ಅಂಬೇಡ್ಕರ್ ಚಿಂತನೆ – 3 : ಜಾತಿ ವಿನಾಶ ಮತ್ತು ಹಿಂದೂ ಸುಧಾರಣಾವಾದಿಗಳು

- ಬಿ.ಆರ್.ಅಂಬೇಡ್ಕರ್ : - ಅನುವಾದ: ಬಿ.ಶ್ರೀಪಾದ ಭಟ್

( ಜಾತಿ ವಿನಾಶ : ಡಾ.ಬಿ.ಆರ್.ಅಂಬೇಡ್ಕರ್. ಪುಸ್ತದಿಂದ ಆಯ್ದ ಭಾಗ)

ಆರ್ಯ ಸಮಾಜಕ್ಕೆ ಸೇರಿದ ಹಿಂದೂ ಸಮಾಜದ ಸುಧಾರಣಾವಾದಿಗಳ ಗುಂಪು ‘ಜಾತ್- ಪಾತ್-ತೋಡಕ್-ಮಂಡಲ್’ ಹೆಸರಿನಲ್ಲಿ ಸಂಸ್ಥೆಯೊಂದನ್ನು ಕಟ್ಟಿಕೊಂಡಿತ್ತು. ಹಿಂದೂ ಧರ್ಮದಿಂದ ಜಾತಿ ಪದ್ಧತಿಯನ್ನು ನಿರ್ಮೂಲನ ಮಾಡಬೇಕೆಂಬುದು ಇದರ ಮೂಲ ಉದ್ದೇಶವಾಗಿತ್ತು. ಇದರ ಸೆಕ್ರೆಟರಿ ಸಂತರಾಮ್ ಎನ್ನುವವರು 12,ಡಿಸೆಂಬರ್ 1935ರಂದು ಅಂಬೇಡ್ಕರ್ ಅವರಿಗೆ ಒಂದು ಪತ್ರವನ್ನು ಬರೆಯುತ್ತಾರೆ. ಅದರಲ್ಲಿ ಜಾತಿ ಪದ್ಧತಿಯನ್ನು ಕುರಿತು ಅಂಬೇಡ್ಕರ್ ಅವರು ಮಾಡಿದ ಆಳವಾದ ಅಧ್ಯಯನವನ್ನು ಶ್ಲಾಘಿಸುತ್ತಾ 1935ರ ಡಿಸೆಂಬರ್‍ನಲ್ಲಿ ಲಾಹೋರ್‍ನಲ್ಲಿ ನಡೆಯಲಿರುವ ತಮ್ಮ ಸಂಸ್ಥೆಯ ವಾರ್ಷಿಕ ಸಮಾವೇಶಕ್ಕೆ ಬಾಬಾ ಸಾಹೇಬರು ಅಧ್ಯಕ್ಷತೆ ವಹಿಸಿಕೊಳ್ಳಬೇಕು ಮತ್ತು ಜಾತಿ ಪದ್ಧತಿಯ ಕುರಿತಾಗಿ ಭಾಷಣ ಮಾಡಬೇಕೆಂದು ಆ ಪತ್ರದಲ್ಲಿ ಕೋರಿಕೊಳ್ಳುತ್ತಾರೆ.

ಆದರೆ ಈ ಸಮಾವೇಶವು ಮೇ 1936ಕ್ಕೆ ಮಂದೂಡಲ್ಪಡುತ್ತದೆ. ಈ ಕಾಲಘಟ್ಟದ ನಡುವೆ ಅಂಬೇಡ್ಕರ್ ಮತ್ತು ಮಂಡಲ್‍ನ ಪಧಾಧಿಕಾರಿಗಳ ನಡುವೆ ಪತ್ರಗಳ ಮೂಲಕ ನಡೆದ ಮಾತುಕತೆ ಕುತೂಹಲಕಾರಿಯಾಗಿವೆ ಮತ್ತು ಆಳವಾಗಿ ಬೇರೂರಿರುವ ಜಾತಿ ಪದ್ಧತಿಯ ಮನಸ್ಥಿತಿಯನ್ನು ಬಯಲು ಮಾಡುತ್ತವೆ.

ತಮ್ಮ ಅಧ್ಯಕ್ಷೀಯ ಭಾಷಣದ ಪ್ರತಿಯನ್ನು ಬಾಂಬೆಯಲ್ಲಿ ( ಮುಂಬೈ) ಮುದ್ರಿಸಿ ಆ ಸಮ್ಮೇಳನದಲ್ಲಿ ಹಂಚಬೇಕೆಂದು ಅಂಬೇಡ್ಕರ್ ಅವರು ಬಯಸಿದರೆ ಆ ಮಂಡಲ್‍ನ ಪದಾಧಿಕಾರಿಗಳು ಆ ಪ್ರತಿಯನ್ನು ಲಾಹೋರಿನಲ್ಲಿ ಮುದ್ರಿಸಲು ಬಯಸುತ್ತಾರೆ ಮತ್ತು ಅದನ್ನು ಸಮ್ಮೇಳನದಲ್ಲಿ ಹಂಚುವ ಮೊದಲು ತಮ್ಮ ‘ಜಾತ್- ಪಾತ್-ತೋಡಕ್-ಮಂಡಲ್’ ಸಂಸ್ಥೆ ಅದನ್ನು ಪರಾಮಾರ್ಶಿಸಲು ಬಯಸುತ್ತಾರೆ. ಈ ಕುರಿತಾಗಿ ‘ಜಾತ್- ಪಾತ್-ತೋಡಕ್-ಮಂಡಲ್’ 27, ಮೇ 1936ರಂದು ಅಂಬೇಡ್ಕರ್ ಅವರಿಗೆ ಪತ್ರವನ್ನು ಬರೆಯುತ್ತಾ ಅದರಲ್ಲಿ ‘ ಪಂಜಾಬ್ ಪ್ರಾಂತದ ಎಲ್ಲಾ ಹಿಂದೂಗಳು ನಿಮ್ಮ ಅಧ್ಯಕ್ಷತೆಯನ್ನು ವಿರೋಧಿಸುತ್ತಿದ್ದಾರೆ. ಎಲ್ಲಾ ಮೂಲೆಗಳಿಂದಲೂ ನಮಗೆ ಟೀಕೆಗಳು, ನಿಂದನೆಗಳು ಎದುರಾಗುತ್ತಿವೆ. ಹಿಂದೂ ನಾಯಕರುಗಳಾದ ಪರಮಾನಂದ (ಎಂಎಲ್‍ಎ), ಹಂಸರಾಜ್, ಡಾ.ಗೋಕುಲ್ ಚಾಂದ್ ನಾರಂಗ್, ರಾಜಾ ನರೇಂದ್ರ ನಾಥ್ (ಎಂಎಲ್‍ಸಿ) ಇವರೆಲ್ಲಾ ಮಂಡಲ್‍ನ್ನು ತೊರೆದಿದ್ದಾರೆ. ಇದು ಮಂಡಲ್‍ಗೆ ಕೆಟ್ಟ ಹೆಸರನ್ನು ತಂದಿದೆ. ಆದರೂ ಸಹ ‘ಜಾತ್- ಪಾತ್-ತೋಡಕ್-ಮಂಡಲ್’ ನಿಮ್ಮ ಅಧ್ಯಕ್ಷತೆಯಲ್ಲಿಯೇ ಸಮ್ಮೇಳನ ನಡೆಸುತ್ತದೆ. ನೀವು ಸಹಕರಿಸಬೇಕು’ ಎಂದು ಬರೆಯುತ್ತಾರೆ.

ಇಲ್ಲಿ ಈ ಮಂಡಲ್‍ನ ಧ್ವನಿಯನ್ನು ಗಮನಿಸಬೇಕು. ಆಳದಲ್ಲಿ ಈ ಹಿಂದೂ ಸಮಾಜ ಸುಧಾರಣವಾದಿಗಳಿಗೂ ಸಹ ಅಂಬೇಡ್ಕರ್ ಅವರು ಎತ್ತಿದ ಜಾತಿ ಪದ್ಧತಿಯ ಕುರಿತಾದ ಪ್ರಶ್ನೆಗಳಿಂದ, ತೀಕ್ಷ್ಣ ವಿಮರ್ಶೆಗಳಿಂದ ಇರುಸುಮರುಸು ಉಂಟಾಗಿದೆ. ಅದರ ಕುರಿತಾಗಿ ಆಕ್ಷೇಪಣೆ ಇದೆ. ಈ ಮಂಡಲ್‍ನ ಪದಾಧಿಕಾರಿಗಳಾದ ಹರ್ ಭಗವಾನ್ ಅವರು ಅಂಬೇಡ್ಕರ್ ಅವರ ಭಾಷಣದ ಪ್ರತಿಯನ್ನು ಓದಿದ ನಂತರ 14,ಎಪ್ರಿಲ್ 1936ರಂದು ಅವರಿಗೆ ಒಂದು ಪತ್ರವನ್ನು ಬರೆಯುತ್ತಾರೆ. ಅದರಲ್ಲಿ ಭಗವಾನ್ ಅವರು ‘ ನನ್ನ ಸ್ನೇಹಿತರೊಂದಿಗೆ ನಿಮ್ಮ ಭಾಷಣದ ಪ್ರತಿಯನ್ನು ಓದಿದ ನಂತರ ಚರ್ಚಿಸಿ ಅದರ ಕೆಲವು ಪ್ಯಾರಾಗಳ ಕುರಿತು ನಮ್ಮ ಆಕ್ಷೇಪಣೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮೊದಲನೆಯದಾಗಿ ನೀವು ‘ವೇದ’ದ ಕುರಿತಾಗಿ ಹೇಳಿದ ಆಕ್ಷೇಪಾರ್ಹ ಮಾತುಗಳನ್ನು ಕೈಬಿಡಬೇಕೆಂದು ಕೋರುತ್ತೇವೆ.

ನಿಮ್ಮ ಭಾಷಣದ ಕೊನೆಯ ಭಾಗದಲ್ಲಿ ನಿಮ್ಮ ಚಿಂತನೆಗಳು ನಿಮ್ಮದು ಮಾತ್ರ ಮತ್ತು ಇದಕ್ಕೂ ನಮ್ಮ ಮಂಡಲ್‍ಗೂ ಸಂಬಂಧವಿಲ್ಲವೆಂದು ಹೇಳಬೇಕು.’ ಎಂದು ಬರೆಯುತ್ತಾರೆ. ನಂತರ ಇದೇ ಭಗವಾನ್ ಅವರು 22, ಎಪ್ರಿಲ್ 1936ರಂದು ಅಂಬೇಡ್ಕರ್ ಅವರಿಗೆ ಮತ್ತೊಂದು ಪತ್ರವನ್ನು ಬರೆಯುತ್ತಾರೆ. ಅದರಲ್ಲಿ ‘ ಹಿಂದೂ ಧರ್ಮವನ್ನು ಬಿಡಬೇಕೆನ್ನುವ, ಹಿಂದೂ ಧರ್ಮದಿಂದ ಹೊರಬರಬೇಕೆನ್ನುವ ಮತ್ತು ಈ ಭಾಷಣ ಹಿಂದೂವಾಗಿ ನಿಮ್ಮ ಕಡೆಯ ಮಾತುಗಳು ಎನ್ನುವ ನಿಮ್ಮ ಅಭಿಪ್ರಾಯಗಳು ನಮ್ಮಲ್ಲಿ ಕಳವಳವನ್ನು ಹುಟ್ಟಿಸಿದೆ. ವೇದಗಳ ಮೇಲಿನ ನಿಮ್ಮ ಟೀಕೆ ಮತ್ತು ಇತರೇ ಹಿಂದೂ ಪುಸ್ತಕಗಳ ಮೇಲಿನ ನಿಮ್ಮ ಟೀಕೆ ಅನಗತ್ಯವೆಂಬುದು ನಮ್ಮ ಅಭಿಪ್ರಾಯ. ಈ ಭಾಗಗಳನ್ನು ನಿಮ್ಮ ಭಾಷಣದಿಂದ ಕೈಬಿಡಬೇಕೆಂದು ನಮ್ಮ ಕೋರಿಕೆ.’ ಎಂದು ಹೇಳುತ್ತಾರೆ.

ಇದಕ್ಕೆ ಅಂಬೇಡ್ಕರ್ ಅವರು 27, ಎಪ್ರಿಲ್ 1936ರಂದು ‘ಜಾತ್- ಪಾತ್-ತೋಡಕ್-ಮಂಡಲ್’ಗೆ ಮತ್ತು ಭಗವಾನ್ ಅವರಿಗೆ ಒಂದು ದೀರ್ಘವಾದ ಪ್ರತ್ಯುತ್ತರ ಬರೆಯುತ್ತಾರೆ. ಅದರಲ್ಲಿ ತಾವು ತಮ್ಮ ನಿಲುವುಗಳಿಂದ ಹಿಂದೆ ಸರಿಯುವುದಿಲ್ಲ, ಹಿಂದೂ ಧರ್ಮ, ಬ್ರಾಹ್ಮನಿಸಂ, ವೇದಗಳ ಕುರಿತಾದ ತಮ್ಮ ವಿಮರ್ಶೆಯಲ್ಲಿ ಒಂದಕ್ಷರವನ್ನೂ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಅಧ್ಯಕ್ಷ ಸ್ಥಾನಕ್ಕಾಗಿ, ಮಂಡಲ್‍ನ ಪದಾಧಿಕಾರಿಗಳನ್ನು ಮೆಚ್ಚಿಸಲು ತಮ್ಮ ಬದ್ಧತೆಯನ್ನು ಬಲಿಕೊಡುವುದಿಲ್ಲ, ‘ಜಾತ್- ಪಾತ್-ತೋಡಕ್-ಮಂಡಲ್’ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ದೀರ್ಘವಾಗಿ ವಿವರಿಸುತ್ತಾರೆ. ಅದರೆ ಕಡೆಗೂ ಆ ಸಮ್ಮೇಳನ ನಡೆಯುವುದೇ ಇಲ್ಲ.
ಅಂಬೇಡ್ಕರ್ ಅವರು ಕಡೆಗೆ ತಮ್ಮ ಭಾಷಣದ ಪ್ರತಿಯನ್ನು ‘ಜಾತಿ ವಿನಾಶ’ದ ಟೈಟಲ್‍ನಲ್ಲಿ ಮುದ್ರಿಸಿ ಪ್ರಕಟಿಸುತ್ತಾರೆ –ಅನುವಾದಕ )

ಸಾರಾಂಶ :
ambedkar-12ರಾಜಕೀಯ ಸುಧಾರಣೆಗಾಗಿ ಸಾಮಾಜಿಕ ಸುಧಾರಣೆಯ ಅವಶ್ಯಕತೆ
ಸ್ವರ್ಗದ ಹಾದಿಯಂತೆಯೇ ಸಾಮಾಜಿಕ ಸುಧಾರಣೆಯ ಹಾದಿಯೂ ಇಂಡಿಯಾದಲ್ಲಿ ಅನೇಕ ತೊಂದರೆಗಳನ್ನೊಳಗೊಂಡ ಅತ್ಯಂತ ದುರ್ಗಮ ಹಾದಿಯಾಗಿದೆ. ಇಲ್ಲಿ ಸ್ನೇಹಿತರು ಕಡಿಮೆ. ಟೀಕಾಕಾರರು ಜಾಸ್ತಿ. ಈ ಟೀಕಾಕಾರರು ಎರಡು ಪಂಗಡಗಳಲ್ಲಿ ದೊರಕುತ್ತಾರೆ. ಒಂದು ಪಂಗಡದಲ್ಲಿ ರಾಜಕೀಯ ಸುಧಾರಕರಿದ್ದರೆ ಮತ್ತೊಂದು ಪಂಗಡದಲ್ಲಿ ಸೋಷಿಯಲಿಸ್ಟ್ ಇದ್ದಾರೆ.

ಸಾಮಾಜಿಕ ಕಾರ್ಯಪಟುತ್ವವನ್ನು, ದಕ್ಷತೆಯನ್ನು ಸಾಧಿಸದಿದ್ದರೆ ಇನ್ನಿತರ ವಲಯಗಳಲ್ಲಿ ಶಾಶ್ವತವಾದ ಅಭಿವೃದ್ಧಿಂiÀiನ್ನು ಸಾಧಿಸುವುದು ಕಷ್ಟ ಎಂದು ಒಂದು ಕಾಲದಲ್ಲಿಯೇ ಗುರುತಿಸಲಾಗಿತ್ತು. ಹಿಂದೂ ಸಮಾಜವು ಪರಿಣಿತಿಯನ್ನು ಹೊಂದಿದಂತಹ ಸ್ಥಿತಿಯಲ್ಲಿ ಇರಲಿಲ್ಲ. ಈ ಕಾರಣಕ್ಕಾಗಿಯೇ ‘ರಾಷ್ಟ್ರೀಯ ಕಾಂಗ್ರೆಸ್’ನ ಹುಟ್ಟಿನ ಜೊತೆ ಜೊತೆಗೆ ‘ಸಾಮಾಜಿಕ ಫೋರಂ’ ಸ್ಥಾಪನೆಗೂ ಬುನಾದಿಯನ್ನು ಹಾಕಲಾಯಿತು. ಕಾಂಗ್ರೆಸ್ ಪಕ್ಷವು ಈ ದೇಶದ ರಾಜಕೀಯ ಪಕ್ಷದ ದುರ್ಬಲ ಅಂಶಗಳನ್ನು ಗುರುತಿಸಿ, ಪರಿಷ್ಕರಿಸುವುದರ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದರೆ, ‘ಸಾಮಾಜಿಕ ಫೋರಂ’ ಹಿಂದೂ ಸಮಾಜದ ಸಾಮಾಜಿಕ ಸಂಸ್ಥೆಗಳಲ್ಲಿನ ದುರ್ಬಲ ಅಂಶಗಳನ್ನು ಕಿತ್ತೊಗೆಯುವುದರಲ್ಲಿ ನಿರತವಾಗಿತ್ತು. ಕೆಲವು ಸಮಯದವರೆಗೂ ಕಾಂಗ್ರೆಸ್ ಮತ್ತು ವೇದಿಕೆ ಎರಡು ಅಂಗಸಂಸ್ಥೆಗಳಾಗಿ, ಸಾಮಾನ್ಯ ಚಟುವಟಿಕೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು ಮತ್ತು ತಮ್ಮ ವಾರ್ಷಿಕ ಸಭೆಗಳನ್ನು ಒಂದೇ ಪೆಂಡಾಲಿನಡಿ ನಡೆಸುತ್ತಿದ್ದವು.

ಆದರೆ ಅತಿ ಶೀಘ್ರದಲ್ಲಿಯೇ ಇವೆರೆಡು ಅಂಗಸಂಸ್ಥೆಗಳು ‘ರಾಜಕೀಯ ಸುಧಾರಣಾ ಪಕ್ಷ’ ಮತ್ತು’ಸಾಮಾಜಿಕ ಸುಧಾರಣಾ ಪಕ್ಷ’ ಗಳಾಗಿ ಪ್ರತ್ಯೇಕಗೊಂಡವು. ‘ರಾಜಕೀಯ ಸುಧಾರಣಾ ಪಕ್ಷ’ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ’ಸಾಮಾಜಿಕ ಸುಧಾರಣಾ ಪಕ್ಷ’ವು ‘ಸಾಮಾಜಿಕ ಫೋರಂ’ ಅನ್ನು ಬೆಂಬಲಿಸಿತು. ಕ್ರಮೇಣ ಈ ಎರಡೂ ಸಂಸ್ಥೆಗಳು ಪರಸ್ಪರ ಹಗೆತನದ ಶಿಬಿರಗಳಾಗಿ ಬದಲಾದವು. ಇಲ್ಲಿ ಸಾಮಾಜಿಕ ಸುಧಾರಣೆಯು ರಾಜಕೀಯ ಸುಧಾರಣೆಗಿಂತಲೂ ಮೊದಲನೆಯದಾಗಿ ಮುನ್ನಡೆಸಬೇಕೆ ಎನ್ನುವುದು ಪ್ರಮುಖ ಪ್ರಶ್ನೆಯಾಗಿತ್ತು. ದಶಕಗಳ ಕಾಲ ಈ ಎರಡೂ ಶಕ್ತಿಗಳು ಸಮತೋಲನದಲ್ಲಿ ಸರಿದೂಗಿಸಿಕೊಂಡು ನಿಭಾಯಿಸುತ್ತಿದ್ದವು ಮತ್ತು ಇಲ್ಲಿ ಯಾವುದೇ ಗುಂಪಿನ ಜಯದ ಪ್ರಶ್ನೆಯೇ ಇರಲಿಲ್ಲ

ಆದರೆ ಕ್ರಮೇಣವಾಗಿ ‘ಸಾಮಾಜಿಕ ಫೋರಂ’ನ ಸುಯೋಗವು ತೀವ್ರಗತಿಯಲ್ಲಿ ಕ್ಷಯಿಸತೊಡಗಿತು. ಸಾಮಾಜಿಕ ಸುಧಾರಣೆಗೆ ಹಿಂದೂಗಳು ತಾತ್ಸಾರ ತೋರುತ್ತಾರೆ ಎಂದು ‘ಸಾಮಾಜಿಕ ಫೋರಂ ’ಯ ಅಧ್ಯಕ್ಷರು ಪರಿತಪಿಸುತ್ತಿದ್ದರು. ‘ಸಾಮಾಜಿಕ ಫೋರಂ’ಯ ಸಭೆಗಳಿಗೆ ಹಾಜರಾಗುತ್ತಿರುವವರ ಸಂಖ್ಯೆ ಕ್ರಮೇಣ ಕುಂಠಿತಗೊಳ್ಳತೊಡಗಿದರೆ ಕಾಂಗ್ರೆಸ್ ಸಭೆಗಳಿಗೆ ಹಾಜರಾತಿ ಏರುಮುಖದಲ್ಲಿತ್ತು.
1892ರಲ್ಲಿ ಕಾಂಗ್ರೆಸ್‍ನ 8ನೇ ಅಧಿವೇಶನÀದಲ್ಲಿ ಅಧ್ಯಕ್ಷ ಭಾಷಣ ಮಾಡಿದ ಬ್ಯಾನರ್ಜಿಯವರ ಮಾತುಗಳು ‘ಸಾಮಾಜಿಕ ಫೋರಂ’ನ ಸಾವಿನ ಅಂತ್ಯ ವಿಧಿಯ ಸಂದರ್ಭದಲ್ಲಿ ಪ್ರವಚನ ನೀಡಿದಂತಿತ್ತು. ಅದರ ಸಾರಾಂಶ ಹೀಗಿದೆ.

‘ನಮ್ಮ ಸಾಮಾಜಿಕ ವ್ಯವಸ್ಥೆಯು ಸುಧಾರಣೆಯಾಗುವವರೆಗೂ ನಮ್ಮ ರಾಜಕೀಯ ವ್ಯವಸ್ಥೆಯು ಸುಧಾರಣೆಗೆ ತಕ್ಕನಾದ ಯೋಗ್ಯತೆಯನ್ನು ಪಡೆದುಕೊಂಡಿರುವುದಿಲ್ಲ ಎಂದು ಹೇಳುವವರ ಮಾತುಗಳನ್ನು ಕೇಳುವುದಕ್ಕೂ ನನ್ನಲ್ಲಿ ಸಹನೆ ಇಲ್ಲ. ಈ ಎರಡರ ನಡುವಿನ ಸಂಬಂಧ ಏನೆಂದು ನನಗಂತೂ ಅರ್ಥವಾಗುತ್ತಿಲ್ಲ. ನಮ್ಮ ವಿಧವೆಯರು ಪುನರ್ವಿವಾಹವಾಗಲು ಸಾಧ್ಯವಾಗುತ್ತಿಲ್ಲ, ನಮ್ಮಲ್ಲಿ ಬಾಲ್ಯ ವಿವಾಹವನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ, ನಮ್ಮ ಹೆಣ್ಣು ಮಕ್ಕಳನ್ನು ಆಕ್ಸಫರ್ಡ ಮತ್ತು ಕೇಂಬ್ರಿಡ್ಜ್‍ಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕಾಗಿ ನಮ್ಮ ರಾಜಕೀಯ ವ್ಯವಸ್ಥೆ ಸುಧಾರಣೆಗೆ ಯೋಗ್ಯವಾಗಿಲ್ಲ ಎನ್ನುವುದು ಹಾಸ್ಯಾಸ್ಪದ (ಹರ್ಷೋದ್ಗಾರದಿಂದ ಪ್ರೇಕ್ಷಕರ ಚಪ್ಪಾಳೆ)’
ಕಾಂಗ್ರೆಸ್‍ಗೆ ಜಯ ದೊರಕಿದ್ದಕ್ಕಾಗಿ ಅನೇಕರಿಗೆ ಖುಷಿಯಾಗಿತ್ತು. ಆದರೆ ಸಾಮಾಜಿಕ ಸುಧಾರಣೆಯ ಮಹತ್ವವನ್ನು ಅರಿತಿರುವವರು ‘ಈ ಬ್ಯಾನರ್ಜಿಯಂತಹವರ ಅಭಿಪ್ರಾಯವೇ ಅಂತಿಮವೇ? ಹಾಗಿದ್ದಲ್ಲಿ ಸಾಮಾಜಿಕ ಸುಧಾರಣೆಯೊಂದಿಗೆ ರಾಜಕೀಯ ಸುಧಾರಣೆಯ ಯಾವುದೇ ಸಂಬಂಧವಿಲ್ಲ ಎನ್ನುವುದೇ ನಿರ್ಣಾಯಕವೇ? ನಾನು ಈಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಮಗ್ಗುಲಿನ ಕುರಿತಾಗಿ ಹೇಳುತ್ತೇನೆ. ಅಸ್ಪøಶ್ಯತೆಯ ನಿಜದ ಘಟನೆಗಳನ್ನು ನಿಮ್ಮ ಮಂದಿಡುತ್ತೇನೆ.

‘ ಮರಾಠ ಪ್ರಾಂತದ ಪೇಶ್ವೆಯವರ ಆಳ್ವಿಕೆ ಇದ್ದಂತಹ ಕಾಲದಲ್ಲಿ ಮೇಲ್ಜಾತಿಯ ಹಿಂದೂ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರೆ ಅಸ್ಪøಶ್ಯನು ತನ್ನ ನೆರಳಿನಿಂದ ಮೇಲ್ಜಾತಿ ಹಿಂದೂವನ್ನು ಕಲುಷಿತಗೊಳಿಸುತ್ತಾನೆ ಎನ್ನುವ ಕಾರಣಕ್ಕಾಗಿ ಅಸ್ಪøಶ್ಯನಿಗೆ ಆ ರಸ್ತೆಯನ್ನು ಬಳಸಲು ಅವಕಾಶವಿರಲಿಲ್ಲ. ಅಸ್ಪøಶÀ್ಯನನ್ನು ಮೇಲ್ಜಾತಿ ಹಿಂದೂವೊಬ್ಬ ಪ್ರಮಾದದಿಂದಾಗಿ ಮುಟ್ಟುವುದನ್ನು ತಡೆಯಲು ಅಸ್ಪøಶ್ಯನು ತನ್ನ ಮಣಿಕಟ್ಟಿಗೆ ಅಥವಾ ಕೊರಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡು ತನ್ನ ಐಡೆಂಟಿಟಿಯನ್ನು ಪ್ರದರ್ಶಿಸಬೇಕಾಗುತ್ತಿತ್ತು. ಪೇಶ್ವೆ ಆಡಳಿತದ ರಾಜಧಾನಿಯಾಗಿದ್ದ ಪೂನದಲ್ಲಿ ಅಸ್ಪøಶ್ಯನು ತನ್ನ ಸೊಂಟಕ್ಕೆ ಹುರಿಯನ್ನು ಕಟ್ಟಿಕೊಂಡು ಅದಕ್ಕೆ ಹಿಂದಿನಿಂದ ಪೊರಕೆಯನ್ನು ಬಿಗಿದು ತಾನು ನಡೆದುಬಂದ ಹಾದಿಯನ್ನು ಗುಡಿಸಬೇಕಾಗಿತ್ತು. ಏಕೆಂದರೆ ಅಸ್ಪøಶ್ಯನು ನಡೆದ ದಾರಿಯಲ್ಲಿ ಮೇಲ್ಜಾತಿ ಹಿಂದೂ ನಡೆದು ಮೈಲಿಗೆಯಾಗಬಾರದೆಂಬ ಕಾರಣಕ್ಕಾಗಿ. ಅಸ್ಪøಶ್ಯನು ತನ್ನ ಕೊರಳಿಗೆ ಮಡಿಕೆಯನ್ನು ಕಟ್ಟಿಕೊಂಡು ಅದರಲ್ಲಿ ಉಗುಳುತ್ತ ಓಡಾಡಬೇಕಿತ್ತು. ಏಕೆಂದರೆ ಒಂದುವೇಳೆ ಉಗುಳು ನೆಲದ ಮೇಲೆ ಬಿದ್ದು ಮೇಲ್ಜಾತಿ ಹಿಂದೂ ಅದನ್ನು ತುಳಿದರೆ ಮೈಲಿಗೆಯಾಗುತ್ತದೆ ಎನ್ನುವ ಕಾರಣಕ್ಕಾಗಿ’
ಇತ್ತೀಚಿನ ಉದಾಹರಣೆಯನ್ನು ಕೊಡುತ್ತೇನೆ.( 1920-30)

ಅಸ್ಪøಶ್ಯ ಸಮುದಾಯವಾದ ಬಲಾಯಿಗಳ ಮೇಲೆ ಹಿಂದೂಗಳು ನಡೆಸುವ ನಿರಂಕುಶ ಪ್ರಭುತ್ವದ ಕುರಿತಾಗಿ 4, ಜನವರಿ, 1928 ರ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟಗೊಂಡ ವರದಿಯನ್ನು ಗಮನಿಸಿ. ಆ ವರದಿಯ ಅನುಸಾರ ಇಂದೋರ್ ಜಿಲ್ಲೆಯ ಸುಮಾರು 15 ಗ್ರಾಮಗಳಲ್ಲಿನ ಮೇಲ್ಜಾತಿಯ ಹಿಂದೂಗಳಾದ ಕಲೋಟಾ, ಬ್ರಾಹ್ಮಣರು, ರಜಪೂತರು, ಪಟೇಲರು, ಪಟವಾರಿಗಳು ಅಸ್ಪøಶ್ಯ ಸಮುದಾಯದ ಬಲಾಯಿಗಳಿಗೆ ತಮ್ಮೊಂದಿಗೆ ಈ ಗ್ರಾಮದಲ್ಲಿರಬೇಕಾದರೆ ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.

ಅದು ಹೀಗಿದೆ.
1. ಬಲಾಯಿಗಳು ಬಣ್ಣದ ಜರಿಯ ಅಂಚನ್ನುಳ್ಳ ರುಮಾಲನ್ನು ಧರಿಸಬಾರದು
2. ಬಣ್ಣದ ಅಥವಾ ಮೋಹಕವಾದ ಅಂಚನ್ನುಳ ಧೋತಿಯನ್ನು ಧರಿಸಬಾರದು
3. ಮೇಲ್ಜಾತಿ ಹಿಂದೂಗಳ ಸಾವಿನ ಸುದ್ದಿಯನ್ನು ಅವರ ಸಂಬಂಧಿಕರಿಗೆ, ಅವರು ಎಷ್ಟೇ ದೂರವಿದ್ದರೂ ತಲುಪಿಸಬೇಕು.
4. ಎಲ್ಲಾ ಮೇಲ್ಜಾತಿ ಹಿಂದೂಗಳ ಮದುವೆಯ ಸಂದರ್ಭದಲ್ಲಿ ಮತ್ತು ಮೆರವಣಿಗೆಯ ಸಂದರ್ಭದಲ್ಲಿ ಬಲಾಯಿಗಳು ಸಂಗೀತವನ್ನು ನುಡಿಸಬೇಕು
5. ಬಲಾಯಿ ಹೆಣ್ಣುಮಕ್ಕಳು ಬಂಗಾರದ, ಬೆಳ್ಳಿಯ ಒಡವೆಗಳನ್ನು ಧರಿಸಬಾರದು.
6. ಮೇಲ್ಜಾತಿ ಹಿಂದೂ ಮಹಿಳೆಯರ ಹೆರಿಗೆ ಸಂದರ್ಭದಲ್ಲಿ ಬಲಾಯಿ ಮಹಿಳೆಯರು ಅವರ ಸೇವೆ ಮಾಡಬೇಕು.
7. ಬಲಾಯಿಗಳು ಸಂಭಾವನೆಯನ್ನು, ವೇತನವನ್ನು ಬೇಡುವಂತಿಲ್ಲ. ಆಗ್ರಹಿಸುವಂತಿಲ್ಲ. ಮೇಲ್ಜಾತಿ ಹಿಂದೂಗಳು ಕೊಟ್ಟಷ್ಟನ್ನು ತೆಗೆದುಕೊಳ್ಳಬೇಕು.

ಬಲಾಯಿ ಸಮುದಾಯದವರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಇದಕ್ಕೆ ಪ್ರತೀಕಾರವಾಗಿ ಮೇಲ್ಜಾತಿ ಹಿಂದೂಗಳು ಇವರಿಗೆ ಗ್ರಾಮದ ಬಾವಿಯಿಂದ ಕುಡಿಯು ನೀರಿಗೆ ಪ್ರವೇಶ ನಿರಾಕರಿಸಿದರು. ದನಗಳಿಗೆ ಮೇವನ್ನು, ಗೋಮಾಳವನ್ನು ನಿರಾಕರಿಸಿದರು. ಹಿಂದೂಗಳ ಜಮೀನಿಗೆ ಪ್ರವೇಶವನ್ನು ನಿರಾಕರಿಸಿದರು. ಆದರೆ ಬಲಾಯಿಗಳ ಜಮೀನು ಈ ಹಿಂದೂಗಳ ಜಮೀನಿಂದ ಸುತ್ತುವರೆದಿತ್ತು. ಆದರೆ ಈ ಬಹಿಷ್ಕಾರದಿಂದ ತಮ್ಮ ಜಮೀನು ಪ್ರವೇಶಕ್ಕೂ ವಂಚಿತರಾದರು. ಇಂದೋರ್ ಕೋರ್ಟಗೆ ಬಲಾಯಿ ಸಮುದಾಯದವರು ಇದರ ವಿರುದ್ಧ ದೂರನ್ನು, ಅಹವಾಲನ್ನು ನೀಡಿದರು. ಆದರೆ ಕೋರ್ಟಿನಿಂದಲೂ ಯಾವುದೇ ಪರಿಹಾರ ದೊರಕಲಿಲ್ಲ. ಬಹಿಷ್ಕಾರ, ಶೋಷಣೆ ಮುಂದುವರೆಯಿತು. ಅಂತಿಮವಾಗಿ ಬೇರೆ ದಾರಿ ಕಾಣದೆ ಬಲಾಯಿಗಳು ಕುಟುಂಬ ಸಮೇತರಾಗಿ ಗ್ರಾಮವನ್ನೇ ತ್ಯಜಿಸಬೇಕಾಯಿತು.
ಈ ತರಹದ ನೂರಾರು ಉದಾಹರಣೆಗಳಿವೆ.

ರಾಜಕೀಯ ಪ್ರೇರಿತ ಮನಸ್ಸಿನ ಹಿಂದೂಗಳಿಗೆ ಪ್ರಶ್ನೆಯೊಂದನ್ನು ಕೇಳುತ್ತೇನೆ “ ನಿಮ್ಮದೇ ದೇಶದವರಾದ ಅಸ್ಪøಶ್ಯ ಸಮುದಾಯದವರಿಗೆ ಸಾರ್ವಜನಿಕ ಶಾಲೆಗಳಲ್ಲಿ ಪ್ರವೇಶ ನಿರಾಕರಿಸುವ ನೀವು ರಾಜಕೀಯ ಶಕ್ತಿಯಾಗಲು ಯೋಗ್ಯರೇ? ಅಸ್ಪøಶ್ಯ ಸಮುದಾಯದವರಿಗೆ ಸಾರ್ವಜನಿಕ ಬಾವಿಗಳನ್ನು ಬಳಸಲು ನಿರಾಕರಿಸುವ ನೀವು ರಾಜಕೀಯ ಶಕ್ತಿಯಾಗಲು ಯೋಗ್ಯರೇ? ಸಾರ್ವಜನಿಕ ರಸ್ತೆಗಳನ್ನು ಬಳಸಲು ನಿರಾಕರಿಸುವ ನೀವು ರಾಜಕೀಯ ಶಕ್ತಿಯಾಗಲು ಯೋಗ್ಯರೇ? ಅವರಿಗೆ ಅನುಕೂಲಕರವಾದ, ತೃಪ್ತಿಯಾಗುವಂತಹ ಒಡವೆಗಳನ್ನು ಧರಿಸಲು ಒಪ್ಪದ, ಅವರಿಗೆ ಬೇಕಾದ ಆಹಾರವನ್ನು ಸೇವಿಸಲು ಒಪ್ಪದ ನೀವು ರಾಜಕೀಯ ಶಕ್ತಿಯಾಗಲು ಯೋಗ್ಯರೇ?” ಈ ತರಹದ ನೂರಾರು ಪ್ರಶ್ನೆಗಳನ್ನು ಕೇಳಬಲ್ಲೆ.

ಮಿಲ್‍ನ ‘ಒಂದು ದೇಶಕ್ಕೆ ಮತ್ತೊಂದು ದೇಶವನ್ನು ಆಳಲು ಯೋಗ್ಯತೆ ಇರುವುದಿಲ್ಲ’ ಎನ್ನುವ ತತ್ವ ಸಿದ್ಧಾಂತವನ್ನು ಉರುಹೊಡೆಯುವ ಕಾಂಗ್ರೆಸ್ ನಾಯಕರು ಒಂದು ವರ್ಗಕ್ಕೆ ಮತ್ತೊಂದು ವರ್ಗವನ್ನು ಆಳಲು ಯೋಗ್ಯತೆ ಇಲ್ಲ ಎನ್ನುವುದನ್ನು ಸಹ ಒಪ್ಪಿಕೊಳ್ಳಬೇಕು. ಹಾಗಿದ್ದಲ್ಲಿ ‘ಸಾಮಾಜಿಕ ಸುಧಾರಣೆಯ ಪಕ್ಷ’ವು ಯುದ್ಧವನ್ನು ಸೋತಿದ್ದೆಲ್ಲಿ? ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಮ್ಮ ಸುಧಾರಣವಾದಿಗಳು ಯಾವ ಮಾದರಿಯ ಸುಧಾರಣೆಯನ್ನು ತರಲು ಬಯಸುತ್ತಿದ್ದಾರೆ ಎನ್ನುವದನ್ನು ಅರಿಯಬೇಕಾಗಿದೆ. ಈ ಹಿನ್ನಲೆಯಲ್ಲಿ ಹಿಂದೂ ಕುಟುಂಬದ ಸಾಮಾಜಿಕ ಸುಧಾರಣೆಯೆಂದರೆ ಅದು ವಿಧವಾ ವಿವಾಹ,ಬಾಲ್ಯ ವಿವಾಹ ನಿಷೇಧಗಳನ್ನು ಒಳಗೊಂಡಿರುತ್ತದೆ. ಹಿಂದೂ ಸಮಾಜದ ಪುನಸಂಘಟನೆ,ಪುನನಿರ್ಮಾಣವನ್ನು ಒಳಗೊಂಡ ಸಾಮಾಜಿಕ ಸುಧಾರಣೆಯೆಂದರೆ ಅದು ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡುವುದು.
ಇಲ್ಲಿ ‘ಸಾಮಾಜಿಕ ಫೋರಂ’ ಎನ್ನುವುದು ಮೇಲ್ಜಾತಿ ಹಿಂದೂ ಕುಟುಂಬಗಳ ಸುಧಾರಣೆಯನ್ನು ಗುರಿಯಾಗಿರಿಸಿಕೊಂಡಂತಹ ಸಂಸ್ಥೆ. ಈ ‘ಸಾಮಾಜಿಕ ಫೋರಂ ’ಯಲ್ಲಿರುವ ತಿಳುವಳಿಕೆಯನ್ನು ಹೊಂದಿದ ಮೇಲ್ಜಾತಿ ಹಿಂದೂಗಳು ಜಾತಿ ಪದ್ಧತಿ ನಿರ್ಮೂಲನದ ಅವಶ್ಯಕತೆಯನ್ನು ಮನಗಂಡಿರುವದೇ ಇಲ್ಲ.

 

Leave a Reply

Your email address will not be published.