ಅನಿಕೇತನದ ಮೊದಲ ವರುಶದ ಸಂಭ್ರಮ

-ರಂಗನಾಥ ಕಂಟನಕುಂಟೆ, ಸಂಪಾದಕ

ಹಲವು ಗೆಳೆಯರು ಕೂಡಿ ಆರಂಭಿಸಿದ ‘ಅನಿಕೇತನ’ಕ್ಕೆ ಮೊದಲ ವರುಶದ ಸಂಭ್ರಮ. ಈ ಒಂದು ವರುಶದಲ್ಲಿ ಓದುಗರ ಮತ್ತು ಬರೆಹಗಾರರ ನಿರಂತರ ಬೆಂಬಲ ಹಾಗೂ ಸಲಹೆಗಳಿಂದ ನಿಯಮಿತವಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಸಾವಿರಾರು ಓದುಗರು ನಿತ್ಯವೂ ಅನಿಕೇತನವನ್ನು ಓದುತ್ತಿದ್ದಾರೆ. ಅನೇಕ ಬರೆಹಗಾರರು ನಿರಂತರವಾಗಿ ಬರೆಯುತ್ತ ನಿರಾತಂಕವಾಗಿ ಮುಂದುವರೆಸಿಕೊಂಡು ಬರಲು ಸಹಕರಿಸಿದ್ದಾರೆ. ಅನಿಕೇತನದ ಜೊತೆಗೆ ನಂಟು ಹೊಂದಿರುವ ಎಲ್ಲ ಓದುಗರು, ಹಿತೈಶಿಗಳು ಮತ್ತು ಬರೆಹಗಾರರಿಗೆ ಅನಿಕೇತನದ ಸಂಪಾದಕ ಮಂಡಳಿ ರುಣಿಯಾಗಿರುತ್ತದೆ. ಈ ಎಲ್ಲರ ಸಹಕಾರ ಹೀಗೆಯೇ ಮುಂದುವರೆಯಲಿ ಎಂದೂ ಅಪೇಕ್ಷಿಸುತ್ತದೆ.

Anikethana Invitation - 1Anikethana Invitation - 2ಒಂದು ವರುಶ ತುಂಬಿದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಇದೇ ತಿಂಗಳ ಅಂದರೆ ನವೆಂಬರ್ 20, 2016ರಂದು ‘ಪ್ರಜಾಪ್ರಭುತ್ವ ಮತ್ತು ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ’ ಎಂಬ ವಿಷಯವನ್ನು ಕುರಿತು ವಿಚಾರ ಸಂಕಿರಣವನ್ನು ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಹಾಗೆಯೇ ವಿದ್ಯಾರ್ಥಿಗಳಿಗಾಗಿ ನಡೆಸಿದ ಕಥಾಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅನಿಕೇತನದ ಎಲ್ಲ ಬೆಂಬಲಿಗರು, ಓದುಗರು ಮತ್ತು ಬರೆಹಗಾರರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಎಲ್ಲರನ್ನು ಸ್ಮರಿಸುತ್ತ ಮತ್ತೆ ಕೆಲವು ವಿಚಾರಗಳನ್ನು ತಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಿರುವ ಇತರೆ ವೆಬ್ ಮ್ಯಾಗಜಿನ್ ಮತ್ತು ಬ್ಲಾಗ್ ಗಳಿಗಿಂತ ಹೆಚ್ಚು ಖಚಿತವಾದ ಸೈದ್ಧಾಂತಿಕ ತಿಳುವಳಿಕೆಗಳ ನೆರವಿನಿಂದ ‘ಅನಿಕೇತನ’ವನ್ನು ಹೊರತರಲು ಉದ್ದೇಶಿಸಲಾಗಿತ್ತು. ಮುಖ್ಯವಾಗಿ ಮತೀಯವಾದಿ ಮತ್ತು ಬಲಪಂಥೀಯವಲ್ಲದ ಎಲ್ಲ ಜನಪರ ವಿಚಾರಧಾರೆಗಳನ್ನು ಒಳಗೊಳ್ಳುವುದು; ಆ ಮೂಲಕ ನಮ್ಮ ನಾಡಿನ ಆರೋಗ್ಯಕರ ಮನಸ್ಸುಗಳು ಒಂದುಗೂಡಿ ಮುಕ್ತವಾಗಿ ಸಂವಾದ ನಡೆಸುತ್ತ ಹೊಸಚಿಂತನೆಯೊಂದನ್ನು ರೂಪಿಸಿಕೊಳ್ಳಲು ನೆರವಾಗುವುದು ಉದ್ದೇಶವಾಗಿತ್ತು. ಹಾಗೂ ಜನವಿರೋಧಿಯಾಗಿರುವ ಪ್ರಭುತ್ವದೊಂದಿಗೆ ಸಂಘರ್ಷ ನಡೆಸುತ್ತಿರುವ ಎಲ್ಲ ಜನಚಳವಳಿಗಳ ಜೊತೆಗೂಡುವ ಮೂಲಕ ಕ್ರಿಯಾಶೀಲ ಚಿಂತನೆಯನ್ನು ರೂಪಿಸುವ ವೇದಿಕೆಯಾಗಿ ಕೆಲಸ ಮಾಡುವ ಮಹತ್ವಾಕಾಂಕ್ಷೆಯಿತ್ತು.

ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಲಹರಿ ರೂಪದ ತಕ್ಷಣ ಅಭಿಪ್ರಾಯಗಳಿಗೆ ಹೆಚ್ಚು ಆದ್ಯತೆ ನೀಡಿ ಪ್ರತಿಕ್ರಿಯಿಸಲಾಗುತ್ತದೆ. ಈ ಜಾಡಿನಲ್ಲಿ ಸಾಗದೆ ವೈಚಾರಿಕ ಮಂಥನದ ಮೂಲಕ ಹೊಸ ಚಿಂತನೆಯನ್ನು ರೂಪಿಸಿಕೊಳ್ಳುವುದು ಇದರ ಆಶಯವಾಗಿತ್ತು. ಮುಖ್ಯವಾಗಿ ಅಂಬೇಡ್ಕರ್, ಗಾಂಧಿ, ಲೋಹಿಯಾ ಮತ್ತು ಮಾರ್ಕ್ಸ್‍ವಾದಿ ವಿಚಾರಧಾರೆಗಳ ಬಗೆಗೆ ನಿರಂತರವಾಗಿ ಸಂವಾದ ನಡೆಸುತ್ತ ಇಂದಿಗೆ ಅಗತ್ಯವಿರುವ ಹೊಸ ಚಿಂತನೆಯನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಆಶಯವಾಗಿತ್ತು. ಇಂತಹ ಉದ್ದೇಶದೊಂದಿಗೆ ಆರಂಭವಾದ ‘ಅನಿಕೇತನ’ ಒಂದು ವರುಶವನ್ನು ಪೂರೈಸಿದೆ. ಈ ಒಂದು ವರುಶದಲ್ಲಿ ಇದನ್ನು ಆರಂಭಿಸಲು ಇರಿಸಿಕೊಂಡಿದ್ದ ಆಶಯವನ್ನು ಪೂರ್ಣ ಪ್ರಮಾಣದಲ್ಲಿ ಕ್ರಿಯಾರೂಪಕ್ಕೆ ತರಲು ಸಾಧ್ಯವಾಗಿಲ್ಲವೆಂಬ ಎಚ್ಚರಿಕೆ ಇದೆ. ನಾವು ಇರಿಸಿಕೊಂಡಿದ್ದ ಕಾಳಜಿ ಮಹತ್ವಾಕಾಂಕ್ಷೆಗಳು ಬೆಟ್ಟದಷ್ಟಿದ್ದು ಅದನ್ನು ಈಡೇರಿಸಲು ಬೇಕಾದ ಜನಶಕ್ತಿ ಮಾತ್ರ ಅಳಿಲಿನಷ್ಟು ಎಂಬುದರ ಅರಿವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಈ ಒಂದು ವರುಶದ ಅನುಭವವು ವಿಶಿಷ್ಟವಾದುದು. ಅದು ಹಲವು ಪಾಠಗಳನ್ನು ಕಲಿಸಿದೆ. ಮತ್ತು ಅಲ್ಲಿ ಮತ್ತಷ್ಟು ವಿಸ್ತಾರವಾಗಿ ಬದ್ದತೆಯಿಂದ ಕೆಲಸ ಮಾಡಬೇಕಿದೆ ಎಂಬುದೂ ಖಚಿತವಾಗಿದೆ. ವಿಶೇಷವಾಗಿ ದೇಶಪ್ರೇಮ, ಧರ್ಮಗಳ ಬಗೆಗೆ ವ್ಯಕ್ತವಾಗುವ ಭಾವೋನ್ಮಾದದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಇದು ಇನ್ನೂ ಹೆಚ್ಚು ಖಚಿತವಾಗಿ ಅನ್ನಿಸುತ್ತದೆ. ಬೇರೆಯವರ ವಿಚಾರಗಳನ್ನು ಕನಿಷ್ಟ ಸೌಜನ್ಯದಿಂದ ಆಲಿಸಲು ಸಾಧ್ಯವಾಗದಷ್ಟು ಕುರುಡುತನ, ವ್ಯಗ್ರತೆ ಮತ್ತು ಕ್ರೌರ್ಯಗಳು ಜನಮಾನಸದಲ್ಲಿ ಬೇರುವಿಟ್ಟಿರುವುದು ತಿಳಿಯುತ್ತದೆ. ಇದು ಯಾವ ಕಾಲಕ್ಕೂ ಯಾವ ವಿಚಾರವನ್ನು ಬೆಳೆಸದ, ಧರ್ಮಕ್ಕೆ ಘನತೆಯನ್ನೂ ತಾರದ ಒಂದು ಕಾಳ್ಗಿಚ್ಚಿನಂತೆ ಬೆಳೆಯುತ್ತಿದೆ. ಇದರ ಜೊತೆಗೆ ನೀರಿನಂತೆ ಮಂಜಿನಗಿರಿಯಂತೆ ತಣ್ಣಗೆ ಕೆಲಸ ಮಾಡುತ್ತಲೇ ಇರಬೇಕಿದೆ. ನಿರಂತರ ಕ್ರಿಯಾಶೀಲತೆ ಕೆಲವಾದರೂ ಮನಸ್ಸುಗಳನ್ನು ಬದಲಿಸಬಹುದು ಎಂಬ ನಂಬಿಕೆಯಿದೆ. ಇಂತಹ ನಂಬಿಕೆಯಿಲ್ಲದೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ.

ಇಂತಹ ಅಚಲ ನಂಬಿಕೆಯಿಂದ ಮುಂದುವರೆಯುವ ಈ ಉದ್ದೇಶವನ್ನು ಈಡೇರಿಸಲು ಅಸಂಖ್ಯ ಸಮಾನ ಮನಸ್ಕರು ಒಂದುಗೂಡಬೇಕಿದೆ. ಅಂತಹ ಮನಸ್ಸುಗಳು ಅನಿಕೇತನದ ಜೊತೆಗೆ ಮತ್ತಷ್ಟು ನಿಕಟವಾಗಿ ತೊಡಗಿಸಿಕೊಳ್ಳಬೇಕೆಂದು ಸಂಪಾದಕ ಮಂಡಳಿ ಬಯಸುತ್ತದೆ. ಅಂದರೆ ಅನಿಕೇತನಕ್ಕೆ ಬರೆಯುವ, ಪ್ರಕಟವಾದ ಬರೆಹಗಳಿಗೆ ಗಂಭೀರವಾಗಿ ಪ್ರತಿಕ್ರಿಯಿಸುತ್ತ ಅವುಗಳ ಓರೆಕೋರೆಯನ್ನು ತಿದ್ದುವ ಮತ್ತು ವಿಶಾಲವಾದ ಓದುಗ ವರ್ಗಕ್ಕೆ ಅನಿಕೇತನವನ್ನು ಪರಿಚಯಿಸುವ ಮೂಲಕ ಚಿಂತನಾಕೊಂಡಿಯೊಂದನ್ನು ಸಾಮಾಜಿಕ ಮಾಧ್ಯಮಗಳಲಿ ದೃಢವಾಗಿ ಬೆಳೆಸಬೇಕಿದೆ. ಅಲ್ಲದೆ ವಿವಿಧ ವಿಷಯಗಳ ಮೇಲೆ ವಿಶೇಷ ಸಾಮಥ್ರ್ಯ ಇರುವವರು ಬರೆಯುವ ಮೂಲಕ ಬರೆಯುವವರ ಸಂಖ್ಯೆಯೂ ಹೆಚ್ಚಾಗಬೇಕಿದೆ. ಕೃಷಿ, ಕೈಗಾರಿಕೆ, ಪ್ರವಾಸ, ಭಾಷೆ ಶಿಕ್ಷಣ, ಕ್ರೀಡೆ, ವಿಜ್ಞಾನ ಇತ್ಯಾದಿ ವಿಷಯಗಳ ಮೇಲೆ ಗಂಭೀರವಾಗಿ ಬರೆಯುವ ಶಕ್ತಿಯುಳ್ಳವರು ಅನಿಕೇತನಕ್ಕೆ ನಿರಂತರವಾಗಿ ಬರೆಯಬೇಕಿದೆ. ಬರೆಯುವ ಸಾಮಥ್ರ್ಯ ಇರುವವರನ್ನು ಅನಿಕೇತನಕ್ಕೆ ಪರಿಚಯಿಸಬೇಕಿದೆ. ಹೀಗೆ ಹಲವು ಬಗೆಯಲ್ಲಿ ಅನಿಕೇತನದ ಜೊತೆಗೆ ಎಲ್ಲರೂ ಒಗ್ಗೂಡಬೇಕೆಂದು ಸಂಪಾದಕ ಮಂಡಳಿ ಬಯಸುತ್ತದೆ. ನಿಮ್ಮ ಎಲ್ಲ ಬಗೆಯ ಸಹಕಾರ ಸಲಹೆಗಳನ್ನು ನಿರೀಕ್ಷಿಸುತ್ತ…..

Link to Facebook Event page

Leave a Reply

Your email address will not be published.