿಬರುತ್ತಿವೆ.

‘ನನ್ನ ಇಂದಿನ ಬದುಕು ನಿನ್ನದೇ ಕನಸಿನ ಕೂಸು. ಒಮ್ಮೆ ಶಕುನದ ನಂಬಿಕೆ ಬದಿಗಿರಿಸಿ ಕನಸಿನಲ್ಲಿ ಬಂದು ನೋಡವ್ವಾ…’ ಎಂದು ಜೋರಾಗಿ ಕಿರುಚಬೇಕೆನಿಸುತ್ತದೆ.

6 Responses to "ಅಮ್ಮನ ನೆನಪು-6 : ಮಕ್ಕಳ ನಿಮಿತ್ತ ಅವ್ವನ ಬಹುಕೃತ ವೇಷ !"

 1. Sangameshwat  August 7, 2016 at 7:05 pm

  Simply excellent narration.Younger generation of today can’t imagine the poverty and principle centered nature of those people.

  Reply
 2. Dr. M.P.Varsha  August 8, 2016 at 6:22 am

  ಅದ್ಭುತ .. ಅಸಾಧಾರಣ ಮನಸ್ಥೈರ್ಯದ, ಆತ್ಮವಿಶ್ವಾಸದ ಅವ್ವನ ಪರಿಚಯವಾಗಿ ನನ್ನವ್ವನ ಜೊತೆ ಕಳೆದ ಬಾಲ್ಯದ ನೆನಪಾಯಿತು .. ನನ್ನವ್ವನ ಚಿತ್ರವನ್ನು ಎಳೆಯೆಳೆಯಾಗಿ ಬಿಚ್ಚಿಟ್ಟ ದುರುಗಪ್ಪ ಪೂಜಾರರಿಗೆ ಪ್ರೀತಿಯ ನಮನಗಳು .. ಡಾ.ಎಂ.ಪಿ.ವರ್ಷ

  Reply
 3. ರವಿಶಂಕರ್  August 8, 2016 at 10:55 am

  ದುರಗಪ್ಪ ಪೂಜಾರರೇ ನಿಮ್ಮ ಅವ್ವನ ನೆನಪಿನ ಲೇಖನದ ಓದಿ, ನಿಜಕ್ಕೂ ಈ ದಿನ ಶುಭಾರಂಭವಾಗಿದೆ ಎಂದು ಭಾವಿಸುತ್ತೇನೆ. ನಿಮ್ಮ ಅವ್ವನ ಕತೆ ನನ್ನ ಕಣ್ಣಲ್ಲಿ ನೀರಾಡುವಂತೆ ಮಾಡಿತು. ನಿಮ್ಮ ನೆನಪು ಹಂಚಿಕೊಂಡಿದ್ದಕ್ಕೆ ಕೃತಜ್ಞ.

  Reply
 4. Ravindranath.H.L  August 8, 2016 at 11:23 am

  ಮನ ಮಿಡಿಯುವ ಲೇಖನ, ಮನಸ್ಸು ತುಂಬಾ ಭಾರವಾಯಿತು.

  Reply
 5. Prof HS Jagadeeshappa  August 8, 2016 at 6:10 pm

  Nice reading touched heart and mind .thayiya runa theerisalu sadyave?matru devobhava

  Reply
 6. Durgappa poojari  August 8, 2016 at 11:37 pm

  This article ‘s all credits goes to Sri chandrakanth vaddu.

  Reply

Leave a Reply

Your email address will not be published.