ಅಧರಕ್ಕೂ ಸಿಹಿ ಉದರಕ್ಕೂ ಸಿಹಿ ಕವಳಿಹಣ್ಣು

-ಸಿದ್ದರಾಮ ಹಿರೇಮಠ, ಕೂಡ್ಲಿಗಿ.


ಹಣ್ಣುಗಳ ಸೀಸನ್ ನಲ್ಲಿ ನಾನು ಕಾಡಿನಲ್ಲಿ ತಿರುಗುವುದು ಹೆಚ್ಚು. ಯಾಕೆಂದರೆ ಅಪ್ಪಟ ಗ್ರಾಮೀಣ ಭಾಗದ ಹಣ್ಣುಗಳು ಈ ಕಾಡಿನಲ್ಲಿ ಸಿಗುತ್ತವೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಭಾಗದ ಅರಣ್ಯ ಪ್ರದೇಶದಲ್ಲಿ ಸೀತಾಫಲ, ಬಿಕ್ಕೆ, ಕಾರಿ, ಕವಳೆಹಣ್ಣುಗಳು ಹೇರಳವಾಗಿ ದೊರೆಯುತ್ತವೆ.
ನಿನ್ನೆ ಕೊಟ್ಟೂರು ಭಾಗದ ಅರಣ್ಯ ಪ್ರದೇಶದಲ್ಲಿ ಹೋದಾಗ ಎತ್ತ ನೋಡಿದರೂ ಕವಳೆಹಣ್ಣುಗಳೇ. ಕಪ್ಪು ದ್ರಾಕ್ಷಿ ಗೊಂಚಲು ಬಿಟ್ಟಂತೆ ಕವಳೆ ಹಣ್ಣುಗಳು ಮುಳ್ಳಿನ ಗಿಡದಲ್ಲಿ ಹೇರಳವಾಗಿ ಬಿಟ್ಟಿದ್ದವು. ಅಲ್ಲಲ್ಲಿ ಕಾಯಿಗಳಿದ್ದರೂ ಹಣ್ಣುಗಳೇ ಹೆಚ್ಚು ಕಂಡವು. ಆರೋಗ್ಯಕ್ಕೂ ಹಿತಕರವಾದ ಕವಳೆಹಣ್ಣು ಸಿಹಿಯಾಗಿರುತ್ತದೆ. ಒಳಗಡೆ ಬೀಜವಿದ್ದು, ಮೇಲೆ ಸಿಹಿ ತಿರುಳಿರುತ್ತದೆ. ಕಾಯಿಯಿದ್ದಾಗ ಹಸಿರಾಗಿರುವ ಇದು ಹಣ್ಣಾದೊಡನೆ ಕಪ್ಪಾಗುತ್ತದೆ. ಕಾಯಿ ಸ್ವಲ್ಪ ಒಗರು ಹಾಗೂ ಹುಳಿ. ಹಣ್ಣು ಸಿಹಿ. ಕವಳೆಕಾಯಿಯಿಂದ ಚಟ್ನಿಯನ್ನೂ ಮಾಡಬಹುದು. ತುಂಬಾ ರುಚಿಕರವಾಗಿರುತ್ತದೆ. ಉಪ್ಪಿನಕಾಯಿಯನ್ನೂ ಮಾಡುತ್ತಾರೆ.
ನಾನು ಎತ್ತ ತಿರುಗಿದರೂ ಕವಳೆಹಣ್ಣುಗಳೇ ಕಾಣುತ್ತಿದ್ದವು. ಕಾಯಿ ಹಣ್ಣಿನ ರೀತಿಯಲ್ಲಿ ಬಹುಶ: ಗಿಡಗಳಲ್ಲಿ ಹಣ ಬಿಟ್ಟಿದ್ದರೂ ನನಗೆ ಖುಷಿಯಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಈ ಕವಳೆಹಣ್ಣುಗಳನ್ನು ನೋಡಿ ಎಷ್ಟೂ ಖುಷಿಯಾಯ್ತೆಂದರೆ ಯಾವ ಭಾಗದಿಂದ ಹರಿದು ಎಷ್ಟು ತಿನ್ನಬೇಕೆಂದು ಯೋಚಿಸುತ್ತ ನಿಂತೆ. ಇದರ ಮೇಲೆ ಕವಳೆ ಹಣ್ಣು ಅಲ್ಲಿ ಎಷ್ಟಿದ್ದವು ಎಂದು ನೀವು ಊಹಿಸಬಹುದು. ಕೈ ಇಟ್ಟಲ್ಲೆಲ್ಲ ಗೊಂಚಲು ಗೊಂಚಲು ಹಣ್ಣುಗಳೇ ಸಿಗುತ್ತಿರುವಾಗ ನನಗೆ ಹೇಗಾಗಿರಬೇಡ. ಜೇನು ಹುಟ್ಟುಗಳಿರುವ ಕಡೆ ಕರಡಿಯನ್ನು ಬಿಟ್ಟಂತಾಯಿತು. ಮುಳ್ಳುಗಳ ಮಧ್ಯೆ ಇದ್ದರೂ ಹಣ್ಣುಗಳನ್ನು ಹರಿದುಕೊಂಡು ಸಾಕಪ್ಪ ಎನ್ನುವವರೆಗೆ ತಿಂದೆ. ಹಾಗೆಯೇ ಮನೆಯಲ್ಲಿ ತಿನ್ನೋಣ ಎಂದು ಒಂದಿಷ್ಟು ಹಣ್ಣುಗಳನ್ನೂ ತೆಗೆದುಕೊಂಡೆ. ನನಗೂ ಆಸೆಯಲ್ಲವೆ. ಮನೆಗೆ ಹೋಗಿ ತಿನ್ನೋಣ ಎಂದು ಬೊಗಸೆಯಷ್ಟು ಹಣ್ಣನ್ನು ಕಿತ್ತುಕೊಂಡು ಬಂದೆ.
ಪ್ಯಾಕೆಟ್ ಸಂಸ್ಕೃತಿಯಲ್ಲಿ ಎಲ್ಲವನ್ನೂ ತಿನ್ನುತ್ತಿರುವ ಪಟ್ಟಣ, ನಗರ ಪ್ರದೇಶದ ಮಕ್ಕಳಿಗೆ ಹಳ್ಳಿಗಾಡಿನ ನೈಸರ್ಗಿಕವಾಗಿ ದೊರೆಯುವ ಎಷ್ಟೋ ಹಣ್ಣುಗಳ ಪರಿಚಯವೇ ಇರುವುದಿಲ್ಲ. ಪಟ್ಟಣದಿಂದ ಸ್ವಲ್ಪ ದೂರ ನಾವು ಕಾಡಿರುವ ಪ್ರದೇಶವನ್ನು ಹೊಕ್ಕರೆ ಎಷ್ಟೊ ಸಿಹಿ, ಒಗರು, ಹುಳಿ, ಸಪ್ಪೆಯಾದ ಹಣ್ಣುಗಳು, ಕಾಯಿಗಳು ಸಿಗುತ್ತವೆ. ಅವುಗಳಲ್ಲಿ ಎಷ್ಟೊ ಕಾಯಿ, ಹಣ್ಣುಗಳು ಆರೋಗ್ಯಕ್ಕೂ ಹಿತಕರವೆಂಬುದು ಗೊತ್ತೇ ಇರುವುದಿಲ್ಲ. ಹಳ್ಳಿಗಾಡಿನ ಜನರನ್ನು ಕೇಳಿದರೆ ಥಟ್ಟನೆ ಹೇಳುತ್ತಾರೆ, ಈ ಹಣ್ಣು ತಿಂದರೆ ಆರೋಗ್ಯಕ್ಕೆ ಈ ರೀತಿಯಾಗಿ ಹಿತಕರವಾಗಿರುತ್ತದೆ ಎಂದು. ಆದರೆ ಕಾಡಿಗೆ ಹೋಗಿ, ಕಾಯಿ, ಹಣ್ಣುಗಳನ್ನು ಹುಡುಕುತ್ತ ಹೋಗಲು ನಗರವಾಸಿಗಳಿಗೆ ಪುರುಸೊತ್ತಾದರೂ ಎಲ್ಲಿರುತ್ತದೆ?
ಆದರೆ ಒಮ್ಮೆ ಕುರುಚಲು ಕಾಡನ್ನು ಹೊಕ್ಕು ನೋಡಿ, ಅಲ್ಲಿನ ಪ್ರಪಂಚವೇ ಬೇರೆ ಎನಿಸಿಬಿಡುತ್ತದೆ. ಗುಡ್ಡಗಾಡು, ಕುರುಚಲು ಕಾಡಿನಲ್ಲಿ ಯಥೇಚ್ಚವಾಗಿ ಬೆಳೆಯುವ ಈ ಹಣ್ಣುಗಳನ್ನು ಯಾರೂ ತಿನ್ನಲು ಇಷ್ಟಪಡುವುದಿಲ್ಲ, ಕೆಲವರಿಗೆ ಹೆಸರು, ರುಚಿ ಏನೊಂದೂ ಗೊತ್ತಿರುವುದಿಲ್ಲ. ಕವಳಿ ಹಣ್ಣಾದರೋ ಕೆಲವು ಹೆಣ್ಣುಮಕ್ಕಳು ಕಾಡಿನಲ್ಲಿ ತಿರುಗಾಡಿ ಅವನ್ನೇ ಬುಟ್ಟಿಯಲ್ಲಿಟ್ಟುಕೊಂಡು ಮಾರಾಟಕ್ಕಾಗಿ ಶಾಲೆಯ ಗೇಟಿನ ಪಕ್ಕ ಮಕ್ಕಳನ್ನು ಕಾಯುತ್ತ ಕೂಡುವದು ಸಾಮಾನ್ಯ. ಶಾಲೆಯ ಮಕ್ಕಳೇ ಅವರಿಗೆ ಗಿರಾಕಿಗಳು. ಆದರೆ ಮಕ್ಕಳು ಅವನ್ನು ತಿರುಗಿಯೂ ನೋಡದೆ ಶಾಲೆಯ ಪಕ್ಕದ ಬೇಕರಿಗೆ ಓಡಿಹೋಗುವುದೇ ಹೆಚ್ಚು.
ಕವಳಿಕಾಯಿ ಪಿತ್ತ ಹೊಡೆದೋಡಿಸಲು ಸಿದ್ಧೌಷಧವಿದ್ದಂತೆ. ವಿಶೇಷವೆಂದರೆ ಕರಡಿಗಳಿಗೆ ಈ ಹಣ್ಣುಗಳು ಅಚ್ಚುಮೆಚ್ಚು. ಒಣಭೂಮಿ, ಬೆಟ್ಟಗಳಲ್ಲಿ ಹೆಚ್ಚಿನ ನೀರಿನ ಅಗತ್ಯವಿಲ್ಲದೆ ಬೆಳೆಯುವ ಈ ಗಿಡ, ನೆಲದಿಂದ ಹೆಚ್ಚೇನೂ ಎತ್ತರವಿಲ್ಲದ, ಮುಳ್ಳನ್ನು ಹೊಂದಿರುವ ಚಿಕ್ಕ ಗಿಡವಾಗಿದೆ. ಕವಳಿಗಿಡದ ವೈಜ್ಞಾನಿಕ ಹೆಸರು ಕ್ಯಾರಿಸ್ಸಾ ಕರಂಡಾಸ್. ಹೆಚ್ಚು ನೀರಿನ ಅಗತ್ಯವಿಲ್ಲದ ಕವಳೆಗಿಡ, ಬಿಸಿಲು ಪ್ರದೇಶಗಳಲ್ಲಿ ಸುಲಭವಾಗಿ ಬೆಳೆಯುತ್ತದೆ. ಯಾವುದೇ ಆರೈಕೆಯಿಲ್ಲದೆ ಗುಡ್ಡಗಳ ಮೇಲೆ ಬೆಳೆಯುವ ಈ ಗಿಡವನ್ನು ರೈತರು ಬೇಲಿಗಾಗಿಯೂ ಉಪಯೋಗಿಸುತ್ತಾರೆ ಬೀಜದಿಂದ ಹೊಸ ಗಿಡವನ್ನು ಪಡೆಯಬಹುದು.
ಗಿಡದಲ್ಲಿ ಸುಮಾರು ೫-೬ ಕಾಯಿಗಳ ಗೊಂಚಲು, ಗೊಂಚಲಾಗಿ ಅಲ್ಲಲ್ಲಿ ಬೆಳೆದಿರುತ್ತದೆ. ಚಿಕ್ಕದಿರುವಾಗ ಹಸಿರು ಬಣ್ಣವಿರುವ ಕವಳೆ ಕಾಯಿಗಳು ಮುಂದೆ ಹಸಿರು ಮಿಶ್ರಿತ ಗುಲಾಬಿ-ಕೆಂಪು ಬಣ್ಣವನ್ನು ಹೊಂದುತ್ತವೆ. ಪೂರ್ತಿ ಮಾಗುವ ಮೊದಲು ಕಂದು-ಕೆಂಪು ಬಣ್ಣವಿರುವ ಕಾಯಿ ಮಾಗಿದಾಗ ಪೂರ್ತಿ ಕಪ್ಪಾಗುತ್ತದೆ. ಕವಳೆಕಾಯಿಯನ್ನು ಕಿತ್ತಾಗ ಅದರ ತೊಟ್ಟಿನಿಂದ ಅಂಟಂಟಾಗಿರುವ ಬಿಳಿಯಾದ ಹಾಲು ಒಸರುತ್ತದೆ. ಕವಳೆಹಣ್ಣಿನೊಳಗಡೆ ಅರ್ಧ ಚಂದ್ರಾಕೃತಿಯ, ಒಂದರ ಪಕ್ಕ ಒಂದು ಒತ್ತಾಗಿರುವ ಅನೇಕ ತೆಳ್ಳನೆಯ ಚಿಕ್ಕ ಬೀಜಗಳಿರುತ್ತವೆ.
ಕವಳೆಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು. ಹಣ್ಣಿನಿಂದ ಜಾಮ್, ಜೆಲ್ಲಿಯಲ್ಲೂ ಬಳಸಲಾಗುತ್ತದೆ. ಇಷ್ಟೆಲ್ಲ ಇದರೂ ಇದಕ್ಕೆ ಇನ್ನೂ ಬೇಡಿಕೆ ಬಂದಿಲ್ಲ. ಮಧುಮೇಹ ಕಾಯಿಲೆಯಿದ್ದವರಿಗೆ ನೇರಳೆಹಣ್ಣನ್ನು ತಿನ್ನಿ ಎಂದು ಯಾರು ಹೇಳಿದರೋ, ನೇರಳೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ, ಹಾಗೆಯೇ ಯಾರಾದರೂ ನಿಮ್ಮ ಕಾಯಿಲೆಗೆ ಕವಳೆಹಣ್ಣನ್ನು ತಿನ್ನಿ ಎಂದಾಗ ಪಟ್ಟಣ, ನಗರವಾಸಿಗಳು ಇವನ್ನು ಹುಡುಕಾಡತೊಡಗಿ ಆಗ ಇದಕ್ಕೂ ಎಲ್ಲಿಲ್ಲದ ಬೇಡಿಕೆ ಬರುವುದೇನೋ ಯಾರಿಗೆ ಗೊತ್ತು? ಒಂದೇ ಒಂದು ಸಲ ಪಕ್ಕದ ಕಾಡಲ್ಲಿ ಇಣುಕಿ ನೋಡಿ, ವಿವಿಧ ಹಣ್ಣುಗಳ ಪ್ರಪಂಚವನ್ನೇ ಕಾಣುತ್ತೀರಿ. ಆದರೆ ಕಾಡಿನ ನಿಯಮ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ತಿರುಗಾಡಿ.

Leave a Reply

Your email address will not be published.