ಅಧಿಕಾರದಲ್ಲಿ ಕೊಚ್ಚಿಹೋಗುವ ಸ`ಮಜಾ’ವಾದ

-ಸೃಷ್ಟಿಕರ್ತ

ಎರಡು ದಶಕಗಳಿಗೂ ಹೆಚ್ಚುಕಾಲ ಪಶ್ಚಿಮ ಬಂಗಾಳವನ್ನು ಆಳಿದ ಜ್ಯೋತಿ ಬಸುರವರ ಉತ್ತರಾಧಿಕಾರಿಯಾದ ಬುದ್ಧದೇವ ಭಟ್ಟಾಚಾರ್ಯರವರನ್ನು ಉದಹರಿಸಲು ಕಮ್ಯುನಿಸ್ಟ್ ನಾಯಕರು ಹಿಂದೇಟು ಹಾಕುತ್ತಾರೆ. ಹಾಗೆ ನೋಡಿದರೆ, ಜ್ಯೋತಿ ಬಸುರವರ ಕೊನೆಯ ದಿನಗಳನ್ನು ಸಹ ನೆನೆಯೋದಿಲ್ಲ. ಕಾರಣವಿಷ್ಟೆ…. ಬದಲಾದ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ, ಇವರಿಬ್ಬರೂ ಫೈವ್ ಸ್ಟಾರ್ ಸಮಾಜವಾದಿಗಳಾಗಿ ಬದಲಾಗಿದ್ದು.

ಹಾಗೆ ನೋಡಿದರೆ, ಬಹಳಷ್ಟು ಸಮಾಜವಾದಿಗಳು ಈ ಬದಲಾವಣೆಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ, ಅದನ್ನು ಒಪ್ಪಿಕೊಳ್ಳೋ ಧೈರ್ಯ ಇದ್ದಿದ್ದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲ್ ಗೆ ಮಾತ್ರ. `ಎಲ್ಲಿದ್ದಾರೆ ಸಮಾಜವಾದಿಗಳು… ಎಲ್ಲಾ ಮಜಾವಾದಿಗಳಾಗಿದ್ದಾರೆ,’ಅಂತ ಎಗ್ಗಿಲ್ಲದೆ ಹೇಳಿದ್ದರು.

sWatchರಾಯಲ್ ಸಲ್ಯೂಟ್ ಕುಡಿಯುತ್ತಿದ್ದ ದೇವರಾಜ್ ಅರಸ್ ರಿಂದ ಹಿಡಿದು, ಶಟಲ್ ಕೋರ್ಟ್ ನಲ್ಲಿ ಹೆಚ್ಚುಸಮಯ ಕಳೆದ ಬಂಗಾರಪ್ಪನರು, ಸಮಾಜವಾದದಿಂದ ಬಂದು, ಸಮಾಜವಾದದ ಚಳುವಳಿಗಳನ್ನೇ ತುಳಿದ ಕಾಗೋಡು ತಿಮ್ಮಪ್ಪ ಮುಂತಾದವರನ್ನು ನೋಡುತ್ತಿದ್ದರೆ, ನಾನು ಚಿಕನ್ ತಿನ್ನೋ ಬ್ರಾಹ್ಮಣ ಅಂತ ಘಂಟಾಘೋಷವಾಗಿ ಹೇಳಿದ ಗುಂಡೂರಾಯರೇ ಎಷ್ಟೊ ವಾಸಿ ಅಂತ ಅನ್ನಿಸುತ್ತೆ.

ಅಧಿಕಾರ ಅನ್ನೋದೇ ಹಾಗೆ. ಅಫೀಮಿನ ಥರ. ಅದರ ಅಮಲಿನಲ್ಲಿ ಪೂರ್ವಾಪರ ಮರೆತವರೇ ಹೆಚ್ಚು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಅದಕ್ಕೆ ಹೊರತೇನಲ್ಲ ಅನ್ನೋದು ಅವರ ಆರ್ಥಿಕ ನಿರ್ವಹಣೆ ಮತ್ತು ಜೀವನ ಶೈಲಿಯಲ್ಲೇ ಹೊರ ಬಿದ್ದಿದೆ. ಸಮಾಜವಾದವಿರಲಿ, ಇಂಥಹ ದುಬಾರಿ ಉಡುಗೊರೆಗಳನ್ನು ತೆಗೆದುಕೊಂಡವರು, ಕನಿಷ್ಟ ಭ್ರಷ್ಟಾಚಾರದ ವಿರುದ್ದ ಮಾತನಾಡುವ ನೈತಿಕತೆ ಕಳೆದುಕೊಳ್ಳುತ್ತಾರೆ ಅನ್ನೋ ಸರಳ ವಿಷಯವನ್ನೂ ಮರೆತಂತಿದೆ.
ಹಿಂದುಳಿದವರ ನಾಯಕ ಮತ್ತು ಆರ್ಥಿಕ ತಜ್ಞ ಅನ್ನೋ ಹಣೆಪಟ್ಟಿ ಹೊತ್ತು ಅಧಿಕಾರಕ್ಕೆ ಬಂದಾಗ, ಸಿದ್ದರಾಮಯ್ಯನವರ ಮೇಲೆ ಎಲ್ಲಾ ವರ್ಗದವರೂ ಭರವಸೆ ಇಟ್ಟಿದ್ದರು.

ಮೊದಲನೇ ವರ್ಷದಲ್ಲೇ ಆರ್ಥಿಕ ನಿರ್ವಹಣೆ ವಿಫಲವಾಯಿತು. ತಮ್ಮ ಓಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಬರೀ `ಭಾಗ್ಯಗಳ’ಮಹಾಪೂರ ಹರಿಸಿದ್ದು ಬಿಟ್ಟರೆ, ಮತ್ತಿನ್ನೇನೂ ಮಾಡಲಿಲ್ಲ. ಅದನ್ನು ಸಮರ್ಥಿಸಿಕೊಂಡ ರೀತಿಯೂ ವಿಚಿತ್ರವಾಗಿದೆ. ಭಾಗ್ಯಗಳು ಜನರನ್ನು ಸೋಮಾರಿಗಳಾಗಿ ಮಾಡಿದೆ ಅಂತ ಹೇಳಿದರೆ, ಕಷ್ಟಪಟ್ಟವರು ಸ್ವಲ್ಪದಿನ ವಿಶ್ರಾಂತಿ ಪಡೆಯಲಿ ಬಿಡಿ ಅಂತಾರೆ. ಒಂದು ವರ್ಷ ರಾಜ್ಯದಲ್ಲಿ ಕೃಷಿ ಮತ್ತು ಸಣ್ಣ ಕೈಗಾರಿಕೆಗಳ ಕೃಷಿ ಕಾರ್ಮಿಕರು ಕೆಲಸ ನಿಲ್ಲಿಸಿದರೆ ಅದರ ಪರಿಣಾಮ ಏನು ಅಂತ ಯೋಚನೆ ಮಾಡದಿದ್ದರ ಪರಿಣಾಮ, ಬಾಂಗ್ಲಾದೇಶದ ವಲಸಿಗರು ಹಳ್ಳಿ ಹಳ್ಳಿಗಳನ್ನು ತಲುಪಿದ್ದಾರೆ.

ಅದೆಲ್ಲ ಇರಲಿ. ನಮ್ಮ ಬಡವರ ಪರ ಮುಖ್ಯಮಂತ್ರಿಗಳ ಜೀವನ ಶೈಲಿಗೆ ಬರೋಣ. ಬಿಳಿ ಪಂಚೆ ಮತ್ತು ಅಂಗಿಯ ಜೊತೆಯಲ್ಲಿ ಅವರು ಧರಿಸೋ ವಸ್ತುಗಳು ಸಮಾಜವಾದದ ಮತ್ತು ಲೋಹಿಯಾರವರ ಯಾವ ತತ್ವಗಳಿಗೆ ಹೊಂದುತ್ತವೆ ಅನ್ನೋದೇ ದೊಡ್ಡ ಪ್ರಶ್ನೆ. ಸಿದ್ದರಾಮಯ್ಯನವರು ಧರಿಸುತ್ತಿರುವ ಶೂಗಳು ಲೂಯಿಸ್ ವ್ಹಿಟ್ಟಾನ್ ಅನ್ನೋ ಕಂಪನಿಯದು.

ಅದರ ಬೆಲೆ ಬರೀ ನಲ್ವತ್ತು ಸಾವಿರ ರೂಪಾಯಿಗಳು. ಮತ್ತೆ ಅವರು ಧರಿಸುವ ಸ್ಪೋರ್ಟ್ಸ ಶೂ, ಇದಕ್ಕಿಂತ ಕಡಿಮೆಯೇನಿಲ್ಲ. ಅವರು ಬಳಸೋ ಕನ್ನಡಕಗಳ ಬೆಲೆ ಯಾವುದೂ ಒಂದೂವರೆ ಲಕ್ಷಕ್ಕಿಂತ ಕಡಿಮೆಯಿಲ್ಲ. ಆದರೆ, ಇವೆರೆಡರಕ್ಕಿಂತ ಹೆಚ್ಚು ಸುದ್ದಿಮಾಡಿದ್ದು ಅವರು ಕಟ್ಟೊ ಕೈ ಗಡಿಯಾರಗಳು. ಕಳೆದ ಮೂರು ವರ್ಷಗಳಿಂದ ಸಿದ್ದರಾಮಯ್ಯನವರು ಉಪಯೋಗಿಸುತ್ತಿರುವುದು ಐದಾರು ಕೈಗಡಿಯಾರಗಳು. ಇವುಗಳಲ್ಲಿ ಹೆಚ್ಚು ಸುದ್ದಿ ಮಾಡಿರೋದು ವಜ್ರಖಚಿತವಾದ 70 ಲಕ್ಷ ಬೆಲೆ ಬಾಳುವ ಕೈಗಡಿಯಾರ.

Screenshot_2016-02-11-16-08-57ಆದರೆ, ಇದನ್ನು ಬಿಟ್ಟರೆ ಸಿದ್ದರಾಮಯ್ಯನವರ ಹತ್ತಿರ ಎರಡು ರೋಲೆಕ್ಸ್ ವಾಚ್ ಗಳಿವೆ. ಅವೆರೆಡರ ಬೆಲೆಯೂ 10 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿವೆ. ಇನ್ನೊಂದು ಟಿಸ್ಸೋಟ್ ವಾಚ್ ಒಂದು ಲಕ್ಷ ರೂಪಾಯಿಯದಾದರೆ, ಆಡ್ಮಾರ್ಸ್ ಪಿಕ್ವೆಟ್ (Audemars Piquet) ಅನ್ನೋ ಗಡಿಯಾರದ ಬೆಲೆ ಬರೋಬ್ಬರಿ 35 ಲಕ್ಷ. ಸ`ಮಜಾವಾದಿ’ಅನ್ನೋದಿಕ್ಕೆ ಇನ್ಯಾವ ಪುರಾವೆನೂ ಬೇಕಾಗಿಲ್ಲ ಅಂತ ಕಾಣುತ್ತೆ.

ಹ್ಯೂಬೊಲ್ಟ್ ಅನ್ನೋ ಹೆಸರಿನ ರತ್ನಖಚಿತ ಗಡಿಯಾರದ ಬೆಲೆ 70 ಲಕ್ಷ ಅಂತ ಮೊದಲು ಬಹಿರಂಗಪಡಿಸಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಮೊದಮೊದಲಿಗೆ ಅದನ್ನ ಐದು ಲಕ್ಷಕ್ಕೆ ಯಾರಿಗೆ ಬೇಕಾದ್ರೂ ಕೊಡ್ತೀನಿ ಅಂತ ಉಡಾಫೆ ಮಾತಾಡಿದ ಸಿದ್ದರಾಮಯ್ಯನವರು, ತಮ್ಮ ಕೈಯಿಂದ ಅದನ್ನು ಜಾರಿಸಿ ಮನೆಯೊಳಗಿಟ್ಟರು. ನಂತರ ಹೇಳಿದ್ದಿಷ್ಟೆ… ಅದನ್ನು ಯಾರೋ ಉಡುಗೊರೆಯಾಗಿ ಕೊಟ್ಟರು ಅಂತ. ಏನೂ ಪ್ರತಿಫಲ ಅಪೇಕ್ಷಿಸದೆ 70 ಲಕ್ಷ ಬೆಲೆ ಬಾಳುವ ಗಡಿಯಾರವನ್ನು ಉಡುಗೊರೆ ಕೊಡುವವರಿಗೆ ಹುಚ್ಚು ನಾಯಿ ಕಚ್ಚಿರಬೇಕಷ್ಟೆ.

ಅಂದ ಹಾಗೆ, ಇದನ್ನು ಕೊಟ್ಟವರ್ಯಾರು ಅನ್ನೋದು ಗೊತ್ತಿದ್ದರೂ, ಯಾರೂ ಬಾಯಿ ಬಿಡೋ ಹಾಗಿಲ್ಲ. ಯಾಕಂದರೆ, ಈ ಗಡಿಯಾರವನ್ನು ಇನ್ನೂ ಆದಾಯ ತೆರಿಗೆ ಇಲಾಖೆಗೆ ಲೆಖ್ಖ ಸಲ್ಲಿಸಿಲ್ಲ. ಇದನ್ನು ಬಿಲ್ ಇಲ್ಲದೇ ದೇಶದೊಳಗೆ ತರಲಾಗಿದೆ ಮತ್ತು ಸುಂಕ ಕಟ್ಟಿಲ್ಲ.
ಯಾವುದೇ ಉಡುಗೊರೆ ಐವತ್ತು ಸಾವಿರ ಮೌಲ್ಯ ದಾಟಿದರೆ, ಅದನ್ನು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರಬೇಕಾಗುತ್ತದೆ. ಈ ಕೆಲಸವನ್ನು ಸಿದ್ದರಾಮಯ್ಯನವರು ತಮ್ಮ ಯಾವುದೇ ಗಡಿಯಾರಗಳಿಗೆ ಮಾಡಿಲ್ಲ. ಅವುಗಳನ್ನು ಕೊಂಡು ಕೊಂಡರೆ, ಅದನ್ನೂ ತಮ್ಮ ಆಸ್ಥಿ ಅಂತ ಘೋಷಿಸಿಕೊಳ್ಳಬೇಕಾಗುತ್ತೆ. ಆ ಕೆಲಸವೂ ಆಗಿಲ್ಲ.

ಇನ್ನು ಈ ಉಡುಗೊರೆ ಕೊಟ್ಟವರು ಸಿದ್ದರಾಮಯ್ಯನ ಪರಮಾಪ್ತರಲ್ಲಿ ಒಬ್ಬರು ಅನ್ನೋದನ್ನ ಹೇಳಬೇಕಾಗಿಲ್ಲ. ಅವರು ಸಿದ್ದರಾಮಯ್ಯನವರ ಮಗನಿಗೂ ಒಂದೂವರೆ ಕೋಟಿ ಬೆಲೆಬಾಳುವ ಕಾರು ಕೊಟ್ಟಿದ್ದಾರೆ. ಇಷ್ಟೆಲ್ಲ ಕೊಟ್ಟಮೇಲೆ ಅವರಿಗೆ ಏನು ಪ್ರಯೋಜನ ಅನ್ನೋದೇನೂ ಯಕ್ಷಪ್ರಶ್ನೆಯಲ್ಲ. ಆ ಮಹಾಶಯರು ಇತ್ತೀಚೆಗೆ ಹೆಬ್ಬಾಳ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರು. ಮುಂಚಿನಿಂದಲೂ ಸಿದ್ದರಾಮಯ್ಯನವರ ಅನುಯಾಯಿಯಾಗಿದ್ದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ದೊಣಿಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ಅಲ್ಲಿಂದ ಸಿದ್ದರಾಮಯ್ಯನವರ ಪರಮಾಪ್ತರಾಗತೊಡಗಿದರು. ಒಂದು ಮೂಲದ ಪ್ರಕಾರ, ಸಿದ್ದರಾಮಯ್ಯನವರ ಖಾಸಗಿ ವ್ಯವಹಾರವನ್ನು ನೋಡಿಕೊಳ್ಳೋ ಜವಾಬ್ದಾರಿ ಅವರದೇ.

ಹಾಗಾಗಿ, ಅವರು ಮೊದಲು ವೈರತ್ವ ಕಟ್ಟಿಕೊಂಡಿದ್ದು ತಮ್ಮ ದಾಯಾದಿಯನ್ನೇ. ಮುಂದೆ ಹೆಬ್ಬಾಳದಲ್ಲಿ ಉಪ ಚುನಾವಣೆಗೆ ನಿಲ್ಲಬೇಕು ಅನ್ನೋ ಹುಮ್ಮಸ್ಸಿನಲ್ಲಿ ತಮ್ಮ ಕುಲಬಾಂಧವರನ್ನೂ ಎದುರು ಹಾಕಿಕೊಂಡರು. ಆದರೂ, ಸಿದ್ದರಾಮಯ್ಯನವರು ಅವರ ಕೈ ಬಿಡಲಿಲ್ಲ. ಆದರೆ, ಅವರು ಕೊಟ್ಟ ಉಡುಗೊರೆಗಳು ಈಗ ಸಿದ್ದರಾಮಯ್ಯನವರಿಗೆ ಉರುಳಾಗತೊಡಗಿವೆ. ವಿಪರೀತ ಬೆಲೆಯ ವಸ್ತುಗಳನ್ನು ಧರಿಸುವ ಮುಖ್ಯಮಂತ್ರಿ ಅನ್ನೋದು ಚುನಾವಣೆಯಲ್ಲಿ ಕೂಡ ಚರ್ಚೆಯಾಗತೊಡಗಿರುವುದು, ಸಿದ್ದರಾಮಯ್ಯನವರಿಗೆ ಇರಿಸು ಮುರುಸಾಗಲು ಶುರುವಾಗಿದೆ. ಇನ್ನು ಇಷ್ಟೊಂದು ಬಹಿರಂಗವಾದ ಮೇಲೆ, ಆದಾಯ ತೆರಿಗೆಯವರ ಕಣ್ಣು ಈ ಕಡೆ ಬೀಳೋದರ ಮೇಲೆ ಯಾವುದೇ ಸಂಶಯವಿಲ್ಲ.
ಯಾಕೋ ಏನೋ… ವಾಚಿನ ಹುಚ್ಚಿನಿಂದ ಸಿದ್ದರಾಮಯ್ಯನವರ ಟೈಮೇ ಕೆಟ್ಟಹಾಗೆ ಕಾಣುತ್ತೆ….

 

One Response to "ಅಧಿಕಾರದಲ್ಲಿ ಕೊಚ್ಚಿಹೋಗುವ ಸ`ಮಜಾ’ವಾದ"

 1. vishnu  February 12, 2016 at 2:49 pm

  1. People are following the principle of ‘ do what I say and not what I do’.
  2. Principles and ideologies have become tools to reach a destiny and are ditched afterwards.
  3. Every charge of corruption or misuse of authority is being taken to ones advantage by pleading victim under the cover of politics,caste,religion etc.
  4. Being offensive has become a best strategy of defending ones wrongs or illegality.

  Unfortunately those who claim themselves as icons of ideology and principles are becoming torch bearers of its violation.

  Reply

Leave a Reply

Your email address will not be published.