ಅನುವಾದ ನಿರಂತರ ಪಯಣದಂತೆ

ಸಂದರ್ಶನ: ಲಕ್ಷ್ಮೀಕಾಂತ್ ಎಸ್.ಬಿ., ನರಸಿಂಹಮೂರ್ತಿ ಹಳೇಹಟ್ಟಿ

sujnanaತೆಲುಗು-ಕನ್ನಡ ಅನುವಾದ ಕ್ಷೇತ್ರದಲ್ಲಿ ಬಿ.ಸುಜ್ಞಾನಮೂರ್ತಿ ಅವರದು ಇತ್ತೀಚಿಗೆ ಕೇಳಿಬರುತ್ತಿರುವ ಪ್ರಮುಖ ಹೆಸರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಇವರು ಪುಸ್ತಕಗಳ ಸೊಗಸು, ವಿನ್ಯಾಸ ಮತ್ತು ಅಚ್ಚುಕಟ್ಟುತನದಿಂದ ಪುಸ್ತಕಲೋಕದಲ್ಲಿ ಹೆಸರಾದವರು. ವೃತ್ತಿಜೀವನದ ಜೊತೆಗೆ ಅನುವಾದದಲ್ಲಿಯೂ ಗಂಭೀರವಾಗಿ ತೊಡಗಿಸಿಕೊಂಡು ಈವರೆಗೆ 40 ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ತಂದಿದ್ದಾರೆ. ಮಹಾಶ್ವೇತಾದೇವಿ ಅವರ ‘ಯಾರದೀ ಕಾಡು’ ಕಾದಂಬರಿಯ ಅನುವಾದಕ್ಕೆ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನಶೀಲ ಭಾಷಾಂತರ ವಿಭಾಗದಲ್ಲಿ ಪುಸ್ತಕ ಬಹುಮಾನ(2003) ಹಾಗೂ ಆಂಧ್ರಪ್ರದೇಶದ ಚಾರಿತ್ರಿಕ ರೈತ ಹೋರಾಟವನ್ನು ಆಧರಿಸಿದ ‘ತೆಲಂಗಾಣ ಹೋರಾಟ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನೇತರ ವಿಭಾಗದ ಪುಸ್ತಕ ಬಹುಮಾನ(2013) ಸಂದಿದೆ. ಡಿಸೆಂಬರ್ 9, 2016ರಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2016ನೇ ಸಾಲಿನ ಗೌರಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಇದರ ನೆಪದಲ್ಲಿ ಶ್ರೀಯುತರೊಂದಿಗೆ ನಡೆಸಿದ ಮಾತುಕತೆಯ ಪೂರ್ಣಪಾಠ ಇಲ್ಲಿದೆ.

1. ಸರ್ ನಮಸ್ತೆ, ನೀವು ಹುಟ್ಟಿದ್ದು ಕರ್ನಾಟಕ ಮತ್ತು ತಮಿಳುನಾಡಿನ ಗಡಿಭಾಗಕ್ಕೆ ಹೊಂದಿಕೊಂಡ ಒಂದು ಹಳ್ಳಿಯಲ್ಲಿ. ನಿಮ್ಮ ಬಾಲ್ಯ ಜೀವನದ ಬಗ್ಗೆ ತಿಳಿಸಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ನಮ್ಮೂರು. 500 ಮನೆಗಳಿರುವ ಊರು. ಮುತ್ತಿನಂಥ ನೆಲ್ಲು ಬೆಳೆಯುತ್ತಿದ್ದ ಊರಾದ್ದರಿಂದ ಮುತ್ತಾನಲ್ಲೂರು ಎಂಬ ಹೆಸರು ಬಂದಿದೆಯಂತೆ. ಇದು ನಿಜವೂ ಆಗಿತ್ತು. ನಮ್ಮೂರ ಕೆರೆಯ ಉದ್ದವೇ ಮೂರುವರೆ ಕಿ.ಮೀ. ಇದೆ. ಭತ್ತದ ಇಳುವರಿ ಜಾಸ್ತಿಯಾದ್ದರಿಂದ 70ರ ದಶಕದಲ್ಲಿ ಜಪಾನಿನವರು ಬಂದು ನಮ್ಮೂರಿನಲ್ಲಿ ಭತ್ತದ ಕೃಷಿ ಬಗ್ಗೆ ಸಂಶೋಧನೆ ನಡೆಸಿದ್ದರು. ನಮ್ಮದು ತ್ರಿಭಾಷಿಕ ಪರಿಸರವಾದರೂ ಕನ್ನಡ ತೆಲುಗು ಚರ ದ್ವಿಭಾಷಿಕ ಪ್ರದೇಶವಾಗಿದೆ. ತೆಲುಗು ಮನೆಮಾತಿನ ಜನರೇ ಇಲ್ಲಿ ಜಾಸ್ತಿ. ನನ್ನ ಅನುವಾದ ಕಂಡು ಎಲ್ಲರೂ ‘ನಿಮ್ಮ ಮದರ್ ಟಂಗ್ ತೆಲುಗೇ’ ಎಂದು ಕೇಳುತ್ತಿದ್ದರು. ಆಗ ನಾನು ಇಲ್ಲ ನನ್ನ ‘ಅದರ್ ಟಂಗ್ ತೆಲುಗು’ ಎನ್ನುತ್ತಿದ್ದೆ. ನನ್ನ ಹೆತ್ತಭಾಷೆ ಕನ್ನಡ ಹೊತ್ತಭಾಷೆ ತೆಲುಗು. ತಮಿಳುನಾಡಿನ ಗಡಿ ನಮ್ಮೂರಿಗೆ ಕೇವಲ 8 ಕಿ.ಮೀ ಅಂತರದಲ್ಲಿದೆ. ತಮಿಳು ಚೆನ್ನಾಗಿ ಅರ್ಥ ಅಗುತ್ತೆ. ನಮ್ಮ ತಂದೆ ತುಂಬಾ ಚೆನ್ನಾಗಿ ತಮಿಳಿನಲ್ಲಿ ಮಾತಾಡ್ತಿದ್ರು. ಇತ್ತೀಚೆಗೆ ತಮಿಳಿನ ಪ್ರಭಾವ ಸ್ವಲ್ಪ ಜಾಸ್ತಿ ಆಗ್ತಿದೆ.

2. ಪ್ರಸಾರಾಂಗದ ಸಹಾಯಕ ನಿರ್ದೇಶಕರಾಗಿದ್ದೀರಿ, ನಿಮ್ಮ ವೃತ್ತಿಜೀವನ ಹೇಗೆ ಪ್ರಾರಂಭವಾಯಿತು?

1992 ನವೆಂಬರ್‍ನಲ್ಲಿ ಸಂಶೋಧನ ಸಹಾಯಕನಾಗಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಕೃಷಿ ಪದಕೋಶ ಎಂಬ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೆ ನಂತರ ಕನ್ನಡ ಭಾಷಾಭಿವೃದ್ಧಿ ವಿಭಾಗದಲ್ಲಿ ಅಧ್ಯಾಪಕನಾಗಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದೆ. ನನ್ನ ವ್ಯಕ್ತಿತ್ವ ಮತ್ತು ಅಸ್ತಿತ್ವಕ್ಕೆ ಸೂಕ್ತ ಕೆಲಸವೆಂದು ನಿರ್ಧರಿಸಿ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡತೊಡಗಿದೆ. ಇದರಿಂದ ಪುಸ್ತಕ ಪ್ರಕಟಣೆಯ ಹಲವು ವಿಷಯಗಳನ್ನು ತಿಳಿಯಲು ನೆರವಾಯಿತು. ಅಕ್ಷರ ಸಂಯೋಜನೆ, ಕರಡು ತಿದ್ದಿಕೆ, ಪುಟವಿನ್ಯಾಸದ ಬಗ್ಗೆ ವಿಶೇಷ ಗಮನ ಹರಿಸಿದೆ. ಇದರಿಂದಾಗಿ ಪ್ರಸಾರಾಂಗದ ಪುಸ್ತಕಗಳನ್ನು ಎಲ್ಲರೂ ಓದುವಂತೆ ರೂಪಿಸಲು ಸಾಧ್ಯವಾಯಿತು.

3. ನಿಮ್ಮ ವೃತ್ತಿ ಬದುಕಿನೊಂದಿಗೆ ಭಾಷಾಂತರವನ್ನೂ ನಿರಂತರವಾಗಿ ಕಾಯಕದಂತೆ ಮಾಡಿಕೊಂಡು ಬರುತ್ತಿದ್ದೀರಿ. ಇದಕ್ಕೆ ಸ್ಫೂರ್ತಿ ಏನು?

ಪ್ರಸಾರಾಂಗದ ಪ್ರಕಟಣಪೂರ್ವ ಮತ್ತು ಪ್ರಕಟಣೋತ್ತರ ಕೆಲಸಗಳನ್ನು ಒಂದೇ ಸಮನೆ ನಿರ್ವಹಿಸಿದ ನಂತರ ಭಾಷೆಗೆ ಸಂಬಂಧಿಸಿದ ಕೆಲಸವೆಂಬಂತೆ ಸ್ವಲ್ಪ ಸ್ವಲ್ಪ ಅನುವಾದವನ್ನು ಮಾಡುತ್ತಾ ಬರುವ ಅಭ್ಯಾಸ ಮಾಡಿಕೊಂಡೆ. ಈ ಪ್ರವೃತ್ತಿ ನನಗೆ ಸಂತೋಷವನ್ನೂ ಜವಾಬ್ದಾರಿಯನ್ನೂ ನೀಡಿತು. ಒಂದೊಂದು ಅನುವಾದ ಪ್ರಕಟವಾಗಿ ಪುಸ್ತಕರೂಪದಲ್ಲಿ ಪ್ರಕಟಗೊಂಡಾಗಲೆಲ್ಲಾ ಒಂದು ಚಿಕ್ಕ ಕೆಲಸ ಮಾಡಿದೆ ಎಂಬ ತೃಪ್ತಿಯ ಭಾವನೆ ತುಂಬಿಕೊಳ್ಳುತ್ತಿತ್ತು. ಕನ್ನಡದ ಓದುಗರಿಗೆ ವೈಚಾರಿಕ ವಿಷಯವನ್ನು ತೆಲುಗಿನಿಂದ ನೀಡಿದೆ ಎಂಬ ಹೆಮ್ಮೆಯೂ ಮೂಡುತ್ತಿತ್ತು. ಕೆಲಸದ ಮಧ್ಯೆ ಬಿಡುವು ಎಂಬಂತೆ ಅನುವಾದ ಕೆಲಸವನ್ನು ಮಾಡುತ್ತಾ ಇದ್ದೇನೆ.

4. ಭಾಷಾಂತರ ಕ್ಷೇತ್ರದತ್ತ ತಾವು ಹೊರಳಿದ್ದು ಯಾವಾಗ? ಅದಕ್ಕೆ ಕಾರಣಗಳೇನಾದರೂ ಇವೆಯೇ?

ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ವಿಶೇಷ ನೆರವು ಯೋಜನೆಯಡಿಯಲ್ಲಿ ಕನ್ನಡ-ತೆಲುಗು ನಿಘಂಟನ್ನು ಸಂಕಲನ ಮಾಡುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ವ್ಯಾಪಕವಾಗಿ ತೆಲುಗು ಸಾಹಿತ್ಯವನ್ನು ಓದುವ ಸಂದರ್ಭ ಒದಗಿತು. ಅದಕ್ಕೂ ಮುನ್ನ ತೆಲುಗು ಭಾಷೆ ಮಾತಾಡುವುದು, ಆ ಭಾಷೆಯ ಸಿನಿಮಾ ನೋಡುವುದು ನನ್ನ ಹವ್ಯಾಸವಾಗಿತ್ತು. ಆನೇಕಲ್ ತಾಲ್ಲೂಕಿನ ಸುತ್ತಮುತ್ತಲ ಹೋಬಳಿ ಕೇಂದ್ರಗಳಲ್ಲಿ ತೆಲುಗು ಸಿನಿಮಾಗಳನ್ನೇ ಹೆಚ್ಚಾಗಿ ಪ್ರದರ್ಶಿಸುತ್ತಿದ್ದರಿಂದ ಚಿಕ್ಕಂದಿನಲ್ಲ್ಲಿ ನಾನು ತೆಲುಗು ಸಿನಿಮಾಗಳನ್ನು ನೋಡಿದ್ದೇ ಹೆಚ್ಚು. ಕನ್ನಡ ಭಾಷೆಯ ಸಿನಿಮಾಗಳಿಗಿಂತ ತೆಲುಗು ಸಿನಿಮಾಗಳು ಎಲ್ಲ ರೀತಿಯಿಂದ ವೈವಿಧ್ಯಮಯವಾಗಿಯೂ ಅದ್ಧೂರಿಯಾಗಿಯೂ ಇರುತ್ತಿದ್ದವು. ತೆಲುಗು ಸಿನಿಮಾ ಸಂಭಾಷಣೆಯೂ ಆಕರ್ಷಕ ವಾಗಿರುತ್ತಿತ್ತು. ನನಗೆ ಚೆನ್ನಾಗಿ ಅರ್ಥವೂ ಆಗುತ್ತಿತ್ತು. ಮೈಸೂರಿನಲ್ಲಿ ಕನ್ನಡ-ತೆಲುಗು ನಿಘಂಟು ಸಂಕಲಿಸುವಾಗ ತೆಲುಗು ಲಿಪಿ ಬರೆಯುವುದನ್ನು ಕಲಿತೆ. ಇಲ್ಲಿ ತೆಲುಗು ಪ್ರಾಧ್ಯಾಪಕರಾದ ಆರ್ವೀಯಸ್ ಸುಂದರಂ ಅವರು ರಾಳ್ಳಪಲ್ಲಿ ಅನಂತಕೃಷ್ಣಶರ್ಮ ಅವರು ಬರೆದ ಒಂದು ಪತ್ರವನ್ನು ಕನ್ನಡಕ್ಕೆ ಅನುವಾದಿಸಿಕೊಡಲು ನನಗೆ ನೀಡಿದರು. ನನ್ನ ಅನುವಾದವನ್ನು ಅನಿಕೇತನ ಪತ್ರಿಕೆಯಲ್ಲಿ ಪ್ರಕಟಿಸಿದರು. ಇದರಿಂದ ನಾನು ಬಹಳ ಉತ್ತೇಜನಗೊಂಡೆ. ರೀಜನಲ್ ಕಾಲೇಜಿನಲ್ಲಿ ತೆಲುಗು ಅಧ್ಯಾಪಕರಾಗಿದ್ದ ಶಾಸ್ತ್ರಿಯವರು ಟಿ. ಗೋಪೀಚಂದ್ ಅವರ `ಅಸಮರ್ಥುನಿ ಜೀವಯಾತ್ರ’ ಕಾದಂಬರಿ ಓದಲು ಕೊಟ್ಟರು. ಇದು ತೆಲುಗಿನ ಶ್ರೇಷ್ಠ ಕಾದಂಬರಿಯೆಂದು ಹೆಸರಾಗಿತ್ತು. ಇದನ್ನು `ಅಸಮರ್ಥನ ಜೀವನಯಾತ್ರೆ’ ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದೆ.

ನಂತರ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವಾಗ ಡಾ. ಎಚ್.ಎಸ್. ರಾಘವೇಂದ್ರ ರಾವ್ ಅವರು ಸೂಚಿಸಿದ ಓಲ್ಗಾ ಅವರ ‘ಸ್ತ್ರೀವಾದಿ ಅವಗಾಹನ’À ಎಂಬ ಲೇಖನವನ್ನು ಅನುವಾದಿಸಿದೆ. ಅದು ‘ಸ್ತ್ರೀವಾದಿ ಅರಿವು’ ಎಂಬ ಹೆಸರಿನಲ್ಲಿ ಅನಿಕೇತನದಲ್ಲಿ ಪ್ರಕಟವಾಯಿತು. 1993ರಲ್ಲಿ ಕೆ.ವಿ. ನಾರಾಯಣ ಅವರು ನೀಡಿದ ಮಹಾಶ್ವೇತಾದೇವಿಯವರ `ಎವರಿದೀ ಅಡವಿ’ ಕಾದಂಬರಿ ಅನುವಾದಿಸಿದೆ. ಈ ಕಾದಂಬರಿ ಅನುವಾದಕ್ಕೆ ಸೃಜನಶೀಲ ಅನುವಾದವೆಂದು 2003ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂತು. ನನ್ನ ಮೊದಲ ಗಂಭೀರ ಪ್ರಯತ್ನಕ್ಕೆ ಬಂದ ಪ್ರಶಸ್ತಿಯಿಂದ ನನಗೆ ಬಹಳ ಸಂತೋಷವಾಯಿತು. ಆ ನಂತರ ನಾನು ತೆಲುಗಿನಿಂದ ನಿರಂತರವಾಗಿ ಅನುವಾದ ಮಾಡುತ್ತಾ ಬಂದೆ.

5. ನಿಮ್ಮ ‘ತೆಲಂಗಾಣ ಹೋರಾಟ’ ಕೃತಿಗೆ ಇತ್ತೀಚೆಗಷ್ಟೇ ಸೃಜನೇತರ ಅನುವಾದ ವಿಭಾಗದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ನಿಮಗೆ ಏನನ್ನಿಸುತ್ತಿದೆ?

ತೆಲಂಗಾಣ ರೈತ ಹೋರಾಟ 1946ರಿಂದ 1951ರವರೆಗೆ ಆಂಧ್ರಪ್ರದೇಶದಲ್ಲಿ ಘಟಿಸಿದ ಚಾರಿತ್ರಿಕ ಆಂದೋಲನ. ಬ್ರಿಟಿಷ್ ಸಾಮ್ರಾಜ್ಯಶಾಹಿ, ನಿಜಾಮನ ಫ್ಯೂಡಲ್ ಆಳ್ವಿಕೆ ಮತ್ತು ಜೀವವಿರೋಧಿ ಭೂಮಾಲೀಕರ ವಿರುದ್ಧ ರೈತರು ನಡೆಸಿದ ಮಹಾವಿಪ್ಲವ ಇದು. ವ್ಯವಸ್ಥೆಯ ಅಧಿಕಾರ, ಅಹಂಕಾರ, ಅಂತಸ್ತು ಇತ್ಯಾದಿಗಳ ಎದುರು ಸಾಮಾನ್ಯ ರೈತರು ತಮ್ಮ ಅಸ್ತಿತ್ವ ಹಾಗೂ ಆತ್ಮಗೌರವಕ್ಕಾಗಿ ನಡೆಸಿದ ಸುದೀರ್ಘ ಸಮರ. ಸರ್ವಾಧಿಕಾರ ಎನ್ನುವ ಪರ್ವತವನ್ನು ಛಿದ್ರಗೊಳಿಸಿದ ಸಾಮಾನ್ಯ ಜನರ ಆತ್ಮಬಲ ಇದು. ಈ ಹೋರಾಟ ತೆಲುಗುನಾಡಿನ ಚರಿತ್ರೆಯಲ್ಲಿ ಒಂದು ಉಜ್ವಲಘಟ್ಟ. ಚರಿತ್ರೆಯ ಈ ಹೋರಾಟಕ್ಕೆ ಮುಖಾಮುಖಿಯಾದವರು ಜನಸಾಮಾನ್ಯರು. ಹಾಗಾಗಿ ಇದು ನಿಜಚರಿತ್ರೆಯ ಅನಾವರಣ. ಇಂಥ ಕೃತಿಗೆ ಪ್ರಶಸ್ತಿ ಬಂದಿರುವುದು ನನಗೆ ಬಹಳ ಸಂತೋಷವನ್ನುಂಟು ಮಾಡಿದೆ. ಕನ್ನಡ ವಿಶ್ವವಿದ್ಯಾಲಯದ ಗೆಳೆಯರೆಲ್ಲರೂ ಈ ಕೃತಿಗೆ ಪ್ರಶಸ್ತಿ ಬರುತ್ತದೆ ಎಂದು ಹಾರೈಸಿದ್ದರು.

6. ಚಾರಿತ್ರಿಕವಾದ ಈ ತೆಲಂಗಾಣ ರೈತ ಹೋರಾಟದ ಸಾಧನೆ ಏನು?

ಈ ಹೋರಾಟವನ್ನು 16000 ಚದರ ಮೈಲಿ ವಿಸ್ತೀರ್ಣವುಳ್ಳ ಪ್ರದೇಶದಲ್ಲಿ ಸುಮಾರು 3000 ಗ್ರಾಮಗಳ ರೈತರು ನಡೆಸಿದರು. ಇದರ ಫಲವಾಗಿ ಆ ಪ್ರದೇಶಗಳಲ್ಲಿ ಪಂಚಾಯಿತಿಗಳಿಗೆ ಪರ್ಯಾಯವಾಗಿ ಗ್ರಾಮರಾಜ್ಯಗಳನ್ನು ಸ್ಥಾಪಿಸಿಕೊಂಡರು. ಜಮೀನ್ದಾರರನ್ನು ಈ ಗ್ರಾಮಗಳಿಂದ ಓಡಿಸಿ ಅವರ ಹೊಲಗಳನ್ನು ರೈತರು ವಶಪಡಿಸಿಕೊಂಡರು. ಜನಸಮಿತಿಗಳ ನೇತೃತ್ವದಲ್ಲಿ ಹತ್ತು ಲಕ್ಷ ಎಕರೆ ಭೂಮಿಯನ್ನು ರೈತರಿಗೆ ಹಂಚಲಾಯಿತು. ಕೃಷಿ ಕಾರ್ಮಿಕರ ದಿನಗೂಲಿಯನ್ನು ಹೆಚ್ಚಿಸಲಾಯಿತು. ಕನಿಷ್ಠ ವೇತನವನ್ನು ಜಾರಿಗೊಳಿಸಲಾಯಿತು. ಲಕ್ಷಾಂತರ ಜನರು ಮೊಟ್ಟಮೊದಲ ಬಾರಿಗೆ ದಿನಕ್ಕೆ ಎರಡು ಸಾರಿ ಊಟ ಮಾಡುವಂತಾಯಿತು. ಈ ಚಾರಿತ್ರಿಕ ರೈತ ಹೋರಾಟ ಅಸಫ್‍ಜಾಹಿ ವಂಶದ ನಿರಂಕುಶ ಆಡಳಿತವನ್ನು ನಾಶಮಾಡಿತು.

7. ‘ತೆಲಂಗಾಣ ಹೋರಾಟ’ ಕೃತಿಯ ಮೂಲ ಲೇಖಕರ ಬಗ್ಗೆ ತಿಳಿಸಿ.

ಕಮ್ಯೂನಿಸ್ಟ್ ನೇತಾರ, ಕಮ್ಯೂನಿಸ್ಟ್ ಗಾಂಧಿಯೆಂದೇ ಪ್ರಸಿದ್ಧರಾದ ಪುಚ್ಚಲಪಲ್ಲಿ ಸುಂದರಯ್ಯ ಅವರು ಮೂಲತಃ ತೆಲಂಗಾಣ ಸಶಸ್ತ್ರ ಹೋರಾಟಗಾರರು. ಗಾಂಧಿ ಸಿದ್ಧಾಂತಗಳಿಂದ ಆಕರ್ಷಿತರಾದ ಇವರು ತಮ್ಮ 17ನೇ ವಯಸ್ಸಿನ ಹೈಸ್ಕೂಲ್ ದಿನಗಳಲ್ಲಿಯೇ ಸ್ವಾತಂತ್ರ್ಯ ಚಳವಳಿಗೆ ದುಮುಕಿದವರು. ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ ಇವರಿಗೆ ಕಮ್ಯೂನಿಸ್ಟ್ ಹೋರಾಟಗಾರರ ಸಾಂಗತ್ಯ ಲಭಿಸಿತು. ಇದರಿಂದ ಕಮ್ಯೂನಿಸ್ಟ್ ತತ್ವಗಳ ಒಲವು ಬೆಳೆಸಿಕೊಂಡ ಸುಂದರಯ್ಯ ಅಮೀರ್ ಹೈದರ್‍ಖಾನ್ ಪ್ರೇರಣೆಯಿಂದ ಕಮ್ಯೂನಿಸ್ಟ್ ಪಾರ್ಟಿಗೆ ಸೇರಿದರು. ಆಂಧ್ರ ಸೇರಿದಂತೆ ಇಡೀ ಭಾರತದಲ್ಲಿ ಎಡಪಂಥೀಯ ಚಳವಳಿಯ ಸಿದ್ಧಾಂತಗಳನ್ನು ಹರಡುವ ಜವಾಬ್ದಾರಿ ಹೊತ್ತರು. ದೇಶಾದ್ಯಂತ ಕಮ್ಯೂನಿಸ್ಟ್ ಶಾಖೆಗಳ ಹುಟ್ಟಿಗೆ ಶ್ರಮಿಸಿದ ಇವರು 1936ರಲ್ಲಿ ಅಖಿಲ ಭಾರತ ಕಿಸಾನ್‍ಸಭೆ ಆರಂಭಿಸಿದವರಲ್ಲಿ ಪ್ರಮುಖರು. ತೆಲಂಗಾಣ ಹೋರಾಟದ ಮುಂಚೂಣಿಯಲ್ಲಿದ್ದ ಇವರು 1948ರಿಂದ 1952ರವರೆಗೆ ಅಜ್ಞಾತವಾಗಿ ಪಕ್ಷವನ್ನು ಸಂಘಟಿಸಿದರು. 1952ರಲ್ಲಿ ಮದ್ರಾಸ್ ಮತಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಮೂರು ಬಾರಿ ಆಂಧ್ರ ಶಾಸನಸಭೆಯ ಸದಸ್ಯರಾಗಿದ್ದರು. ಶ್ರೀಮತಿ ಲೀಲಾ ಇವರ ಪತ್ನಿ. ಮಕ್ಕಳು ಹುಟ್ಟಿದರೆ ಜನಸೇವೆಗೆ ಅಡಚಣೆಯಾಗುತ್ತದೆಂದು ಭಾವಿಸಿದ ಸುಂದರಯ್ಯ ದಂಪತಿಗಳು ಸಂತಾನಹರಣ ಶಸ್ತ್ರಕ್ರಿಯೆಗೆ ಒಳಗಾದರು. ತಂದೆಯಿಂದ ಲಭಿಸಿದ ಆಸ್ತಿಯನ್ನು ಬಡವರಿಗೆ ಹಂಚಿದರು. ಪಾರ್ಲಿಮೆಂಟ್ ಮತ್ತು ಆಂಧ್ರ ಅಸೆಂಬ್ಲಿ ಸದಸ್ಯರಾಗಿದ್ದ ದಿನಗಳಲ್ಲಿ ಇವರು ಸೈಕಲ್‍ನಲ್ಲಿಯೇ ಅಧಿವೇಶನಕ್ಕೆ ಹೋಗುತ್ತಿದ್ದರು. ಇದು ಅವರ ಸರಳತೆಗೊಂದು ನಿದರ್ಶನ. ಗಾಂಧಿಯ ಸರಳತೆ, ಟಂಗಟೂರಿ ಪ್ರಕಾಶಂ ಅವರ ಜನಪ್ರೀತಿ, ಸರ್ದಾರ್ ಪಟೇಲರ ಛಲಗಾರಿಕೆ ಮತ್ತು ನೆಹರೂ ಅವರ ರಾಜಕೀಯ ನೈಪುಣ್ಯತೆ ಸುಂದರಯ್ಯನವರ ಗುಣಗಳೆಂದು ಇಂದಿಗೂ ಹಳೆಯ ತಲೆಮಾರಿನ ರಾಜಕೀಯ ನಾಯಕರು ಕೊಂಡಾಡುತ್ತಾರೆ.

8. ತೆಲಂಗಾಣ ಹೋರಾಟ ಕೃತಿಯ ಪ್ರಸ್ತುತತೆ ಏನು?

ಐದು ವರ್ಷಗಳ ಕಾಲ ನಡೆದ ತೆಲಂಗಾಣ ರೈತ ಸಶಸ್ತ್ರ ದಂಗೆಯನ್ನು ಭಾರತದ `ಹುನಾನ್ ಹೋರಾಟ’ ಎಂದೇ ಪರಿಗಣಿಸಲಾಗಿದೆ. ವ್ಯವಸ್ಥೆಯ ಕ್ರೌರ್ಯ ಮತ್ತು ಹಿಂಸೆಗೆ ಎದುರಾದ ರೈತಾಪಿ ಸಮುದಾಯದ ಬದ್ಧತೆ, ತ್ಯಾಗ ಈ ಹೋರಾಟದಲ್ಲಿದೆ. ಸಾಮಾನ್ಯರೇ ನೇತೃತ್ವ ವಹಿಸಿದ ಅಸಾಮಾನ್ಯ ಹೋರಾಟ ಇದು. ಈ ಹೋರಾಟ ಘಟಿಸಿದ ಎರಡು ದಶಕಗಳ ನಂತರ ಹೋರಾಟದಲ್ಲಿ ಖುದ್ದಾಗಿ ಭಾಗವಹಿಸಿದ್ದ ಪಿ. ಸುಂದರಯ್ಯ ಆಗಿನ ಅನುಭವಗಳು ಹಾಗೂ ಹೋರಾಟದ ಚಿತ್ರಣವನ್ನು ಸಮೃದ್ಧ ವಿವರಗಳೊಂದಿಗೆ ಕಣ್ಣಿಗೆ ಕಟ್ಟುವಂತೆ ದಾಖಲಿಸಿದ್ದಾರೆ. ಹೀಗೆ ಪ್ರಜ್ಞಾವಂತ ಚರಿತ್ರೆಕಾರನೊಬ್ಬ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಪೂರೈಸಿದ್ದಾರೆ. ಆ ಮೂಲಕ ರೈತರ ಶ್ರಮಕ್ಕೆ ಚರಿತ್ರೆಯಲ್ಲಿ ನ್ಯಾಯೋಚಿತ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಚರಿತ್ರೆಯ ವಿದ್ಯಮಾನಗಳನ್ನು ಶ್ರಮಿಕರ ಮತ್ತು ಸಾಮಾನ್ಯರ ನೆಲೆಯಿಂದ ಚಿತ್ರಿಸಿದ ಈ ಕೃತಿ ನಮ್ಮ ಅರಿವನ್ನು ವಿಸ್ತರಿಸುತ್ತದೆ ಹಾಗೂ ಹೊಸ ತಲೆಮಾರಿಗೆ ಹೋರಾಟದ ಪಾಠಗಳನ್ನು ಒದಗಿಸಿದೆ. ಬಹುಮುಖ್ಯವಾಗಿ ದೇಶದ ಬೇರೆ ಬೇರೆ ಕಡೆ ಜರಗುವ ಶ್ರಮಿಕ ಹೋರಾಟಗಳಿಗೆ ಸ್ಫೂರ್ತಿ ಮತ್ತು ಚೈತನ್ಯದ ಇಂಧನವನ್ನು ನಿರಂತರವಾಗಿ ಒದಗಿಸುತ್ತಲೇ ಬಂದಿದೆ.

9. 570 ಪುಟಗಳ ತೆಲಂಗಾಣ ಹೋರಾಟ ಕೃತಿಯನ್ನು ಭಾಷಾಂತರಕ್ಕೆ ಆಯ್ದುಕೊಳ್ಳಲು ನಿಮಗೆ ಒತ್ತಾಸೆಯಾದ ಅಂಶಗಳಾವುವು?

ಖಾಜಾವಲಿ ಈಚನಾಳ ಎಂಬ ಗೆಳೆಯ 300 ಪುಟದ ತೆಲಂಗಾಣ ರೈತ ಹೋರಾಟದ ಸಂಕ್ಷಿಪ್ತ ಆವೃತ್ತಿಯ ಪುಸ್ತಕ ಓದಲು ಕೊಟ್ಟ. ಇದನ್ನು ಓದಿ ಈ ವಿಷಯವನ್ನು ಗೆಳೆಯ ಡಾ. ಬಿ.ಎಂ. ಪುಟ್ಟಯ್ಯ ಅವರಿಗೆ ತಿಳಿಸಿದೆ. ಕನ್ನಡದ ಎಡಪಂಥೀಯ ಚಿಂತಕರಾದ ಅವರು ಮೊದಲು ಈ ಪುಸ್ತಕವನ್ನು ಅನುವಾದಿಸಿ ಎಂದು ನನ್ನನ್ನು ಅಣಿಗೊಳಿಸಿದರು. ಅನುವಾದವನ್ನು ಪರಿಶೀಲಿಸಿ ಹೋರಾಟದ ಪರಿಭಾಷೆಯನ್ನು ರೂಪಿಸಿಕೊಟ್ಟರು. ಅದು ತೆಲಂಗಾಣ ರೈತ ಹೋರಾಟಕ್ಕೆ 25 ವರ್ಷಗಳಾದ ಪ್ರಯುಕ್ತ ಪ್ರಕಟಿಸಿದ ಆವೃತ್ತಿಯಾಗಿತ್ತು. ಈ ಕೃತಿಯ ಒಂದೊಂದೇ ಅಧ್ಯಾಯ ಓದತೊಡಗಿದ ಮೇಲೆ ನನ್ನಲ್ಲಿ ತಣ್ಣನೆ ವಿದ್ಯುತ್‍ಸಂಚಾರವಾಯಿತು. ಆರೇ ತಿಂಗಳಲ್ಲಿ 300 ಪುಟಗಳ ಅನುವಾದ ಮುಗಿಸಿ ಅದನ್ನು ಹೋರಾಟಗಾರರಾದ ಆರ್. ಮಾನಸಯ್ಯ ಅವರಿಗೆ ಮುನ್ನುಡಿ ಬರೆಯಲು ಕಳುಹಿಸಿದೆ. ಅವರು ಇದು ಸಂಕ್ಷಿಪ್ತ ಆವೃತ್ತಿಯೆಂದು ಇದರ ಸಮಗ್ರ ಅನುವಾದ ಬರಬೇಕೆಂದು ತಮ್ಮ ಬಳಿಯಿದ್ದ ‘ವೀರ ತೆಲಂಗಾಣ ವಿಪ್ಲವ ಪೆÇೀರಾಟಂ ಗುಣಪಾಠಾಲು’ ಕೃತಿ ಕಳುಹಿಸಿದರು. ಅದರಲ್ಲಿ ಇನ್ನೂ ಹತ್ತು ಹೆಚ್ಚುವರಿ ಅಧ್ಯಾಯಗಳಿದ್ದವು. ಅವನ್ನು ಮತ್ತೆ ಅನುವಾದಿಸಿ ಪೂರ್ಣಗೊಳಿಸಿದೆ. ಆ ಹೋರಾಟದಲ್ಲಿ ಸತ್ತವರ ಪಟ್ಟಿಯೇ 30 ಪುಟಗಳಿವೆ. ಸಬಾಲ್ಟರ್ನ್ ಚರಿತ್ರೆಯ ಓದುಗರಿಗೆ ಈ ಮಾಹಿತಿ ಬಹಳ ಮುಖ್ಯವೆಂದು ಅದನ್ನು ಕೃತಿಯಲ್ಲಿ ನೀಡಲಾಗಿದೆ. ಈ ಕೃತಿ ಅನುವಾದಿಸಿದ ನಂತರ ತೆಲುಗಿನಲ್ಲಿ ತುಂಬಾ ಮಹತ್ವದ ಕೃತಿ ಇದೆಂದು ತಿಳಿದು ನನ್ನ ಅನುವಾದ ಸಾರ್ಥಕವಾಯಿತೆಂದು ಸಂತಸಪಟ್ಟೆ.

10. ತಾವು ಒಬ್ಬ ಭಾಷಾಂತರಕಾರರಾಗಿ ಭಾಷಾಂತರ ಮಾಡಲು ಹೊರಟಾಗ ಎದುರಾದ ಸಮಸ್ಯೆಗಳು ಯಾವುವು? ಹೇಗೆ ಬಗೆಹರಿಸಿಕೊಂಡಿರಿ.

ಒಂದು ಭಾಷೆ ಎಂದರೆ ಅದು ಪ್ರಕೃತಿಯಷ್ಟೇ ಶ್ರೀಮಂತವಾದುದು ಮತ್ತು ಸಮುದ್ರದಷ್ಟು ವಿಶಾಲವಾದುದು ಎಂಬುದನ್ನು ಅನುವಾದ ನನಗೆ ಕಲಿಸಿಕೊಟ್ಟಿದೆ. ತೆಲುಗು ತುಂಬಾ ವೈವಿಧ್ಯಮಯವಾದ ಉಪಭಾಷೆಗಳನ್ನು ಒಳಗೊಂಡ ಶಿಷ್ಟಭಾಷೆಯಾಗಿದೆ. ಒಂದು ನಾಮಪದಕ್ಕೆ, ಕ್ರಿಯಾಪದಕ್ಕೆ ತೆಲುಗಿನಲ್ಲಿ ಹಲವು ವೈವಿಧ್ಯಮಯ ಪದಗಳಿವೆ. ಕ್ರಿಯಾಪದದಿಂದ ನಾಮಪದವನ್ನು ರೂಪಿಸಿಕೊಳ್ಳುವುದರಲ್ಲಿ ತೆಲುಗು ಭಾಷೆ ಬಹಳ ಮುಂದಿದೆ. ಭಾಷಿಕ ಸಂದರ್ಭಗಳು, ಸಾಂಸ್ಕøತಿಕ ಸಂದರ್ಭಗಳನ್ನು ಅಧ್ಯಯನ ಮಾಡುವ ಅಭಿಲಾಷೆ ನನಗೆ ಮೊದಲಿನಿಂದಲೂ ಇರುವುದರಿಂದ ನಾನು ತೆಲುಗಿನಿಂದ ಅನುವಾದಿಸಲು ತೊಡಗಿದ್ದೇನೆ.

11. ಇಲ್ಲಿಯವರೆಗೆ 40 ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದೀರಿ. ಹೆಚ್ಚು ತೃಪ್ತಿ ಮತ್ತು ಖುಷಿ ನೀಡಿದ ಕೃತಿ ಯಾವುದು? ಕಾರಣವೇನು

ನಾನು ಅನುವಾದಿಸಬೇಕಾದ ವಸ್ತುವಿಷಯ ಮೊದಲು ನನಗೆ ಇಷ್ಟವಾಗಬೇಕು. ಆಗ ನಾನು ಅದನ್ನು ತೀವ್ರವಾಗಿ ಪರಿಭಾವಿಸುತ್ತೇನೆ. ನಂತರ ಅನುವಾದಕ್ಕೆ ತೊಡಗುವೆ. ನಾನು ಅನುವಾದಿಸಿದ ಯಾವ ಕೃತಿಯೂ ನನಗೆ ಹೆಚ್ಚು ತೃಪ್ತಿ ಮತ್ತು ಖುಷಿಯನ್ನು ನೀಡಿಲ್ಲ. ನನಗನ್ನಿಸಿದಂತೆ ಅನುವಾದ ಎಷ್ಟೇ ಅದ್ಭುತವಾಗಿದ್ದರೂ ಅದು ತೃಪ್ತಿ ನೀಡಲಾರದೆಂದೇ ನನ್ನ ಭಾವನೆ. ಇದಕ್ಕೆ ಮರಗೆಲಸದ ಒಂದು ಉದಾಹರಣೆ ನೀಡಬಯಸುತ್ತೇನೆ. ನನ್ನ ಇಬ್ಬರು ಮಾವಂದಿರು ಅಸಾಮಾನ್ಯ ಕಾರ್ಪೆಂಟರ್‍ಗಳು. ನಾನು ಚಿಕ್ಕಂದಿನಲ್ಲಿ ಅವರು ಹತ್ತರಿ ಹೊಡೆಯುತ್ತಿದ್ದುದನ್ನು ಗಮನಿಸುತ್ತಿದ್ದೆ. ಅವರು ಕಟ್ಟಿಗೆಯ ಮೇಲ್ಮೈ ತುಂಬಾ ನಯವಾಗುವವರೆಗೂ ಹತ್ತರಿ ಹೊಡೆಯುತ್ತಲೇ ಇರುತ್ತಿದ್ದರು. ನಾನು ಅದನ್ನು ಮುಟ್ಟಿ ನೋಡಿ ಸರಿಯಿದೆ ಎಂದರೂ ಬಿಡದೆ ಹೊಡೆಯುತ್ತಿದ್ದರು. ಅದು ಅವರಿಗೆ ಸಮಾಧಾನ ನೀಡಿದರೆ ಮಾತ್ರ ಸುಮ್ಮನಾಗುತ್ತಿದ್ದರು. ಅನುವಾದವೂ ಅಷ್ಟೇ ಎಂದು ನನ್ನ ಅನಿಸಿಕೆ. ಪ್ರತಿ ಅನುವಾದವು ಪುಸ್ತಕ ರೂಪದಲ್ಲಿ ಮುದ್ರಣವಾದಾಗ, ಅದನ್ನು ಓದಿದಾಗ ಇನ್ನೂ ಚೆನ್ನಾಗಿ ಅನುವಾದಿಸಬೇಕಿತ್ತು ಎನಿಸುತ್ತಲೇ ಇರುತ್ತದೆ. ಅಂದರೆ ಅನುವಾದ ನಿರಂತರವಾದ ಪಯಣದಂತೆ.

12. ನೀವು ಭಾಷಾಂತರ ಮಾಡಿದ ಕೃತಿಗಳ ಹೆಸರುಗಳನ್ನು ನೋಡಿದರೆ, ತಾವು ಹೆಚ್ಚು ಉಪೇಕ್ಷೆಗೆ ಗುರಿಯಾದÀ ಜನರ ಬದುಕು, ವೈಚಾರಿಕ ಚಿಂತನೆ ಮುಂತಾದ ವಸ್ತುವಿಷಯಗಳನ್ನು ಆಯ್ದುಕೊಂಡಿದ್ದೀರಿ ಎನಿಸುತ್ತದೆ. ಇದಕ್ಕೆ ಕಾರಣವೇನು?

ಬಿ.ಎ. ಓದುವ ಕಾಲದಿಂದಲೂ ನನಗೆ ವಿಚಾರ ಸಾಹಿತ್ಯವೆಂದರೆ ತುಂಬಾ ಇಷ್ಟ. ಆಗ ನನಗೆ ಪಠ್ಯವಾಗಿದ್ದ ವಿಚಾರ ಸಾಹಿತ್ಯ 1 ಮತ್ತು ವಿಚಾರ ಸಾಹಿತ್ಯ 2 ಎಂಬ ಕೃತಿಗಳಲ್ಲಿನ ಲೇಖನಗಳನ್ನು ಓದಿದ ಮೇಲೆ ಅವುಗಳ ಮೂಲ ಕೃತಿಗಳನ್ನೆಲ್ಲಾ ಸಂಗ್ರಹಿಸಿ ಓದಿದೆ. ವಿಚಾರಗಳು ನಮ್ಮ ಬದುಕನ್ನು ಸುಲಭವಾಗಿಸುತ್ತವೆ, ಸುಖವಾಗಿಸುತ್ತವೆ ಮತ್ತು ಹಸನಾಗಿಸುತ್ತವೆ ಎಂದು ಇಂದಿಗೂ ನಂಬಿದ್ದೇನೆ. ಸರಿಯಾದ ವಿಚಾರಗಳಿಂದ ಯುದ್ಧಗಳನ್ನೇ ತಪ್ಪಿಸಬಹುದೆಂದು ತೆಲುಗಿನ ಪ್ರಖ್ಯಾತ ಚಿಂತಕ ವಿ.ಆರ್. ನಾರ್ಲ ಹೇಳಿರುವುದು ನನಗೆ ಇಂದಿಗೂ ಸತ್ಯವೆನಿಸುತ್ತದೆ. ದೇವರು, ಧರ್ಮ, ಜಾತಿ, ಕಂದಾಚಾರ, ಸಂಪ್ರದಾಯ, ಮೂಢನಂಬಿಕೆ ಇವು ನನ್ನೊಳಗೆ ಇದುವರೆಗೂ ಬರದೆ ಇರುವ ಹಾಗೆ ವಿಚಾರ ಸಾಹಿತ್ಯ ನನ್ನನ್ನು ರೂಪಿಸಿದೆ.

FB_IMG_148770193115813. ತಮ್ಮಂಥ ಹಲವಾರು ಬರಹಗಾರರು ಭಾಷಾಂತರ ಕ್ಷೇತ್ರದಲ್ಲಿ ತೊಡಗಿದ್ದಾರೆ. ಇಂದು ಅವರನ್ನು ಗುರುತಿಸುವ ಕಾರ್ಯ ಆಗುತ್ತಿಲ್ಲ. ಇದಕ್ಕೆ ನಿಮ್ಮ ಅಭಿಪ್ರಾಯವೇನು?

ಅನುವಾದಗಳು ಎರಡನೇ ದರ್ಜೆಯ ಸಾಹಿತ್ಯ ಎಂಬ ಅಭಿಪ್ರಾಯ ಬಹುಶಃ ವಿಮರ್ಶಕರಲ್ಲಿರಬಹುದು. ಒಳ್ಳೆಯ ಅನುವಾದಗಳು ಕನ್ನಡದಲ್ಲಿ ನಿರಂತರವಾಗಿ ಪ್ರಕಟಗೊಂಡು ಓದುಗರಿಂದ ಮನ್ನಣೆ ಪಡೆದಿವೆ. ವಿ.ಎಸ್. ಖಾಂಡೇಕರ್ ಅವರ ‘ಯಯಾತಿ’ ಮತ್ತು ‘ಎರಡು ಧ್ರುವ’ ಕಾದಂಬರಿಗಳನ್ನು ನಾನು ಮೂಲ ಕೃತಿಯೆಂತಲೇ ಗಂಭೀರವಾಗಿ ಓದಿದ್ದೇನೆ. ವಿ.ಎಂ. ಇನಾಂದಾರ್ ಅವರು ಯಯಾತಿ ಕಾದಂಬರಿಯನ್ನು ಅಷ್ಟು ಅದ್ಭುತವಾಗಿ ಅನುವಾದಿಸಿದ್ದಾರೆ. ಅದರಲ್ಲಿನ ಪುರಾಣಪಾತ್ರಗಳು ಸಾಮಾಜಿಕ ಪಾತ್ರಗಳಾಗಿ ನಮ್ಮೊಳಗೆ ತುಂಬಿಕೊಳ್ಳುತ್ತವೆ. ಅದೇ ರೀತಿ ಆಲ್ಬರ್ಟ್ ಕಾಮು, ಫ್ರಾನ್ಜ ಕಾಫ್ಕ, ದಾಸ್ತೊವಸ್ಕಿ, ಥಾಮಸ್ ಹಾರ್ಡಿ, ಟಾಲ್‍ಸ್ಟಾಯ್, ಹೆಮಿಂಗ್ವೇ ಇವರ ಕಾದಂಬರಿಗಳು ನನ್ನನ್ನು ಬಹಳ ಕಾಡಿವೆ. ಕನ್ನಡದಲ್ಲಿ ಪತ್ರಿಕೆಗಳು ಅನುವಾದ ಕೃತಿಗಳಿಗೆ ಮಹತ್ವ ನೀಡಿ ಅವುಗಳನ್ನು ಗಂಭೀರವಾಗಿ ವಿಮರ್ಶೆಗೆ ಸ್ವೀಕರಿಸಿದ್ದು ಕಡಿಮೆ. ಅವುಗಳ ಅಲ್ಪಸ್ವಲ್ಪ ಪರಿಚಯ ಮಾಡಿ ಸುಮ್ಮನಾಗುವುದೇ ಹೆಚ್ಚು. ಅದರಲ್ಲೂ ಪ್ರಖ್ಯಾತರ ಅನುವಾದಗಳನ್ನು ಗಮನಿಸುವುದೇ ಜಾಸ್ತಿ. ಉದಾಹರಣೆಗೆ ನಾನು ಅನುವಾದಿಸಿದ 570 ಪುಟದ ತೆಲಂಗಾಣ ರೈತ ಹೋರಾಟದ ಬಗ್ಗೆ ಕನ್ನಡದ ದೈನಿಕ ಪತ್ರಿಕೆಯಲ್ಲಿ ವಿಮರ್ಶೆಯಿರಲಿ ಪರಿಚಯವೂ ಬರಲಿಲ್ಲ. ನೆರೆಯ ಆಂಧ್ರಪ್ರದೇಶದಲ್ಲಿ 1945ರಿಂದ 1951ರವರೆಗೆ ನಡೆದ ಜಗತ್ತಿನ 2ನೇ ದೊಡ್ಡ ರೈತ ಹೋರಾಟವಿದು. ಇಂತಹ ಕೃತಿಗೆ ಪತ್ರಿಕೆಯಲ್ಲಿ ವಿಮರ್ಶೆಗೆ ಜಾಗವಿಲ್ಲವಾಗಿದೆ. ಕನ್ನಡದಲ್ಲಿಯೂ ವೈವಿಧ್ಯಮಯವಾದ ಅನುವಾದ ಸಾಹಿತ್ಯ ಪ್ರಕಟವಾಗುತ್ತಿದೆ. ಆದರೆ ಅದನ್ನು ಓದುಗರು ಗಮನಿಸುವಂತೆ ಆಸಕ್ತಿ ಮೂಡಿಸಬೇಕಿದೆ.

14. ಅಯ್ಯಂಕಾಳಿ, ಅಯೋತಿದಾಸ್, ಪೆರಿಯಾರ್, ಸಾವಿತ್ರಿಬಾಯಿ ಫುಲೆ, ರಮಾಬಾಯಿ ಅಂಬೇಡ್ಕರ್, ಬುಡಕಟ್ಟು ಹೋರಾಟಗಾರ್ತಿ ಸಿ.ಕೆ. ಜಾನು ಹೀಗೆ ಹಲವರ ಜೀವಪರ ಕಾಳಜಿಯುಳ್ಳ ಚಿಂತನೆಗಳನ್ನು ಕನ್ನಡದ ಓದುಗರಿಗೆ ಪರಿಚಯಿಸಿದ್ದೀರಿ. ಇದರ ಹಿಂದಿನ ಆಶಯಗಳೇನು?

ಕನ್ನಡದ ದಲಿತ ಸಾಹಿತ್ಯ ಮತ್ತು ದಲಿತ ಹೋರಾಟಗಳ ಕುರಿತು ಓದುತ್ತಿದ್ದಾಗ ನಮ್ಮ ನೆರೆಹೊರೆಯ ರಾಜ್ಯಗಳ ದಲಿತ ಸಾಹಿತ್ಯ, ದಲಿತ ಹೋರಾಟಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಹುಟ್ಟಿತು. ನನಗೆ ತೆಲುಗಿನಲ್ಲಿ ಸಿಕ್ಕಿದ ಈ ಬಗೆಯ ಸಾಹಿತ್ಯ ಓದತೊಡಗಿದೆ. ಕನ್ನಡ ನಾಡಿಗಿಂತಲೂ ತೀವ್ರವಾದ ದಲಿತ ಸಾಹಿತ್ಯ ತೆಲುಗಿನಲ್ಲಿ ರಚನೆಯಾಗಿದೆ ಎನಿಸಿತು. ಇದರಿಂದ ಪ್ರೇರಿತನಾಗಿ ತೆಲುಗಿನ ದಲಿತ ಸಾಹಿತ್ಯ ಮತ್ತು ದಲಿತ ಹೋರಾಟಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು  ಒಂದೊಂದಾಗಿ ಅನುವಾದಿಸತೊಡಗಿದೆ. ಇಂತಹ ಪುಸ್ತಕಗಳನ್ನು ಓದಿದ ಕನ್ನಡ ಓದುಗರು ಬಹಳ ಮೆಚ್ಚಿ ಮಾತಾಡಿದರು. ಅಯ್ಯಂಕಾಳಿ ಒಬ್ಬ ದಲಿತ ಹೋರಾಟಗಾರ, ಆತ ನಡೆಸಿದ ರಕ್ತಸಿಕ್ತ ಹೋರಾಟದ ಬಗ್ಗೆ ಕನ್ನಡದಲ್ಲಿ ಮಾಹಿತಿಯೇ ಇರಲಿಲ್ಲ. ಈ ಪುಸ್ತಕದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಬಂತು. ಅದೇ ರೀತಿ ಅಯೋತಿದಾಸ್ ಒಬ್ಬ ತಮಿಳು ಬೌದ್ಧ ದಲಿತ ಹೋರಾಟಗಾರ. ಅಂಬೇಡ್ಕರ್ ಅವರಿಗಿಂತಲೂ ಮೊದಲೇ ‘ಒರು ಪೈಸಾ ತಮಿಳನ್’ ಎಂಬ ಪತ್ರಿಕೆಯಲ್ಲಿ ತಳವರ್ಗದವರ ಸಂಕಷ್ಟಗಳನ್ನು ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಸಿದ ಮೇರು ವಿದ್ವಾಂಸ ಆತ. ಇಂದು ಚರಿತ್ರೆಕಾರರು ಗುರುತಿಸುವ ಸಬಾಲ್ಟರ್ನ್ ಅಧ್ಯಯನದ ರೀತಿಯ ಲೇಖನಗಳು ‘ಒರು ಪೈಸಾ ತಮಿಳನ್’ ಪತ್ರಿಕೆಯಲ್ಲಿ ಆ ಕಾಲದಲ್ಲಿಯೇ ಪ್ರಕಟವಾಗಿವೆ. ಶ್ರೀಲಂಕಾದಲ್ಲಿ ಬಹಳ ಗಟ್ಟಿಯಾಗಿ ನೆಲೆಯೂರಿರುವ ಬೌದ್ಧಧರ್ಮ ತಮಿಳುನಾಡಿನಲ್ಲಿ ಏಕಿರಲಿಲ್ಲ ಎಂಬ ಪ್ರಶ್ನೆ ಹಾಕಿಕೊಂಡ ಅಯೋತಿದಾಸ್ ದಕ್ಷಿಣ ಭಾರತದ ಬ್ರಾಹ್ಮಣರು ಹೇಗೆ ಅದನ್ನು ಭಾರತದಿಂದ ಹೊರಗೆ ತಳ್ಳಿದರು ಎಂಬುದನ್ನು ಸಂಶೋಧಿಸಿದ್ದಾರೆ. ಹಾಗಾಗಿ ಇವರು ಬರೆದ ಕೃತಿಗಳು ಕನ್ನಡಕ್ಕೆ ಅನುವಾದವಾಗಬೇಕಾಗಿವೆ. ಪೆರಿಯಾರ್ ಅವರ ‘ಸಾಮಾಜಿಕ ಕ್ರಾಂತಿ’ ಎಂಬ ಲೇಖನ ಓದಿದ ನಂತರ ಅವರ ಎಲ್ಲ ಪುಸ್ತಕಗಳನ್ನು ಬಳೇಪೇಟೆಯ ‘ಚಿಂತಕರ ಚಾವಡಿ’ಯಲ್ಲಿ ತೆಗೆದುಕೊಂಡು ಓದಿದೆ. ನಮ್ಮ ಜನರ ದೈನಂದಿನ ಬದುಕಿಗೆ ಹೆಚ್ಚು ಉಪಯೋಗವಾಗುವ ವಿಚಾರಗಳು ಇವರ ಪುಸ್ತಕಗಳಲ್ಲಿವೆ. ಇವರ ವಿಚಾರಗಳು ಕನ್ನಡದಲ್ಲಿ ಹೆಚ್ಚು ಜನಪ್ರಿಯವಾಗಬೇಕಾಗಿವೆ. ವೈಕಂ ಸತ್ಯಾಗ್ರಹ ಚಳವಳಿಯ ಬಗ್ಗೆ ಕನ್ನಡದಲ್ಲಿ ಸ್ಪಷ್ಟವಾದ ಮಾಹಿತಿಗಳಿಲ್ಲ. ಅಸ್ಪøಶ್ಯತೆ ಹೋಗಲಾಡಿಸಲು 1924ರಲ್ಲಿ ಪೆರಿಯಾರ್ ನಡೆಸಿದ ಚಳವಳಿಯನ್ನು ‘ಅಸ್ಪøಶ್ಯತೆ: ವೈಕಂ ಹೋರಾಟ ಚರಿತ್ರೆ’ ಎಂಬ ಕಿರುಪುಸ್ತಕದಲ್ಲಿ ಅನುವಾದಿಸಿದ್ದೇನೆ. ಇವರು ನಡೆಸಿದ ಆತ್ಮಗೌರವ ಚಳವಳಿ ಬಹಳ ಪ್ರಖ್ಯಾತವಾದುದು. ಪುರೋಹಿತರಿಲ್ಲದೆ ಮದುವೆಗಳನ್ನು ಮಾಡಿಕೊಳ್ಳಬೇಕೆಂದು ಬಹಳ ಹಿಂದೆಯೇ ಕರೆ ಕೊಟ್ಟಿದ್ದರು. ಈ ಕುರಿತು ‘ಸ್ವಾಭಿಮಾನದ ಮದುವೆಗಳು’ ಎಂಬ ಕಿರುಪುಸ್ತಕ ಅನುವಾದಿಸಿದ್ದೇನೆ.
ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಶಿಕ್ಷಕಿ. ಈಕೆ ಜ್ಯೋತಿಭಾ ಫುಲೆ ಜೊತೆಗೂಡಿ ದಲಿತರಿಗೆ, ಅಸ್ಪøಶ್ಯರಿಗೆ ಹಾಗೂ ಬಾಲಕಿಯರಿಗೆ 1855ರಲ್ಲಿಯೇ ಶಾಲೆಗಳನ್ನು ತೆರೆದಿದ್ದರು. ಆ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಇಂತಹ ದೊಡ್ಡ ಸಾಧನೆ ಮಾಡಿದ ಇವರ ಜೀವನ ಸಾಧನೆಯ ಬಗ್ಗೆ ‘ಸಾಮಾಜಿಕ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆ’ ಎಂಬ ಕಿರುಪುಸ್ತಕ ಅನುವಾದಿಸಿದೆ. ಶಿಕ್ಷಕರ ದಿನಾಚರಣೆ ಈಕೆ ಹುಟ್ಟಿದ ದಿನ ಆಚರಿಸುವುದು ಸೂಕ್ತ. ಅಂಬೇಡ್ಕರ್ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳು ಬಂದಿವೆ. ಆದರೆ ಅವರ ಪತ್ನಿ ರಮಾಬಾಯಿ ಅಂಬೇಡ್ಕರ್ ಬಗ್ಗೆ ಕನ್ನಡದಲ್ಲಿ ಮಾಹಿತಿಯೇ ಇರಲಿಲ್ಲ. ಆಕೆಯ ದೈನಂದಿನ ಜೀವನವೇ ದೊಡ್ಡ ಹೋರಾಟವಾಗಿದೆ. ಆಕೆ ಬೆರಣಿ ತಟ್ಟಿ ಅದÀನ್ನು ಮಾರಿ ಸಂಸಾರವನ್ನು ನೀಗಿಸುತ್ತಿದ್ದ ಬಗೆ ಆಶ್ಚರ್ಯಕರವಾಗಿದೆ. ಹುಟ್ಟಿದ ಮಕ್ಕಳು ಕಾಯಿಲೆಗೆ ತುತ್ತಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಬದುಕದಿದ್ದುದು, ಅಂಬೇಡ್ಕರ್ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದುದು, ಬಡತನದಿಂದ ಸರಿಯಾಗಿ ಊಟ ಮಾಡದೆ ಉಪವಾಸÀ ಮಾಡುತ್ತಿದ್ದ ಸಂಗತಿಗಳನ್ನೆಲ್ಲ ಓದಿ ಇವರ ಬದುಕಿನ ಬಗ್ಗೆ ಒಂದು ಚಿಕ್ಕ ಪುಸ್ತಕ ಅನುವಾದಿಸಿದೆ. ತಾರಾಬಾಯಿ ಶಿಂಧೆ ಅವರು ಬರೆದ ಭಾರತದ ಮೊದಲ ಸ್ತ್ರೀವಾದಿ ಬರಹವನ್ನು ‘ಪುರುಷ ಅಹಂಕಾರಕ್ಕೆ ಸವಾಲ್’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದೆ. ಇದು ಸ್ತ್ರೀವಾದಿ ಸಾಹಿತ್ಯದ ಓದುಗರಿಂದ ಮೆಚ್ಚುಗೆ ಪಡೆದಿದೆ.

15. ನಿಮ್ಮ ಕೃತಿಗಳಿಗೆ ಕನ್ನಡದ ಓದುಗರಿಂದ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?

ನಾನು ಚಿಕ್ಕ ಚಿಕ್ಕ ಪುಸ್ತಕಗಳನ್ನು ಅನುವಾದಿಸಿರುವುದೇ ಹೆಚ್ಚು. ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಓದಲಿ, ಹೊಸ ವಿಷಯಗಳನ್ನು ತಿಳಿದುಕೊಳ್ಳಲಿ ಎಂಬ ಅಭಿಲಾಷೆಯಿಂದ ಅನುವಾದಿಸುತ್ತಿದ್ದೇನೆ. ಈಗಿನ ವಿದ್ಯಾರ್ಥಿಗಳಲ್ಲಿ ಪಠ್ಯೇತರ ಪುಸ್ತಕಗಳ ವ್ಯಾಪಕವಾದ ಓದು ಕಡಿಮೆಯಾಗುತ್ತಿದೆ. ಅಯ್ಯಂಕಾಳಿ, ಅಯೋತಿದಾಸ್, ಸಾವಿತ್ರಿಬಾಯಿ ಫುಲೆ, ಪೆರಿಯಾರ್ ಪುಸ್ತಕಗಳ ಬಗ್ಗೆ ಓದುಗರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ದಲಿತ ವೈಚಾರಿಕ ಸಾಹಿತ್ಯಕ್ಕೆ ಕನ್ನಡದಲ್ಲಿ ಹೆಚ್ಚಿನ ಬೇಡಿಕೆಯಿದೆ. ದಲಿತ ಚಿಂತನೆ ಬಗ್ಗೆ ಯಾವುದೇ ಪುಸ್ತಕ ಬಂದರೂ ಬೇಗ ಮಾರಾಟವಾಗುವ ಪರಿಪಾಟವಿದೆ. ಇಂತಹ ವೈವಿಧ್ಯಮಯವಾದ ವಿಚಾರ ಸಾಹಿತ್ಯ ಕನ್ನಡದಲ್ಲಿ ಇನ್ನಷ್ಟು ಪ್ರಕಟವಾಗಬೇಕಾಗಿದೆ.

16. ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿ?

ಕೊಡವಟಿಗಂಟಿ ಕುಟುಂಬರಾವ್ ಅವರ ‘ಚದುವು’(ಓದು) ಕಾದಂಬರಿಯ ಅನುವಾದ ಪ್ರಕಟಣೆಯ ಹಂತದಲ್ಲಿದೆ. ತೆಲುಗಿನ ಪ್ರಸಿದ್ಧ ಕಾದಂಬರಿಕಾರರಾದ ಬುಚ್ಚಿಬಾಬು ಅವರ ‘ಚಿವರಕು ಮಿಗಿಲೇದಿ’(ಕೊನೆಗೆ ಉಳಿಯೋದು) ಕಾದಂಬರಿಯ ಅನುವಾದ ಅಂತಿಮ ಹಂತದಲ್ಲಿದೆ. ಮನುಷ್ಯನಿಗೆ ಬದುಕಲು ಬೇಕಾಗಿರುವುದು ಬೊಗಸೆ ಪ್ರೀತಿ ಎಂಬುದನ್ನು ಮನದಟ್ಟು ಮಾಡುವ ಅಪುರೂಪದ ಕಾದಂಬರಿಯಿದು. ತೆಲುಗಿನ ಸ್ತ್ರೀವಾದಿ ಚಿಂತಕಿ, ಕವಯಿತ್ರಿ ಓಲ್ಗಾ ಅವರು ಸಂಪಾದಿಸಿದ ‘ನೀಲಿ ಮೇಘಾಲು’(ನೀಲಿ ಮೋಡಗಳು) ಸ್ತ್ರೀವಾದಿ ಕವನ ಸಂಕಲನದ ಅನುವಾದ ಅಂತಿಮ ಹಂತದಲ್ಲಿದೆ. ವೇಮನನ 124 ವಚನಗಳನ್ನು ವ್ಯಾಖ್ಯಾನಸಹಿತ ಅನುವಾದಿಸುತ್ತಿದ್ದೇನೆ. ಜನವರಿ 17, 2016ರಂದು ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಕುರಿತ ಲೇಖನಗಳ ಅನುವಾದ `ಕತ್ತಲ ನಕ್ಷತ್ರ’ ಸಿದ್ಧವಾಗುತ್ತಿದೆ. ಆದಿವಾಸಿ ಹೋರಾಟಗಾರ ಕೊಮುರಂ ಭೀಮು ಕುರಿತ ಪುಸ್ತಕ ಅಂತಿಮ ಹಂತದಲ್ಲಿದೆ. ಇ.ಎಚ್.ಕಾರ್ ಅವರ `ಚರಿತ್ರೆ ಎಂದರೆ ಏನು?’, ಕೆ. ಬಾಲಗೋಪಾಲ್ ಅವರ `ಚರಿತ್ರೆ ಮನುಷ್ಯ ಮಾಕ್ರ್ಸ್‍ವಾದ’, ರಾಣಿ ಶಿವಶಂಕರಶರ್ಮ ಅವರ `ಅಮೆರಿಕನಿಜಂ’ ಅನುವಾದಗಳು ಅಂತಿಮಗೊಳ್ಳುತ್ತಿವೆ. ಹಾಲಿವುಡ್ ಕ್ಲಾಸಿಕ್ ಸಿನಿಮಾಗಳನ್ನು ಕುರಿತು ಒಂದು ಪುಸ್ತಕ ಬರೆಯುವ ಆಲೋಚನೆಯೂ ಇದೆ.

Leave a Reply

Your email address will not be published.