ಅಂಕೆ ಇಲ್ಲದ ಸಮಾಜ: ಅಂಕ ಸಾಮ್ರಾಟರ ನಡುವೆ ಕುಸಿಯುತಿರುವ ಮೌಲ್ಯ

ನಾ ದಿವಾಕರ

ಭಾರತದ ಶಿಕ್ಷಣ ವ್ಯವಸ್ಥೆ ಕ್ರಮೇಣ ಅಂಕಗಳಿಕೆಯ ಸಂತೆಯಾಗುತ್ತಿದ್ದು ಭವಿಷ್ಯ ನಿರ್ಮಾಣದ ಮಾರುಕಟ್ಟೆ ವೇದಿಕೆಯಾಗುತ್ತಿರುವುದು ದುರಂತವಾದರೂ ಸತ್ಯ. ಒಂದು ಸುಭದ್ರ ಸಂವೇದನಾಶೀಲ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಪ್ರಥಮ ಸೋಪಾನವಾಗಬೇಕು ಎನ್ನುವ ವಾಸ್ತವವನ್ನೇ ನಮ್ಮ ಆಳುವ ವರ್ಗಗಳು ಮರೆತಂತಿದೆ. ಹಾಗಾಗಿಯೇ ಶಿಕ್ಷಣ ವ್ಯಕ್ತಿ , ವ್ಯಷ್ಟಿ, ಸಮಷ್ಟಿಯ ಮೌಲ್ಯಯುತ ಅಭ್ಯುದಯದ ಸಾರಥ್ಯ ವಹಿಸುವ ಬದಲು ಮಾರುಕಟ್ಟೆಯ ಜಗನ್ನಾಥ ರಥದ ಚಕ್ರಗಳಾಗಿ ಮುನ್ನಡೆಯುತ್ತಿದೆ. ಪ್ರತಿವರ್ಷ ಹತ್ತನೆಯ ತರಗತಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟವಾಗುವ ವೇಳೆಗೆ ಇಡೀ ರಾಜ್ಯದಲ್ಲಿ ಸಂಚಲನ ಮೂಡುತ್ತದೆ. ಮಾಧ್ಯಮಗಳು ಚುರುಕಾಗುತ್ತವೆ. ಮುದ್ರಣ ಮಾಧ್ಯಮಗಳಲ್ಲಿ ನೂರಾರು ಮುಖಗಳು ಫಳಫಳ ಹೊಳೆಯುತ್ತವೆ. ನೂರಕ್ಕೆ ನೂರು ಅಂಕ ತೆಗೆಯುವ ಅಂಕ ಸಾಮ್ರಾಟರ ಸಾಧನೆಗೆ ಶಿಕ್ಷಣ ಸಂಸ್ಥೆಗಳು ಕಾರಣವೋ ಅಥವಾ ಶಿಕ್ಷಣ ಸಂಸ್ಥೆಗಳ ಶ್ರೇಯಸ್ಸಿಗೆ ಕೆಲವೇ ಮಕ್ಕಳ ಪರಿಶ್ರಮ ಮತ್ತು ಸಾಧನೆ ಕಾರಣವೋ ಎಂಬ ಪ್ರಶ್ನೆಯ ನಡುವೆಯೇ ಮಕ್ಕಳು ಎಲ್ಲೋ ಒಂದು ಕಡೆ ಮಾರುಕಟ್ಟೆಯ ಸರಕುಗಳಂತಾಗುತ್ತಿದ್ದಾರೆ.

ಮಾರುಕಟ್ಟೆಗೆ ಜಾಹೀರಾತು ಜೀವಾಳ.

ಶಿಕ್ಷಣ ಮಾರುಕಟ್ಟೆಯಾದಾಗ ಸರಕುಗಳ ಶೋಧ ನಡೆಯುತ್ತದೆ. ಸಂಸ್ಥೆಗಳೇ ಸರಕುಗಳೋ, ಸಂಸ್ಥೆಯೊಳಗಿನ ಭವಿಷ್ಯದ ಪ್ರಜೆಗಳು ಸರಕುಗಳೋ ಎಂಬ ಜಿಜ್ಞಾಸೆಯ ನಡುವೆಯೇ ನಮ್ಮ ಶಿಕ್ಷಣ ವ್ಯವಸ್ಥೆ ತನ್ನ ವಾರ್ಷಿಕ ಸಂತೆಯನ್ನು ನಡೆಸುತ್ತದೆ. ನೂರಕ್ಕೆ ನೂರು ಎನ್ನುವುದು ಜ್ಞಾನಾರ್ಜನೆಯ ಪರಾಕಾಷ್ಠೆಯೋ ಅಥವಾ ಲಾಭಾಂಶದ ಶಿಖರವೋ ಎಂಬ ಗೊಂದಲ ಮೂಡುತ್ತದೆ. ಸಾಮಾನ್ಯವಾಗಿ ಮಾರುಕಟ್ಟೆಗೆ ಸರಕುಗಳನ್ನು ಒದಗಿಸುವ ಉತ್ಪಾದಕರು ತಮ್ಮ ಉತ್ಪನ್ನಗಳ ಮೇಲೆ ನೂರಕ್ಕೆ ನೂರು ಪದ ಬಳಸುತ್ತಾರೆ. ಉತ್ಕøಷ್ಟ ಗುಣಮಟ್ಟ ಮತ್ತು ಅತ್ಯಧಿಕ ಬಾಳಿಕೆ ಈ ಎರಡೂ ಲಕ್ಷಣಗಳು ಮಾರುಕಟ್ಟೆ ಸರಕುಗಳ ಭವಿಷ್ಯವನ್ನು ನಿರ್ಧರಿಸುತ್ತವೆ. ಬಹುಶಃ ಶೈಕ್ಷಣಿಕ ಮಾರುಕಟ್ಟೆಯಲ್ಲಿ ಈ ಎರಡೂ ಲಕ್ಷಣಗಳನ್ನು ವಿದ್ಯಾರ್ಥಿಗಳಿಗೆ ತಾತ್ವಿಕವಾಗಿ ಅನ್ವಯಿಸಲಾಗುತ್ತಿದೆ. ಈ ಮಾರುಕಟ್ಟೆಯಲ್ಲಿ ಪ್ರತಿಭೆ ಬಿಳಿ ಹಾಳೆಯ ಮೇಲೆ ಬಿಡಿಸುವ ಚಿತ್ತಾರಗಳಲ್ಲಿ ಲೀನವಾಗಿಬಿಟ್ಟಿದೆ. ಈ ಚಿತ್ತಾರಗಳ ವಾರಸುದಾರರೇ ಮುಂದಿನ ಹಲವು ತಿಂಗಳುಗಳಲ್ಲಿ ಪ್ರತಿಭಾ ಪುರಸ್ಕಾರದಲ್ಲಿ ರಾರಾಜಿಸುತ್ತಾರೆ. ಅರಳುವ ಪ್ರತಿಭೆಗಳನ್ನು ಹಾಳೆಗಳ ಮೇಲಿನ ಕಪ್ಪು ಬಿಳುಪಿನ ಅಕ್ಷರಗಳ ನಡುವೆ ಗುರುತಿಸುವ ಜಾತಿವಾರು ಸಂಘಟನೆಗಳು ಭವಿಷ್ಯದ ಪ್ರಜೆಗಳನ್ನು ಮತ್ತೊಮ್ಮೆ ತಮ್ಮದೇ ಆದ ಚೌಕಟ್ಟಿನೊಳಗೆ ಬಂಧಿಸಿ ಮುನ್ನಡೆಸಲು ಮುಂದಾಗುತ್ತಾರೆ.

kseeaಈ ಗೊಂದಲ, ಜಿಜ್ಞಾಸೆ ಮತ್ತು ಪ್ರಕ್ಷುಬ್ಧ ವಾತಾವರಣದ ನಡುವೆಯೇ 21ನೆಯ ಶತಮಾನದ ಭವ್ಯ ಭಾರತದ ನಿರ್ಮಾತೃಗಳನ್ನು ರೂಪಿಸಲು ಈ ದೇಶದ ಶಿಕ್ಷಣ ವ್ಯವಸ್ಥೆ ಸಜ್ಜಾಗುತ್ತಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶಗಳು ಕುಸಿದಿವೆ, ಪಿಯುಸಿ ಫಲಿತಾಂಶಗಳು ಕುಸಿದಿವೆ ಎಂಬ ಆತಂಕದ ವಾತಾವರಣದ ನಡುವೆಯೇ ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಅತ್ಯುತ್ತಮ ಶಿಕ್ಷಣ ಒದಗಿಸುವ ಆಶ್ವಾಸನೆಯೊಡನೆ ಮುನ್ನಡೆಯುತ್ತಿವೆ. ಸರ್ವ ಶಿಕ್ಷಣ ಅಭಿಯಾನ, ಶಿಕ್ಷಣದ ಹಕ್ಕು, ಸಮಗ್ರ ಶಿಕ್ಷಣದ ಘೋಷಣೆಗಳನ್ನು ಹೊತ್ತ ಸರ್ಕಾರಿ ಶಾಲೆಗಳು ಕುಂಟುತ್ತಾ ಸಾಗುತ್ತಿವೆ. ಈ ನಡುವೆ ಪ್ರತಿಭೆ ಎಂಬ ಪದವೇ ಅಪಭ್ರಂಶವಾಗಿ ಪರಿಣಮಿಸುತ್ತಿದೆ. ಜಾತಿವಾರು ಸಂಘಟನೆಗಳ ಪ್ರತಿಭಾ ಪುರಸ್ಕಾರ ಸಮಾರಂಭಗಳನ್ನು ನೋಡಿದಾಗ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಉಂಟಾಗುತ್ತದೆ. ಜಾತಿ, ಭಾಷೆ, ಧರ್ಮ ಮುಂತಾದ ಸೀಮಿತ ಚೌಕಟ್ಟಿನಿಂದ ಹೊರಬಂದು ವಿಶ್ವಮಾನವ ತತ್ವ ಅನುಸರಿಸಬೇಕಾದ ಮಕ್ಕಳನ್ನು ಜಾತಿ ವೇದಿಕೆಗಳಲ್ಲಿ ವಿಜೃಂಭಿಸುವ ಮೂಲಕ ಪ್ರತಿಭೆಯ ಪರಿಕಲ್ಪನೆಯನ್ನೇ ಅಣಕಿಸಲಾಗುತ್ತಿದೆ.

ಮತ್ತೊಂದೆಡೆ ಅಂಕ ಗಳಿಕೆಯೇ ಪ್ರತಿಭೆಯೇ ಎನ್ನುವ ಪ್ರಶ್ನೆ ಇಂದು ಚರ್ಚೆಗೊಳಗಾಗಬೇಕಿದೆ. ನಿಜ ಮಧ್ಯಮ ವರ್ಗದ ಜನತೆಗೆ ಶಿಕ್ಷಣ ಎಂದರೆ ಉದ್ಯೋಗ ಅರಸಲು ಇರುವ ಒಂದು ಅತ್ಯುತ್ತಮ ಸಾಧನ. ಸ್ಪರ್ಧಾತ್ಮಕ ಯುಗದಲ್ಲಿ ಮುನ್ನಡೆಯಲು ಪ್ರತಿಭೆಯೊಂದೇ ಸಾಲದು, ಅಂಕಗಳೂ ಬೇಕು. ಇದು ಒಂದು ಸಾರ್ವತ್ರಿಕ ರೋಗ. ಈ ರೋಗದ ನಿವಾರಣೆಗೆ ಸಮಸ್ತ ಪ್ರಜ್ಞಾವಂತ ಜನರೂ ಹೋರಾಡುವುದು ಅಗತ್ಯ . ಆದರೆ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅಂಕ ಗಳಿಕೆ ಪ್ರಧಾನ ಧ್ಯೇಯವಾಗಿದ್ದರೆ ಅದು ನಾವು ನಿರ್ಮಿಸಿರುವ ಸಮಾಜ, ನಾವು ರೂಪಿಸಿರುವ ಶಿಕ್ಷಣ ವ್ಯವಸ್ಥೆ ಮತ್ತು ನಾವು ಅನುಸರಿಸುವ ಸಾಂಸ್ಕøತಿಕ ಮಾರ್ಗಗಳ ಪರಿಣಾಮ ಎಂದಷ್ಟೇ ಹೇಳಬಹುದು. ಆದರೆ ಈ ಅಂಕ ಗಳಿಕೆಯ ಹುಚ್ಚು ಕುದುರೆ ಓಟದ ಲಾಭ ಪಡೆಯುತ್ತಿರುವವರು ವಿದ್ಯಾರ್ಥಿಗಳೂ ಅಲ್ಲ ಪೋಷಕರೂ ಅಲ್ಲ ಬದಲಾಗಿ ಖಾಸಗಿ ವಿದ್ಯಾ ಸಂಸ್ಥೆಗಳು. ಹೆಚ್ಚು ಅಂಕ ಗಳಿಸಿದ ಮಕ್ಕಳ ಜಾಹೀರಾತು ಫಲಕಗಳ ಹಿಂದೆ ಮುಂಬರುವ ವರ್ಷದಲ್ಲಿ ಹೆಚ್ಚಿನ ಡೊನೇಷನ್ ವಸೂಲಿ ಮಾಡುವ ಕುಹಕ ಯತ್ನ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಇಷ್ಟೆಲ್ಲಾ ಪ್ರತಿಭೆಗಳನ್ನು ಸೃಷ್ಟಿಸುತ್ತಿರುವ ಶಿಕ್ಷಣ ವ್ಯವಸ್ಥೆ ರೂಪಿಸುತ್ತಿರುವ ಸಮಾಜವಾದರೂ ಎಂತಹುದು ? ಮುಂದಿನ ಪೀಳಿಗೆಗೆ, ದೇಶದ ಭವಿಷ್ಯ ನಿರ್ಮಾತೃಗಳಿಗೆ ನೀಡುತ್ತಿರುವ ಮಾರ್ಗದರ್ಶನವಾದರೂ ಎಂತಹುದು ? ಈ ದೇಶದ ಶಿಕ್ಷಣ ವ್ಯವಸ್ಥೆ, ಶೈಕ್ಷಣಿಕ ಸಂಸ್ಥೆಗಳು ಮತ್ತು ಶಿಕ್ಷಕರು ಒಂದು ಸೌಹಾರ್ದಯುತ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿರುವುದಾದರೂ ಎಂತು ? ಇಲ್ಲಿ ಯಾವುದೇ ಅಭಿಪ್ರಾಯವನ್ನು ಸಾರ್ವತ್ರೀಕರಿಸಲಾಗುವುದಿಲ್ಲ. ಆದರೆ ಸಾಮಾಜಿಕ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಲು ಶಿಕ್ಷಣ ವ್ಯವಸ್ಥೆ ಶ್ರಮಿಸುತ್ತಿದೆಯೇ ಎಂಬ ಪ್ರಶ್ನೆ ಎದುರಾದಾಗ ನಿರುತ್ತರರಾಗುತ್ತೇವೆ. ಕಾನೂನು ಪಾಲನೆ, ಸಂವಿಧಾನ ಬದ್ಧತೆ, ಸಾಮಾಜಿಕ ಕಾಳಜಿ ಮತ್ತು ಮಾನವೀಯ ಸಂವೇದನೆ ಈ ನಾಲ್ಕೂ ಗುಣಗಳನ್ನು ಮಕ್ಕಳಲ್ಲಿ ವೃದ್ಧಿಸಲಾಗದ ಶಿಕ್ಷಣ ವ್ಯವಸ್ಥೆ ಸಮಾಜವನ್ನು ತಿದ್ದಲು ಹೇಗೆ ತಾನೇ ಸಾಧ್ಯ ? ಈ ವಿಷಮ ಸನ್ನಿವೇಶವನ್ನು ಇಂದು ನಾವು ಎದುರಿಸುತ್ತಿದ್ದೇವೆ.

kseaಪ್ರತಿಭಾವಂತರ ಅಂಕ ಗಳಿಕೆಯ ಭರಾಟೆಯ ನಡುವೆಯೇ ಅರ್ಧಕ್ಕೂ ಹೆಚ್ಚು ಮಕ್ಕಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಫಲಿತಾಂಶಗಳು ಆತಂಕಕಾರಿ ಹಂತ ತಲುಪಿವೆ. ದಕ್ಷಿಣ ಕರ್ನಾಟಕದಲ್ಲಿ ಹಿಂದುಳಿದ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಇಲ್ಲಿಯೂ ಖಾಸಗಿ ಶಾಲೆಗಳಿವೆ. ಖಾಸಗಿ ಟ್ಯೂಷನ್ ಹೇಳುವ ವ್ಯಾಪಾರಿ ಕೇಂದ್ರಗಳಿವೆ. ಅತ್ಯುತ್ತಮ ಶಿಕ್ಷಣದ ಬ್ಯಾನರ್ ಹೊತ್ತ ಡೊನೇಷನ್ ಕೂಪಗಳಿವೆ. ಆದರೂ ಫಲಿತಾಂಶವೇಕೆ ಕುಸಿಯುತ್ತಿದೆ ? ಅಂದರೆ ಖಾಸಗೀಕರಣಕ್ಕೂ ಅಂಕಗಳಿಗೆ ಅಥವಾ ಪ್ರತಿಭಾ ಶೋಧನೆಗೂ ಸಂಬಂಧವಿಲ್ಲ ಎಂದಾಯಿತಲ್ಲವೇ ? ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳೂ ಅಂಕ ಸಾಮ್ರಾಟರಾಗಲು ಅವಕಾಶವಿದೆಯಲ್ಲವೇ ? ಆದರೆ ಈ ಅವಕಾಶಗಳನ್ನು ಶಿಕ್ಷಣ ವ್ಯವಸ್ಥೆಯೇ ಕಸಿದುಕೊಳ್ಳುತ್ತಿದೆ. ಯಾವುದೇ ನಗರದಲ್ಲಿ ಹೊಸ ಬಡಾವಣೆಗಳಲ್ಲಿ ಸರ್ಕಾರಿ ಶಾಲೆಯನ್ನು ಕಾಣಲು ಸಾಧ್ಯವೇ ? ಈ ಅಗ್ರಹಾರ ಸಂಸ್ಕøತಿಗೆ ಯಾರು ಹೊಣೆ ? ನಮ್ಮನ್ನಾಳುವ ಜನಪ್ರತಿನಿಧಿಗಳು ಈ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಬೇಕಿದೆ.

ಆಧುನಿಕ ತಂತ್ರಜ್ಞಾನ ಮತ್ತು ಇದರಿಂದ ರೂಪುಗೊಂಡಿರುವ ಐಷಾರಾಮಿ ಬದುಕಿನ ಪರಿಕಲ್ಪನೆ ಇಂದಿನ ಯುವ ಸಮಾಜವನ್ನು ಮತ್ತು ವಿದ್ಯಾರ್ಥಿ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದೆ. ಮೊಬೈಲ್, ಟಿವಿ, ನೋಟ್‍ಬುಕ್, ಲ್ಯಾಪ್‍ಟಾಪ್‍ನ ಪರದೆಗಳಿಗೆ ಅಂಟಿಕೊಂಡಿರುವ ಯುವ ಜನತೆ ತಮ್ಮ ಪೋಷಕರನ್ನೇ ಕಡೆಗಣಿಸಲಾರಂಭಿಸಿರುವುದು ಕಣ್ಣಿಗೆ ಕಾಣುವ ಸತ್ಯ. ತಂತ್ರಜ್ಞಾನದ ಬಳಕೆಯಲ್ಲಿನ ಕೈಚಳಕವನ್ನೇ ತಮ್ಮ ಬುದ್ಧಿಶಕ್ತಿಯ ಸಂಕೇತ ಎಂಬ ಭ್ರಮೆಯಲ್ಲಿ ಯುವ ಜನತೆ, ವಿದ್ಯಾರ್ಥಿ ಸಮುದಾಯ ಸಾಮಾಜಿಕ ಮೌಲ್ಯಗಳನ್ನೇ ಕಳೆದುಕೊಳ್ಳುತ್ತಿರುವುದು ದುರಂತವಾದರೂ ಸತ್ಯ. ಹಾಗಾಗಿಯೇ ಕಾನೂನು ಉಲ್ಲಂಘನೆ ಹೆಚ್ಚಾಗಿ ಸುಶಿಕ್ಷಿತರಿಂದಲೇ ನಡೆಯುತ್ತಿದೆ, ವಿದ್ಯಾರ್ಥಿಗಳೇ ಕಾನೂನು ಭಂಜಕರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಆದರೆ ಕಾನೂನು ಬಾಹಿರವಾಗಿ ಖಾಸಗಿ ಟ್ಯೂಷನ್ ಹೇಳುವ ಶಿಕ್ಷಕರಿಗೆ ಮಕ್ಕಳಲ್ಲಿ ಕಾನೂನು ಪ್ರಜ್ಞೆ ಮೂಡಿಸಲು ಹೇಗೆ ಸಾಧ್ಯ ?

ಇಂತಹ ವಿಕೃತ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳಿಂದ ಹೊರಹೊಮ್ಮುವ ಪ್ರತಿಭಾವಂತ ಮಕ್ಕಳಿಗೆ, ಅಂಕ ಸಾಮ್ರಾಟರಿಗೆ ಜಾತಿ ವೇದಿಕೆಗಳಲ್ಲಿ ಸನ್ಮಾನಿಸುವುದರ ಮೂಲಕ ಸಮಾಜದ ಸೌಹಾರ್ದತೆಯನ್ನೇ ಕದಡುವ ಜಾತೀಯತೆಯ ಬೀಜಗಳನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಪ್ರತಿಭಾ ಪುರಸ್ಕಾರದ ವೇದಿಕೆಗಳಲ್ಲಿ ಅಂಕಗಳಿಸದೆ ಇರುವ ಪ್ರತಿಭೆಗಳು ಏಕೆ ಗೋಚರಿಸುವುದೇ ಇಲ್ಲ ಎಂಬ ಪ್ರಶ್ನೆ ಪ್ರಜ್ಞಾವಂತ ಸಮಾಜವನ್ನು ಕಾಡಲೇಬೇಕಲ್ಲವೇ ?

ಆದರೆ ಕಾಡುತ್ತಿಲ್ಲ. ಮತೀಯತೆ, ಜಾತೀಯತೆ, ಮತಾಂಧತೆ, ಭಾಷಾಂಧತೆ ಹೀಗೆ ಇಡೀ ವಿಶ್ವವನ್ನೇ ಅಂಧ ಕೂಪವನ್ನಾಗಿ ಮಾಡುತ್ತಿರುವ ದುಷ್ಟ ಶಕ್ತಿಗಳ ರುದ್ರ ನರ್ತನದ ನಡುವೆ ಅಂಕ ಸಾಮ್ರಾಟ ಪ್ರತಿಭೆಗಳು ಉದಯಿಸುತ್ತಿದ್ದಾರೆ. ಈ ಪ್ರತಿಭೆಗಳಿಗೆ ತಮ್ಮ ಭವಿಷ್ಯದ ಹಾದಿ ಎಷ್ಟು ದುರ್ಗಮ ಎಂಬ ಕಲ್ಪನೆಯೂ ಇರಲಿಕ್ಕಿಲ್ಲ. ಏಕೆಂದರೆ ಇಡೀ ಭಾರತೀಯ ಸಮಾಜ ಭ್ರಮಾಲೋಕದಲ್ಲಿ ತೇಲುತ್ತಿದೆ. ನವ ಉದಾರವಾದ ಸೃಷ್ಟಿಸಿರುವ ಈ ಭ್ರಮಾಲೋಕದಲ್ಲಿ ಲೀನವಾಗುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ ಬಹುಶಃ ಮಾರುಕಟ್ಟೆಯಾಗಿರುವ ಶಿಕ್ಷಣ ವ್ಯವಸ್ಥೆ ಷಾಪಿಂಗ್ ಮಾಲ್ ಆಗುವುದರಲ್ಲಿ ಸಂದೇಹವೇ ಇಲ್ಲ.

ಇದು ನಮ್ಮ ಮುಂದಿರುವ ಸವಾಲು ಮತ್ತು ಮೂರ್ತ ಪ್ರಶ್ನೆಯೂ ಹೌದು.

Leave a Reply

Your email address will not be published.