ಅಂಬೇಡ್ಕರ್ ಚಿಂತನೆ-9: ಮಹರ್ ಸೋದರರು ಗುಲಾಮಗಿರಿಗೆ ಶರಣಾಗಬಾರದು.

ಅನುವಾದ : ಬಿ.ಶ್ರೀಪಾದ ಭಟ್

ಬಹಿಷ್ಕøತ ಭಾರತದ ಪುಟಗಳಿಂದ :

27.7.1921 ರಂದು ಮಹರ್ ಸಮುದಾಯದಿಂದ ಸರ್ಕಾರಕ್ಕೆ ಒಂದು ಮನವಿ ಪತ್ರ
ಮಹರ್ ಸಮುದಾಯಕ್ಕೆ ಅವರ ಇನಾಮು ಭೂಮಿಯನ್ನು ಉಳಿಸಕೊಳ್ಳಲು ಅನುಮತಿ ಕೊಡಬೇಕು ಮತ್ತು ಈ ಇನಾಮು ಭೂಮಿಯನ್ನು ‘ರಾಯತವ ಭೂಮಿ’ಯನ್ನಾಗಿ ಪರಿವರ್ತಿಸಬೇಕು ಮತ್ತು ಈಗ ಮಹರ್ ಸಮುದಾಯವನ್ನು ಅವರ ವತನದಾರ ಪದ್ಧತಿಯಿಂದ ಬಿಡುಗಡೆ ಮಾಡಬೇಕು ಮತ್ತು ರಾಯತರ ಸೇವೆಯಿಂದಲೂ ಮುಕ್ತಗೊಳಿಸಬೇಕು. ಈ ನಡೆಯು ಮಹರ್ ಸಮುದಾಯಕ್ಕೆ ಗುಲಾಮಗಿರಿಯಿಂದ ಕೊಂಚ ಮಟ್ಟಿಗೆ ಬಿಡುಗಡೆಯನ್ನು ತಂದುಕೊಡುತ್ತದೆ.ಬೇರೆ ವೃತ್ತಿ ಮತ್ತು ಸೇವೆಗಳನ್ನು ಮಾಡುವುದರ ಮೂಲಕ ಅವರು ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ. ನಮ್ಮ ವತನ ಕೆಲಸಗಾರರು ಈವರೆಗೆ ಗ್ರಾಮಸ್ಥರಿಗೆ ಕಾಡಿನಿಂದ ಮರವನ್ನು ಕಡಿದು ಉರುವಲು ತಂದುಕೊಡುತ್ತಿದ್ದರು, ಸತ್ತ ಪ್ರಾಣಿಗಳ ಶವಗಳನ್ನು ಗ್ರಾಮದಿಂದ ಹೊರ ಸಾಗಿಸುತ್ತಿದ್ದರು,ಗ್ರಾಮದಲ್ಲಿ ಕೀಳೆಂದು ಪರಿಗಣಿಸಲ್ಪಟ್ಟ ಕಸುಬುಗಳನ್ನು ಮಾಡುತ್ತಿದ್ದರು. ಈ ಕೆಲಸಗಳನ್ನು ವತನದ ರೂಪದಲ್ಲಿ ನಮ್ಮ ಮೇಲೆ ಹೇರಲಾಗಿತ್ತು. ಈ ಕಸುಬುಗಳನ್ನು ಮಾಡುತ್ತಿರುವ ದಿನದವರೆಗೂ ನಾವು ಗುಲಾಮಗಿರಿಂದ ಬಿಡುಗಡೆಗೊಳ್ಳಲು ಸಾಧ್ಯವಿಲ್ಲ. ವತನ ಪದ್ಧತಿಯಿಂದ ದೊರಕುವ ಸ್ವಾತಂತ್ರದಿಂದಾಗಿ ನಮಗೆ ಈ ಕೀಳು ಕಸುಬಿನಿಂದಲೂ ಮುಕ್ತಿ ದೊರೆಯುತ್ತದೆ.

5-8-1921 ಶಾಹು ಮಹಾರಾಜರ ಪತ್ರ ( ಸರ್ಕಾರದ ಸೆಕ್ರೆಟರಿಗೆ)
ambedkar-12ಮಹರ್ ಸಮುದಾಯದವರು ಸ್ವಯಂಪ್ರೇರಿತರಾಗಿ ತಮ್ಮ ಇನಾಮು ಭೂಮಿಯನ್ನು(ವತನಿ ಭೂಮಿ) ರದ್ದು ಪಡಿಸಿ ಅದನ್ನು ರಾಯತವಾಡಿ ಪದ್ಧತಿಯಡಿ ತರಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ. ಮಹರ್ ಸಮುದಾಯವು ಗುಲಾಮಗಿರಿಯಿಂದ ಮುಕ್ತಿಹೊಂದಲು ತಾವು ಇದನ್ನು ಈ ಕೂಡಲೆ ಅಂಗೀಕರಿಸಬೇಕೆಂದು ಕೋರಿಕೊಳ್ಳುತ್ತೇನೆ. ಎಲ್ಲಾ ಬಗೆಯ ಇನಾಮು ಭೂಮಿಯನ್ನು ರಾಯತವಾಡಿ ಭೂಮಿಯನ್ನಾಗಿ ಪರಿವರ್ತಿಸಬೇಕು ಎಂದು ಹೇಳಲಿಚ್ಚಿಸುತ್ತೇನೆ. ಈ ಆದೇಶದ ಮೂಲಕ ರಾಯತವಾಡಿ ಭೂಮಿಯ ಎಲ್ಲಾ ಒಡೆತನವನ್ನು ಸಹ ಮಹರ್ ಸಮುದಾಯಕ್ಕೆ ಕೊಡಬೇಕು. ಅವರಿಂದ ಯಾರೂ ಕೆಲಸವನ್ನು ಮಾಡಿಸಿಕೊಳ್ಳುವ ಹಾಗಿಲ್ಲ. ಯಾವುದೇ ಸರ್ಕಾರಿ ಕಛೇರಿಗಳಲ್ಲಿ ಈ ಆದೇಶವು ಮೂರು ದಿನಗಳಿಗಿಂತಲೂ ಮೇಲ್ಪಟ್ಟು ಕೊಳೆಯುವ ಹಾಗಿಲ್ಲ. ಮಾಮಲೇದಾರರು ತಾನು ತೆಗೆದುಕೊಂಡ ಕ್ರಮದ ಬಗ್ಗೆ ಈ ಕೂಡಲೆ ವರದಿ ಸಲ್ಲಿಸಬೇಕು.

30,ಸೆಪ್ಟೆಂಬರ್ 1927, ಸಂಪಾದಕೀಯ
ಇಂದು ನಾವು ಈ ವತನ ಪದ್ಧತಿಯನ್ನು ಹೇಗೆ ನಿರ್ಮೂಲನೆ ಮಾಡಬೇಕೆಂದು ಚರ್ಚೆ ಮಾಡುತ್ತಿದ್ದೇವೆ. ಬಹಿಷ್ಕøತ ಭಾರತದ ಹಿಂದಿನ ಪುಟಗಳಲ್ಲಿ ಇದರ ಕುರಿತಾಗಿ ವಿವರವಾಗಿ ಚರ್ಚಿಸಿದ್ದೇವೆ. ವತನ ಪದ್ಧತಿಯನ್ನು ರಕ್ಷಿಸಲು ಸರ್ಕಾರವು ಅನುಕೂಲ ಮಾಡಿದಂತೆಯೇ ಅದನ್ನು ರದ್ದುಗೊಳಿಸಲು ಸಹ ಅನುಕೂಲ ಮಾಡಿಕೊಟ್ಟಿದೆ. ಇದನ್ನು ವತನ ಕಾನೂನಿನ ಕಲಮು 15ರಲ್ಲಿ ಕಾಣಬಹುದು. ಅದರ ಪ್ರಕಾರ ‘ಒಂದು ವೇಳೆ ವತನದಾರನು ತನ್ನ ವತನವನ್ನು ಶರಣಾಗತಿ ಮಾಡಲು ಬಯಸಿದರೆ ಇದನ್ನು ಲಿಖಿತ ರೂಪದಲ್ಲಿ ಬರೆದುಕೊಟ್ಟರೆ ಮತ್ತು ಜಿಲ್ಲಾಧಿಕಾರಿಗಳು ಅದನ್ನು ಒಪ್ಪಿಕೊಂಡರೆ ವತನದಾರ ಮತ್ತು ಆತನ ನಂತರದ ತಲೆಮಾರು ಈ ವತನ ಪದ್ಧತಿಯಿಂದ ಬಿಡುಗಡೆ ಪಡೆಯಬಹುದಾಗಿದೆ. ಹೀಗಾಗಿ ಈ ಮಹರ ವತನ ಪದ್ಧತಿಯ ನಿರ್ಮೂಲನೆಗೆ ಹೊಸ ಕಾಯಿದೆಯ ಅವಶ್ಯಕತೆ ಬೇಕಾಗಿಲ್ಲ.

ಮಹರ್ ವತನ ನಿರ್ಮೂಲನೆ ಅವಶ್ಯಕವಾದ ಷರತ್ತುಗಳು ( ಮೂಲ ಕಾನೂನಿಗೆ ಇದನ್ನು ಸೇರಿಸಬೇಕು)
ವತನ ಪದ್ಧತಿಯ ನಿರ್ಮೂಲನೆಗೆ ಮಹರ್ ಸಮುದಾಯ ವತನ ಸಂಬಂದಿತ ಕಸುಬುಗಳನ್ನು ಬಿಟ್ಟುಕೊಡಬೇಕು.ಇದಕ್ಕಾಗಿ ಯಾವುದೇ ಪರಿಹಾರವನ್ನು ಕೇಳಬಾರದು.ಸರ್ಕಾರದಿಂದ ಕೊಡಲ್ಪಟ್ಟ ಇನಾಮು ಭೂಮಿಯನ್ನು ಮಹರ್ ಸಮುದಾಯದೊಂದಿಗೆ ಉಳಿಯಬೇಕು.ಇಲ್ಲಿ ಕುಲಕರ್ಣಿ ವತನದೊಂದಿಗೆ ಮಹರ ವತನವನ್ನು ಹೋಲಿಸಲು ಸಾಧ್ಯವಿಲ್ಲ. ಕುಲಕರ್ಣಿ ವತನವು ಆ ಜಾತಿಯವನಿಗೆ ಸಬಲೀಕರಣವನ್ನು ತಂದುಕೊಟ್ಟರೆ ಮಹರ್ ಸಮುದಾಯದ ವತನವು ಆ ಸಮುದಾಯದ ವ್ಯಕ್ತಿಯನ್ನು ಶೋಷಿತನನ್ನಾಗಿಸುತ್ತದೆ.ಗುಲಾಮನಾಗಿಸುತ್ತದೆ. ಹೀಗಾಗಿಯೇ ರಾಯತ ಮತ್ತು ಮಹರ್ ಸಮುದಾಯದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುವ ತನ್ನ ಜಾತಿಯ ವತನ ಪದ್ಧತಿಯನ್ನು ಉಳಿಸಿಕೊಳ್ಳಲು ಕುಲಕರ್ಣಿಯು ಹೋರಾಟ ಮಾಡಿದರೆ ಕುಲಕರ್ಣಿ ಮತ್ತು ರಾಯತರಿಗೆ ತಮ್ಮನ್ನು ಒಬ್ಬ ಗುಲಾಮರನ್ನಾಗಿ ಮಾಡುವ ವತನ ಪದ್ಧತಿಯನ್ನು ಮಹರ್ ಸಮುದಾಯ ರದ್ದ ಮಾಡಲು ಬಯಸುತ್ತದೆ. ವತನ ಪದ್ಧತಿಯನ್ನು ಸುಧಾರಣೆಯ ಬದಲಾಗಿ ಅದನ್ನು ನಿರ್ಮೂಲನೆ ಮಾಡಬೇಕು. ಸರ್ಕಾರವೂ ಸಹ ಇದೇ ಅಭಿಪ್ರಾಯವನ್ನು ಹೊಂದಿರುವುದು ಸಂತೋಷದ ಸಂಗತಿ.

ಇಲ್ಲಿ ಮತ್ತೊಂದು ಸುಧಾರಣೆಯನ್ನು ಬಯಸುತ್ತೇನೆ. ಬಲೂತ ಪದ್ಧತಿಯನ್ನು ನಿಲ್ಲಿಸಿ ಅದರಡಿಯಲ್ಲಿ ದೊರಕುವ ಕಾಳುಗಳ ಬದಲಾಗಿ ಹಣವನ್ನು ಕೊಡಬೇಕು. 1844ರ ಕಾನೂನಿನಂತೆ ಕುಲಕರ್ಣಿ ಮತ್ತು ಪಾಟೀಲರು ಸಂಬಳ ಪಡೆಯುವ ಸರ್ಕಾರಿ ನೌಕಕರು ಎಂದು ಪರಿಗಣಿಸಲ್ಪಡುತ್ತಾರೆ.ಇವರ ಸಂಬಳವು ಇಡೀ ಗ್ರಾಮದ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಅದನ್ನು ಸರ್ಕಾರಿ ಖಜಾನೆಯಿಂದ ಕೊಡುತ್ತಾರೆ. ಆದರೆ ಇದೇ ನಿಯಮವು ಮಹರ್ ಸಮುದಾಯಕ್ಕೆ ಅನ್ವಯವಾಗುವುದಿಲ್ಲ. ಒಂದು ಬಾರಿ ವತನ ಪದ್ಧತಿಯನ್ನು ಒಂದು ಉದ್ಯೋಗವಾಗಿ ಪರಿವರ್ತಿಸಿದಾಗ ಮಹರ್ ಸಮುದಾಯಕ್ಕೆ ತಮ್ಮ ಆಯ್ಕೆಗೆ ಅನುಗುಣವಾಗಿ ಉದ್ಯೋಗವನ್ನು ಮಾಡಲು ಸ್ವಾತಂತ್ರ ದೊರಕುತ್ತದೆ. ಹೀಗಾಗಿ ಬಲೂತ ಪದ್ಧತಿಯನ್ನು ಪರಿವರ್ತಿಸಿ ಅದರ ಬದಲಾಗಿ ಹಣವನ್ನು ಸಂದಾಯ ಮಾಡಬೇಕು ಹಾಗೂ ರಾಯತರ ಬಳಿ ಕೆಲಸ ಮಾಡುವುದರ ಆಯ್ಕೆಯನ್ನು ಮಹರ್ ಸಮುದಾಯದ ವಿವೇಚನೆಗೆ ಬಿಡಬೇಕು ಅದು ಕಡ್ಡಾಯವಾಗಿರಬಾರದು

4,ನವೆಂಬರ್, 1927, ಸಂಪಾದಕೀಯ
ಕಳೆದ ಮೂರು ಸಂಚಿಕೆಗಳಲ್ಲಿ “ಮಹರ್ ಮತ್ತು ವತನ” ಕುರಿತಂತೆ ಮೂರು ಮುಖ್ಯ ಲೇಖನಗಳನ್ನು ಪ್ರಕಟಿಸಿದ್ದೆವು. ಆ ಲೇಖನಗಳಲ್ಲಿ ಈ ‘ವತನ’ ಪದ್ಧತಿಯಿಂದ ಮಹರ ಸಮುದಾಯವು ಶೋಷಣೆಯಿಂದ ನರಳುತ್ತಿರುವುದನ್ನು ಮತ್ತು ವತನ ಪದ್ಧತಿಯಲ್ಲಿ ಸುಧಾರಣೆಯ ಅಗತ್ಯವನ್ನು ವಿವರಿಸಿದ್ದೆವು. ನಮ್ಮ ಈ ಲೇಖನಗಳಲ್ಲಿನ ಚಿಂತನೆಗಳಿಗೆ ಪೂರಕವಾಗಿ ಯಾರಾದರೂ ತಮ್ಮ ಅಭಿಪ್ರಾಯಗಳನ್ನು ಸೂಚಿಸುವುದಿದ್ದರೆ ನಮಗೆ ಬರೆದು ಕಳುಹಿಸಬೇಕೆಂದು ಸಹ ಕೇಳಿದ್ದೆವು. ನಾವು ಪ್ರತಿಕ್ರಿಯೆಗಾಗಿ,ಅಭಿಪ್ರಾಯಕ್ಕಾಗಿ ಕಾಯುತ್ತಿದ್ದರೆ ಹಠಾತ್ತಾಗಿ ಮುಂಬೈನಲ್ಲಿ ನಡೆದ ಎರಡು ಸಭೆಗಳಲ್ಲಿ ನಮ್ಮ ಬೇಡಿಕೆಗಳು ಮತ್ತು ಸಲಹೆಗಳನ್ನು ವಿರೋಧಿಸಿ ಈ ಸುಧಾರಣೆಯ ವಿರುದ್ಧ ಗೊತ್ತುವಳಿಯನ್ನು ಅನುಮೋದಿಸಲಾಯಿತು. ನಮಗೆ ಸಲಹೆಗಳನ್ನು ನೀಡುವುದರ ಬದಲಾಗಿ ನಮ್ಮ ಸುಧಾರಣೆಯ ವಿರುಧ್ದ ದನಿ ಎತ್ತಿದ್ದು ನಮಲ್ಲಿ ಆಶ್ಚರ್ಯ ಮೂಡಿಸಿದೆ. ನಂತರ ಇದನ್ನು ಕೂಲಂಕುಷವಾಗಿ ವಿಚಾರಿಸಿದಾಗ ಈ ಸಭೆಯನ್ನು ನಮ್ಮ ವಿರೋಧಿಗಳು ಆಯೋಜಿಸಿದ್ದರು ಎಂದು ಗೊತ್ತಾಯಿತು. “ ಮಹರ್ ಸಮುದಾಯದ ವತನ್ ಅನ್ನು ನಿರ್ಮೂಲನೆ ಮಾಡಿ” ಎನ್ನುವ ನಮ್ಮ ಹಕ್ಕೊತ್ತಾಯವನ್ನು ನಮ್ಮ ವಿರೋಧಿಗಳು ತಿರುಚಿ ಮಹರ್ ಸಮುದಾಯವನ್ನು ವತನ ಪದ್ಧತಿಯಿಂದ ಬಲವಂತವಾಗಿ ಬಿಡುಗಡೆಗೊಳಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ವಿವರಣೆ ಕೊಡುತ್ತಿದ್ದೇವೆ.

ನಮ್ಮ ಅಭಿಪ್ರಾಯದಲ್ಲಿ ‘ಮಹರ್ ವತನ’ ಎನ್ನುವುದು ತುಂಬಾ ಅಪಾಯಕಾರಿ ಮತ್ತು ಆದಷ್ಟು ಬೇಗ ರದ್ದಾಗುವುದು ಒಳಿತು.ಅವರ ವತನ ಪದ್ಧತಿಯಿಂದ ಮಹರ್ ಸಮುದಾಯವನ್ನು ಬೇರ್ಪಡಿಸಲು ನಾವು ಒತ್ತಡವನ್ನು ಹೇರಬೇಕಾಗಿ ಬಂದರೂ ಸಹ ಅದು ತಪ್ಪಲ್ಲ ಎಂದು ನಮ್ಮ ಅಭಿಪ್ರಾಯ. ಮಹರ್ ಸಮುದಾಯದ ಗುಲಾಮಗಿರಿಯನ್ನು ಅವರಿಗೆ ವಿವರಿಸಲು ಅವರಿಗೆ ಸೂಕ್ತ ಮತ್ತು ಕಡ್ಡಾಯ ಶಿಕ್ಷಣವನ್ನು ಕೊಡಬೇಕೆಂದು ನಾವು ಒತ್ತಾಯಿಸುತ್ತೇವೆ. ಶಾಹು ಮಹಾರಾಜ ಅವರು ಮಹರ್ ಸಮುದಾಯದ ಶತೃಗಳಲ್ಲ. ಅಸ್ಪøಶ್ಯರ ಹಕ್ಕುಗಳ ಪರವಾಗಿ ಬದುಕಿದ ಶಾಹು ಮಹಾರಾಜ್ ‘ಮಹರ್ ಸಮುದಾಯವು ಈ ವತನ ಪದ್ಧತಿಯ ಕಾರಣದಿಂದಾಗಿಯೇ ಇಂದು ಅತ್ಯಂತ ದುಸ್ಥಿಯಲ್ಲಿದ್ದಾರೆ ಎಂದು ನಂಬಿದ್ದಾರೆ’. ಹೀಗಾಗಿ ತಮ್ಮ ಅಧಿಕಾರವನ್ನು ಬಳಸಿಕೊಂಡು ಶಾಹು ಮಹಾರಾಜ್ ಅವರು ಕೊಲ್ಹಾಪುರ ಪ್ರಾಂತದಲ್ಲಿ ಮಹರ್ ಸಮುದಾಯದ ವತನ್ ಅನ್ನು ರದ್ದು ಪಡಿಸಿದ್ದಾರೆ. ಇದನ್ನು ವಿರೋಧಿಸಲು ಮಹರ್ ಸಮುದಾಯಕ್ಕೆ ಕಾರಣಗಳೇ ಇರಲಿಲ್ಲ. ಈ ಕಾನೂನು ತಮ್ಮ ಒಳಿತಿಗಾಗಿ ಇದೆ ಎಂದು ಮಹರ್ ಸಮುದಾಯಕ್ಕೆ ಬಲುಬೇಗನೆ ಅರಿವಾಗತೊಡಗಿದೆ. ಅವರು ಸ್ವಯಂಪ್ರೇರಿತರಾಗಿ ಸರ್ಕಾರಕ್ಕೆ ಇದರಿಂದ ತಮ್ಮನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿಕೊಳ್ಳತೊಡಗಿದ್ದಾರೆ. ಕೊಲ್ಹಾಪುರ ಪ್ರಾಂತದ ಮಹರ್ ಸಮುದಾಯ ಇಂದು ಹೊಸ ಗಾಳಿಯನ್ನು ಉಸಿರಾಡುತ್ತಿದ್ದಾರೆ.

ಬಾಂಬೆ ವಿಧಾನ ಸಭೆಯಲ್ಲಿ ಡಾ.ಅಂಬೇಡ್ಕರ್ ಮಂಡಿಸಿದ ‘ಮಹರ್ ವತನ ಮಸೂದೆ’ ಕುರಿತಾದ ಪ್ರತಿಕಾ ವರದಿ
ಹಂಟರ್ ( 11.11.1927)

26.10.1927 ರಂದು ಮಹರ್ ಚಾಳಿಯಲ್ಲಿ ಒಂದು ಸಭೆಯನ್ನು ಕರೆಯಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ತುಳಸೀರಾಂ ಯಶೂಜಿ ಅವರು ವಹಿಸಿದ್ದರು. ಅದು ಮಂಡಿಸಿದ ನಿರ್ಣಯಗಳು ಹೀಗಿವೆ.

“ಒಂದು ವೇಳೆ ಅಂಬೇಡ್ಕರ್ ಅವರು ಮಂಡಿಸಿದ ಮಸೂದೆಯನ್ನು ಅಂಗೀಕರಿಸಿದರೆ ಮಹರ್ ಸಮುದಾಯವು ಶಾಶ್ವತವಾಗಿ ತಮ್ಮ ಇನಾಂ ಭೂಮಿ ಮತ್ತು ವತನವನ್ನು ಬಿಟ್ಟುಕೊಡಬೇಕಾಗುತ್ತದೆ. ಸರ್ಕಾರವು ಅವರಿಂದ ಎಲ್ಲಾ ಜಮೀನನ್ನು ಕಸಿದುಕೊಳ್ಳುತ್ತದೆ.ಅವರ ಬಲೂತ ಆದಾಯವು ಸ್ಥಗಿತಗೊಳ್ಳುತ್ತದೆ.ಅವರಿಗೆ ಸಂಬಳದ ಹುದ್ದೆಗಳು ದೊರಕುವುದಿಲ್ಲ.ಸರ್ಕಾರವು ತನ್ನದೇ ನೌಕರರನ್ನು ನೇಮಿಸಿಕೊಳ್ಳುತ್ತದೆ. ಈಗಾಗಲೇ ಸರ್ಕಾರವು ಅಸ್ಪøಶ್ಯ ಸಮುದಾಯಕ್ಕೆ ಮಿಲಿಟರಿಯ ದ್ವಾರವನ್ನು ಮುಚ್ಚಿದೆ.ಪೋಲೀಸ್ ಸೇವೆಯಲ್ಲಿ ಅಸ್ಫøಶ್ಯರ ನೇಮಕಾತಿ ಮಾಡಿಕೊಳ್ಳುತ್ತಿಲ್ಲ.ಮುಖ್ಯ ಹುದ್ದೆಗಳಲ್ಲಿ ಅಸ್ಪøಶ್ಯರ ನೇಮಕಾತಿ ಆಗುತ್ತಿಲ್ಲ.ಇದೇ ರೀತಿ ವತನ ಪದ್ಧತಿಯನ್ನು ರದ್ದು ಪಡಿಸಿದರೆ ನೇಕಾರಿಕೆ ಮಗ್ಗಗಳಲ್ಲಿ ಅಸ್ಪøಶ್ಯರನ್ನು ನೇಮಿಸಿಕೊಳ್ಳುವುದಿಲ್ಲ. ಬಹುಶಃ ಅಂಬೇಡ್ಕರ್ ಅದರ ಕುರಿತಾಗಿ ಯೋಚಿಸಿಲ್ಲವೆನಿಸುತ್ತದೆ. ಅವರು ಅನನುಭವಿ. ಇದುವರೆಗೂ ಅವರು ಅಸ್ಪøಶ್ಯರ ಪರವಾಗಿ ಏನನ್ನೂ ಮಾಡಿಲ್ಲ.ಅವರ ನಿಲುವುಗಳು ಅವರ ಜನರಿಗೇ ಅನ್ಯಾಯವನ್ನುಂಟು ಮಾಡುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಅವರ ವಿರುದ್ಧ ಪ್ರತಿಭಟಿಸಬೇಕು.
( ಈ ಪತ್ರವು ಸೆಕ್ರೆಟರಿ, ದಮನಿತ ಭಾರತ ಅಸೋಸಿಯೇಶನ್, ಕ್ಲರ್ಕ ರಸ್ತೆ,ಮುಂಬೈ. ಅವರಿಂದ ಬಂದಿದೆ)

ಮೇಲಿನ ಪತ್ರಕ್ಕೆ ನಮ್ಮ ಉತ್ತರ
ಮೇಲಿನ ಸಭಾವು ಅಂಬೇಡ್ಕರ್ ಅವರನ್ನು ತಪ್ಪಾಗಿ ತಿಳಿದುಕೊಂಡಿದೆ. ಅಸ್ಪøಶ್ಯರ ಏಳಿಗೆಗೆ ಧಕ್ಕೆಯುಂಟು ಮಾಡುವುದು ಅಂಬೇಡ್ಕರ್ ಅವರ ಜೀವಮಾನದಲ್ಲಿ ಸಾಧ್ಯವಿಲ್ಲ. ನಮ್ಮ ಅಸ್ಪøಶ್ಯ ಸೋದರರು ನಮ್ಮನ್ನು ಗಮನವಿಟ್ಟು ಕೇಳಬೇಕು. ಕರ್ವೀರ ನಗರದಲ್ಲಿ ಇದರ ಕುರಿತಾಗಿ ಪ್ರಯೋಗವನ್ನು ಮಾಡಲಾಗಿದೆ. ಅಲ್ಲಿ ಕುಲಕರ್ಣಿ ವತನ ಮತ್ತು ಮಹರ ವತನವನ್ನು ರದ್ದುಪಡಿಸಿ ಅವರ ಭೂಮಿಯನ್ನು ರಾಯತವ ಪದ್ಧತಿಯಲ್ಲಿ ಸೇರಿಸಲಾಯಿತು. ವತನ ಪದ್ಧತಿಯ ನಿರ್ಮೂಲನೆ ಎಂದರೆ ಇನಾಮು ಭೂಮಿಯನ್ನು ಸರ್ಕಾರವು ಸ್ವಾಧೀನ ಪಡೆಸಿಕೊಳ್ಳುವುದು ಎಂದರ್ಥವಲ್ಲ. ಇದು ಕೆಲವರಲ್ಲಿ ತಪ್ಪರ್ಥ ಮೂಡಿಸಿದೆ. ವತನ ರದ್ದಾದ ನಂತರವೂ ಆ ಭೂಮಿಯು ಸಂಬಂಧಪಟ್ಟ ವ್ಯಕ್ತಿಯ ಒಡೆತನದಲ್ಲಿಯೇ ಇರುತ್ತದೆ. ಈ ಒಡೆತನವನ್ನು ಕಸಿದುಕೊಳ್ಳಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಇಲ್ಲಿ ಉದ್ಯೋಗದ ಪ್ರಶ್ನೆ ಇದೆ. ಕುಲಕರ್ಣಿಯ ಉದ್ಯೋಗವು ಆತನಿಗೆ ಪ್ರತಿಷ್ಠೆಯ ಉದ್ಯೋಗವಾಗಿರುತ್ತದೆ.

ಇಡೀ ಗ್ರಾಮದ ಕಂದಾಯ ದಾಖಲೆಗಳು ಕುಲಕರ್ಣಿಯ ವಶದಲ್ಲಿರುತ್ತವೆ ಮತ್ತು ಇಡೀ ಗ್ರಾಮವನ್ನು ಆತ ತನ್ನ ಹಿಡಿತದಲ್ಲಿಟ್ಟುಕೊಂಡಿರುತ್ತಾನೆ.ಆತನದು ಲಾಭದಾಯಕ ಹುದ್ದೆ. ಆದರೆ ಮಹರ್ ಸಮುದಾಯದ ವಿಷಯದಲ್ಲಿ ಇದು ಸಾಧ್ಯವಿಲ್ಲ.ಮಹರ್ ಜಾತಿಗೆ ಸೇರಿದ ವ್ಯಕ್ತಿ ಮಾಮಲೇದಾರ ಅಥವಾ ಫೌಜುದಾರನ ಸೇವೆ ಮಾಡಬೇಕಾಗುತ್ತದೆ,ಆತನ ಕುದುರೆಯ ಸೇವೆ ಮಾಡಬೇಕಾಗುತ್ತದೆ. ಇಪ್ಪತ್ನಾಲ್ಕು ಗಂಟೆ ಅಲ್ಲಿಯೇ ಇರಬೇಕಾಗುತ್ತದೆ.ರಸ್ತೆ ಗುಡಿಸಬೇಕು,ಕೊಳೆ ತೊಳಿಯಬೇಕು,ಸತ್ತ ಪ್ರಾಣಿಗಳ ಶವವನ್ನು ಧಪನು ಮಾಡಬೇಕು,ಅದರ ಚರ್ಮ ಸುಲಿಯಬೇಕು.ಈ ಸಂದರ್ಭದಲ್ಲಿ ಮಹರ್ ಸಮುದಾಯದವರು ತಮ್ಮಲ್ಲೇ ಕಚ್ಚಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಈ ಎಲ್ಲಾ ಹಿನ್ನೆಲೆಯಲ್ಲಿ ಛತ್ರಪತಿ ಶಾಹು ಮಹಾರಾಜ್ ಅವರು ವತನ ಪದ್ಧತಿಯನ್ನು ರದ್ದು ಪಡಿಸಿ ಮಹರ್ ಸಮುದಾಯಕ್ಕೆ ಒಂದು ಘನತೆಯನ್ನು ತಂದುಕೊಟ್ಟಿದ್ದಾರೆ. ಆ ಮೂಲಕ ಮಹರ್ ಸಮುದಾಯಕ್ಕೆ ಅವರ ಭೂಮಿಯ ಮಾಲೀಕರನ್ನಾಗಿ ಮಾಡಿದ್ದಾರೆ. ಈ ಭೂಮಿಯ ಮೇಲೆ ಸರ್ಕಾರದ ಅಧಿಕಾರವನ್ನು ಸಹ ಕೊನೆಗೊಳಿಸಿದ್ದಾರೆ. ಕೊಲ್ಹಾಪುರದಲ್ಲಿ ಮಾಡಿದ ಈ ಪ್ರಯೋಗವನ್ನು ತಪ್ಪೆಂದು ಯಾರೂ ದೂಷಿಸುತ್ತಿಲ್ಲ. ಮೂಲ ಅಸ್ಪøಶ್ಯತೆಯೇ ಬಲೂತ ಪದ್ಧತಿ. ಈ ಬಲೂತ ಪದ್ಧತಿಯನ್ನು ತುಂಡರಿಸುವುದರ ಮೂಲಕ ಶಾಹು ಮಹಾರಾಜರು ಅಸ್ಪøಶ್ಯರನ್ನು ಸ್ಪøಶ್ಯರನ್ನಾಗಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅಂಬೇಡ್ಕರ್ ಅವರು ಮುಂಬೈ ಅಸೆಂಬ್ಲಿಯಲ್ಲಿ ಈ ಮಸೂದೆಯನ್ನು ಮಂಡಿಸಿದ್ದರು.  ಮಹರ್ ಸೋದರರು ಈ ಗುಲಾಮಗಿರಿಗೆ ಶರಣಾಗಬಾರದು.

Leave a Reply

Your email address will not be published.