ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್ ಕಲ್ಯಾಣರಾಜ್ಯದ ಕನಸುಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

 

ಜನರ ತೆರಿಗೆ ಹಣ ಪೋಲಾಗುತ್ತಿದೆ!

ಜನರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ

ಹಸಿದವರಿಗೆ ಮೀನು ಹಿಡಿಯುವುದನ್ನು ಕಲಿಸಬೇಕೇ ಹೊರತು ಮೀನನ್ನೇ ಕೊಡುವುದು ಸರಿಯಲ್ಲ!

ಇಂತಹ ಆಣಿ ಮುತ್ತುಗಳು ನಿತ್ಯವೂ ಕೇಳಿ ಬರುತ್ತಿದೆ. ಅದರಲ್ಲೂ ನವಸಾಕ್ಷರಸ್ಥರ  ಮಾಧ್ಯಮಗಳೆಂದೇ ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ನೂರಾರು ಸ್ಟೇಟಸ್ಸುಗಳು, ಪುಟ್ಟ ಲೇಖನಗಳು,  ವ್ಯಂಗ್ಯ ಚಿತ್ರಗಳು ಹರಿದಾಡುತ್ತಿವೆ.  ಕರ್ನಾಟಕ ಸರಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದೆನಿಸಿದ ಇಂದಿರಾ ಕ್ಯಾಂಟೀನ್  ಆರಂಭವಾದ ಕ್ಷಣದಿಂದಲೆ, ಈ ಯೋಜನೆಯ ಬಗೆಗಿನ ಅಸಹನೆ, ಅಸಮಾದಾನಗಳು ಹೀಗೆ ಅಭಿವ್ಯಕ್ತಗೊಳ್ಳಲಾರಂಬಿಸಿದವು.

ಇದೇನು ಹೊಸ ರೀತಿಯ ಅಸಹನೆಯಲ್ಲ. ಬಹಳವೇನಲ್ಲ, ಕೇವಲ ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಸರಕಾರ ಬಡವರಿಗೆ ಅನ್ನಭಾಗ್ಯ ಯೋಜನೆ ಘೋಷಿಸಿದಾಗಲೂ ಇಂತಹುದೇ   ಅಸಮಾದಾನ ಆಕ್ರೋಶಗಳನ್ನು  ಅಕ್ಷರಸ್ಥ ಮೇಲು ಮಧ್ಯಮವರ್ಗ   ಹೊರಹಾಕಿತ್ತು. ಆದರೆ  ಅವತ್ತು ಈ ಅಸಹನೆ ಇಷ್ಟೊಂದು ಸಂಘಟಿತವಾಗಿರಲಿಲ್ಲ. ಇದೀಗ ಈ ಅಸಹನೆಗೊಂದು ರಾಜಕೀಯ ಬಣ್ಣವೂ ಅಂಟಿಕೊಂಡು ಉಳ್ಳವರ ಅಸೂಯೆ ಅಸಹನೆಗಳು ಉಲ್ಬಣಗೊಂಡಂತೆ ಕಾಣುತ್ತಿದೆಯಷ್ಟೆ!

ಕಲ್ಯಾಣರಾಜ್ಯದ ಕಲ್ಪನೆಯೇ ಇರದ ವರ್ಗವೊಂದು ಮಾತ್ರ ಇಂತಹ  ಮಾತುಗಳನ್ನು ಆಡಬಲ್ಲದು.ಇವತ್ತು ನಾವು ಒಪ್ಪಿಕೊಂಡಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಅದೂ ಈ ಘಟ್ಟದಲ್ಲಿ ಕಲ್ಯಾಣರಾಜ್ಯದ ಆಶಯಗಳನ್ನು  ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಜನತೆಯ ಬದುಕಿನ ಸಮಸ್ತ ಮಗ್ಗುಲುಗಳಿಗೂ ಸರಕಾರದ ಸೇವಾವ್ಯವಸ್ಥೆಯನ್ನು ವಿಸ್ತರಿಸುವುದೇ ಕಲ್ಯಾಣರಾಜ್ಯ ಕಲ್ಪನೆಯ ಮುಖ್ಯ ಗುರಿಯಾಗಿರುತ್ತದೆ. ಕೇಂದ್ರೀಕೃತಗೊಳ್ಳುವ ಬಂಡವಾಳದ ನಡುವೆಯೇ ದುಡಿಯುವ ಜನರ  ಮತ್ತು ಶ್ರಮಕ್ಕೆ ತಕ್ಕಂತಹ ಪ್ರತಿಫಲ ದೊರೆಯದಂತಹ  ಅಸಮಾನ ಸ್ಥಿತಿಯಲ್ಲಿ  ಆ ವರ್ಗದ ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಸರಕಾರದ ಕರ್ತವ್ಯವಾಗಿರುತ್ತದೆ ಮತ್ತು ಆಗಿರಲೇ ಬೇಕು.

ಆದರೆ ಈ ಕಲ್ಯಾಣರಾಜ್ಯದ  ಕಲ್ಪನೆ ಶಾಶ್ವತವಾಗಿರಲೇಬೇಕೆಂಬ ನಿಯಮವೇನಿಲ್ಲ. ದುಡಿಯಲು ಶಕ್ತವಾಗಿರುವ ಕೈಗಳಿಗೆ ಉದ್ಯೋಗಾವಕಾಶಗಳನ್ನು ನೀಡಿ ಸೂಕ್ತ ಪ್ರತಿಪಲ ನೀಡಲು ಸಮರ್ಥವಾದ ದಿನ ಈ ಕಲ್ಯಾಣರಾಜ್ಯದ  ಉಚಿತಗಳು ಇಲ್ಲವಾಗುತ್ತವೆ. ಅಂದರೆ, ಇದರ ಅರ್ಥ ನಾವೂ ಸಹ ಈ ದಾರಿಯಲ್ಲಿ ನಡೆಯಬೇಕಾದ ಅನಿವಾರ್ಯತೆ ಇದೆ ಎನ್ನುವುದಾಗಿದೆ. ಇದನ್ನು ಸಾದ್ಯವಾಗಿಸಲು ಬೇಕಾದ ರಾಜಕೀಯ ಇಚ್ಚೆಗಳನ್ನು ನಮ್ಮ ರಾಜಕೀಯ ವ್ಯವಸ್ಥೆ ತೋರಿಸಬೇಕಿದೆ. ಆದರೆ ನಮ್ಮ ಪ್ರಜಾಪ್ರಭುತ್ವದ ಪಕ್ಷ ರಾಜಕಾರಣ ವ್ಯವಸ್ಥೆಯಲ್ಲಿ ಸಕ್ರಿಯವಾಗಿರುವ ಶಕ್ತಿಗಳಿಗೆ ಕಲ್ಯಾಣರಾಜ್ಯದ ಉಚಿತಗಳನ್ನು ನೀಡುವಲ್ಲಿ ಇರುವ  ಆಸಕ್ತಿ  ಆ ಉಚಿತಗಳ ಅಗತ್ಯವೇ ಇರದಂತೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲವಾಗಿದೆ. ಸದ್ಯಕ್ಕೆ ಇದೇ ನಮ್ಮ  ದುರಂತ!

ಸಮಾಜದ ಎಲ್ಲ ವರ್ಗದ ಜನರಿಗೆ ದುಡಿಯುವ ಅವಕಾಶ ಒದಗಿಸಿದಾಗ ಮಾತ್ರ  ಸರಕಾರಗಳ ಈ ಉಚಿತ ಯೋಜನೆಗಳು ಇಲ್ಲವಾಗುತ್ತವೆ. ಅಲ್ಲಿಯವರೆಗೂ  ಇಂತಹ ಸರಕಾರಿ ಪ್ರಾಯೋಜಿತ  ಯೋಜನೆಗಳು ಘೋಷಣೆಯಾಗುತ್ತಲೇ ಇರುತ್ತವೆ.  ಇಂತಹ ಯೋಜನೆಗಳನ್ನು ವಿರೋಧಿಸುವ ಹಸಿವಿನ ನಿಜ ಅರ್ಥ ತಿಳಿಯದ ವರ್ಗಗಳಿಗೆ ಈ ಸತ್ಯ  ಗೊತ್ತಾಗಬೇಕಿದೆ. ಸಮಾಜದ ಸಮಸ್ತ ಸಂಪನ್ಮೂಲಗಳೂ ತಮ್ಮ  ಸುಖಕ್ಕೆ ಮೀಸಲೆಂದು ನಂಬಿಕೊಂಡಿರುವ ಈ ವರ್ಗ ತನ್ನ ಸ್ವಹಿತಾಸಕ್ತ ರಾಜಕೀಯ ಒಲವುಗಳನ್ನು ಬದಿಗಿಟ್ಟು ಸಮಾನ ಅವಕಾಶಗಳ ಸಮಾಜವೊಂದರ ನಿರ್ಮಾಣದತ್ತ ಮನಸ್ಸು ಮಾಡಿನಡೆದಾಗ ಮಾತ್ರ  ಅವರ ಟೀಕೆಗಳಿಗೆ ಒಂದು ಅರ್ಥ ಬರುತ್ತದೆ.  ಸಮತೆಯ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಕೆಲಸ ಮಾಡದ  ಪಕ್ಷ ರಾಜಕಾರಣವನ್ನು ವಿರೋಧಿಸಿ ನಿಂತು ಹೋರಾಡಿದರೆ ಮಾತ್ರ  ಕಲ್ಯಾಣರಾಜ್ಯದ  ಉಚಿತಗಳ ಅಗತ್ಯವೇ ಇರದಂತಹ ಒಂದು ವ್ಯವಸ್ಥೆಯನ್ನು ನಾವು ರೂಪಿಸಬಹುದಾಗಿದೆ. ಇದನ್ನು ನಮ್ಮ ಅಕ್ಷರಸ್ಥ ಮೇಲುಮಧ್ಯವರ್ಗ ಅರಿಯಬೇಕಿದೆ ಮತ್ತು ಅಲ್ಲಿಯವರೆಗು ಬಡವರ ಉಸಿರಿಗೆ ಆಸರೆಯಾಗಬಲ್ಲ ಅನ್ನಭಾಗ್ಯ  ಇಂದಿರಾ ಕ್ಯಾಂಟೀನುಗಳಂತಹ ಯೋಜನೆಗಳ ಕುರಿತಾದ ಅಸಮಾದಾನವನ್ನು ತೊರೆದು, ಸಹನಶೀಲತೆಯಿಂದ  ಬದುಕಬೇಕಾಗಿದೆ.

 

Leave a Reply

Your email address will not be published.