ಅಂಬಿಗರ ಚೌಡಯ್ಯನ ವೈಚಾರಿಕ ನಿಲುವು

-ಪ್ರೊ. ಶಿವರಾಮಯ್ಯ

IMG_2188ಕರ್ನಾಟಕದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನೆ, ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ. ಸಮಾಜದ ಎಲ್ಲ ವರ್ಗ, ಎಲ್ಲ ವರ್ಣಗಳ ಜನಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಗೊಂಡಿದ್ದ ವ್ಯಕ್ತಿ ಕಲ್ಯಾಣ ಮತ್ತು ಸಮಾಜದ ಕಲ್ಯಾಣ ಚಳುವಳಿಯ ಸೃಷ್ಟಿಯೆನಿಸಿದ ಈ ವಚನಗಳು ಜಾಗತಿಕ ಸಾಹಿತ್ಯದ ಮಹತ್ವ ಪೂರ್ಣ ಭಾಗವೆನಿಸಿವೆ. ಆದ್ದರಿಂದಲೇ 12ನೆಯ ಶತಮಾನವನ್ನು ವಚನಯುಗ ಎನ್ನಲಾಗಿದೆ.

‘ವಚನ’ ಎಂದರೆ ಪ್ರತಿಜ್ಞೆ (ಪ್ರಾಮಿಸ್) ಆತ್ಮಸಾಕ್ಷಿ ಎಂದಾಗುತ್ತದೆ. ಅವರು ನಡೆದಂತೆ ನುಡಿದರು; ನುಡಿದಂತೆ ನಡೆದರು. ನಡೆನುಡಿಯ ಆತ್ಮಸಂಗ ವಚನ ಸಾಹಿತ್ಯ. ವಚನಗಳು ಪಂಡಿತರನ್ನು ವಿವಿಧ ಕಳಾಪಂಡಿತರನ್ನು ಮೆಚ್ಚಿಸಲು ಬರೆದ ರಚನೆಗಳಲ್ಲ. ಅವು ಸಾಮಾನ್ಯರಿಂದ, ಸಾಮಾನ್ಯರಿಗಾಗಿ, ಸಾಮಾನ್ಯರಿಗೋಸ್ಕರ ಬರೆದವುಗಳು. ವಚನಗಳು ಅನುಭವವನ್ನು ಒಬ್ಬರಿಂದ ಮತ್ತೊಬ್ಬರಿಗೆ ದಾಟಿಸುವುದರಿಂದ ಅವುಗಳನ್ನು ಅನುಭಾವ ಸಾಹಿತ್ಯ ಎನ್ನಲಾಗಿದೆ. ಜೇಡರ ದಾಸಿಮಯ್ಯ, ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ ಮುಂತಾದ ಪ್ರಮುಖ ವಚನಕಾರರಲ್ಲದೆ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಮಾರಯ್ಯ, ಸೂಳೆ ಸಂಕವ್ವೆ, ಕಾಳವ್ವೆ ಮುಂತಾಗಿ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸ್ತ್ರೀಪುರುಷ ವಚನಕಾರರಿದ್ದಾರೆಂದು ತಿಳಿದು ಬರುತ್ತದೆ.
ಪ್ರಸ್ತುತ ಕನ್ನಡ ಪ್ರಾಧಿಕಾರ ಪ್ರಕಟಿಸಿರುವ ಸಂಕೀರ್ಣ ವಚನ ಸಂಪುಟದಲ್ಲಿ (2001) ಅಂಬಿಗರ ಚೌಡಯ್ಯನ 278 ವಚನಗಳು ಲಭ್ಯ ಇವೆ. ಈತನ ಜೀವನ ವೃತ್ತಾಂತ ನಮಗೆ ಹೆಚ್ಚು ತಿಳಿದು ಬರುವುದಿಲ್ಲ. ಆದರೆ ಅಂಬಿಗರ ಚೌಡಯ್ಯ ಬಸವಣ್ಣನಿಗೆ ನಿಕಟವರ್ತಿಯಾಗಿದ್ದನೆಂದೂ, ಅತ್ಯಂತ ಬಂಡಾಯದ ಸ್ವಭಾವದವನೆಂದೂ ತಿಳಿದು ಬರುತ್ತದೆ. ಅಂಬಿಗ (ಬೆಸ್ತ) ವೃತ್ತಿಯಲ್ಲಿದ್ದ ಚೌಡಯ್ಯ ತನ್ನ ವಚನಗಳಿಗೆ ಅಂಬಿಗರ ಚೌಡಯ್ಯ ಎಂಬ ಅಂಕಿತವನ್ನು ಬಳಸಿಕೊಂಡಿದ್ದಾನೆ.

ವಿವಿಧ ವೃತ್ತಿಯಿಂದ ಬಂದ ವಚನಕಾರರು ತಂತಮ್ಮ ವೃತ್ತಿಯನ್ನೇ ಅಂಕಿತವಾಗಿ ಬಳಸುವುದು ಸಾಮಾನ್ಯ. ಶರಣ ಚಳುವಳಿಯ ಪ್ರಧಾನ ಗುರಿ ಸಮಾಜ ಸುಧಾರಣೆ. ಈ ನಿಟ್ಟಿನಲ್ಲಿ ಇತರ ವಚನಕಾರರಿಗಿಂತ ಅಂಬಿಗರ ಚೌಡಯ್ಯನ ವಚನಗಳೇ ಬೇರೆ ವಿಧ. ಇವನ ವಚನಗಳಲ್ಲಿ ತಾತ್ವಿಕತೆಗಿಂತ ನೈತಿಕತೆಗೆ ಹಾಗೂ ಸಾಮಾಜಿಕ ಸುಧಾರಣೆಯತ್ತ ಒತ್ತು ಬೀಳುತ್ತದೆ. ‘ಹೀಗೆ ಲೋಕನೀತಿ ಸಮಾಜ ನೀತಿಗಳು ವಸ್ತುವಾದಲ್ಲಿ ಸಹಜವಾಗಿಯೇ ಸಾಹಿತ್ಯ ಬಂಡಾಯದ ಧ್ವನಿ ಪಡೆಯುತ್ತದೆ. ರಚನೆ ಸರಳತೆಗೆ ಹೊರಳುತ್ತದೆ. ಆದ್ದರಿಂದ ಬಂಡಾಯದ ಧ್ವನಿ-ಸರಳತೆಗಳು ಈತನ ವಚನಗಳ ಮುಖ್ಯ ಲಕ್ಷಣವಾಗಿದೆ. ಈ ಹಿನ್ನೆಲೆಯಲ್ಲಿ ಅಂಬಿಗರ ಚೌಡಯ್ಯನ ವಚನಗಳ ನಿಲುವನ್ನು ಪರಾಮರ್ಶಿಸಬಹುದು.

ಸಾಮಾಜಿಕ ಬದ್ಧತೆ
ಅಭ್ಯಾಸದ ಸೌಕರ್ಯಕ್ಕಾಗಿ ಅಂಬಿಗರ ಚೌಡಯ್ಯನ ವಚನಗಳನ್ನು ಪ್ರಧಾನವಾಗಿ ಸಾಮಾಜಿಕ ಬದ್ಧತೆ, ಡಾಂಭಿಕ ಭಕ್ತಿಯ ವಿಡಂಬನೆ, ಕುಲಜಾತಿಗಳ ಖಂಡನೆ, ಲೋಕನೀತಿ ಹಾಗೂ ಪರಿಸರಾತ್ಮಕ ದೃಷ್ಟಿ ಎಂಬ ಐದು ರೀತಿಯಲ್ಲಿ ವರ್ಗೀಕರಿಸಿಕೊಂಡು ನೋಡಬಹುದು.

ಹೀಗೆ ನೋಡಿದಾಗ ಚೌಡಯ್ಯನ ವೈಚಾರಿಕ ನಿಲುವು ತೀರ ಆಧುನಿಕವೆಂಬಂತೆ ಕಂಡು ಬರುತ್ತದೆ. ಇವನದು ಒಣ ವೈಚಾರಿಕತೆ ಅಲ್ಲ; ಅದು ಮಾನವೀಯ ಅಂತಃಕರಣದಿಂದ ಸಂವಾದಿಸುತ್ತದೆ. ಕೇಳ್ದು ಜನ ಬದುಕಬೇಕೆಂಬುದು ಇವನ ಮನದಾಳದ ಮಾತು. ಇದರಿಂದ ಅವನ ಸಾಮಾಜಿಕ ಬದ್ಧತೆ ಏನೆಂಬುದನ್ನು ಮನಗಾಣಬಹುದು. ಅಲ್ಲಮಪ್ರಭು ಅಂದಂತೆ ಭಕ್ತಿ ಎಂಬುದು ‘ತೋರುಂಬ ಲಾಭವಲ್ಲ’.

ಆದ್ದರಿಂದ ಅಂಗವ ಅಂದ ಮಾಡಿಕೊಂಡು ತಿರುಗುವ ಭಂಗಗೇಡಿ ಶರಣರಿಗೆ ನೀವು ಕೇಳಿರೋ ಎಂದು ಗದ್ದರಿಸಿ ಹೇಳುವುದು ಇವನ ಹುಟ್ಟು ಸ್ವಭಾವ. ಶಿವನ ಪಾದವ ಹೊಂದುವ ಮಾರ್ಗವ ಬಿಟ್ಟು, ಸಂಸಾರವೇ ಅಧಿಕವೆಂದು ತನ್ನ ಹೆಂಡಿರು ಮಕ್ಕಳು ಸಂಪತ್ತು ಇವು ತನಗೆ ಶಾಶ್ವತವೆಂದು ತಿಳಿದು, ಒಂದು ಕಾಸನಾದರೂ ಪರರಿಗೆ ಕೊಡದೆ, ತಾನೇ ತಿಂದು, ನೆಲದಲ್ಲಿ ಮಡಗಿ, ಕಡೆಗೆ ಯಮನ ಕೈಯಲ್ಲಿ ಸಿಲ್ಕಿ ನರಕ ಕೊಂಡದಲ್ಲಿ ಮುಳುಗೇಳುವುದೆ ನಿಶ್ಚಯ ಎಂಬ ಸಾರ್ವತ್ರಿಕ ಸತ್ಯವನ್ನೇ ಈತ ಸಾರುತ್ತಾನೆ. ಹರನನ್ನು ಒಲಿಸಿಕೊಳ್ಳುವುದು ಹೇಗೆಂಬುದನ್ನು ಅನುನಯದಿಂದ ಹೇಳುವ ಪರಿ ಇದು :
ದೇಹಾರವ (ಪೂಜೆ) ಮಾಡುವ ಅಣ್ಣಗಳಿರಾ, ಒಂದು ತುತ್ತು ಆಹಾರವನಿಕ್ಕಿರೇ,
ದೇಹಾರಕ್ಕೆ ಆಹಾರವೇ ನಿಚ್ಚಣಿಗೆ
ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ
ಆ ಹರನಿಲ್ಲ ಎಂದನಂಬಿಗ ಚೌಡಯ್ಯ
(ಸಂ: ಡಾ.ಎಂ.ಎಂ. ಕಲಬುರ್ಗಿ, ಸಂಕೀರ್ಣ ವಚನ ಸಂಪುಟ; ವಚನ 155)

ಹಸಿದು ಬಂದವರಿಗೆ ತುತ್ತು ಅನ್ನವನಿಕ್ಕದೆ ನಿತ್ಯ ಪೂಜೆ ಮಾಡುವ ಭಕ್ತರಿಗೆ ಹೇಳುವ ಕಿವಿಮಾತು ಇದು. ಕೇವಲ ದೇವರ ಪೂಜೆ ಮಾಡುತ್ತ ಹಸಿದವರಿಗೆ ಆಹಾರವನಿಕ್ಕದೆ ಇದ್ದರೆ, ಆ ಪೂಜೆ ವ್ಯರ್ಥ. ಅಂತವರಿಗೆ ಹರನಿಲ್ಲ. ಪರರಿಗೆ ಕೊಡದೆ ತಾನೇ ತಿಂದು ಹೆಚ್ಚಾದುದನ್ನು ನೆಲದಲ್ಲಿ ಮಡಗಿ ಹೋದರೆ, ಕಡೆಗೆ ನರಕದಲ್ಲಿ ಮುಳುಗೇಳುವುದು ನಿಶ್ಚಯ. ಸಂಪತ್ತು ಸಂಗ್ರಹಿಸಿಕೊಳ್ಳುವ ಭಕ್ತಿನಿಗೆ ಚೌಡಯ್ಯ ಕೊಡುವ ಎಚ್ಚರಿಕೆ ಇದು. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದ ಸರ್ವಜ್ಞ ತನ್ನಂತೆ ಪರರ ಬಗೆಯುವುದೇ ಕಲ್ಯಾಣವೆನ್ನುತ್ತಾನೆ. ವೈಚಾರಿಕತೆಗೆ ಮೂಲವೇ ಸಾಮಾಜಿಕ ಬದ್ಧತೆ.

ಸಮಯವ ಮಾಡಿ ಹಣವ ತೆಗೆಯಲೇತಕ್ಕೆ?
ಆಚಾರಕ್ಕೂ ಹಣದಾಸೆಗೂ ಸರಿಯೆ? ಎಂದನಂಬಿಗ ಚೌಡಯ್ಯ

ದೇವರು ಧರ್ಮದ ಹೆಸರಿನಲ್ಲಿ ಹಣ ಸಂಗ್ರಹ ಮಾಡಿ ಮೋಜು ಮಾಡುವ ಜನರ ಬಗ್ಗೆ ಈ ವಚನಕಾರ ಅಷ್ಟು ಹಿಂದೆಯೇ ಆಚಾರಕ್ಕೂ ಹಣದಾಸೆಗೂ ಸರಿಯೆ? ಎಂದು ನ್ಯಾಯ ಸಮ್ಮತ ಪ್ರಶ್ನೆ ಹಾಕುತ್ತಾನೆ. ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದೆಂಬ ಭಿನ್ನ ಭಾವದೊಳು ಮನಸಂದು, ಹೆಂಡರಿಗಾಗಿ ಬೇಕು, ಮಕ್ಕಳಿಗಾಗಿ ಬೇಕು ಎಂಬ ಭಂಡ ಮೂಕೊರೆಯ ಮೂಳ ಹೊಲೆಯರಿರಾ, ನೀವು ಕೇಳಿರೋ ಎಂದು ಆವೇಶದಿಂದ ಅಬ್ಬರಿಸುತ್ತಾನೆ. ಭಕ್ತರಾಗಿಯೂ ಬಡವ ಬಲ್ಲಿದರೆಂಬ ಭಿನ್ನ ಭಾವಕ್ಕೆ ಬಿದ್ದು ಹೋಗುವವರನ್ನು ಕಂಡು ಚೌಡಯ್ಯ ಸಿಡಿಮಿಡಿಗೊಳ್ಳುತ್ತಾನೆ, ಗದರಿಸುತ್ತಾನೆ, ಹೆದರಿಸುತ್ತಾನೆ; ಹಿಡಿ, ಹೊಡಿ, ಒದಿ, ಗುದ್ದು ಎಂದು ಪ್ರೇರೇಪಿಸುತ್ತಾನೆ.

ಡಾಂಭಿಕ ಭಕ್ತರ ವಿಡಂಬನೆ
ಅಂಬಿಗರ ಚೌಡಯ್ಯನಿಗೆ ಡಾಂಭಿಕ ವೇಷಧಾರಿ ಭಕ್ತರನ್ನು ಕಂಡರಾಗದು. ಮೇಲಿಂದ ಮೇಲೆ ಅವರನ್ನು ನಿಸ್ಸಂಕೋಚವಾಗಿ ವಿಡಂಬಿಸುತ್ತಾನೆ. ಅವನ ಮಾತು ನೇರ ನೇರ; ಮುಚ್ಚುಮರೆ ಏನಿಲ್ಲ, ನ್ಯಾಯ ನಿಷ್ಠುರಿ ಶರಣನಾರಿಗಂಜುವನಲ್ಲ ಎಂಬ ಬಸವಣ್ಣನ ಮಾತಿಗೆ ಈತ ಸಾಕಾರ ಮೂರ್ತಿ.

ಬ್ರಹ್ಮದ ಮಾತಾಡಿ ಕನ್ನೆಯರ ಕಾಲದಿಸೆಯಲ್ಲಿ ಕುಳಿತೆಡೆ
ಒರ ಬೊಮ್ಮದ ಮಾತು ಅಲ್ಲಿಯೆ ನಿಂದಿತ್ತೆಂದ ನಂಬಿಗ ಚೌಡಯ್ಯ
{ಅದೇ. ವಚನ 196}

ಯಾರೋ ಬೆಳಸಿದ ಹೂವು, ಯಾರೋ ಕಟ್ಟಿಸಿದ ಕೆರೆಯ ನೀರು ತಂದು, ಎಲ್ಲರೂ ನೋಡುವಂತೆ ಪೂಜಿಸಿದರೆ ಪೂಜೆಯ ಪುಣ್ಯ ಹೂವಿಗೋ, ನೀರಿಗೋ, ಪೂಜೆಯ ನೋಡಿದ ನಾಡ ಜನರಿಗೋ, ಪೂಜಿಸಿದವನಿಗೋ ಎಂದು ಪ್ರಶ್ನಿಸುವ ಈ ವಚನಕಾರ ಇದನಾನರಿಯೆ, ನೀ ಹೇಳೆಂದು ಡಾಂಭಿಕ ಭಕ್ತರನ್ನು ಜನತಾ ನ್ಯಾಯಾಲಯದ ಕಟಕಟೆಗೆ ಹತ್ತಿಸುತ್ತಾನೆ. ಪುರೋಹಿತ ಶಾಹಿಯ ವರ್ಗ ವರ್ಣ ತಾರತಮ್ಯದ ವಿರುದ್ಧ ಯುದ್ಧ ಹೂಡಿದ ವಚನಕಾರರಲ್ಲಿ ಇವನೊಬ್ಬ ಮುಖ್ಯ ಬಂಡಾಯಗಾರ. ಅಂಬಿಗರ ಚೌಡಯ್ಯ. ತಪ್ಪು ಕಂಡಲ್ಲಿ ಬೈಯ್ಯುವುದರಲ್ಲಿ ನಿಸ್ಸೀಮ. ವಿಚಾರವನ್ನರಿಯದೆ ವಾಚಾಳಕರಾಗಿ ಮಾತು ಮಾತಿಗೆ ಗುರುಲಿಂಗ ಜಂಗಮ ಪ್ರಸಾದಿಗಳೆಂಬ ಮೂಳರ ಬಾಯಿ ಮೇಲೆ ಗಣಂಗಳು ಮೆಟ್ಟಿದ ಚಮ್ಮಾವಿಗೆಯ ತೆಗೆದುಕೊಂಡು ಸಂಗನ ಬಸವೇಶ್ವರನ ಸಾಕ್ಷಿಯಲ್ಲಿ ಪಟಪಟನೆ ಹೊಡೆಯಬೇಕಂತೆ. ಇದು ಚೌಡಯ್ಯನ ಸಾತ್ವಿಕ ಸಿಟ್ಟು..

ಅಬದ್ಧ ನುಡಿಯುವ ಭಕ್ತರನ್ನು ಕಂಡರೆ ಸಹಿಸದ ಚೌಡಯ್ಯ ಅಂಥವರನ್ನು ಅರ್ಧಮಣದ ಪಾದರಕ್ಷೆಗಳನ್ನು ತೆಗೆದುಕೊಂಡು ತೂಗಿ ತೂಗಿ ಟೊಕಟೊಕ ಹೊಡೆಯಬೇಕೆನ್ನುತ್ತಾನೆ. ಕಟ್ಟಿದ ಲಿಂಗವ ಕಿರಿದು ಮಾಡಿ ಬೆಟ್ಟದ ಲಿಂಗವ ಹಿರಿದು ಮಾಡುವ ಲೊಟ್ಟೆ ಮೂಳರ ಕಂಡರೆ ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು ಲೊಟಲೊಟನೆ ಹೊಡೆ ಎನ್ನುವನು. ವೇಷ ಡಂಭಕರಾಗಿ ತಿರುಗುವ ಭ್ರಷ್ಟ ಶರಣರ ಮುಖ ನೋಡಲಾಗದು; ಇಂತಹ ಶರಣರ ಕರೆದು ಪೂಜೆ ಮಾಡುವುದಕ್ಕಿಂತ ಕರೇನಾಯಿಯ ಕರೆ ತಂದು ಪೂಜೆ ಮಾಡುವುದು ಲೇಸು; ಇವನ ಚಾಳಿ ನಾಯಿ ಬಾಲಕ್ಕಿಂತ ಕರಕಷ್ಟವು. ಅಂಥವನನ್ನು ಪಡಿಹಾರಿಕೆ(ಬಾಗಿಲು ಕಾಯುವ) ಗಳ ಪಾದುಕೆಗಳಿಂದ ಪಡಪಡ ಹೊಡೆಯಬೇಕೆನ್ನುತ್ತಾನೆ. ವೀರಶೈವನೆಂದು ಬಾಯಲ್ಲಿ ಬೊಗಳಿ ಲೌಕಿಕದಲ್ಲಿ ಮಠವ ಮಾಡಿಕೊಂಡು, ಅಶನಕ್ಕಾಶ್ರಯನಾಗಿ, ವ್ಯಸನಕ್ಕೆ ಹರಿದಾಡಿ, ವಿಷಯದಲ್ಲಿ ಕೂಡುವ ಡಂಭಕ ಭಕ್ತರ ಕಂಡರೆ ಇವನಿಗೆ ಕೆಂಡದಂಥ ಕೋಪ.

ಈ ಚಂಡಿ ನಾಯಿಗಳ ಕಂಡರೆ ಹೇಸಿಗೆ ಹುಟ್ಟುತ್ತೆನ್ನುತ್ತಾನೆ. ಇಂಥ ಹೊಲೆಯರಿಗೆ ಲಿಂಗ ಕಟ್ಟುವುದಕ್ಕಿಂತ ಗೊಡ್ಡೆಮ್ಮೆಗೆ ಲಿಂಗ ಕಟ್ಟುವುದು ಲೇಸಂತೆ. ಈ ಮೂಳರನು ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆಯಬೇಕು. ತುದಿ ನಾಲಿಗೆಯಲ್ಲಿ ಭಕ್ತರ ನಂಬಿದೆನೆಂದು ಗಳಹುವ ಗೊಡ್ಡ ಹೊಲೆಯನ ಕಂಡೊಡೆ ಅವನ ಎದೆ ಎದೆಯನು ಒದ್ದೊದ್ದು ತುಳಿಯೆಂದವನು ಅಂಬಿಗರ ಚೌಡಯ್ಯ (ಇಕ್ರಲಾ, ಒದಿಲ್ರಾ ಎಂಬ ಆಧುನಿಕ ಕವಿಯೊಬ್ಬರ ನೆನಪಾಗುತ್ತದೆ) ಭಂಡ ಭಕ್ತರನ್ನು ಕಂಡು ಕೆರದಲ್ಲಿ ಹೊಡೆದರೂ, ಒದ್ದರೂ, ಮೆಟ್ಟಿನಿಂದ ಮೆಟ್ಟಿದರೂ ಇವನ ಸಿಟ್ಟು ಇಳಿಯದು; ಮಹೇಶ್ವರ ಸ್ಥಲದ ಶರಣನ ಆವೇಶ ತಗ್ಗದು; ಆ ರೋಷಾವೇಶದ ಬಿರುನುಡಿ ಬೈಗುಳ ನೋಡಿ;

ತನು-ಮನ-ಧನವನು, ಗುರು-ಲಿಂಗ-ಜಂಗಮಕ್ಕೆ ಸವೆಸದೆ,
ಬಾಗಿಲಿಗೆ ಕಾವಲಿಕ್ಕಿ, ಹೆಂಡಿರು ಮಕ್ಕಳು ಕೂಡಿಕೊಂಡು,
ತನ್ನ ತಾನೇ ತಿಂಬುವಂಥ ನೀಚ ಹೊಲೆಯರ ಮೂಗ ಸವರಿ
ಮೆಣಸಿನ ಹಿಟ್ಟು ತುಪ್ಪವ ತುಂಬಿ,
ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ ಹೊಡಿ ಎಂದಾತ
ನಮ್ಮ ಅಂಬಿಗರ ಚೌಡಯ್ಯ.

AmbigaraChoudiahaಇಂತಪ್ಪ ವೇಷಧಾರಿಗಳನ್ನೂ ಅವರಿಗೆ ಲಿಂಗಕಟ್ಟಿದ ಕಳ್ಳ ಗುರು
ವನ್ನೂ ಹಿಡಿತಂದು ಮೂಗನೆ ಕೊಯ್ದು ಅವರ ಮುದ್ದು ಮುಖದ ಮೇಲೆ ಹಳೆಯ ಜೋಡುಗಳಿಂದ ಬಾರಿಸಬೇಕಂತೆ. ಹೊಟ್ಟೆ ಪಾಡಿಗಾಗಿ ಲಿಂಗಧಾರಣೆ ಮಾಡಿ ‘ನನ್ನ ಕುಲ ಹೆಚ್ಚು ತನ್ನ ಕುಲ ಹೆಚ್ಚು’ ಎಂದು :
ಬಡಿದಾಡುವ ಕುನ್ನಿ ನಾಯಿಗಳ ಮೋರೆ ಮೋರೆಯ ಮೇಲೆ
ನಮ್ಮ ಪಡಿಹಾರಿ ಉತ್ತಣ್ಣನವರ ವಾಮ ಪಾದುಕೆಯ ಕೊಂಡು
ಅವರ ಅಂಗುಳ ಮೆಟ್ಟಿ ಫಡಫಡನೆ ಹೊಡಿ ಎಂದಾತ ಅಂಬಿಗರ ಚೌಡಯ್ಯ.
ಇವನದು ಸಾಮಾಜಿಕ ಅನ್ಯಾಯಗಳ ವಿರುದ್ಧ ಬಂಡೇಳುವ ಪ್ರವೃತ್ತಿ. ಇರಾಕ್ ಯುದ್ಧದ ತರುವಾಯ ಜಾರ್ಜ್‍ಬುಷ್ ಆ ದೇಶಕ್ಕೆ ಭೇಟಿ ಕೊಟ್ಟಾಗ ಪತ್ರಕರ್ತನೊಬ್ಬ ಅವನ ಮೇಲೆ ಬೂಟು ಎಸೆದದ್ದನ್ನು ಇಲ್ಲಿ ನೆನೆಯಬಹುದು. ಅಪ್ಪಟ ಆಡುನುಡಿಯಲ್ಲಿ ಕಳ್ಳ ಭಕ್ತರನ್ನು ಕಂಡು ಇವನು ರಾಜಾರೋಷವಾಗಿ ಬೈಯ್ಯುತ್ತಾನೆ, ನಿಂದಿಸುತ್ತಾನೆ, ರೇಗುತ್ತಾನೆ. ಈ ಸಂದರ್ಭದಲ್ಲಿ ಬಳಸುವ ಹೊಲೆಯ, ಮಾದಿಗ ಮುಂತಾದ ಶಬ್ದಗಳು ಜಾತಿ ಸೂಚಕಗಳಂತೆ ಕೀಳುಗಳೆಯುವ ಮಾತುಗಳಲ್ಲ. ಅವು ಕೇವಲ ಸ್ವಭಾವ ಸೂಚಕವೆಂದು ಭಾವಿಸಬೇಕು.

ಕುಲಜಾತಿಗಳ ಖಂಡನೆ
ಅಂಬಿಗರ ಚೌಡಯ್ಯ ಕೂಡ ಹುಟ್ಟಿನಿಂದ ಬಂದ ಕುಲಜಾತಿಗಳನ್ನು ತೀವ್ರ ಖಂಡಿಸುವವನು. ಎಲ್ಲ ವಚನಕಾರರಂತೆ ವರ್ಗರಾಹಿತ್ಯ, ವರ್ಣರಾಹಿತ್ಯ, ಲಿಂಗತಾರತಮ್ಯ ರಾಹಿತ್ಯ, ಸಮ ಸಮಾಜವನ್ನು ಅಪೇಕ್ಷೆಪಟ್ಟವನು. ಅವನ ವಚನಗಳಲ್ಲಿ ಈ ಅಂಶ ಎದ್ದು ಕಾಣುವುದು. ಆಹಾರ ಪದ್ಧತಿಯ ಮೇರೆಗೆ ಹೊಲೆಮಾದಿಗರು ಎಂದು ಭಿನ್ನ ಭೇದವ ಮಾಡುವ ಜನರಿಗೆ ಈ ವಚನಕಾರ ಹಾಕುವ ಸವಾಲಿಗೆ ಇವತ್ತಿಗೂ ಉತ್ತರವಿಲ್ಲ.

ಕುರಿ ಕೋಳಿ ಕಿರು ಮೀನು ತಿಂಬವರ ಊರೊಳಗೆ ಇರು ಎಂಬರು
ಅಮೃತಾನ್ನವ ಕರೆವ ಗೋವ ತಿಂಬುವರ ಊರಿಂದ ಹೊರಗಿರು ಎಂಬರು.
(ಅದೇ. ವಚನ 105)

ಇದಾವ ನ್ಯಾಯ? ಗೋವಿನ ಚರ್ಮದಿಂದ ಮಾಡಿದ ಹರಿಗೋಲು, ಸಿದಿಗೆ, ಬಾರುಕೋಲು, ನೀರಬಾನಿ, ಪಾದರಕ್ಷೆ, ಮದ್ದಳೆ, ಬುದ್ದಲಿ ಇತ್ಯಾದಿ ಸಮಸ್ತ ವಸ್ತುಗಳನ್ನೂ ಉಪಯೋಗಿಸುತ್ತ ಗೋಮಾಂಸ ತಿನ್ನುವವರನ್ನು ಮಾತ್ರ ಯಾಕೆ ಕೀಳಾಗಿ ಕಾಣುತ್ತಾರೆ ಎಂಬ ಅಂಬಿಗರ ಚೌಡಯ್ಯನ ಪ್ರಶ್ನೆ ತಾರ್ಕಿಕವಾಗಿದೆ. ಗೋವಧೆ ನಿಷೇಧ ಮಸೂದೆ ಜಾರಿ ಮಾಡಬೇಕೆಂಬ ಹಿಂದುತ್ವವಾದಿಗಳಿಗೆ ಇದು ನುಂಗಲಾರದ ತುತ್ತು.
ಹೊಲೆಯನಾರು ಎಂಬ ಪ್ರಶ್ನೆಗೆ ಅಂಬಿಗರ ಚೌಡಯ್ಯ ಅತ್ಯಾಧುನಿಕ ರೀತಿಯಲ್ಲಿ ಉತ್ತರ ನೀಡಿದ್ದಾನೆ. ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ? ಎಂದು ಪ್ರಶ್ನಿಸುವ ಈ ವಚನಕಾರ ಹೊಲೆಯ ಊರೊಳಗಿಲ್ಲವೆ ಅಯ್ಯಾ? ಹಾಗಾದರೆ ಹೊಲೆಯರು?

ತಾಯಿಗೆ ಬೈದವವೇ ಹೊಲೆಯ
ತಂದೆಗೆ ಉತ್ತರ ಕೊಟ್ಟವನೇ ಹೊಲೆಯ
ಕೊಡುವ ದಾನಕ್ಕೆ ಅಡ್ಡ ಬಂದವನೇ ಹೊಲೆಯ
ನಡೆವ ದಾರಿಗೆ ಮುಳ್ಳ ಹಚ್ಚಿದವನೇ ಹೊಲೆಯ
ಚಿತ್ತದಲ್ಲಿ ಪರಸತಿಯ ಬಯಸಿದವನೇ ಹೊಲೆಯ
ಬ್ರಾಹ್ಮಣನ ಕುತ್ತಿಗೆ ಕೊಯ್ದವನೇ ಹೊಲಯ
ಬಸವನ ಕೊಂದವನೇ ಹೊಲಯ
ಇಂತಪ್ಪ ಹೊಲೆಯರು ಊರತುಂಬ ಇರಲಾಗಿ
ಹೊರಕೇರಿಯವರಿಗೆ ಹೊಲೆಯರೆನಬಹುದೆ?(ಅದೇ. ವಚನ 278)

ತಂದೆ, ತಾಯಿಗೆ ಬೈದವವನು, ನಡೆವ ದಾರಿಗೆ ಮುಳ್ಳು ಹಾಕುವವನು, ಪರಸತಿಯ ಬಯಸುವವನು, ಬಸವನ, ಬ್ರಾಹ್ಮಣನ ಕೊಲ್ಲುವವನು ಮುಂತಾಗಿ ಹೊಲಯನೇ ಹೊರತು, ಊರ ಹೊರಗಿರುವವನು ಅಲ್ಲ ಎಂಬುದು ಅಂಬಿಗರ ಚೌಡಯ್ಯನ ನಿಲುವು. ಒಟ್ಟಾರೆ ನೀತಿಬಾಹಿರ ಕೆಲಸ ಮಾಡುವವನು ಯಾರೋ ಅವನೇ ಹೊಲೆಯ ಎಂಬುದನ್ನು ಚೌಡಯ್ಯ ಮೇಲಿಂದ ಮೇಲೆ ಒತ್ತಿ ಹೇಳಿದ್ದಾನೆ.
ಕುಲಂ ಕುಲಮಲ್ತು ಛಲಂಕುಲಂ
ಗುಣಂ ಕುಲಂ ಅಣ್ಮು ಕುಲಂ
ಅಭಿಮಾನವೊಂದೆ ಕುಲಂ
ಪಂಪಮಹಾಕವಿ ಹೇಳುವಂತೆ ಹುಟ್ಟಿನಿಂದ ಬಂದ ಕುಲವು ಕುಲವಲ್ಲ, ಛಲವು ಕುಲ, ಗುಣವು ಕುಲ, ಪರಾಕ್ರಮವೆ ಕುಲ, ಎಲ್ಲಕ್ಕಿಂತ ಮಿಗಿಲಾಗಿ ಸ್ವಾಭಿಮಾನವೊಂದೇ ಕುಲ. ಇದೇ ಬಗೆಯ ಆತ್ಮ ಪ್ರತ್ಯಯ ಅಂಬಿಗರ ಚೌಡಯ್ಯನದು ಸಹ. ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು, ನಂಬಿದರೆ ಒಂದೇ ಹುಟ್ಟಿನಲಿ ಕಡೆ ಹಾಯಿಸುವನಂಬಿಗರ ಚೌಡಯ್ಯ.

ಲೋಕನೀತಿ
ಅಂಬಿಗರ ಚೌಡಯ್ಯನ ಬಹಳಷ್ಟು ವಚನಗಳು ಲೋಕನೀತಿಯ ಭಂಡಾರವೊ ಎಂಬಂತಿವೆ. ಒಟ್ಟಾರೆ ಸಮಾಜ ಸುಧಾರಣೆಯಾಗಬೇಕೆಂಬುದೇ ಅವನ ಕಳಕಳಿ. ಅದಕ್ಕಾಗಿ ಅವನು ಬಗೆಬಗೆಯ ಉಪಮೆ, ರೂಪಕ, ದೃಷ್ಟಾಂತಗಳನ್ನು ಕೊಟ್ಟು ಮನಮುಟ್ಟುವಂತೆ ನಿರೂಪಿಸುತ್ತಾನೆ. ಅವನ ಲೋಕಾನುಭವ ಬಹಳಷ್ಟು ದೊಡ್ಡದು. ಈ ವಚನವನ್ನು ಗಮನಿಸಿ:

ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ;
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ;
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ;
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ;
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು –
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ.(ಅದೇ ವಚನ 185)

ಆಶೆಗಳು ಹೇಗೆ ಒಂದಕ್ಕೊಂದು ಅಂಟಿಕೊಂಡು ಬರುತ್ತವೆ ಎಂಬುದನ್ನು ಮೇಲಿನ ವಚನ ಅತ್ಯಂತ ಸರಳ ಸುಂದರವಾಗಿ ನಿರೂಪಿಸುತ್ತದೆ. ‘ಆಶೆಯೇ ದುಃಖಕ್ಕೆ ಮೂಲ, ಆಶೆಯನ್ನು ಬಿಡಿ’ ಎಂದ ಬುದ್ಧ ಗುರುವಿನ ಉಪದೇಶಕ್ಕೆ ಬರೆದ ಬಾಷ್ಯವೋ ಎಂಬಂತಿದೆ ಈ ವಚನ. ಚೌಡಯ್ಯ ಸ್ವಾಭಿಮಾನಿ ಎಂತೋ ಅಂತೆಯೇ ಮಹಾ ವಿನಯವಂತ ಕೂಡ. ಮಹಾಮನೆಯಲ್ಲಿ ಶಿವಗಣವೆಲ್ಲ ಪೂಜೆ ಮಾಡುತ್ತಿರಲು, ಹೊರಗೆ ನಾನು ಅವರ ಪಾದರಕ್ಷೆಗಳನ್ನು ಕಾಯುತ್ತಿರುವುದಾಗಿ ಒಂದು ವಚನದಲ್ಲಿ ಹೇಳಿಹೊಂಡಿದ್ದಾನೆ. ಗಾಳಿ ಬಂದಾಗ ತೂರಿಕೊಳ್ಳಬೇಕು ಎಂಬ ಸಮಯಪ್ರಜ್ಞೆ ಚೌಡಯ್ಯನದು. ಬಹುಶಃ ಬೀಸುವ ಗಾಳಿಯ ದಿಕ್ಕು ಹಿಡಿದು ಅವನು ಹರಿಗೋಲು ನಡೆಸಿದ ಸ್ವಾನುಭವವೇ ಅವನ ವಚನ ರಚನೆಗೂ ಸ್ಫೂರ್ತಿ.

ಎಚ್ಚೆತ್ತ ಕೆಳವರ್ಗದ ವಚನಕಾರರಲ್ಲಿ ಈತ ಒಬ್ಬ ಪ್ರಾತಿನಿಧಿಕ ವ್ಯಕ್ತಿ. ಕೊಟ್ಟರೆ ಒಳ್ಳೆಯವನು ಕೊಡದಿದ್ದರೆ ಪಾಪಿ, ಚಂಡಾಲ, ಅನಾಚಾರಿ ಎಂದು ದೂಷಿಸುವುದು ಯುಕ್ತವಲ್ಲ; ‘ಬಪ್ಪುದು ತಾ ಬಪ್ಪುದಲ್ಲದೆ ಬಾರದ್ದು ಬಪ್ಪುದೆ? ಬಪ್ಪುದು ತಪ್ಪದು, ಬಾರದುದು ಬಾರದು’ ಎಂಬ ಸಂಯಮ ಚೌಡಯ್ಯನದು. ಆಷಾಢಭೂತಿ ಭಕ್ತರನ್ನು ಕುರಿತು ಹಂದಿ, ನಾಯಿ, ಬೆಕ್ಕು, ಕತ್ತೆ, ಎಮ್ಮೆ ಮುಂತಾದ ಪ್ರಾಣಿ ರೂಪಕಗಳಲ್ಲಿ ಹಂಗಿಸಿ ಮಾತಾಡುತ್ತಾನೆ. ವೇಷಧಾರಿ ಜಂಗಮರನ್ನು ಪಡಿಹಾರಿ ಉತ್ತಣ್ಣಗಳ ಕೆರಗಳಿಂದ ಪಟಪಟನೆ ಹೊಡೆಯಿರಿ ಎಂದು ಪದೇಪದೇ ಹೇಳುವ ಮೂಲಕ ಚೌಡಯ್ಯ ಕಾವಲುಗಾರರ ಕೆರಗಳು ಉಳಿದವರ ಕೆರಗಳಿಗಿಂತ, ಪೋಲೀಸ್ ಬೂಟ್‍ನಂತೆ ಗಟ್ಟಿ ಇರುತ್ತದೆ ಎಂಬ ಕಲ್ಪನೆ ಇರಬೇಕು. ಲೋಕನೀತಿಯಲ್ಲಿ ಈತ ಸರ್ವಜ್ಞನ ಜಾಯಮಾನದವನು.

ಪರಿಸರ ದೃಷ್ಟಿ
ಚೌಡಯ್ಯ ಅಂಬಿಗರವನಾದುದರಿಂದ ಅವನ ಜೀವನದೃಷ್ಟಿಯಲ್ಲಿ ಪರಿಸರ ಪ್ರಜ್ಞೆ ವಿಶೇಷ ಇರುವುದು ಕಂಡು ಬರುತ್ತದೆ. ಇವನ ಕಾಸ್ಮಿಕ್ ನೋಟ ಇವತ್ತಿಗೆ ಇನ್ನಷ್ಟು ಅರ್ಥಪೂರ್ಣ.

ಪೃಥ್ವಿಶುದ್ದವೆಂಬನೆ? ಪೃಥ್ವಿ ಶುದ್ಧವಲ್ಲ; ಜಲಶುದ್ಧವೆಂಬೆನೆ? ಜಲಶುದ್ಧವಲ್ಲ,
ಅಗ್ನಿಶುದ್ಧವೆಂಬೆವೆ? ಅಗ್ನಿಶುದ್ಧವಲ್ಲ; ವಾಯು ಶುದ್ಧವೆಂಬೆವೆ? ವಾಯು ಶುದ್ಧವಲ್ಲ,
ಆಕಾಶ ಶುದ್ಧವೆಂಬೆನೆ? ಆಕಾಶ ಶುದ್ಧವಲ್ಲ; ಗುರುವೆ ನೀ ಹೇಳಯ್ಯ,
ಹುಸಿ ನುಸುಳ ಕಳೆದು ಜ್ಞಾನವೆಂಬ ಬೆಳಗ ಸಾಧಿಸಬಲ್ಲಡೆ
ಇದೊಂದೆ ಶುದ್ಧವೆಂದನಂಬಿಗ ಚೌಡಯ್ಯ.-(ಅದೇ ವಚನ 181)

ಮೇಲಿನ ವಚನಕ್ಕೆ ವಿವರಣೆಯ ಅಗತ್ಯವೇ ಇಲ್ಲ. ಆಶ್ಚರ್ಯವೆಂದರೆ ಈಗ್ಗೆ ಸುಮಾರು ಎಂಟು ಶತಮಾನಗಳ ಹಿಂದೆಯೆ ಚೌಡಯ್ಯ ಈ ಒಂದು ಪರಿಸರಾತ್ಮಕ ಚಿಂತನೆ ನಡೆಸಿದ್ದಾನೆಂಬುದು. ಪ್ರಸ್ತುತ ಇರುವುದೊಂದೇ ನಮ್ಮ ನೆಲ, ಜಲ, ಅಗ್ನಿ, ವಾಯು, ಆಕಾಶ ಮಂಡಲಗಳೆಲ್ಲವೂ ಕಲುಷಿತಗೊಂಡು ಜೀವ ಜಾಲಕ್ಕೆ ಕುತ್ತು ಒದಗಿ ಬಂದಿದೆ. ಇದೆಲ್ಲವೂ ಸ್ವಯಂಕೃತಾಪರಾಧದ ಪರಿಣಾಮವೇ ಎಂಬುದರಲ್ಲಿ ಎರಡು ಮಾತಿಲ್ಲ. ಸ್ವರ್ಗ ಸೃಷ್ಟಿಸಲು ಹೋಗಿ ನರಕ ನಿರ್ಮಿಸುತ್ತಿದ್ದೇವೆ. ಇಂಥ ಒಂದು ಅಪಾಯದ ಮುಂಗಾಣ್ಕೆಯನ್ನು ಪರಿಭಾವಿಸಿ ನುಡಿದಿರುವ ಅಂಬಿಗರ ಚೌಡಯ್ಯ ನಮಗೆ ಯಾವತ್ತೂ ಪ್ರಸ್ತುತನೇ. ಸ್ವರ್ಗವೆಂಬ ಹುಸಿ ನುಸುಳ ಕಳೆದು ಅವನು ಹೇಳುವ ವಾಸ್ತವದ ಬೆಳಗು ಏನೆಂದು ಅರಿಯುವುದೇ ನಮ್ಮ ಮುಂದಿರುವ ಕರ್ತವ್ಯ.

ಹನ್ನೆರಡನೆಯ ಶತಮಾನದ ಶರಣರ ಚಳುವಳಿ ಎಂದರೆ ಬಸವಣ್ಣನವರ ನೇತೃತ್ವದಲ್ಲಿ ಕೆಳವರ್ಗದವರ ಉದ್ಧಾರಕ್ಕಾಗಿ ಕೆಳವರ್ಗದವರೇ ಕೈಗೊಂಡ ಜಾಗೃತಿ ಹೋರಾಟ. ಡಾ.ಎಲ್. ಬಸವರಾಜು ಅವರು ನಿರ್ವಚಿಸಿರುವಂತೆ ಕ್ರಿ.ಶ. 1160 ರ ಸುಮಾರಿಗೆ ಕರ್ನಾಟಕದಲ್ಲಿ ಸಂಭವಿಸಿದ ಈ ವರ್ಗ ಹಾಗೂ ಜಾತಿ ವಿಮೋಚನಾ ಹೋರಾಟವೆಂದರೆ ಅದು ಫ್ರೆಂಚ್ ಕ್ರಾಂತಿ (1789)ಗೆ ಕಮ್ಯೂನಿಸ್ಟ್ ಕ್ರಾಂತಿ (1917) ಗೆ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮ (1947) ಕ್ಕೆ ಸರಿ ಮಿಗಿಲಾದುದು. ಶರಣರ ಅರಿವಿನ ಹೋರಾಟದ ಕುರುಹುಗಳೆಂದರೆ ಅವರ ವಚನಗಳು. ‘ಬೇಡರೆಂದು, ಬೆಸ್ತರೆಂದು, ಅಂಬಿಗರೆಂದು, ಮಾದಿಗರೆಂದು, ಹೊಲೆಯರೆಂದು ಹಿಂದೂ ಧರ್ಮದಲ್ಲಿ ನಗಣ್ಯರಾಗಿದ್ದ ಕೋಟ್ಯಾಂತರ ಹತಭಾಗ್ಯರು ಕೊಲೆಗಡುಕರ ಕಾಲ್ತುಳಿತಕ್ಕೆ ಸಿಕ್ಕು ‘ಗುಲಾಮರಾಗಿರಿ, ಇಲ್ಲ ಸತ್ತು ಹೋಗಿ’ ಎಂಬಂಥ ನಿಷ್ಕರುಣ ರೌರವ ನರಕ ಸ್ಥಿತಿಯಲ್ಲಿದ್ದರು.

ಇಂಥ ದೀನಾನಾಥರಿಗೆಲ್ಲಾ ಬಸವಣ್ಣನವರು ವೃತ್ತಿ ಘನತೆಯನ್ನೂ ಆತ್ಮ ಗೌರವವನ್ನೂ ತಂದುಕೊಟ್ಟು ಮರ್ಯಾದೆಯಿಂದ ಬದುಕಲು ಅನುವು ಮಾಡಿದರು. ಇದು ಮನುಕುಲದ ಮೊಟ್ಟ ಮೊದಲ ವರ್ಗ ಸಮಾನತೆಯ ಹಾಗೂ ಜಾತಿ ವಿಮೋಚನಾ ಚಳುವಳಿಗೆ ನಾಂದಿ ಹಾಡಿತು. ಅಂಬಿಗರ ಚೌಡಯ್ಯ ಇಂಥ ಪರಿವರ್ತನ ಯುಗದಲ್ಲಿ ಮೂಡಿ ಬಂದ ಕೆಳವರ್ಗದ, ಕೆಳಜಾತಿಯ ವಚನಕಾರರಲ್ಲಿ ಪ್ರಮುಖನು4. ಇವನ ವೈಚಾರಿಕ ನಿಲುವು, ಅದನ್ನು ಹೇಳುವ ಗತ್ತುಗಾರಿಕೆ ನಮಗೆ ಬೆರಗು ಹುಟ್ಟಿಸುತ್ತದೆ. ‘ಅಂಬಿಗರ ಚೌಡಯ್ಯ ಆ ಕಾಲದ ಎಚ್ಚೆತ್ತ ಕೆಳವರ್ಗದ ಸಮಾಜದ ಪ್ರಜ್ಞೆಯ ಪ್ರತೀಕ’ವಾಗಿದ್ದಾನೆ.

4 Responses to "ಅಂಬಿಗರ ಚೌಡಯ್ಯನ ವೈಚಾರಿಕ ನಿಲುವು"

 1. nagabhushana  December 28, 2015 at 12:05 am

  Lekana thumaba cennagide sir

  Reply
 2. Mallaiah Sandur  December 28, 2015 at 5:21 pm

  ಉತ್ತಮವಾದ ಲೇಖನ sir,

  Reply
 3. DMN Murthy  January 13, 2016 at 8:34 am

  ಅಂಬಿಗರ ಚೌಡಯ್ಯನವರ ಬಗ್ಗೆ ಮಾಹಿತಿಪೂರ್ಣ ಲೇಖನ ಒದಗಿಸಿರುವ ಪ್ರೊಫೆಸರ್ ಶಿವರಾಮಯ್ಯನವರಿಗೆ ಧನ್ಯವಾದಗಳು…
  ಈ ಕಾಲಘಟ್ಟದಲ್ಲಿ ಗೈಡ್ ಮಾಡುವ ಹೆಸರಿನಲ್ಲಿ ಮಿಸ್ ಗೈಡ್ ಮಾಡುವವರ ಹಾವಳಿ ಹೆಚ್ಚಾಗಿದೆ. ಜನಪರ / ಜೀವಪರ ವಿಚಾರಗಳನ್ನು ಸಾರಿದ ಅನೇಕ ಮಹನೀಯರನ್ನು ತಮ್ಮ ನೀಚ ಸ್ವಾರ್ಥ ರಾಜಕೀಯದ ಚೌಕಟ್ಟಿಗೆ ಬಿಗಿಯುವ ಹುನ್ನಾರ ಎಗ್ಗಿಲ್ಲದೆ ಸಾಗಿದೆ. ಆದ್ದರಿಂದ ಈ ಸನ್ನಿವೇಶದಲ್ಲಿ ನಮ್ಮ ವಚನಕಾರರ ಸಂದೇಶಗಳನ್ನು ಜನಪ್ರಿಯಗೊಳಿಸುವ ಪ್ರಯತ್ನ ಶ್ಲಾಘನೀಯ.

  ನನಗೆ ಆಗಾಗ ನೆನಪಾಗುವ ಅಂಬಿಗರ ಚೌಡಯ್ಯನವರ ಮತ್ತೊಂದು ವಚನವನ್ನು ಇಲ್ಲಿ ದಾಖಲಿಸಬೇಕು ಎನಿಸುತ್ತಿದೆ.

  “ಅರಿಯದ ಗುರು ಅರಿಯದ ಶಿಷ್ಯಂಗೆ
  ಉಪದೇಶವ ಮಾಡಿದಡೇನಪ್ಪುದೆಲವೋ
  ಅಂಧಕನ ಕೈಯನಂಧಕನೇ ಹಿಡಿದಡೆ
  ಮುಂದನಾರು ಕಾಬರು ಹೇಳಲೇ ಮರುಳೆ
  ತೊರೆಯಲದ್ದವನ ಈಸಲರಿಯದವ ತೆಗೆವ
  ತೆರನೆಂತೆಂಬ ಅಂಬಿಗರ ಚೌಡಯ್ಯ.”

  ಇಂದಿನ ಮಬ್ಬಗತ್ತಲೆಯಲ್ಲಿ ಮುಂದಿನ ಹಾದಿಯ ಕಾಣಬಲ್ಲವರ ಕೊರತೆ ತೀವ್ರವಾಗಿದೆ. ಅನಿಕೇತನದ ಪ್ರಯತ್ನಕ್ಕೆ ಧನ್ಯವಾದಗಳು.

  Reply
 4. ಸೂಯರ್ಕಾಂತ. ಎಂ.ಜಮಾದಾರ  January 19, 2017 at 11:03 pm

  ಖರೆ.. ಅಂಬಿಗರ ಚೌಡಯ್ಯನವರ ಬಹುತೇಕ ಅಭಿಪ್ರಾಯಗಳು ಒಂದೊಂದು ಮೌಲ್ವಿಕ ಚಿಂತನೆಗೆ ಹೆದ್ದಾರಿ ಇದ್ದಂತೆ. ಅವರು ಅನುಭವಸ್ಥ ಮೊದಲ ಬಂಡಾಯಗಾರ. ಮೂರ್ತಿ ಪೂಜೆ, ಆಚಾರಗಳ ವಿರೋಧಿ.
  ಅವರ ಕುರಿತು ಬೆಂಕಿಯಂತೆ ಪರಿಚಯಿಸಿದ ಪ್ರೋ| ಶಿವರಾಮಯ್ಯ ಅವರಿಗೆ ಧನ್ಯವಾದಗಳು.

  Reply

Leave a Reply

Your email address will not be published.