ಅಂಬೇಡ್ಕರ್ ಚಿಂತನೆ-8: ಬಲೂತ ಎಂದರೆ ಗುಲಾಮಗಿರಿ

ಅನುವಾದ : ಬಿ. ಶ್ರೀಪಾದ ಭಟ್

ಬಹಿಷ್ಕøತ ಭಾರತದ ಪುಟಗಳಿಂದ
(ಅಸ್ಪøಶ್ಯರೆಂದು ಕರೆಯಲ್ಲಪಡುವ ಮಹರ, ಚಮ್ಮಾರ, ಮಾಂಗ್, ಧೋರ ಸಮುಯಾಗಳನ್ನು ಗ್ರಾಮದೊಳಗೆ ವಾಸಿಸಲು ನಿರಾಕರಿಸಲಾಗಿತ್ತು. ಇಂಡಿಯಾದ ಜಾತಿಪದ್ಧತಿಯ ಸಮಾಜದಲ್ಲಿ ಅಸ್ಪøಶ್ಯರು ಊರ ಹೊರಗೆ ಬದುಕುತ್ತಿದ್ದರು. ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತಿಶೂದ್ರರೆಂದು ಕರೆಯಲ್ಪಡುತ್ತಿದ್ದರು. ಮಹರ್ ಸಮುದಾಯಗಳನ್ನು ಹೊರತುಪಡಿಸಿ ಮಿಕ್ಕ ಸಮುದಾಯಗಳ ಕಸುಬು ಸಮಗಾರಿಕೆ(ಚಮ್ಮಾರಿಕೆ) ಯಾಗಿತ್ತು. ಅಸ್ಫøಶ್ಯ ಸಮುದಾಯದ ಈ ಉಪಜಾತಿಗಳು ಬಾಂಬೆ (ಮುಂಬೈ) ಪ್ರೆಸಿಡೆನ್ನಿಯಾದ್ಯಾಂತ ಮತ್ತು ಅದರ ಗಡಿ ಪ್ರಾಂತಗಳಾದ ಗುಜರಾತ್, ಮಧ್ಯಪ್ರದೇಶ, ಕರ್ನಾಟಕ ಪ್ರದೇಶಗಳಲ್ಲಿ ಹರಡಿಕೊಂಡಿದ್ದರು. ಇತರ ಅಸ್ಪøಶ್ಯ ಸಮುದಾಯಗಳಂತೆ ಮಹರ್ ಸಮುದಾಯಕ್ಕೆ ಒಂದು ನಿರ್ದಿಷ್ಟ ಉದ್ಯೋಗವಿರಲಿಲ್ಲ. ಆಯಾ ಹಳ್ಳಿಗಳಲ್ಲಿನ ವ್ಯವಸ್ಥೆಗೆ ಅನುಗುಣವಾಗಿ ಮೇಲ್ಜಾತಿಗಳ ಸೇವೆಯನ್ನು ಒಳಗೊಂಡಂತಹ ವೃತ್ತಿಗಳನ್ನು ನಿಭಾಯಿಸುತ್ತಿದ್ದರು. ಮೃತ ವ್ಯಕ್ತಿಯ ವಾರ್ತೆಯನ್ನು ಪಕ್ಕದ ಗ್ರಾಮಗಳಲ್ಲಿರುವ ಅವರ ಸಂಬಂದಿಕರಿಗೆ ತಿಳಿಸುವುದು, ಗ್ರಾಮದ ಓಣಿಗಳಲ್ಲಿ ಕಸ ಗುಡಿಸುವುದು, ಗ್ರಾಮ ಪಂಚಾಯ್ತಿಯ ಸಭೆಯ ಕುರಿತಾಗಿ ಗ್ರಾಮಸ್ಥರಿಗೆ ತಿಳಿಸಲು ಗ್ರಾಮದ ಓಣಿ, ಓಣಿಗಳಲ್ಲಿ ಡಂಗುರ ಸಾರುವುದು, ಮದುವೆ ಸಮಾರಂಬಗಳಲ್ಲಿ ಕೂಲಿ ಕೆಲಸ ಮಾಡುವುದು, ಸತ್ತ ಪ್ರಾಣಿಗಳ ಕಳೇಬರವನ್ನು ವಿಸರ್ಜಿಸುವುದು. ಈ ಖಾಸಗಿ ಜೀತದ ಜೊತೆಗೆ ಸರ್ಕಾರಿ ನೌಕರರಾದ ಪಾಟೀಲ ಮತ್ತು ಕುಲಕರ್ಣಿಯವರ ಸರ್ಕಾರಿ ಕೆಲಸಗಳನ್ನು ಮಾಡಬೇಕಾಗುತ್ತಿತ್ತು. ಇವರ ಆಜ್ಞೆಗಳು ಒಂದು ಕಾನೂನಿನಂತೆ. ಅದರಲ್ಲಿ ಕಂದಾಯ ವಸೂಲಿ ಕೆಲಸವನ್ನು ಇವರಿಗೇ ವಹಿಸುತ್ತಿದ್ದರು. ಸರ್ಕಾರಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರೆ ಮಹರ್ ಸಮುದಾಯದವರು ಇಪ್ಪತ್ನಾಲ್ಕು ಗಂಟೆ ಅವರ ಸೇವೆಯಲ್ಲಿ ತೊಡಗಿಕೊಳ್ಳುತ್ತಿದ್ದರು.

ambedkar-12ಈ ಗುಲಾಮಗಿರಿಯ ನಡುವೆಯೇ ಮಹರ್ ಸಮುದಾಯ ಬಾಡಿಗೆ ಇಲ್ಲದ ಒಂದು ತುಂಡು ಭೂಮಿಯನ್ನು  ಹೊಂದಿರುತ್ತಿದ್ದರು. ಪ್ರತಿ ವರ್ಷ ಉಳುಮೆ ಮಾಡಿದ ರೈತರಿಂದ ಅಲ್ಲಿನ ಫಸಲಿನ ಭಾಗವನ್ನು ಪಡೆದುಕೊಳ್ಳುತ್ತಿದ್ದರು. ಈ ಗುಲಾಮಗಿರಿಯನ್ನು ತಲೆಮಾರುಗಳಿಂದ ಮಾಡಿಕೊಂಡು ಬರುತ್ತಿದ್ದರು. ಈ ಗುಲಾಮಗಿರಿಯನ್ನು “ವತನ” ಎಂದು ಕರೆಯುತ್ತಿದ್ದರು ಮತ್ತು ಅದಕ್ಕೆ ಸಂಬಂದಪಟ್ಟವನನ್ನು “ವತನದಾರ” ರೆಂದು ಕರೆಯುತ್ತಿದ್ದರು. ಆದರೆ ಇವರಿಗೆ ತಮ್ಮ ಈ ಶಾಶ್ವತವಾದ ಗುಲಾಮಗಿರಿ ಅರ್ಥವಾಗುತ್ತಿರಲಿಲ್ಲ. ಆದರೆ ಈ ಗುಲಾಮಗಿರಿಗೆ ಅಂಟಿಕೊಂಡ ಈ ಅಮಾನವೀಯ ಪದ್ಧತಿಯನ್ನು ಕೊಲ್ಹಾಪುರ ಪ್ರಾಂತದ ರಾಜರಾದ ಶಾಹು ಮಹಾರಾಜರು ಮಾತ್ರ ಅರ್ಥ ಮಾಡಿಕೊಂಡಿದ್ದರು. ಶತಮಾನಗಳಿಂದ ಜಾರಿಯಲ್ಲಿದ್ದ ಈ ಜೀತಪದ್ಧತಿಯಿಂದ ಮಹರ್ ಸಮುದಾಯವನ್ನು ಬಿಡುಗಡೆಗೊಳಿಸಲು ಕಾನೂನನ್ನು ರೂಪಿಸಿದರು ಮತ್ತು ಮಹರ್ ಸಮುದಾಯವನ್ನು ವ್ಯವಸ್ಥೆಯೊಳಗೆ ಸ್ಪøಶ್ಯರನ್ನಾಗಿ ಪರಿವರ್ತಿಸಿದರು. ಶಾಹು ಮಹಾರಾಜ ಅವರು 1919ರಲ್ಲಿ ಇದರ ಕುರಿತಾಗಿ ಕಾನೂನನ್ನು ತಂದರು. 1920ರಲ್ಲಿ ಅಸ್ಪøಶ್ಯ ಸಮುದಾಯದ ನಕ್ಷತ್ರದಂತಿದ್ದÀ  ತರುಣ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜರುಗಿದ ‘ದಮನಿತ ವರ್ಗಗಳ ಸಮ್ಮೇಳನ’ದಲ್ಲಿ ಇದನ್ನು ಕಂಠೋಕ್ತವಾಗಿ ಪ್ರಕಟಿಸಿದರು. ಈ ದಿನಗಳಿಂದಲೇ ಅಂಬೇಡ್ಕರ್ ಅವರು ಮಹರ್ ಸಮುದಾಯವನ್ನು ಈ ವತನ ಪದ್ಧತಿಯ ಗುಲಾಮಗಿರಿಯಿಂದ ವಿಮೋಚನೆಗೊಳಿಸುವುದರ ಕುರಿತಾಗಿ ಗಂಭೀರವಾಗಿ ಚಿಂತಿಸತೊಡಗಿದರು. 1920ರಲ್ಲಿ ಬಾಂಬೆ (ಮುಂಬೈ) ಪ್ರಾಂತದಲ್ಲಿ ಅಂಬೇಡ್ಕರ್ ಆಯೋಜಿಸುತ್ತಿದ್ದ “ಬಹಿಷ್ಕ್ರುತ ಹಿತರಕ್ಷಣಾ ಸಭೆ”ಗಳಲ್ಲಿ ಈ ವತನ ಪದ್ಧತಿಯ ವಿರುದ್ಧ ಪ್ರಚಾರ ಮಾಡುತ್ತಿದ್ದರು. 18,ಫೆಬ್ರವರಿ 1927ರಲ್ಲಿ ಅಂಬೇಡ್ಕರ್ ಅವರು ಬಾಂಬೆ ಪ್ರಾಂತದ ವಿಧಾನ ಪರಿಷತ್ತಿನ ಸದಸ್ಯರಾದರು. ಆ ಸಂದರ್ಭದಲ್ಲಿ                  “ಅನುವಂಶಿಕ ಹುದ್ದೆಗಳ ಆಕ್ಟ್ 1974ನ ತಿದ್ದಪಡಿ” ಮಸೂದೆಯನ್ನು ಮಂಡಿಸಿದರು. ಆ ಮಸೂದೆಯ ಸಾರಾಂಶ ಹೀಗಿದೆ – ಬಿ.ಎಸ್.)

“ಮಹನೀಯರೆ ಅನುವಂಶಿಕ ಹುದ್ದೆಗಳ ಆಕ್ಟ್ ಪಟೇಲರು, ಕುಲಕರ್ಣಿಗಳನ್ನು ಒಳಗೊಳ್ಳುವುದಿಲ್ಲ. ಈ ಅನುವಂಶಿಕ ಆಕ್ಟ್ ಕೇವಲ ಕೆಳದರ್ಜೆಯ ಅನುವಂಶಿಕ ಹುದ್ದೇದಾರರನ್ನು ಮಾತ್ರ ಒಳಗೊಳ್ಳುತ್ತದೆ. ಈ ಕೆಳದರ್ಜೆಯ ಅನುವಂಶಿಕ ಹುದ್ದೇದಾರರ ಪಟ್ಟಿಯು ಮಹಾರಾಷ್ಟ್ರದಲ್ಲಿ ಮಹರ್, ಗುಜರಾತ್‍ನಲ್ಲಿ ವೆತಿಯಾಸ್ ಅಥವಾ ವರ್ಥಾನಿಯಾಸ್, ಕರ್ನಾಟಕದಲ್ಲಿ ಜುಗ್ಲಿಯಾಸ್ ಮತ್ತು ಹೊಲೆಯ ಸಮುದಾಯಗಳನ್ನು ಒಳಗೊಂಡಿರುತ್ತದೆ. ಇವರಲ್ಲಿ ಮಹರ್ ಸಮುದಾಯದವರು ವತನದಾರರ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾನು ಈ ಸದನದಲ್ಲಿ ಮಹರ್ ಸಮುದಾಯದ ಪ್ರತಿನಿಧಿಯಾಗಿ ಮಾತನಾಡುತ್ತೇನೆ. ಈ ಮಸೂದೆಯ ಷರತ್ತುಗಳನ್ನು ಅರ್ಥ ಮಾಡಿಕೊಳ್ಳುವ ಮೊದಲು ಸದನವು ಈ ಮಸೂದೆಯನ್ನು ತರಲು ಕಾರಣವಾದ ಸಮಾಜದ ತಪ್ಪುಗಳು ಮತ್ತು ಕುಂದುಕೊರತೆಗಳು ನಿಮಗೆ ಅರಿವಾಗಬೇಕಾಗಿದೆ.

ಈ ಕೆಳದರ್ಜೆಯ ವತನದ ಹಿಡುವಳಿದಾರರು ಸರ್ಕಾರಿ ಆಕ್ಟ್‍ನ ಅನುಸಾರ ಸರ್ಕಾರಿ ನೌಕರರು. ಆದರೆ ಈ ಸರ್ಕಾರಿ ನೌಕಕರ ಕರ್ತವ್ಯಗಳನ್ನು ಎಲ್ಲಿಯೂ ವ್ಯಾಖ್ಯಾನಿಸಿಲ್ಲ. ಯಾವುದೇ ಇಲಾಖೆಯಲ್ಲಿ ಕೆಲಸ ಮಾಡಲು ಅವರನ್ನು ನಾವು ನಿಯೋಜಿಸಬಹುದು ಮತ್ತು ಇದನ್ನು ನಿರಾಕರಿಸಲು ಅವರು ಧೈರ್ಯ ಮಾಡುವುದಿಲ್ಲ. ಸರ್ಕಾರಿ ನೌಕರರಿಗೆ ಒಂದು ನಿರ್ದಿಷ್ಟ ಇಲಾಖೆ ಮತ್ತು ನಿರ್ದಿಷ್ಟ ಕೆಲಸದ ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ಹೀಗಾಗಿ ಸರ್ಕಾರಿ ನೌಕರನು ನಿಗದಿಪಡಿಸಿದ ಇಲಾಖೆಯಲ್ಲಿಯೇ, ಪೂರ್ವ ನಿಗದಿಯ ಅವಧಿಯೊಳಗೆ ಮಾತ್ರ ಕೆಲಸ ಮಾಡುತ್ತಾನೆ. ಆದರೆ ಮಹರ್ ಸಮುದಾಯದ ಕೆಲಸಗಾರನಿಗೆ ಯಾವುದೇ ನಿರ್ದಿಷ್ಟ ಉದ್ಯೋಗವಿರಲ್ಲ. ಆತನನ್ನು ಎಲ್ಲಾ ಬಗೆಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ. ಆತನಿಗೆ ಸಮಯದ ಗಡುವು, ಇತಿಮಿತಿ ಇರುವುದಿಲ್ಲ. ಆತ ಎಲ್ಲಾ ಸಮಯದಲ್ಲಿಯೂ ಕೆಲಸ ಮಾಡಬೇಕಾಗುತ್ತದೆ. ಅವಶ್ಯ ಉಂಟಾದರೆ ಮಹರ್ ಸಮುದಾಯದ ಕೆಲಸಗಾರ ತನ್ನ ಹೆಂಡತಿ,ಮಕ್ಕಳು ಮತ್ತು ಕುಟುಂಬದ ಇತರೇ ಸದಸ್ಯರನ್ನು ಕೆಲಸಕ್ಕೆ ಕರೆತರಬೇಕಾಗುತ್ತದೆ ಹಾಗೂ ಅವರಿಗೂ ಸಮಯದ ಗಡುವು ಇರುವುದಿಲ್ಲ. ಕೆಲಸಗಾರ ಗೈರುಹಾಜರಿಯಾದರೆ ಆತನ ಹೆಂಡತಿಯನ್ನು ಕೆಲಸಕ್ಕೆ ನಿಯೋಜಿಸುತ್ತಾರೆ. ಆತನ ಹೆಂಡತಿ ಗೈರುಹಾಜರಾದರೆ ಆತನ ತಾಯಿಯನ್ನು ಕೆಲಸಕ್ಕೆ ನಿಯೋಜಿಸುತ್ತಾರೆ, ಆತನ ತಾಯಿ ಗೈರುಹಾಜರಾದರೆ ಆ ಕುಟುಂದ ಯುವ ಸದಸ್ಯರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ.

ಒಂದು ಕ್ಷಣ ಊಹಿಸಿ. 18 ವರ್ಷದ ಮಹರ್ ಸಮುದಾಯದ ಯುವತಿ 18 ವರ್ಷದ ಪೋಲೀಸ್ ಅಧಿಕಾರಿಯ ಆಜ್ಞೆಯ ಮೇರೆಗೆ ಆತನ ಸರಂಜಾಮುಗಳನ್ನು ಐದು ಕಿಮೀವರೆಗೆ ಹೊತ್ತು ನಡೆಯಬೇಕಾಗುತ್ತದೆ. ಆಕೆಯು ಈ ಸಂದರ್ಭದಲ್ಲಿ ಅಪಾಯಕ್ಕೆ ತುತ್ತಾಗುವ ಗಳಿಗೆಯನ್ನು ಊಹಿಸಿಕೊಳ್ಳಿ. ಸರ್ ಈ ವ್ಯವಸ್ಥೆಯಿಂದ ಪಾರಾಗುವ ಯಾವುದೇ ಮಾರ್ಗಗಳಿಲ್ಲ. ಇದು ಸಹಿಸಲು ಅಸಾಧ್ಯವಾದ ದಬ್ಬಾಳಿಕೆಯ ವ್ಯವಸ್ಥೆ.
ವೇತನದ ವಿಷಯಕ್ಕೆ ಬಂದರೆ 24 ಘಂಟೆ ಬಿಡುವಿಲ್ಲದೆ ಕೆಲಸ ಮಾಡುವ ಈ ಮಹರ್ ಸಮುದಾಯಕ್ಕೆ ಎಷ್ಟು ಸಂಭಾವನೆ ಸಿಗುತ್ತದೆ? ಮಹನೀಯರೆ ಸರ್ಕಾರವು ತನ್ನ ಖಜಾನೆಯಿಂದ ಇವರಿಗೆ ನೇರವಾಗಿ ಒಂದು ಬಿಡಿಗಾಸನ್ನೂ ನೀಡುವುದಿಲ್ಲ ಎಂದರೆ ನಿಮಗೆ ಆಶ್ಚರ್ಯವಾದೀತಲ್ಲವೆ? ತಿಂಗಳಿಗೆ ಕೆಲವು ಆಣೆಗಳನ್ನು ಮಾತ್ರ ಗಳಿಸುತ್ತಾರೆ.

ಈ ಮಹರ್ ವತನದಾರರ ಆದಾಯದ ಮೂಲವು ಎರಡು ಬಗೆಯದಾಗಿದೆ. ಇನಾಮು ಭೂಮಿಯು ಮೊದಲ ಆದಾಯವಾದರೆ ಎರಡನೇ ಆದಾಯದ ಮೂಲವು ಬಲೂತ ಅಥವಾ ಗ್ರಾಮಸ್ಥರಿಂದ ದೊರಕುವ ಅನುಕಂಪದ ದೇಣಿಗೆ. ಇವರಿಗೆ ಇನಾಮು ಭೂಮಿಯು ಈ ದೇಶದ ಪ್ರಾಚೀನ ರಾಜರುಗಳಿಂದ ಬಳುವಳಿಯಾಗಿ ಬಂದಿದೆಯೇ ಹೊರತಾಗಿ ಸರ್ಕಾರದಿಂದಲ್ಲ. ಬ್ರಿಟೀಷ್ ಸರ್ಕಾರವು ಈ ಭೂಮಿಯನ್ನು ತುಂಡು ತುಂಡಾಗಿ ವಿಭಜಿಸಿದೆ ಮತ್ತು ಅದರಿಂದ ಯಾವುದೇ ಇಳುವರಿ ದೊರಕವುದಿಲ್ಲ.

ಇವರು ಸರ್ಕಾರದ ನೌಕಕರಾದರೂ ಬೇರೆ ಸರ್ಕಾರ ನೌಕಕರಿಗೆ ವೇತನವನ್ನು ಪಾವತಿಸುವ ಸರ್ಕಾರವು ಇವರಿಗೆ ವೇತನವನ್ನು ಪಾವತಿಸುವುದಿಲ್ಲ. ಆದಾಯದ ಎರಡನೇ ಮೂಲವಾದ ಬಲೂತ ಅಂದರೆ ರೈತರಿಂದ ದೊರಕುವ ಧಾನ್ಯಕಾಳುಗಳು. ಆದರೆ ರೈತನು ಎಷ್ಟು ಬಲೂತವನ್ನು ಕೊಡಬೇಕೆಂದು ಎಲ್ಲಿಯೂ ನಿರ್ಧರಿಸಿಲ್ಲ ಅಥವಾ ನಿಗದಿಪಡಿಸಿಲ್ಲ. ಬಲೂತದ ಪ್ರಮಾಣವನ್ನು ರೈತನೇ ನಿರ್ಧರಿಸುತ್ತಾನೆ. ಸರ್ ಯಾವುದೇ ನ್ಯಾಯಯುತವಾದ ವ್ಯವಸ್ಥೆ ಇಲ್ಲದ ಇದು ಅಮಾನವೀಯ ಪದ್ಧತಿ ಎಂದು ನಾನು ತಿಳಿಯಪಡಿಸುತ್ತಿದ್ದೇನೆ. ಸರ್ಕಾರವು ಮಹರ್ ಸಮುದಾಯದವರನ್ನು ಕೆಲಸಕ್ಕೆ ದುಡಿಸಿಕೊಂಡ ನಂತರ ತನ್ನ ಖಜಾನೆಯಿಂದ ಅವರಿಗೆ ವೇತನವನ್ನು ಪಾವತಿಸಬೇಕು. ತನ್ನ ಜವಬ್ದಾರಿಯಿಂದ ನುಣುಚಿಕೊಂಡು ಅದನ್ನು ರೈತರಿಗೆ ವರ್ಗಾಯಿಸಬಾರದು.

ಸರ್, ಮಾಲೇದಾರರು ಅಥವಾ ಡೆಪ್ಯುಟಿ ಕಮಿಷನರ್‍ಗೆ  ಗ್ರಾಮದ ಪಟೇಲ ಅಥವಾ ಕುಲಕರ್ಣಿಯು ಸಲ್ಲಿಸುವ ವರದಿಯ ಆಧಾರದ ಮೇಲೆ ಮಹರ್ ಸಮುದಾಯದ ಕೆಲಸದ ಭವಿಷ್ಯವು ನಿರ್ಧಾರವಾಗುತ್ತದೆ. ಒಂದು ವೇಳೆ ಮಹರ್ ಕೆಲಸಗಾರನ ಮೇಲೆ ಕ್ರಮವನ್ನು ಜರುಗಿಸಬೇಕೆಂದು ಆ ವರದಿಯಲ್ಲಿ ಉಲ್ಲೇಖಿಸಿದ್ದರೆ ಆ ಗ್ರಾಮದ ಇಡೀ ಮಹರ್ ಸಮುದಾಯವು ಈ ದಂಡನೆಗೆ ಗುರಿಯಾಗಬೇಕಾಗುತ್ತದೆ. ಈ ಕಠಿಣವಾದ ದಂಡನೆಯನ್ನು ಯಾವ ಕಾಲಕ್ಕೂ ಹಿಂಪಡೆಯುವುದಿಲ್ಲ. ರೈತರು ಸಾಮಾಜಿಕ ಬಹಿಷ್ಕಾರವನ್ನು ಹಾಕುತ್ತಾರೆ ಮತ್ತು ಬಲೂತವನ್ನು ಸಹ ನೀಡುವುದಿಲ್ಲ. ಗ್ರಾಮವೊಂದರಲ್ಲಿ ಮಹರ್ ಸಮುದಾಯದ ವ್ಯಕ್ತಿಯೊಬ್ಬ ಸವರ್ಣೀಯನ ಮನೆಯ ತಾರಸಿಯ ಮೇಲೆ ಹಾಸು ಬಿಲ್ಲೆಯನ್ನು ಇಟ್ಟಿದ್ದಕ್ಕಾಗಿ ಮಹರ್ ಸಮುದಾಯದ ವಿರುದ್ಧವೇ ಸಾಮಾಜಿಕ ಬಹಿಷ್ಕಾರವನ್ನು ವಿಧಿಸಲಾಯಿತು.

ಸರ್, ಇಂದು ಸದನದಲ್ಲಿ ನಾನು ಮಂಡಿಸುತ್ತಿರುವ ಮಸೂದೆಯು ವತನದಾರರಾದ ಮಹರ್ ಸಮುದಾಯವನ್ನು ಎರಡು ಭಾಗಗಳಾಗಿ ವಿಭಜಿಸುತ್ತದೆ. ಮೊದಲ ಭಾಗದಲ್ಲಿ ಈ ವ್ಯವಸ್ಥೆಯೊಳಗೆ ಗುಲಾಮಗಿರಿಯಿಂದ ಬದುಕಿ ಸಂಪೂರ್ಣ ಆಯಾಸ ಮತ್ತು ಶಕ್ತಿಹೀನರಾಗಿ ಇದರಿಂದ ಬಿಡುಗಡೆ ಬಯಸುತ್ತಿರುವವರನ್ನು ಈ ವತನ ಪದ್ಧತಿಯಿಂದ ವಿಮುಕ್ತಿಗೊಳಿಸಿ ಅವರಿಗೆ ಅವರ ಭೂಮಿಯನ್ನು ಹಿಂದಿರುಗಿಸಬೇಕು ಮತ್ತು ಪ್ರತಿಯಾಗಿ ಅವರಿಂದ ಅದಕ್ಕೆ ಸೂಕ್ತವಾದ ಬೆಲೆಯನ್ನು ಪಡೆದುಕೊಳ್ಳಬೇಕು ಹಾಗೂ ಅವರಿಗೆ ಭೂಮಿಯ ಒಡೆತನವನ್ನು ಬಿಟ್ಟುಕೊಡಬೇಕು.
ಮತ್ತೊಂದು ಮುಖ್ಯ ಶಿಫಾರಸು ಏನೆಂದರೆ ಮಹರ್ ಸಮುದಾಯಕ್ಕೆ ರೈತರಿಂದ, ಸರ್ಕಾರದಿಂದ ದೊರಕುವ ಬಲೂತವನ್ನು ಹಣವನ್ನಾಗಿ ಪರಿವರ್ತಿಸಬೇಕು. ಎರಡನೆಯದಾಗಿ ಬಲೂತವನ್ನು ಖಾಸಗಿ ಪಾಲು ಮತ್ತು ಸರ್ಕಾರಿ ಪಾಲು ಎಂದು ಎರಡು ಭಾಗಗಳಾಗಿ ವಿಭಾಗಿಸಬೇಕು. ಸರ್ಕಾರದ ದೃಷ್ಟಿಕೋನದಲ್ಲಿ ಸರ್ಕಾರಕ್ಕೆ ಸೇವೆ ಸಲ್ಲಿಸಿದ್ದಕ್ಕಾಗಿ ಮತ್ತು ರೈತರಿಗೆ ಸೇವೆ ಸಲ್ಲಿಸಿದ್ದಕ್ಕಾಗಿ ಎರಡಕ್ಕೂ ಬಲುತವನ್ನು ಪಾವತಿಸಬೇಕು. 1919ರ ತನ್ನ ಶ್ವೇತಪತ್ರದಲ್ಲಿ ಸರ್ಕಾರವು ಕೇವಲ ಖಾಸಗಿ ಸೇವೆಗೆ ಮಾತ್ರವಲ್ಲ ಸರ್ಕಾರಿ ಸೇವೆಗೂ ಸಹ ಬಲೂತವನ್ನು ಪಾವತಿಸಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ.

ಸರ್, ಮಹರ್ ಸಮುದಾಯದ ಕೆಲವರು ಸರ್ಕಾರಕ್ಕೆ ಮಾತ್ರ ಸೇವೆ ಸಲ್ಲಿಸಲು ಬಯಸುತ್ತಾರೆ. ಆದರೆ ರೈತರಿಗೆ ಸೇವೆ ಸಲ್ಲಿಸಲು ಬಯಸುತ್ತಿಲ್ಲ ಹಾಗೂ ರೈತರೂ ಸಹ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲು ತಯಾರಿದ್ದಾರೆ. ಆದರೆ ಈಗಿರುವ ನಿಯಾಮಳಿಯ ಅನುಸಾರ ಮಹರ್ ಸಮುದಾಯದವರಿಗೆ ಸೇವೆಯಿಂದ ಮುಕ್ತಿ ಹೊಂದಲು ಅವಕಾಶವಿಲ್ಲ. ಅವರಿಗೆ ಇಚ್ಛೆ ಇಲ್ಲದಿದ್ದರೂ ಅವರಗೆ ಸೇವೆಯನ್ನು ಮುಂದುವರೆಸುವಂತೆ ಬಲತ್ಕಾರ ಮಾಡಲಾಗುತ್ತಿದೆ. ಈಗಿನ ಪದ್ಧತಿಯ ಪ್ರಕಾರ ಬಲೂತವು ಸರ್ಕಾರದ ಮತ್ತು ರೈತರ ಜಂಟಿ ಸಂಭಾವನೆಯಾಗಿರುವುದರಿಂದ ಅದರಲ್ಲಿ ಸರ್ಕಾರದ ಪಾಲು ಎಷ್ಟು,ರೈತರ ಪಾಲೆಷ್ಟು ಎಂದು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಇಂದಿನ ದಿನಗಳಲ್ಲಿ ರೈತರು ಮತ್ತು ಮಹರ್ ಸಮುದಾಯದ ನಡುವಿನ ಸಂಘರ್ಷವು ಹುಟ್ಟಿಕೊಳ್ಳುತ್ತಿದೆ ಮತ್ತು ಸೇವೆಯಲ್ಲಿ ನೇಮಿಸಿಕೊಳ್ಳಲು ಅಥವಾ ಸೇವೆಯಲ್ಲಿ ಮುಂದುವರೆಯಲು ಸ್ವಾತಂತ್ರ ಕೊಡದೇ ಹೋದರೆ ಇದು ಉಲ್ಬಣಗೊಳ್ಳುತ್ತದೆ. ಈ ಸ್ವಾತಂತ್ರವನ್ನು ಸಾಧಿಸಬೇಕಾದರೆ ಬಲೂತದಲ್ಲಿ ಸರ್ಕಾರದ ಪಾಲು ಮತ್ತು ರೈತರ ಪಾಲು ಎಂದು ಪ್ರತ್ಯೇಕವಾಗಿ ನಿಗದಿಯಾಗಲೇಬೇಕು. ಮಹರ್ ಸಮುದಾಯದವರು ಕೇವಲ ಸರ್ಕಾರಕ್ಕೆ ಮಾತ್ರ ಸೇವೆ ಸಲ್ಲಿಸಲು ಬಯಸಿದರೆ ರೈತರು ಅವರಿಗೆ ಬಲೂತ ಕೊಡುವ ಅವಶ್ಯಕತೆ ಇಲ್ಲ. ಗ್ರಾಮದಲ್ಲಿ ಸೌಹಾರ್ದತೆಯನ್ನು ಸ್ಥಾಪಿಸುವ ಕಾರಣಕ್ಕಾಗಿ, ಸರ್ಕಾರದ ಮತ್ತು ಗ್ರಾಮದ ಉತ್ತಮ ಆಡಳಿತಕ್ಕಾಗಿ ಬಲೂತವನ್ನು ವಿಭಜಿಸಬೇಕು.

ಸರ್ ನಾನು ಈ ಮಸೂದೆಯ ಮೂಲಕ ಮಹರ್ ಸಮುದಾಯದ ಹಿತರಕ್ಷಣೆಗಾಗಿ ರೈತರ ಮೇಲೆ ಯಾವುದೇ ಹೊರೆಯನ್ನು ಹೊರಸುತ್ತಿಲ್ಲ. ಆದರೆ ನಾನು ಈ ವತನ ಪದ್ಧತಿಯನ್ನು ವಿರೋಧಿಸುತ್ತೇನೆ. ಮಹರ್ ವತನ ಪದ್ಧತಿಯನ್ನು ನಾಶಗೊಳಿಸುವುದರಿಂದ ಮಹರ್ ಸಮುದಾಯಕ್ಕೆ ತಾತ್ಕಾಲಿಕ ತೊಂದರೆ ಉಂಟಾದರೂ ಸಹ ನಾನು ನನ್ನ ನಿರ್ಣಯದಿಂದ ಹಿಂಜರಿಯುವುದಿಲ್ಲ. ಈ ವತನ ಪದ್ಧತಿಯ ಶೃಂಖಲೆಗಳೇ ಮಹರ್ ಸಮುದಾಯದ ವಿಮೋಚನೆಗೆ ಅಡಚಣೆಯಾಗಿದೆ. ಸರ್ ನನ್ನ ಈ ಮಸೂದಗೆ ಈ ಪ್ರಾಂತದ ಎಲ್ಲ ಮಹರ್ ಸಮುದಾಯದವರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಅವರು ಸೇವೆ ಸಲ್ಲಿಸಿದಕ್ಕೆ ಪ್ರತಿಯಾಗಿ ಮಹರ್ ಸಮುದಾಯಕ್ಕೆ ಈ ತೆರಿಗೆಮುಕ್ತ ಭೂಮಿಯನ್ನು ನೀಡಲಾಗಿದೆ.ಇದನ್ನು ಪರಭಾರೆ ಮಾಡಲು ಸಾಧ್ಯವಿಲ್ಲ. ಎಲ್ಲಾಕಾಲದಲ್ಲಿಯೂ ಮಹರ್ ಸಮುದಾಯದ ಸ್ವಾಧೀನದಲ್ಲಿರುತ್ತದೆ”

ಸೆಪ್ಟೆಂಬರ್,1927 –  ಸಂಪಾದಕೀಯ
ತಮ್ಮ ದುಡಿಮೆಗೆ ಪ್ರತಿಯಾಗಿ ಮಹರ್ ಸಮುದಾಯಕ್ಕೆ ಏನು ದೊರಕುತ್ತದೆ?
ಇದನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಮಹರ್ ಸಮುದಾಯಕ್ಕೆ ಅವರ ದುಡಿಮೆಗೆ ಪ್ರತಿಫಲವಾಗಿ ಮೂರು ಬಗೆಯ ಆದಾಯ ದೊರಕುತ್ತದೆ
1. ಇನಾಮು ಭೂಮಿ 2. ಬಲೂತ (ಅನುಕಂಪದ ದೇಣಿಗೆ) 3. ಹಣದ ಪಾವತಿ
ಇದರ ಅರ್ಥ ಮೇಲಿನ ಮೂರು ಆದಾಯಗಳು ದೊರಕುತ್ತಿವೆ ಎಂದಲ್ಲ. ಕೆಲವು ಭಾಗದಲ್ಲಿ ಇನಾಮು ಭೂಮಿ ಇದೆ,ಮತ್ತೆ ಕೆಲವು ಭಾಗದಲ್ಲಿ ಅದು ಇಲ್ಲ.ಕೆಲವು ಭಾಗದಲ್ಲಿ ವೇತನ ಮತ್ತು ಬಲೂತ ದೊರಕುತ್ತದೆ. ಮತ್ತೆ ಕೆಲವು ಭಾಗದಲ್ಲಿ ಇನಾಮು ಭೂಮಿ ಮತ್ತು ಬಲೂತ ದೊರಕುತ್ತದೆ. ನನ್ನ ಆಶಯ ಏನೆಂದರೆ ಮಹರ್ ಸಮುದಾಯಕ್ಕೆ ತಿಂಗಳಿಗೆ ಕನಿಷ್ಟ ರೂ5-6 ಸಿಗಲೇಬೇಕು. ಅದು ಭೂಮಿಯ ಮೂಲಕವಾಗಿರಬಹುದು ಅಥವಾ ಹಣ ಪಾವತಿಯಾಗಿರಬಹುದು ಅಥವಾ ಬಲೂತ ಆಗಿರಬಹುದು. ಅನೇಕ ಸಂದರ್ಭಗಳಲ್ಲಿ ಮಹರ್ ಸಮುದಾಯಕ್ಕೆ ಈ ವೇತನಕ್ಕಿಂತಲೂ ತುಂಬಾ ಕಡಿಮೆ ಸಂಭಾವನೆ ದೊರಕುತ್ತದೆ ಹೊರತಾಗಿ ಹೆಚ್ಚಿನ ಸಂಭಾವನೆ ದೊರಕುವುದಿಲ್ಲ.

ಮಹರ್ ಸಮುದಾಯದವರ ಬಳಿ ಇನಾಮು ಭೂಮಿ ಇದ್ದರೂ ಸಹ ಅದು ಅವರ ಬಳಿ ಶಾಶ್ವತವಾಗಿ ಇರುತ್ತದೆ ಎನ್ನುವುದು ಖಾತ್ರಿ ಇಲ್ಲ. ನಿಜ ಹೇಳಬೇಕೆಂದರೆ ವತನ ಭೂಮಿಯು ಮಹರ್ ಸಮುದಾಯದ ಸುಪರ್ದಿಯಲ್ಲಿ ಇರಬಾರದು. ಏಕೆಂದರೆ 1827ರಿಂದ ತಮ್ಮ ಸಂಬಂದಿಕರು ಮತ್ತು ಮಕ್ಕಳ ಹೊರತಾಗಿ ಬೇರೆಯವರಿಗೆ ಆ ವತನ ಭೂಮಿಯನ್ನು ಮಾರುವಂತಿಲ್ಲ.ಆದರೆ ಈ ಕಾನೂನಿನ ನಿರ್ಭಂದವಿದ್ದರೂ ಅನೇಕ ವತನ ಭೂಮಿಯು ಅಪರಿಚಿತರ ವಶದಲ್ಲಿವೆ. ಮಹರ್ ಸಮುದಾಯದವರು ಸರ್ಕಾರಿ ಸೇವೆ ಮಾಡಿದ್ದಕ್ಕಾಗಿ ಅವರಿಗೆ ವತನಭೂಮಿಯನ್ನು ಕೊಡಲಾಗುತ್ತದೆ. ಅದರೆ ಇಲ್ಲಿ ಕಾನೂನಿನ ತೊಡಕು ಇದೆ. ಬಾಂಬೆ (ಮುಂಬೈ) ಹೈಕೋರ್ಟ ನೀಡಿದ ತೀರ್ಪಿನ ಅನುಸಾರ ತಂದೆಯು ವತನ ಭೂಮಿಯನ್ನು ಪರಭಾರೆ ಮಾಡಿದ್ದರೆ ಆತನ ಮಗ ಅಥವಾ ಉತ್ತರಾಧಿಕಾರಿ ತಮ್ಮ ತಂದೆ ತೀರಿಕೊಂಡ 12 ವರ್ಷಗಳ ಒಳಗೆ ಈ ಪರಭಾರೆ ಕೇಸನ್ನು ಬಗೆಹರಿಸಿಕೊಂಡು ತಮ್ಮ ಸುಪರ್ದಿಗೆ ಪಡೆಯಬೇಕು. 12 ವರ್ಷಗಳ ಒಳಗೆ ಇದನ್ನು ಮಾಡದಿದ್ದರೆ ಆ ವತನ ಭೂಮಿಯ ಮೇಲೆ ಅವರ ಹಕ್ಕುಸ್ವಾಮ್ಯ ರದ್ದಾಗುತ್ತದೆ.

ವತನ ಭೂಮಿಯನ್ನು ಮಹರ್ ಸಮುದಾಯಕ್ಕೆ ಶಾಶ್ವತವಾಗಿ ನೀಡಲಾಗಿರುತ್ತದೆ.ತಮ್ಮ ಮುಂದಿನ ಭವಿಷ್ಯದ ಕುರಿತಾಗಿ ಹೆಚ್ಚಿನ ಚಿಂತೆಯನ್ನು ಇದು ಕಡಿಮೆ ಮಾಡುತ್ತದೆ ಎನ್ನುವ ಕಾರಣಕ್ಕಾಗಿ ಅವರು ಈ ಇನಾಮು ಭೂಮಿಯನ್ನು ಸ್ವೀಕರಿಸಿದರು. ಇದು ಮಹರ್ ಸಮುದಾಯಕ್ಕೆ ವಂಶಪಾರಂಪರ್ಯವಾಗಿ ದೊರಕಿತ್ತು. ಆದರೆ ಮಹರ್ ಸಮುದಾಯವು ಸರ್ಕಾರಕ್ಕೆ ಸೇವೆ ಸಲ್ಲಿಸಿದಕ್ಕೆ ಪ್ರತಿಯಾಗಿ ಈ ಭೂಮಿಯನ್ನು ಕೊಡಲಾಗಿದೆ ಎಂದು ಸರ್ಕಾರವು ಭಾವಿಸಿದೆ. ಅನೇಕ ಬಾರಿ ಮಹರ್ ಸಮುದಾಯವು ಅಗತ್ಯಕ್ಕಿಂತಲೂ ಹೆಚ್ಚಿನ ಭೂಮಿಯನ್ನು ಹೊಂದಿದ್ದಾರೆ ಎಂದು ಅವರಿಂದ ಭೂಮಿಯನ್ನು ಕಿತ್ತುಕೊಂಡಿದೆ.ಇದಕ್ಕೆ ಇತ್ತೀಚಿನ ಉದಾಹರಣೆ ಬಾರಾಮತಿಯಲ್ಲಿನ ಸಂಗ್ವಿ ಎನ್ನುವ ಹಳ್ಳಿಯಲ್ಲಿ ಜರುಗಿದ ಘಟನೆ.ಇಲ್ಲಿ ಮಹರ್ ಸಮುದಾಯಕ್ಕೆ ಸೇರಿದ ಇನಾಮು ಭೂಮಿಯಿತ್ತು.ಅದು ಒಣ ಭೂಮಿಯಾಗಿತ್ತು. ಹೀಗಾಗಿ ಸರ್ಕಾರವು ಇದರ ಕುರಿತಾಗಿತಲೆಕೆಡಸಿಕೊಂಡಿರಲಿಲ್ಲ.ಆದರೆ ಹೊಸದಾಗಿ ಕಟ್ಟಿದ ನಿರಾ ಕಾಲುವೆಯು ಈ ಜಮೀನಿಗೆ ನೀರನ್ನು ಹರಿಸುತ್ತದೆ. ಆಗ ಕೂಡಲೆ ಕಾರ್ಯಪ್ರವೃತ್ತವಾದ ಸರ್ಕಾರವು ಮಹರ್ ಸಮುದಾಯಕ್ಕೆ ಸೇರಿದ ಭೂಮಿಯನ್ನು ಕಿತ್ತುಕೊಂಡಿತು. ಅವರು ಇದನ್ನು ಬಿಟ್ಟುಕೊಡಲು ನಿರಾಕರಿಸಿದಾಗ ಸಕಾರವು ಅವರಿಗೆ ಶಿಕ್ಷೆಯನ್ನು ವಿಧಿಸಿತು.

ಬಲೂತ ಪದ್ಧತಿಯು (ಅನುಕಂಪದ ದೇಣಿಗೆ) ಮಹರ್ ಸಮುದಾಯದ ಮತ್ತೊಂದು ಆದಾಯದ ಮೂಲ. ಮಹರ್ ಸಮುದಾಯವು ಸರ್ಕಾರಿ ನೌಕಕರಾಗಿದ್ದರೂ ಅವರಿಗೆ ವೇತನವು ಬಲೂತದ ರೂಪದಲ್ಲಿ ರೈತರಿಂದ ಪಡೆದುಕೊಳ್ಳಬೇಕಾಗುತ್ತಿತ್ತು. ಆದರೆ ರೈತರಿಂದ ದೊರಕುವ ಈ ವೇತನಕ್ಕೆ ಭದ್ರತೆ ಇರಲಿಲ್ಲ. ಇಲ್ಲಿ ಮಹರ್ ಸಮುದಾಯ ಸರ್ಕಾರದ ಬಳಿ ನಿಯತ್ತಿನಿಂದ,ಕರ್ತವ್ಯನಿಷ್ಟರಾಗಿ ಕಾರ್ಯನಿರ್ವಹಿಸಿದರೂ ರೈತರಿಂದ ಅವರಿಗೆ ಬಲೂತ ದೊರಕುವ ಭರವಸೆ ಇರಲಿಲ್ಲ.ಬಲೂತ ಪದ್ಧತಿಯಲ್ಲಿ ಅವರು ರೈತರ ಕೆಲಸಗಳಿಗೆ ಕಡ್ಡಾಯವಾಗಿ ಹಾಜರಾಗಬೇಕಿತ್ತು.ರೈತರಿಗೆ ಬೇರೆ ಯಾವುದೇ ಕಾರಣಕ್ಕೆ ಅಸಂತುಷ್ಟರಾದರೂ ಅವರು ಬಲೂತವನ್ನು ನಿಲ್ಲಿಸುತ್ತಿದ್ದರು.ಇಲ್ಲಿ ಮಹರ್ ಸಮುದಾಯಕ್ಕೆ ಯಾವುದೇ ಬಗೆಯ ಕಾನೂನಿನ ನೆರವು ಮತ್ತು ಬೆಂಬಲವಿರಲಿಲ್ಲ. ಈ ಬಲೂತ ಪದ್ಧತಿಯೇ ದೋಷಪೂರಿತವಾಗಿದೆ.

ಈ ಬಲೂತ ಪದ್ಧತಿಯಲ್ಲಿ ಮತ್ತೊಂದು ದೋಷವಿದೆ. ಬರಗಾಲ ಬಂದಾಗ ಸರ್ಕಾರವು ರೈತರಿಗೆ ಭೂ ತೆರಿಗೆ ಕೊಡುವುದಕ್ಕೆ ಸಬ್ಸಿಡಿ ಕೊಡುತ್ತದೆ. ಅದನ್ನು ಮನ್ನಾ ಮಾಡುತ್ತದೆ. ಆದರೆ ಇದರ ಜೊತೆಗೆ ಅವರು ಬಲೂತ ಕೊಡುವುದರಿಂದಲೂ ವಿನಾಯಿತಿ ಕೊಡುತ್ತದೆ. ಇದು ತುಂಬಾ ಅಮಾನವೀಯವಾದದ್ದು. ರೈತರಿಗೇನೂ ತೆರಿಗೆ ಮನ್ನಾವಾಗಿದ್ದು ಸರಿ. ಆದರೆ ಮಹರ್ ಸಮುದಾಯಕ್ಕೆ ಬಲೂತವನ್ನು ಯಾತಕ್ಕೆ ನಿಲ್ಲಿಸಬೇಕು? ಏಕೆಂದರೆ ಮಹರ್ ಸಮುದಾಯಕ್ಕೆ ದುಡಿಮೆಯಿಂದ ವಿನಾಯಿತಿ ದೊರಕುವುದಿಲ್ಲ. ಅವರು ಕೆಲಸಕ್ಕೆ ಹಾಜರಾಗಲೇಬೇಕಾಗುತ್ತದೆ. ಬರಗಾಲದ ಕಾರಣಕ್ಕಾಗಿ ತನ್ನ ನೌಕಕರಿಗೆ ಸರ್ಕಾರವು ವೇತನವನ್ನು ಕಡಿಮೆ ಮಾಡುವುದಿಲ್ಲ. ಆದರೆ ಸರ್ಕಾರಿ ನೌಕರರಾದ ಮಹರ್ ಸಮುದಾಯಕ್ಕೆ ಮಾತ್ರ ಯಾಕೆ ಈ ರೀತಿಯ ಅನ್ಯಾಯ? ಇದು ಮಹರ್ ವತನದ ಮಾದರಿ. ರೈತರಿಂದ ಬಲೂತವನ್ನು ಸ್ವೀಕರಿಸುವುದು ಮಹರ್ ಸಮುದಾಯಕ್ಕೆ ತುಂಬಾ ಅವಮಾನದ ಸಂಗತಿ. ಇಲ್ಲಿ ಅವರಿಗೆ ಆತ್ಮಗೌರವವೇ ನಾಶವಾಗಿರುತ್ತದೆ. ಈ ಬಲೂತ ಪದ್ಧತಿಯು ಗುಲಾಮಗಿರಿಯನ್ನು ಪ್ರತಿನಿಧಿಸುತ್ತದೆ. ಬಲೂತ ಎಂದರೆ ಗುಲಾಮಗಿರಿ. ಇಲ್ಲಿ ಬಲೂತ ಎಂದರೆ ಬಿಕ್ಷೆ ಬೇಡುವುದು ಮತ್ತು ಬಲೂತವನ್ನು ಸ್ವೀಕರಿಸುವವನು ಬಿಕ್ಷುಕ ಎಂದೇ ಪರಿಗಣಿಸಲ್ಪಡುತ್ತಾನೆ.

Leave a Reply

Your email address will not be published.