ಅಪರಾಧ ಮತ್ತು ಶಿಕ್ಷೆ

ಅನು: ಶಿವಸುಂದರ್

ಮರಣದಂಡನೆಯನ್ನು ನೀಡುವಾಗ ನ್ಯಾಯಾಲಯಗಳು ಸ್ಥಿರ ಮತ್ತು ಸಮಾನ ಮಾನದಂಡಗಳನ್ನು ಅಳವಡಿಸಬೇಕಿರುವುದು ಅತ್ಯವಶ್ಯಕ

scದೇಶದಲ್ಲಿ ನಡೆದ ವಿವಿಧ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು ಈ ತಿಂಗಳಲ್ಲಿ ನೀಡಿರುವ ಮೂರು ಭಿನ್ನ ಭಿನ್ನ ಆದೇಶಗಳು ಹೇಗೆ ಮರಣದಂಡನೆಯ ವಿಷಯದಲ್ಲಿ ನ್ಯಾಯಾಲಯದ ಧೋರಣೆಗಳು ಏಕ ಸಮಾನವಾದ ಮತ್ತು ಸ್ಥಿರವಾದ ಮಾನದಂಡಗಳನ್ನು ಅನುಸರಿಸುತ್ತಿಲ್ಲವೆಂಬುದನ್ನು ಸಾಬೀತುಪಡಿಸುತ್ತದೆ. ಮರಣದಂಡನೆಯನ್ನು ವಿಧಿಸಲು ಸೂಕ್ತವಾದ ಅಪರೂಪದಲ್ಲಿ ಅಪರೂಪದ ಪ್ರಕರಣ ಯಾವುದೆಂಬುದರ ಬಗ್ಗೆ ನ್ಯಾಯಾಲಯಗಳು ಹೇಗೆ ನಿರ್ಧಾರಕ್ಕೆ ಬರುತ್ತವೆಂಬುದು ಅಸ್ಪಷ್ಟವಾಗಿಯೇ ಇದೆ.

ಈ ಮೂರು ಪ್ರಕರಣಗಳಲ್ಲಿ ಅತ್ಯಂತ ದೀರ್ಘ ಕಾಲಾವಧಿಯನ್ನು ತೆಗೆದುಕೊಂಡಿದ್ದು ಗುಜರಾತಿನ ರಾಧಿಕಾಪುರ್ ಗ್ರಾಮದ ಬಿಲ್ಕಿಸ್ ಬಾನು ಪ್ರಕರಣ. ೨೦೦೨ರ ಮಾರ್ಚ ೩ ರಂದು ಆಗ ೧೯ ವರ್ಷದವಳಾಗಿದ್ದ ಮತ್ತು ಗರ್ಭಿಣಿಯಾಗಿದ್ದ ಬಿಲ್ಕಿಸ್‌ಳನ್ನು ಅದೇ ಗ್ರಾಮಕ್ಕೆ ಸೇರಿದ ಹಿಂದೂಗಳ ಗುಂಪೊಂದು ಸಾಮೂಹಿಕ ಅತ್ಯಾಚಾರ ಮಾಡಿ ಸತ್ತಳೆಂದು ಭಾವಿಸಿ ಬೀದಿಯಲ್ಲಿ ಬಿಸಾಡಿ ಹೋಗಿದ್ದರು. ಆಕೆಯ ಕಣ್ಣೆದುರೇ ಆಕೆಯ ಇನ್ನೊಂದು ಎಳೆಮಗುವನ್ನು ಕೊಂದು ಹಾಕಲಾಗಿತ್ತು. ಆಕೆಯ ಕುಟುಂಬಕ್ಕೆ ಸೇರಿದ ೧೪ ಜನರನ್ನು ಕಗ್ಗೊಲೆ ಮಾಡಲಾಗಿತ್ತು. ಈ ಭೀಭತ್ಸದ ನಂತರ ಪ್ರಜ್ನೆ ಮರಳಿದಾಗ ಬಿಲ್ಕಿಸ್ ದೂರನ್ನು ದಾಖಲಿಸಲು ನಿಧಾನಕ್ಕೆ ತೇಕುತ್ತಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲು ಕೋರುತ್ತಾಳೆ. ಆದರೆ ಕರ್ತವ್ಯದಲ್ಲಿದ್ದ ಪೊಲೀಸರು ಆಕೆಯಿಂದ ಪ್ರಥಮ ವರ್ತಮಾನ ವರದಿಯನ್ನು (ಎಫ್. ಐ. ಆರ್) ದಾಖಲಿಸಿಕೊಳ್ಳಲು ನಿರಾಕರಿಸುತ್ತಾರೆ. ಸತತವಾಗಿ ೧೫ ದಿನಗಳ ಕಾಲ ಠಾಣೆಗೆ ಎಡತಾಕಿದ ನಂತರವೇ ಆಕೆಯ ಎಫ್‌ಐಆರ್ ದಾಖಲಾಗುತ್ತದೆ. ಆಗಲೂ ಸಹ ಆಕೆಯ ಮೇಲೆ ಅತ್ಯಾಚಾರ ಮಾಡಿದವರ ಮತ್ತು ಆಕೆಯ ಕುಟುಂಬದವರನ್ನು ಕೊಂದ ವ್ಯಕ್ತಿಗಳ ಹೆಸರು ಮತ್ತಿತರ ನಿಖರವಾದ ವಿವರಗಳನ್ನ್ನು ಪೊಲೀಸರು ದಾಖಲಿಸಿಕೊಳ್ಳದೆ ನಿರ್ಲಕ್ಷಿಸುತ್ತಾರೆ. ಸಹಜವಾಗಿಯೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಪ್ರಕರಣವು ವಜಾ ಆಗುತ್ತದೆ.

ಯಾವುದನ್ನು ಬಿಲ್ಕಿಸ್  ನ್ಯಾಯ ಎಂದು ಭಾವಿಸುತ್ತಾಳೋ ಅದನ್ನು ಪಡೆದುಕೊಳ್ಳಲು ಈ ಅಪೂರ್ವ ಧೈರ್ಯಶಾಲಿ ಮಹಿಳೆಗೆ ಭರ್ತಿ ೧೫ ವರ್ಷಗಳು ಬೇಕಾಯಿತು. ನಂತರ ಈ ಪ್ರಕರಣದ ವಿಚಾರಣೆಯು ಸುಪ್ರಿಂ ಕೋರ್ಟಿನ ಆದೇಶದ ಮೇರೆಗೆ ಗುಜರಾತಿನ ಹೊರಗಡೆ ನಡೆಯಿತು. ೨೦೦೮ರಲ್ಲಿ ವಿಶೇಷ ವಿಚಾರಣಾ ನ್ಯಾಯಾಲಯವು ೧೧ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನೂ ನೀಡಿದ್ದಲ್ಲದೆ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದ ಪೊಲೀಸರಿಗೂ ಶಿಕ್ಷೆಯನ್ನು ವಿಧಿಸಿತು. ಇದೇ ಮೇ ೪ ರಂದು ಬಾಂಬೆ ಉಚ್ಚ ನ್ಯಾಯಾಲಯವು ಈ ಆದೇಶದ ಸಿಂಧುತ್ವವನ್ನು ಎತ್ತಿಹಿಡಿದಿದೆ. ಆದರೆ ಮಹತ್ವದ ಸಂಗತಿಯೆಂದರೆ ಕೆಳಗಿನ ನ್ಯಾಯಪ್ರಕ್ರಿಯೆಗೆ ಅಡ್ಡಿ ಮಾಡಿದ ಮತ್ತು ಸಾಕ್ಷಿಗಳನ್ನು ನಾಶಮಾಡಿದ ಆರೋಪದಿಂದ ಇಬ್ಬರು ವೈದ್ಯರು ಮತ್ತು ಐವರು ಪೊಲೀಸರನ್ನು ಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನೂ ಸಹ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ ಮತ್ತು ಅವರೆಲ್ಲರಿಗೂ ಸಹ ಶಿಕ್ಷೆ ವಿಧಿಸಿದೆ. ಸಾಮಾನ್ಯವಾಗಿ ನ್ಯಾಯಾಲಯಗಳು ನ್ಯಾಯದಾನದ ಪ್ರಕ್ರಿಯೆಗೆ ಭಂಗ ತರುವ ಪ್ರಕ್ರಿಯೆಯಲ್ಲಿ ಸರ್ಕಾರವೂ ಕೈಗೂಡಿಸುವಂಥ ವಿದ್ಯಮಾನವನ್ನು ಗಮನಕ್ಕೆ ತೆಗೆದುಕೊಳ್ಳುವುದು ಅಪರೂಪ.

ಅಷ್ಟಾಗಿಯೂ,  ಅತ್ಯಾಚಾರ ಮತು ಕೊಲೆ ಆರೋಪದ ಮೇಲೆ ಶಿಕ್ಷೆಗೊಳಗಾದ ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಲು ನಿರಾಕರಿಸಿರುವುದು ಮಾತ್ರ ಶಿಕ್ಷೆಯನ್ನು ವಿಧಿಸುವುದರಲ್ಲಿ ಇರುವ ಅಸಮಂಜಸತೆಗಳಿಗೆ ನಿದರ್ಶನವನ್ನು ಒದಗಿಸುತ್ತಿದೆ.

ಬಾಂಬೆ ಉಚ್ಚ ನ್ಯಾಯಾಲಯದ ಈ ತೀರ್ಪು ಬಂದ ಮರುದಿನದಂದೇ ಸುಪ್ರೀಂ ಕೋರ್ಟು ಒಂದು ತೀರ್ಪನ್ನು ನೀಡಿತು. ಅಂದು ೨೦೧೨ರ ಡಿಸೆಂಬರ್‌ನಲ್ಲಿ ಜ್ಯೋತಿ ಸಿಂಗಳ ಮೇಲೆ ಭೀಕರ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿದ ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ಮತ್ತು ದೆಹಲಿ ಉಚ್ಚ ನ್ಯಾಯಾಲಯಗಳು ವಿಧಿಸಿದ್ದ ಮರಣದಂಡನೆಯನ್ನು ಸುಪ್ರಿಂ ಕೋರ್ಟು ಸಹ ಎತ್ತಿಹಿಡಿಯಿತು. ಇಡೀ ಪ್ರಕರಣದ ವಿಚಾರಣೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ,  ಕೇವಲ ನಾಲ್ಕು ವರ್ಷಗಳಲ್ಲಿ ಮುಗಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಅತ್ಯಾಚಾರ ನಡೆದ ನಂತರ ೧೩ ದಿನಗಳ ಕಾಲ ಆಕೆ ನಡೆಸಿದ ಜೀವನ್ಮರಣದ ಹೋರಾಟದ ಅವಧಿಯಲ್ಲಿ ನಗರ ಭಾರತವು ತೋರಿಸಿದ ಸಾರ್ವಜನಿಕ ಆಕ್ರೋಶವು ಸೃಷ್ಟಿಸಿದ ಒತ್ತಡ. ಈ ಹೋರಾಟವೇ ಅತ್ಯಾಚಾರ ಸಂಬಂಧೀ ಕಾನೂನುಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಶಿಫಾರಸ್ಸು ಮಾಡಿದ ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಗೂ ಕಾರಣವಾಯಿತು. ಇದು ಸಾರ್ವಜನಿಕ ಒತ್ತಡಕ್ಕಿರುವ ಶಕ್ತಿಯನ್ನೂ ಸೂಚಿಸುತ್ತದೆ.

ಆದರೂ ಇಲ್ಲಿ ಒಂದು ತೊಡಕಿರುವುದನ್ನೂ ಗಮನಿಸಬೇಕು; ಮಹಿಳಾ ಸುರಕ್ಷತೆಯ ಬಗೆಗಿನ ಸಾರ್ವಜನಿಕರ ಕಾಳಜಿ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಮತ್ತು ಹಿಂಸಾತ್ಮಕ ದಾಳಿಗಳ ಮೇಲಿನ ಜನತೆಯ ಪ್ರತಿರೋಧವೂ ಸಾರ್ವತ್ರಿಕವಾಗಿಯೂ ಇಲ್ಲ. ಏಕರೂಪಿಯಾಗಿಯೂ ಇಲ್ಲ.  ಬಿಲ್ಕಿಸ್‌ಳಂಥ ಬಡ ಮಹಿಳೆಯರು ನ್ಯಾಯ ವ್ಯವಸ್ಥೆಯೇ ಕುಸಿದುಬಿದ್ದಿರುವಂಥ ಸಂದರ್ಭದಲ್ಲಿ ದಿನನಿತ್ಯವೂ ಅನ್ಯಾಯವನ್ನು ಎದುರಿಸುತ್ತಾರೆ. ಆದರೆ ಅವರ ಪ್ರಕರಣಗಳು ಸಾರ್ವಜನಿಕರ ಆಕ್ರೋಶಗಳನ್ನೂ ಕೆರಳಿಸುವುದಿಲ್ಲ ಮತ್ತು ಕಾನೂನುಗಳ ಬದಲಾವಣೆಗೆ ಒತ್ತಡವನ್ನೂ ಉಂಟುಮಾಡುವುದಿಲ್ಲ. ಹಾಗೆಯೇ, ಅಂಥಾ ಒತ್ತಡಗಳಿಗೆ ಸರ್ಕಾರವು ಸ್ಪಂದಿಸಿದಾಗಲೆಲ್ಲಾ ಪರಿಣಾಮಗಳು ಸಕಾರಾತ್ಮಕವಾಗಿಯೇ ಇರುತ್ತದೆಂದೂ ಹೇಳಲಾಗುವುದಿಲ್ಲ. ನ್ಯಾಯಮೂರ್ತಿ ವರ್ಮಾ ಸಮಿತಿಯು ಅತ್ಯಾಚಾರದ ಪ್ರಕರಣಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬಾರದೆಂದು ಬಲವಾಗಿ ವಾದಿಸಿದ್ದರೂ ಸರ್ಕಾರವು ’ಮೌಖಿP’ ಒತ್ತಡಗಳಿಗೆ ಮಣಿದು ೨೦೧೩ರಲ್ಲಿ ಕಾನೂನಿಗೆ ತಿದ್ದುಪಡಿ ತಂದು ಅತ್ಯಾಚಾರದ ಅಪರಾಧಗಳಿಗೆ ವಿಧಿಸುವ ಶಿಕ್ಷೆಗಳ ಪಟ್ಟಿಯಲ್ಲಿ  ಗಲ್ಲು ಶಿಕ್ಷೆಯನ್ನು ಸೇರಿಸಿತು.

ಜ್ಯೋತಿ ಸಿಂಗ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ, ಉಚ್ಚ ನ್ಯಾಯಾಲಯ ಮತ್ತು ವರಿಷ್ಠ ನ್ಯಾಯಾಲಯಗಳು ಗಲ್ಲು ಶಿಕ್ಷೆ ನೀಡಿದ್ದನ್ನು ಸಮರ್ಥಿಸಿಕೊಳ್ಳಲು ಅಪರೂಪದಲ್ಲಿ ಅಪರೂಪದ ಅಪರಾಧವೆಂಬ ವರ್ಗೀಕರಣವನ್ನು ಬಳಸಿವೆ. ಮೇ ೯ ರಂದು ನಯನ ಪೂಜಾರಿಯ ಸಾಮೂಹಿಕ ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಇದೇ ಸಮರ್ಥನೆಯನ್ನು ಪೂನಾ ನ್ಯಾಯಾಲಯವು ಸಹ ಬಳಸಿದೆ. (ಈ ಪ್ರಕರಣದಲ್ಲಿ ನಯನ ಪೂಜಾರಿ ಎಂಬ ೨೮ ವರ್ಷದ ಮಹಿಳಾ ಇಂಜನಿಯರ್ ಕೆಲಸದಿಂದ ಮರಳುತ್ತಿರುವಾಗ ಗುಂಪೊಂದು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಂದು ನಂತರ ಹೆಣ ಪತ್ತೆಯಾದರೆ ಗುರುತು ಪತ್ತೆಯಾಗಬಾರದೆಂದು ಮುಖವನ್ನೂ ಸಹ ವಿಕೃತಗೊಳಿಸಿದ್ದರು.) ಇದನ್ನೂ ಸಹ ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ಪರಿಗಣಿಸಿ ಮರಣದಂಡನೆಯನ್ನು ವಿಧಿಸಲಾಗಿತ್ತು. ಈ ಎರಡೂ ಪ್ರಕರಣಗಳು ೨೦೧೩ರಲ್ಲಿ ಅತ್ಯಾಚಾರ ಕಾನುನುಗಳಿಗೆ ತರಲಾದ ತಿದ್ದುಪಡಿಯ ವ್ಯಾಪ್ತಿಗೆ ಬರದಿದ್ದರಿಂದ ಮರಣದಂಡನೆಯನ್ನು ಕೊಲೆ ಆರೋಪದಡಿಯಲ್ಲಿ ವಿಧಿಸಲಾಗಿತ್ತು.

ಆದರೆ ಬಿಲ್ಕಿಸ್ ಬಾನೂ ಪ್ರಕರಣದಲ್ಲಿ ಮಾತ್ರ ತಾನೇ ಭೀಕರ ಅತ್ಯಾಚಾರಕ್ಕೆ ಗುರಿಯಾಗಿದ್ದರೂ, ಕಣ್ಣೆದುರಿಗೆ ನಡೆದ ತನ್ನ ಹಸುಳೆಯ ಕೊಲೆಗೆ ತಾನೇ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ನ್ಯಾಯಾಲಯವು ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಲು ನಿರಾಕರಿಸಿತು. ಬದಲಿಗೆ ಇದು ಅತ್ಯಂತ ಹೀನಾಯವಾದ ದ್ವೇಷ ಮತ್ತು ವೈಷಮ್ಯವನ್ನು ತೋರಿಸುವ ಅಪರೂಪದ ಕಗ್ಗೊಲೆಗಳೆ ಆಗಿದ್ದರೂ ಈ ಅಪರಾಧವನ್ನು ಎಸಗಿದ್ದವರು ಗುಂಪೊಂದರ ಸದಸ್ಯರಾಗಿದ್ದು ಮುಸ್ಲಿಮರ ವಿರುದ್ಧ ದ್ವೇಷದಿಂದ ಕುದಿಯುತ್ತಿದ್ದರು ಎಂಬುದನ್ನು ಮರಣದಂಡನೆಯನ್ನು ವಿಧಿಸದಿರಲು ಕಾರಣವೆಂದು ಸಮರ್ಥಿಸಿಕೊಂಡಿದೆ. ಹಾಗಾದರೆ ಕೋಮು ಉನ್ಮಾದದಿಂದ ಕೂಡಿರುವ ಸನ್ನಿವೇಶದಲ್ಲಿ ನಡೆಯುವ ಅತ್ಯಾಚಾರ ಮತ್ತು ಕೊಲೆಗಳು ಕಡಿಮೆ ತೂಕದ ಅಪರಾಧಗಳೇ?

ಈ ಅಪರಾಧವನ್ನು ಎಸಗಿದ ಅಪರಾಧಿಗಳಿಗೆ ಅಪರಾಧಿ ಹಿನ್ನೆಲೆಯಿರದಿರುವುದೂ ಸಹ ಅವರಿಗೆ ಮರಣದಂಡನೆ ವಿಧಿಸದಿರಲು ಮತ್ತೊಂದು ಕಾರಣವೆಂದು ನ್ಯಾಯಾಲಯವು ಹೇಳಿದೆ. ಆದರೆ ಅದೇ ಮಾನದಂಡವನ್ನು ಅನ್ವಯಿಸಿ ಹೇಳುವುದಾದರೆ ಜ್ಯೋತಿ ಸಿಂಗ್ ಪ್ರಕರಣದಲ್ಲಿ ಮರಣದಂಡನೆಯ ಶಿಕ್ಷೆಗೊಳಗಾದವರಿಗೂ ಅಪರಾಧಿ ಹಿನ್ನೆಲೆಯಿರಲಿಲ್ಲ. ಹಾಗಿದ್ದಲ್ಲಿ ಮರಣ ದಂಡನೆಯನ್ನು ಎಂಥಾ ಸಂದರ್ಭದಲ್ಲಿ ವಿಧಿಸಬಹುದೆಂಬುದರ ಬಗ್ಗೆ ಇರುವ ನ್ಯಾಯಿಕ ಮಾನದಂಡಗಳೇನು?

ಕಳೆದ ವರ್ಷ ರಾಷ್ಟ್ರೀಯ ಕಾನೂನು ವಿಶ್ವ ವಿದ್ಯಾಲಯವು ತನ್ನ ಮರಣದಂಡನೆ ಸಂಶೋಧನಾ ಯೋಜನೆಯ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಮರಣದಂಡನೆಗೆ ಗುರಿಯಾದ ಅಪರಾಧಿಗಳ ಜೊತೆ ಸಂದರ್ಶನವೂ ಇತ್ತು. ಅದರ ಪ್ರಕಾರ ಮರಣದಂಡನೆಗೆ ಗುರಿಯಾಗಿರುವ ಶೇ.೮೦ರಷ್ಟು ಅಪರಾಧಿಗಳು ಬಡವರು, ದಮನಿತ ಜಾತಿಗಳು  ಅಥವಾ ಅಲ್ಪಸಂಖ್ಯಾತರೇ ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ನ್ಯಾಯಾಂಗ ವ್ಯವಸ್ಥೆಯ ಅವರ ಕೈಗೆಟುಕದಿರುವುದು. ಅವರಲ್ಲಿ ಕೆಲವಷ್ಟು ಜನರಿಗೆ ತಮ್ಮ ವಕೀಲರ ಹೆಸರೂ ಸಹ ಗೊತ್ತಿಲ್ಲ. ಈ ವರದಿಯನ್ನು ಬಿಡುಗಡೆ ಮಾಡುತ್ತಾ ಸುಪ್ರಿಂ ಕೋರ್ಟಿನ ನ್ಯಾಯಾಧೀಶರಾದ ನ್ಯಾಯಮೂರ್ತಿ ಮದನ್. ಬಿ. ಲೋಕೂರ್ ಅವರು ಹೀಗೆ ಹೇಳಿದ್ದರು: ಮರಣದಂಡನೆಯನ್ನು ವಿಧಿಸುವಾಗ ನಾವು ಒಂದು ಸ್ಪಷ್ಟವಾದ ನ್ಯಾಯ ಸಂಹಿತೆಯನ್ನು ಪಾಲಿಸುತ್ತಿದ್ದೇವೆ ಎಂದು ನನಗನಿಸುವುದಿಲ್ಲ. ಮರಣದಂಡನೆಯನ್ನು ವಿಧಿಸುವ ಉದ್ದೇಶ ಮುಂದೆ ಇಂಥ ಅಪರಾಧಗಳನ್ನು ತಡೆಗಟ್ಟುವುದೋ ಅಥವಾ ಅಪರಾಧಿಗಳನ್ನು ಸರಿತಿದ್ದುವುದೋ ಅಥವಾ ಅನ್ಯಾಯಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆಯೋ ಎಂಬುದು ಸ್ಪಷ್ಟವಿಲ್ಲ. ಅವರು ಸರಿಯಾಗಿಯೇ ಹೇಳಿದ್ದಾರೆ. ಒಂದು ನಾಗರಿಕ ಸಮಾಜದಲ್ಲಿ ಮರಣದಂಡನೆಯಂಥಾ ಶಿಕ್ಷೆಗೆ ಅವಕಾಶವಿರಕೂಡದು ಎಂದು ನಾವು ಪ್ರತಿಪಾದಿಸುತ್ತಿರುವ ಹೊತ್ತಿನಲ್ಲಿ ಅದು ಸಂಪೂರ್ಣವಾಗಿ ನಿಷೇಧವಾಗುವರೆಗೂ ಅದನ್ನು ಸುಸಂಬದ್ಧವಾದ ಮತ್ತು ಸ್ಥಿರವಾದ ಮಾನದಂಡಗಳ ಪ್ರಕಾರ ಅನ್ವಯಿಸಬೇಕಾದದ್ದು ಅತ್ಯವಶ್ಯವಾಗಿದೆ.

ಕೃಪೆ: Economic and Political Weekly:                                    May 13, 2017. Vol. 52. No. 19

 

 

 

 

 

Leave a Reply

Your email address will not be published.