ಅಪರಾಧಿ

-ಮಾಲಾ ಸಿ.ಎಸ್

ಅಪರಾಧಿ

aparadi“ಧರ್ಮಣ್ಣಾ” ಎಂದು ಕೂಗುತ್ತಾ ನನ್ನ ರೂಮಿನ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ದಿವಾಕರ ನನ್ನ ಬಳಿಗೆ ಓಡಿ ಬಂದ. ಅವನನ್ನು ನೋಡಿದರೆ ಎಲ್ಲೂ ನಿಲ್ಲದೆ ಒಂದೇ ಸಮನೆ ಓಡಿ ಬಂದಂತಿತ್ತು. ಏದುಸಿರು ಬಿಡುತ್ತಾ ನನ್ನ ಮುಂದ ನಿಂತ ಅವನನ್ನು ನೋಡಿ ನಾನು ‘ಏಕೋ ಇಷ್ಟು ಜೋರಾಗಿ ಓಡಿ ಬರ್ತಾ ಇದ್ದಿ? ಏನಾಯ್ತೋ?” ಎಂದು ಪ್ರಶ್ನಿಸಿದೆ.

“ಅಯ್ಯೋ ಧರ್ಮಣ್ಣಾ ಬೇಗ ನೀನು ಈ ಊರು ಬಿಟ್ಟು ಒಂದೆರಡು ದಿನ ಎಲ್ಲಾದ್ರೂ ಹೋಗಿ ತಲೆ ಮರೆಸ್ಕೋ. ಆ ಪುರುಷೋತ್ತಮನ ಗ್ಯಾಂಗ್‍ನವರು ಇವತ್ತು ನಿನ್ನ ಬಿಡಲ್ಲ ಅಂತ ಪಣತೊಟ್ಟು ಕಾಲೇಜಿನಿಂದ ಸೀದಾ ಈ ಕಡೆಗೆ ಹೊರಟಿದ್ದಾರೆ. ನನಗೆ ವಿಷಯ ತಿಳೀತಿದ್ದಾಗೇ ಇರೋ ಕ್ಲಾಸನ್ನೂ ಬಿಟ್ಟು ಓಡಿ ಬಂದಿದ್ದೀನಿ” ಎಂದ. ಅವನ ಭಯ ನೋಡಿ ನನಗೆ ನಗು ಉಕ್ಕಿ ಬಂತು.

‘ಏಕೋ ಸುಮ್ನೆ ಇಷ್ಟೊಂದು ಹೆದರ್ತೀಯಾ? ನಂ ನಂಜೇಗೌಡ ನಮ್ ಜೊತೆ ಇರೋವರ್ಗೂ ಯಾವ ಹೆದ್ರಕೇನೂ ನನಗಿಲ್ಲ’ ಎಂದೆ ನಗುತ್ತಾ.
ಧರ್ಮಣ್ಣಾ ವಿಷಯ ನಿನಗೆ ಸರಿಯಾಗಿ ಗೊತ್ತಿಲ್ಲ. ನೀನು ಈಗ ಊರ್ನಿಂದ ಬರ್ತಾ ಇದ್ದಿ. ನಂಜೇಗೌಡನ್ನ ಯದ್ವಾ ತದ್ವಾ ಚಚ್ಚಿ ಹಾಕಿದ್ದಾರೆ ಅವನನ್ನು ಗೌರ್ನಮೆಂಟ್ ಆಸ್ಪತ್ರೆಗೆ ಸೇರ್ಸಿದ್ದಾರೆ. ಯಾವಾಗ್ಲೂ ನಿಮ್ ಜೊತೇಲೇ ಇರ್ತಿದ್ದ ಷಡಕ್ಷರಿ, ಚಂದ್ರ, ನಾಗ, ಸಲೀಂ ಇವ್ರೆಲ್ಲಾ ಆಗ್ಲೇ ಹೆದ್ರಕೊಂಡು ಎಲ್ಲೆಲ್ಲೋ ಓಡಿ ಹೋಗವ್ರೆ. ಅದಕ್ಕೆ ನಾನು ನಿನಗೆ ಹೇಳಿ ಹೋಗೋಣಾಂತ ಬಂದಿದ್ದು ಅವ್ರು ಇವತ್ತ್ ಸಂಜೆ ಒಳ್ಗೆ ನಿನ್ನ ರೂಮ್ ಹತ್ರ ಬರ್ಬಹುದು’ ಎಂದಾಗ ನನ್ನ ಎದೆಯಲ್ಲಿ ಒಂಥರಾ ಕೊರೆದಂಥ ಅನುಭವವಾಯ್ತು.

ಮೂರು ದಿನದ ಹಿಂದೆ ಆ ಪುರುಷೋತ್ತಮನ ಗುಂಪಿನವನಾದ ಮರಿಸ್ವಾಮಿ ಪೇಟಿ ಬೀದಿಯಲ್ಲಿ ಹೋಗ್ತಾ ಇದ್ದ ಸಲೀಂ ತಂಗೀನಾ ರೇಗಿಸಿದನಂತೆ. ಅವ್ನು ಬಂದು ‘ನೋಡೋ ಮರಿ ಈ ರೀತಿ ಮಾಡೋದೆಲ್ಲಾ ಸರಿಯಲ್ಲ. ಆಮೇಲೆ ನಾವೆಲ್ಲಾ ನಿನ್ನ ಸುಮ್ನೆ ಬಿಡಲ್ಲ’ ಅಂತ ಹೆದರಿಸಿದ್ದ. ಮರಿ ‘ಹೋಗೋಲೋ ನೀವೆಲ್ಲಾ ಸೇರಿ ನಮ್ಮ ಶೇಖರನ್ನ ಥಿಯೇಟರ್ ಹತ್ರ ಹೊಡ್ದು ಕಳಿಸಿಲ್ವಾ? ನಾನೇನ್ ಯಾರ್ನಾದ್ರು ಹೊಡುದ್ನಾ? ಸುಮ್ನೆ ಚುಡಾಯಿಸಿದ್ದು ಅಷ್ಟೆ ತಪ್ಪಾ?’ ಎಂದು ತಿರುಗಿ ಬಿದ್ದ. ಸರಿ, ಇಷ್ಟಕ್ಕೆ ಎರಡೂ ಗುಂಪಿಗೂ ಭಾರೀ ಹೊಡೆದಾಟವೇ ನಡೆಯುವ ಹಂತಕ್ಕೆ ಜಗಳ ಮುಟ್ಟಿತು. ಈ ನಡುವೆ ಕನ್ನಡ ತರಗತಿ ಮಾಡ್ತಾ ಇದ್ದ ಕೆ.ಎನ್ ಹೊರಗಡೆ ಬಂದು ‘ನೋಡಿ ಸುಮ್ನೆ ಇಲ್ಲಿ ಗಲಾಟೆ ಮಾಡ್ಬೇಡಿ ಪುಂಡಾಟ, ರೌಡಿಸಂ, ನಡೆಸೋರೆಲ್ಲಾ ಕಾರಿಡಾರಿನಿಂದ ಹೊರಗಡೆ ಹೋಗಿ ಇಲ್ಲಿ ಪಾಠ ಕೇಳೋರಿಗೆ ಮಾತ್ರ ಅವಕಾಶ ಇರೋದು’ ಎಂದರು. ಅಷ್ಟರಲ್ಲಿ ಗುಂಪಿನಿಂದ ಯಾರೋ ಅವರೆಡೆಗೆ ಕಲ್ಲು ತೂರಿದರು. ಒಂದಷ್ಟು ಜನ ‘ಹಾಕ್ರೋ ಅವ್ನಿಗೆ ಇಲ್ಲಿ ಜಗಳ ಆಗ್ತಾ ಇದ್ರೆ ಪಾಠ ಮಾಡ್ತಾನಂತೆ’ ಎಂದರು. ಮತ್ತಷ್ಟು ಜನ ಅವರ ಮೇಲೆ ಬಿದ್ದರು ಅಂತೂ ಕೆ.ಎನ್ ಆಸ್ಪತ್ರೆ ಸೇರಿದರು. ಮತ್ತಷ್ಟು ಜನ “ಡೌನ್ ವಿತ್ ಕೆ.ಎನ್” ಘೋಷಣೆ ಕೂಗಿದರು.

ಮಾರನೇ ದಿನ ನಮ್ಮ ಗುಂಪಿನ ನಾಯಕ ನಂಜೇಗೌಡ ಹಾಗೂ ಎದುರು ಪಾರ್ಟಿ ಮುಖಂಡ ಪುರುಷೋತ್ತಮ ಪ್ರಿನ್ಸಿಪಾಲರ ಎದುರಿಗೆ ಹಾಜರಾಗಿ ಅನಾಹುತಗಳಿಗೆ ಕಾರಣ ಸಮಜಾಯಿಷಿ ಹೇಳಬೇಕಾಯಿತು. ಮತ್ತೆ ಈ ತಪ್ಪುಗಳ ಪುನರಾವರ್ತನೆಯಾಗಬಾರದೆಂದು, ಆದರೆ ಕಾಲೇಜಿನಿಂದ ಹೊರಹಾಕಲಾಗುವುದೆಂದೂ ಬೆದರಿಕೆ ಹಾಕಿ ಛೀಮಾರಿ ಮಾಡಿ ಕಳಿಸಿದರು ಪ್ರಾಂಶುಪಾಲರು. ಹೊರಗೆ ಬಂದ ಇಬ್ಬರೂ ಆ ನನ್ಮಗ ಪ್ರಿನ್ಸಿಪಾಲನಿಗೇನ್ ಗೊತ್ತು ಬಿಸಿರಕ್ತದವ್ರ ಹಗೆ ಹೇಗಿರುತ್ತೆಂತ?” ಎಂದು ಬೈಯ್ದುಕೊಂಡಿದ್ದು ಎಲ್ಲರಿಗೂ ಕೇಳಿಸಿತ್ತು. ಮತ್ತೆ ತೆರೆಮರೆಯಲ್ಲಿಯೇ ಈ ಜಗಳ ಮುಂದುವರಿದಿತ್ತು. ಬಲಿಷ್ಠನಾದ ನಂಜೇಗೌಡ, ಪುಂಡ ಪುರುಷೋತ್ತಮರ ನಡುವೆ ‘ಯೂನಿಯನ್ ಇಲೆಕ್ಷನ್’ ನಡೆದಂದಿನಿಂದಲೇ ಜಗಳ ಆರಂಭವಾಗಿದ್ದು. ಇಲ್ಲಿಯವರೆಗೂ ಮುಂದುವರಿದುಕೊಂಡೇ ಬಂದಿತ್ತು.

ನಾನೇನೂ ಅಷ್ಟು ಬಲಿಷ್ಟವಾದ ಆಳಲ್ಲವಾದರೂ ನಂಜೇಗೌಡನ ಆಶ್ರಯದಲ್ಲಿದ್ದುದರಿಂದ ನಮಗೆ ಎಲ್ಲಾ ಜೂನಿಯರ್ಸ್ ಹೆದರುತ್ತಿದ್ದುದು ನನಗೆ ಒಂದು ರೀತಿಯ ಹೆಮ್ಮೆಯ ವಿಷಯವಾಗಿತ್ತು. ನಾನು ಯಾವ ಗಲಾಟೆಗೂ ಹೋಗುತ್ತಿರಲಿಲ್ಲವಾದರೂ ‘ಗುಂಪಿನಲ್ಲಿ ಗೋವಿಂದ’ ಎಂಬಂತೆ ನಮ್ಮ ಗುಂಪಿಗೆ ಪ್ರೋತ್ಸಾಹ ಕೊಡುತ್ತಿದ್ದೆ. ನಂಜೇಗೌಡ ನಮ್ಮ ಜೊತೇಲಿದ್ರೆ ಏನೋ ಒಂದು ರೀತಿ ಹುಚ್ಚು ಧೈರ್ಯ ನನ್ನನ್ನು ಮುತ್ತುತ್ತಿತ್ತು. ಒಬ್ಬನೇ ಐದಾರು ಜಲ ಗಟ್ಟಿಗರ ಜೊತೆ ಜೀವವನ್ನೂ ಲೆಕ್ಕಿಸದೆ ಹೊಡೆದಾಡುತ್ತಿದ್ದ ಅವನು. ಅವನೇ ಆಸ್ಪತ್ರೆಗೆ ಸೇರಿದ ಅಂದ ಮೇಲೆ ನಮ್ಮ ಗುಂಪಿನವರಾರೂ ಪುರುಷೋತ್ತಮನಿಗೆ ಸಾಟಿ ಇಲ್ಲಂತ ತಿಳಿದು ನಖಶಿಖಾಂತ ನಡುಗಿದೆ.

ನಾನು ಊರಿನಲ್ಲಿದೀನೆಂದು ಅವ್ರಿಗೆ ಹೇಗೋ ಗೊತ್ತಾಯ್ತು ಎಂದು ದಿವಾಕರನನ್ನು ಕೇಳಿದೆ. ಹೆದರಿಕೆಗೋ ಬಿಸಿಲಿಗೋ ಮೈಯಲ್ಲಿ ಬೆವರು ಹರಿಯುತ್ತಿತ್ತು.
ಬೆಳಿಗ್ಗೆ ನೀನು ಬಸ್ಸಿಂದ ಇಳಿಯುತ್ತಿದ್ದುದನ್ನು ನೋಡ್ದೆ ಅಂತ ಆ ಮರಿ ಹೇಳ್ದ. ಆಗ ಆ ಪುರುಷೋತ್ತಮ ‘ನೋಡು ಅವ್ನಿಗೆ ಹೇಗೂ ಅವ್ರ ಗುಂಪಿನವ್ರು ಇಲ್ದೇ ಇರೋ ವಿಷಯ ಗೊತ್ತಿಲ್ಲ. ಹೇಗಿದ್ರೂ ಕಾಲೇಜಿಗೆ ಬಂದೆ ಬರ್ತಾನೆ ಬರ್ದೇ ಇದ್ರೆ ಅವ್ನ ರೂಮಿನ ಹತ್ರಾನೇ ಹೋಗಿ ಅಟ್ಯಾಕ್ ಮಾಡೋದು’ ಅಂತ ಮಾತಾಡ್ಕೋತಾ ಇದ್ರು ಧರ್ಮಣ್ಣಾ’ ಅಂದ. ನನ್ನ ಹೃದಯ ಡವಗುಟ್ಟತೊಡಗಿತು. ನಡುಗುವ ಧನಿಯಿಂದ ‘ಸದ್ಯಕ್ಕೆ ನಾನ್ ಎಲ್ಲಿಗೋಗಲಿ ದಿವಾಕರ? ಊರಿಗೋಗಣ ಅಂದ್ರೆ ಇವತ್ ತಾನೇ ವಾಪಸ್ ಬಂದಿದೀನಿ’ ಎಂದೆ

appದಿವಾಕರ ಬಹಳ ಸಹೃದಯಿ. ಓದಿನಲ್ಲೂ ಮುಂದು ಕಾಲೇಜಿಗೆ ಹೋಗೋವಾಗಷ್ಟೇ ನಮ್ಮಿಬ್ಬರ ಮಾತು ಓದಿನ ಬಗ್ಗೆಯೇ ಅವನ ಮಾತು ಈ ಸ್ಟ್ರೈಕ್-ಗೀಕ್ ಅಂತ ಏಕೆ ಓಡಾಡ್ತಿ ಧರ್ಮಣ್ಣಾ? ಹಳ್ಳಿಯಿಂದ ಬಂದಿರೋದು ಓದೋಕೆ ಹಾಯಾಗಿ ಓದಿ ಅಪ್ಪ-ಅಮ್ಮರಿಗೆ ಸಂತೋಷ ತರ್ಬಾರ್ದಾ? ಅಂತ ಎಷ್ಟೋ ಸಲ ಹೇಳಿದ್ದ. ಕಾಲೇಜಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಅವನದೇ ಓಡಾಟ. ಎಲ್ಲರ ಜೊತೆ ಸಜ್ಜನಿಕೆಯ ವ್ಯವಹಾರ ಅಷ್ಟೇ ಯಾವ ಪಾರ್ಟಿಗೂ ಸೇರಿದವನಲ್ಲ. ನಂಜೇಗೌಡನ ಬಳಿ ಎಷ್ಟು ಸೌಹಾರ್ದತೆಯಿಂದ ವರ್ತಿಸುತ್ತಿದ್ದನೋ ಪುರುಷೋತ್ತಮನ ಬಳಿಯೂ ಅಷ್ಟೇ ಸೌಹಾರ್ದತೆಯಿಂದ ವರ್ತಿಸುತ್ತಿದ್ದ. ಯಾರ ಬಳಿಯೂ ಶತ್ರುತ್ವ ಕಟ್ಟಿಕೊಂಡವನೇ ಅಲ್ಲ.

‘ನೋಡ್ ಧರ್ಮಣ್ಣಾ, ಈ ಪಾರ್ಟಿ, ಹೊಡೆದಾಟದಿಂದ ಎಷ್ಟು ಅಪಾಯ. ಈಗ ನಿನಗೆ ಎಷ್ಟ್ ಹೆದ್ರಿಕೆ ಆಗ್ತಾ ಇದೆ. ನೀನು ಸಾಯಕು ಇಷ್ಟ ಪಡದ ವ್ಯಕ್ತಿ. ಆದ್ರೂ ಕಾಲೇಜಿನಲ್ಲಿ ಗ್ಯಾಂಗ್ ಸೇರಿ ಪರದಾಡ್ತಿ ನೋಡು ಇವತ್ತು ರಾತ್ರಿವರೆಗೂ ನಮ್ಮನೇಲೇ ಇರು. ರಾತ್ರಿ ಕೊನೇ ಬಸ್ಸಿಗೆ ಊರಿಗೆ ಹೋಗು ಮನೇಲಿ ಕೇಳಿದ್ರೆ ಕಾಲೇಜಲ್ಗಲಿ ಏನೋ ಗಲಾಟೆ ಎಲ್ಲಾ ಮುಗಿಯೋವರ್ಗೂ ರಜಾ ಅಂತ ಹೇಳು ಇಲ್ಲಿ ಎಲ್ಲಾ ತಣ್ಣಗಾಗೋವರ್ಗೂ ಈ ಕಡೆ ಬರ್ಬೇಡ ಗೊತ್ತಾಯ್ತಾ? ಅಂತ ಹೇಳಿ ಅವನ ಮನೆಗೆ ಕರೆದುಕೊಂಡು ಹೋದ. ಅವನ ತಂದೆತಾಯಿಯರೂ ನನ್ನನ್ನು ಬಹಳ ಆತ್ಮೀಯತೆಯಿಂದ ಕಂಡರು. ಅಷ್ಟು ಸನಿಹದಲ್ಲಿದ್ದರೂ ನಾನು ಒಮ್ಮೆಯೂ ಅವರ ಮನೆಗೆ ಹೋಗಿರಲಿಲ್ಲ. ಅವನ ತಂದೆತಾಯಿಗಳ ಬಹಳ ವೈಚಾರಿಕೆತಯ ಮಾತನಾಡಿದರು. ತಮ್ಮ ಮಗನ ಮೇಲಿದ್ದ ಅಭಿಮಾನ ಅವರ ಪ್ರತಿ ಮಾತಿನಲ್ಲೂ ವ್ಯಕ್ತವಾಗುತ್ತಿತ್ತು. ಅಷ್ಟರಲ್ಲಿ ನನ್ನ ರೂಮಿನ ಹತ್ತಿರ ಏನೋ ಗುಜು ಗುಜು ಅಸ್ಪಷ್ಟ ಮಾತುಗಳು ಕೇಳಿಬರಲಾರಂಭಿಸಿದವು. ನನ್ನ ಎದೆ ನಗಾರಿಯಂತಾಯಿತು. ಹೃದಯದ ವೇಗ ಹೆಚ್ಚಾಯಿತು. ಅಸ್ಪಷ್ಟ ಮಾತುಗಳೆಡೆ ನನ್ನ ಕಿವಿ ನಿಮಿರಿತು.

“ಅವ್ನಿನ್ನೂ ಇಲ್ಲಿಗೆ ಬಂದೆ ಇಲ್ಲ ಗುರು. ಈವಾಗ ಬರ್ಬಹ್ದು. ಇಲ್ಲೇ ಕಾಯ್ತಾ ಕೂತಿರೋಣ ಕಣೋ” ಮರಿ ಧ್ವನಿ ಸ್ಪಷ್ಟವಾಗಿತ್ತು.
“ಅವ್ನಿನ್ನೆಷ್ಟೊತ್ತಿಗ್ ಬರ್ತಾನೋ ಏನೋ? ಬಂದವ್ನು ಗಲಾಟೆ ಅಂತ ಗೊತ್ತಾಗಿ ಪರಾರಿಯಾದ್ನೋ ಏನ್ ಕಥೇನೋ” ಪುರುಷೋತ್ತಮನ ಪ್ರತಿಕ್ರಿಯೆ.
“ಇಲ್ಲ ಹೇಳ್ಗೂರೂ ಅಷ್ಟ್ ಬೇಗ ಗಲಾಟೆ ಸುದ್ದಿ ಯಾರ್ ಹೇಳ್ತಾರೆ? ಅವ್ನಿಗೆ ಇನ್ನೂ ಗೊತ್ತಾಗಿರಲ್ಲ. ಅವ್ನು ಸಿಕ್ಕೇ ಸಿಗ್ತಾನೆ’ ನನ್ನ ಕಂಡ್ರೆ ಆಗದಿದ್ದ ಶೇಖರ ನುಡಿದಿದ್ದ.
“ಯಾಕ್ರೋ ಸುಮ್ನೆ ರಾಮಾಯಣ ಯಾವಾಗ್ಲೂ ಪುಸ್ತಕದ ಹುಳಾ ಆಗಿರೋ ದಿವಾಕರನ ಮನೆ ಇಲ್ಲೋ ಇರೋದು ಒಂದು ಮಾತ್ ಕೇಳ್ಕಂಡ್ ಬರೋಣ ಬನ್ರೋ ಅವನೇನಾದ್ರೂ ಬಂದ್ ಹೋದ್ನಾ ಅಂತ”

ಪುರುಷೋತ್ತಮನ ನಿರ್ಧಾರದ ದ್ವನಿ ಕೇಳಿ ನನಗಲ್ಲೇ ಎಲ್ಲಾ ಆಗೋ ಹೊಗಾಯ್ತು. ಉಸಿರು ಬಿಗಿ ಹಿಡಿದು ಕುಳಿತುಕೊಂಡೆ.
ನನಗೆ ಧೈರ್ಯವಾಗಿರುವಂತೆ ಹೇಲಿ ದಿವಾಕರ ಹೊರಗಡೆ ಹೋಗಿ ನಿಂತ “ ಏನ್ ಪುರುಷಣ್ಣ ಈ ಕಡೆ ನಿಗ್ಯಾಂಗ್ ಬಂದ್ಬಿಟ್ಟಿದೆ “ ಅಂದ ಹಾಗೇ ಸುಮ್ನೇ ಧರ್ಮನ್ ನೋಡ್ಕೊಂಡ್ ಹೋಗೋಣಾಂತ ಬಂದ್ವಿ ಏಕೆ? ಅವ್ನಿನ್ನೂ ಬಂದಿಲ್ವಾ ಊರ್ನಿಂದ? ಅಂದ ಪುರುಷೋತ್ತಮ .
ಬೆಳಿಗ್ಗೆ ಬಂದ್ಹಾಗಿತ್ತು ಮತ್ತದೇನೋ ಅವ್ರ ನೆಂಟ್ರೆಗ್ಯಾರಿಗೋ ಹುಷಾರಿಲ್ಲ ಅಂತ ಕಾಗ್ದ ಬಂದಿತ್ತಂತೆ ಬಂದಿದ್ದೇ ತಡ ಮತ್ತೆ ಅದೊ ಕಾಲಲ್ಲಿ ವಾಪಾಸ್ ಹೋದ್ರು. ಆವಾಗ್ ಬರ್ತಾರೋ ಗೊತ್ತಿಲ್ಲ ಹೇಳ್ಬೇಕಿತ್ತೇನೂ? ಅಂದ ದಿವಾಕರ ಏನ್ ಇಲ್ಲ ಬಿಡು ದಿವಾಕರ ಅವ್ನು ಬಂದ್ ಮೇಲೆ ನಾವೇ ಬಂದ್ ಮಾತಾಡ್ತೀವಿ ಬರಾಣ?’’ ಅಂದ.

ದಿವಾಕರ ‘ಒಳಗೆ ಬಂದು ಕಪ್ ಕಾಫಿ ಕುಡೀಬಹುದಲ್ಲ’ ಅಂದ. ಬೇಡ ದಿವಾಕರ, ಇನ್ನೊಂದ್ ದಿನ ನಿಧಾನವಾಗಿ ಬಂದು ತಗೋತೀವಿ. ಇವತ್ತು ತುಂಬಾ ಕೆಲಸ ಇದೆ ಬರ್ತೀವಿ’’ ಎಂದು ಪುರುಷೋತ್ತಮ ತನ್ನವರ ಜೊತೆ ಹೋದದ್ದು ಸ್ಪಷ್ಟವಾಗಿ ತಿಳಿಯಿತು. ಒಳಗೆ ಬಂದ ದಿವಾಕರ ಅಲ್ಲೇ ರಾತ್ರೀವರೆಗೂ ಸುಧಾರಿಸಿಕೊಂಡು ಕಡೇ ಬಸ್ಸಿಗೆ ಊರಿಗೆ ಹೋಗಲು ತಿಳಿಸಿದ ಅವನ ತಂದೆ ತಾಯಿ ನನಗೆ ಸೂಕ್ತ ಬುದ್ದಿವಾದವನ್ನೂ ಎಚ್ಚರವನ್ನೂ ಹೇಳಿದರು. ಅಂದು ರಾತ್ರೀ ಹತ್ತುವರೆಗಿತ್ತು ದಿವಾಕರನೂ ನನ್ನ ಜೊತೆಯಾಗಿ ಬಸ್ ನಿಲ್ಧಾಣದವರೆಗೂ ಬಂದು ಹತ್ತಿಸಿ ಹುಷಾರ್ ಧರ್ಮಣ್ಣಾ, ‘ಈ ಗಲಾಟೆ ಎಲ್ಲಾ ಮುಗಿಯೋವರ್ಗೂ ಈ ಕಡೆ ಬರ್ಬೇಡ” ಎಂದು ಹೇಳಿ ಹಿಂದಿರುಗಿದ.

ಬೆಳಿಗ್ಗೆ ತಾನೇ ಊರಿಂದ ಹೋದವನು ಮತ್ತೆ ಹಿಂದಿರುಗಿದ್ದನ್ನು ಕಂಡ ಅವ್ವಾ,‘ಇದೇನ್ಲಾ ಮಗಾ ವತ್ತಾರೆ ಹ್ವಾದೋನು ಇಷ್ಟ್ ಮುಂಚೆ ಬಂದ್ಬುಟ್ಟೆ?” ಅಂದಳು. ‘ಕಾಲೇಜಾಗ್ ಗಲಾಟೆ ಕಣವ್ವಾ ಒಬ್ರುನ್ ಒಬ್ರು ಚಚ್ಚ್‍ತಾ ಅವ್ರೆ. ಅದ್ಕೆ ಗಲಾಟೆ ಮುಗಿಯೋವರ್ಗೂ ರಜಾ” ಅಂದೆ. ಜಗಲಿ ಮೇಲೆ ಬೀಡಿ ಸೇದ್ತಾ ಕುಂತಿದ್ದ ಅಪ್ಪ ‘ಮಿಂಡ್ರುಗುಟ್ಟಿದ್ ನನ್ ಮಕ್ಕಳು ಸಾಲೀಗ್ ಓದಾಕ್ ಬತ್ತಾವೋ ಕಿತ್ತಾಡಕ್ ಬತ್ತಾವೋ? ಕಾಲ ಕೆಟ್ಟೋತು ಕಣ್ಲಾ” ಅಂದ ಅಲ್ಲೇ ಇದ್ದ ಅವ್ವಾ ‘ಯಂಗಾರ ಆಗ್ಲಿ ತಗಾ ಗಲಾಟೆಗ್ ಸಿಕ್‍ದಂಗ್ ಮನೆ ಸೇರ್ಕಂತಲ್ಲಾ ಮಗಾ ಆಟೇ ಸಾಕು. ಅದೆಲ್ಲಾ ಮುಗಿಯೋ ಗಂಟಾ ಆ ಕಡಿಕ್ ತಲೆ ಮಡಗ್‍ಬೇಡ ಕಣ್ ಮಗ” ಅಂದಳು.
ಹದಿನೈದು ಇಪ್ಪತ್ತು ದಿನ ಕಳೆದಿರಬೇಕು. ಒಂದು ದಿನ ಇದ್ದಕ್ಕಿದ್ದಂತೆ ಷಡಕ್ಷರಿ ಹಳ್ಳಿಯಲ್ಲಿ ಬಂದಿಳಿದ “ನೋಡ್ ಧರ್ಮ, ಗಲಾಟೆ ಎಲ್ಲಾ ತಣ್ಣಗಾಗಿದೆ. ಯಥಾ ಪ್ರಕಾರ ಕಾಲೇಜಲ್ಲಿ ಪಾಠ ನಡೀತಿದೆ. ಬಾ ಹೋಗೋಣ’ ಅಂದ. ನಾನು ಅಪ್ಪ-ಅಮ್ಮನಿಗೆ ಹೇಳಿ ಹಳ್ಳಿಯಿಂದ ಹೊರಟೆ.

ಹೋಗ್ತಾ ದಾರೀಲಿ ‘ಏಯ್ ಧರ್ಮ ನಂಜೇಗೌಡನ್ನ ಹೆಂಗ್ ದನ ಬಡ್ದಾಂಗ್ ಬಡ್ದಿದಾರೆ. ಈಗ ಅವ್ನು ಹುಷಾರಾಗವ್ನೆ. ಅವ್ರು ಗುಂಪಲ್ಲಿ ಯಾರಾದ್ರೂ ಸಿಗ್ಲಿ ಕೈಯ್ನೋ, ಕಾಲ್ನೋ ತೆಗೀಬೇಕು ಏನಂತಿಯಾ? ಅಂತ ಅದೂ ಇದೂ ಹೇಳ್ತಾನೇ ಇದ್ದ. ನಾನು ಅವ್ನು ಹೇಳಿದ್ದಕ್ಕೆಲ್ಲಾ ಹೂಂಗುಟ್ಟುತ್ತಾ ನಡೆದಿದ್ದೆ.
ಇಬ್ಬರೂ ಬಸ್ ಹಿಡಿದು ಊರು ತಲುಪಿದ ತಕ್ಷನ ನನ್ನನ್ನು ಅಪಾಯದಿಂದ ಪಾರು ಮಾಡಿದ ದಿವಾಕರನ ನೆನಪಾಯಿತು. ಅವನನ್ನು ನೋಡಿ ಧನ್ಯವಾದ ತಿಳಿಸಿ ಬರುವ ಮನಸಾಯಿತು. “ನೀನು ಕಾಲೇಜಿಗೆ ಹೋಗ್ತಾ ಇರು. ನಾನು ರೂಮಿಗೋಗಿ ಬಟ್ಟೆ ಬದಲಾಯಿಸಿ ಬರ್ತೀನಿ’ ಎಂದೆ.

ಬೇಗ ಬಂದ್ಬಿಡು ಎಂದ ಷಡಕ್ಷರಿ ಕಾಲೇಜು ಹಾದಿ ಹಿಡಿದ. ನಾನು ದಿವಾಕರನ ಮನೆಯ ಹತ್ತಿರ ಬಂದೆ. ಬಾಗಿಲು ಮುಚ್ಚಿತ್ತು; ಬಾಗಿಲು ತಟ್ಟಿದೆ. ಅವನ ತಾಯಿ ಬಾಗಿಲು ತೆರೆದು ನನ್ನನ್ನು ನೋಡಿದರು. ನೋಡಿದವರೇ ಮುಖ ಮುಚ್ಚಿ ಜೋರಾಗಿ ಅಳಲು ಮೊದಲು ಮಾಡಿದರು. ಅಳುವಿನ ದನಿ ಕೇಳಿ ಅಲ್ಲಿಗೆ ಬಂದ ಅವನ ತಂದೆ ನನ್ನನ್ನು ನೋಡಿ ‘ಬನ್ನಿ ಧರ್ಮ ಪ್ರಕಾಶ್’ ಎಂದರು. ನಂತರ ತಮ್ಮ ಹೆಂಡತಿಯನ್ನು ಕುರಿತು ಇದೇನ್ ನೀನು ಮಾಡ್ತಾ ಇರೋದು? ಬಂದವರ ಎದುರಿಗೆ ಹೀಗೆ ಅತ್ತರೆ ಹೇಗೆ? ನಡಿ ಒಳಗೆ ಎಂದು ಹೇಳಿ ಅವರನ್ನು ಒಳಗೆ ಕಳುಹಿಸಿದರು. ‘ಬನ್ನಿ ಒಳಗೆ’ ಎಂದು ನನ್ನನ್ನು ಒಳಗೆ ಕರೆದರು. ‘ಸಾರ್ ಏನಾಯ್ತು? ಅಮ್ಮ ಏಕೆ ಹಾಗೆ ಅಳ್ತಾ ಇದ್ದಾರೆ?” ಕೇಳಿದೆ.

ನೀವು ಇಲ್ಲಿಂದ ಅವತ್ತು ಹೋದ ಮೇಲೆ ಇಲ್ಲೇನಾಯ್ತು ಅಂತ ನಿಮ್ಗೆ ಗೊತ್ತಿಲ್ಲ, ಧರ್ಮ ಪ್ರಕಾಶ್ ಆ ಹೊತ್ತು ರಾತ್ರಿ ದಿವಾಕರ ನಿಮ್ಮನ್ನು ಬಸ್ ಹತ್ತಿಸಿ ಬರೋದನ್ನ ಆ ಶೇಕರ್ ನೋಡಿದ್ನಂತೆ. ಅವ್ನು ಪುರುಷೋತ್ತಮನಿಗೆ ಹೇಳಿದ್ದಾನೆ. ವೂರನೇ ದಿನ ದಿವಾಕರ ಕಾಲೇಜಿಗೆ ಹೋಗೋವಾಗ ಆ ಸರ್ಕಲ್ ಬಳಿ ಪುರುಷೋತ್ತಮ ಅವನ ಗ್ಯಾಂಗೆಲ್ಲಾ ನಿಂತಿದ್ರಂತೆ. ದಿವಾಕರನ್ನ ನೋಡಿ, ‘ಏನಲೋ ನಮ್ಗೇ ಸುಳ್ ಬೋಗಳ್ತಿಯಾ? ನಿನ್ ಮನೇಲೇ ಅವನ್ ಇಟ್ಕೊಂಡು ಅವ್ನು ಇಲ್ವೇ ಇಲ್ಲಾ ಅಂತಾ ಬುರುಡೆ ಬಿಡ್ತೀಯಾ? ಎಂದು ಎಲ್ಲರೂ ಅವನ ಮೇಲೆ ಬಿದ್ರಂತೆ. ಅಲ್ಲಿದ್ದ ಜನ ಬಿಡಿಸಿಕೊಳ್ಳಲು ಮುಂದೆ ಬಂದಾಗ ‘ಯಾವನಾದ್ರು ಮುಂದೆ ಬಂದ್ರೆ ಅವ್ರುನ್ನ ಹುಟ್ಲಿಲ್ಲಾ ಅನ್ನಿಸಿ ಬಿಡ್ತೀನಿ” ಅಂತಾ ಹೆದರಿಸಿದ್ರಂತೆ. ಪಾಪ ಎಲ್ಲಾ ಹೆದ್ರಿ ಹಿಂದೆ ಸರಿದ್ರಂತೆ. ಸರಿ ಎಲ್ರೂ ಸೇರಿ ಮನಸಾ ಇಚ್ಚೆ ದಿವಾಕರನ್ನ ಬಡ್ದು ಹಾಕಿದ್ರಂತೆ. ನಮ್ಮ ಮನೆಗೆ ಒಬ್ಬ ಓಡಿ ಬಂದು ವಿಷಯ ತಿಳಿಸಿದಾಗ ನಾನು ಗಾಬರಿಯಿಂದ ಅಲ್ಲಿಗೆ ಓಡಿದೆ. ಯಾರು ಅಲ್ಲಿರಲಿಲ್ಲ. ಕೆಲವು ಜನ ಸೇರಿ ಏಟು ತಿಂದು ಬಿದ್ದಿದ್ದ ದಿವಾಕರನನ್ನು ಆಸ್ಪತ್ರೆಗೆ ಸಾಗಿಸಿದ್ದರು. ನಾನು ಅಲ್ಲಿಗೆ ಹೋಗೋ ಅಷ್ಟೊತ್ತಿಗೆ ಎಲ್ಲಾ ಮುಗಿದಿತ್ತು. ಅತಿಯಾದ ಪೆಟ್ಟಿನಿಂದ ಚೇತರಿಸಿಕೊಳ್ಳಲಾಗದೆ ದಿವಾಕರನ ಜೀವ ಹೋಗಿತ್ತು. ಅವ್ನು ನಮ್ಮನ್ನೆಲ್ಲಾ ಬಿಟ್ಟು ಹೊರಟೇ ಹೋಗಿದ್ದ ಎಂದು ಹೇಳುತ್ತಾ ಹೇಳುತ್ತಾ ದುಃಖ ತಡೆಯಲಾರದೆ ಬಿಕ್ಕಿದರು. ಅದುವರೆಗೂ ತಡೆದಿದ್ದ ಅವರ ದುಃಖದ ಕಟ್ಟೆಯೊಡೆದಿತ್ತು.

ಅವರು ಹೇಳಿದ ವಿಷಯ ಕೇಳಿ ನನಗೆ ದಿಕ್ಕೆ ತೋಚದಂತಾಯಿತು. ಅಯ್ಯೋ ದೇವರೇ ಇದೇನು ನ್ಯಾಯ ನಿನ್ನದು? ಇಷ್ಟಕ್ಕೂ ದಿವಾಕರ ತನ್ನ ಪ್ರಾಣವನ್ನೇ ತೆತ್ತಿದ್ದ. ನನ್ನ ಒಳ್ಳೆಯದಕ್ಕಾಗಿ, ನನ್ನನ್ನು ರಕ್ಷಿಸುವುದಕ್ಕಾಗಿ ಹೋದ ದಿವಾಕರ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದನ್ನು ನೆನೆದು ನನ್ನ ಜೀವ ಹಿಡಿಯಾಯಿತು. ಈ ಸಂಘರ್ಷದಲ್ಲಿ ನಿಜವಾದ ಅಪರಾಧಿ ಯಾರು? ಎಂಬ ಪ್ರಶ್ನೆ ನನ್ನ ಮನದೆದುರಿಗೆ ದುತ್ತೆಂದು ಪ್ರತ್ಯಕ್ಷವಾಯಿತು. ಈ ದುರ್ಘಟನೆಗಳಿಗೆಲ್ಲಾ ಕಾರಣನಾದ ನಾನು ಅಪರಾಧಿಯೇ ಸಹಾಯ ಮನೋಭಾವದ ದಿವಾಕರ ಅಪರಾಧಿಯೇ? ಅಥವಾ ವಿದ್ಯಾರ್ಥಿ ಜೀವನದಲ್ಲಿ ಇಂತಹ ಅಭಿರುಚಿಗಳಿಗೆ ಪೂರಕವಾಗಿರುವ ನಮ್ಮ ಈ ವ್ಯವಸ್ಥೆಯೇ ಅಪರಾಧಿಯೇ? ಎಂಬ ಪ್ರಶ್ನೆಗಳು ಮನದ ಮೇಲೆ ಧಾಳಿ ಮಾಡಲಾರಂಭಿಸಿದವು.

ಅಂದು ರಾತ್ರಿ ದಿವಾಕರ ನನ್ನನ್ನು ಬಿಡಲು ಬಸ್ಸಿನವರೆಗೆ ಬರದಿದ್ದರೆ ಚೆನ್ನಿತ್ತೇನೋ ಎನಿಸಿತು. ಅವನನ್ನು ನೆನೆದು ದುಃಖದಿಂದ ಕುತ್ತಿಗೆಯ ನರಗಳು ಬಿಗಿದು ಬಂದವು. ನನ್ನ ಸ್ಥಿತಿಯೇ ಹೀಗಿರುವಾಗ ತಮ್ಮ ಮಗನ ಭವಿಷ್ಯದ ಬಗ್ಗೆ ಭವ್ಯ ಕನಸ್ಸನ್ನೇ ಕಟ್ಟಿದ್ದ ಆ ತಂದೆ-ತಾಯಿಗಳ ಪಾಡೇನು? ಎಂಬ ಅರಿವಾದೊಡನೆ ಅವರೆದುರು ನಾನು ಕುಬ್ಜನಾದಂತೆನಿಸಿತು. ಮಗನ ಮರಣದ ದುಃಖದಲ್ಲಿ ಬೆಂದು ಹೋಗುತ್ತಿದ್ದ ಆ ವಾತ್ಸಲ್ಯಮಯಿಗಳಿಗೆ ಯಾವ ರೀತಿ ಸಮಾಧಾನವನ್ನು ಹೇಳಲೂ ತೋಚದೆ ಮೌನವಾಗಿ ಶಿಲೆಯಂತೆ ತಲೆತಗ್ಗಿಸಿ ಕುಳಿತೇ ಇದ್ದೆ.